ಪಟ್ಟಂದೂರು ಅಗ್ರಹಾರದಲ್ಲಿ ಕಳ್ಳತನ ನಡೆಸಿದ ಒಂದೇ ಗಂಟೆಯೊಳಗೆ ಆರೋಪಿ ಸೆರೆ

ಆರೋಪಿ ಮಾಹಿತಿ ಮೇರೆಗೆ ಪೊಲೀಸರು ನವೆಂಬರ್ 15 ರಂದು ದಾಳಿ ನಡೆಸಿ, 72 ಗ್ರಾಂ ಚಿನ್ನಾಭರಣ, 175 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 1.03 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

Update: 2025-11-21 05:58 GMT
ಸಾಂದರ್ಭಿಕ ಚಿತ್ರ
Click the Play button to listen to article

ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ಹಾಡುಹಗಲೇ ಮನೆಯೊಂದಕ್ಕೆ ಕನ್ನ ಹಾಕಿ ಚಿನ್ನಾಭರಣ ಮತ್ತು ನಗದು ದೋಚಿದ್ದ ಖದೀಮನೊಬ್ಬನನ್ನು ಪ್ರಕರಣ ದಾಖಲಾದ ಒಂದೇ ಗಂಟೆಯೊಳಗೆ ಬಂಧಿಸುವಲ್ಲಿ ವೈಟ್‌ಫೀಲ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 9.30 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

2025ರ ನವೆಂಬರ್ 14ರಂದು ಮಧ್ಯಾಹ್ನ ಈ ಕಳ್ಳತನ ನಡೆದಿತ್ತು. ಪಟ್ಟಂದೂರು ಅಗ್ರಹಾರದ ನಿವಾಸಿಯೊಬ್ಬರು ಕೆಲಸದ ನಿಮಿತ್ತ ಮಧ್ಯಾಹ್ನ 1.30ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದರು. ಕೆಲವೇ ಗಂಟೆಗಳಲ್ಲಿ, ಅಂದರೆ ಮಧ್ಯಾಹ್ನ 3.00 ಗಂಟೆಗೆ ಅವರು ಮನೆಗೆ ಮರಳಿದಾಗ, ಮನೆಯ ಶೀಟ್ ಮುರಿದಿರುವುದು ಕಂಡುಬಂದಿದೆ. ಒಳಗೆ ಹೋಗಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ವೈಟ್‌ಫೀಲ್ಡ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡರು. ಪ್ರಕರಣ ದಾಖಲಾದ ಕೇವಲ ಒಂದು ಗಂಟೆಯೊಳಗೆ ಪಟ್ಟಂದೂರು ಅಗ್ರಹಾರದ ಬೇಕರಿಯೊಂದರ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದರು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪ್ಯಾಸೇಜ್‌ನಲ್ಲಿ ಬಚ್ಚಿಟ್ಟಿದ್ದ ಕಳ್ಳ ಮಾಲು!

ಆರೋಪಿಯು ತಾನು ಕದ್ದ ಚಿನ್ನಾಭರಣ ಮತ್ತು ಹಣವನ್ನು ತಾನು ವಾಸವಿದ್ದ ಮನೆಯ ಪಕ್ಕದ ಕಟ್ಟಡದ ಎರಡನೇ ಮಹಡಿಯ ಪ್ಯಾಸೇಜ್‌ನಲ್ಲಿ ಬಚ್ಚಿಟ್ಟಿದ್ದಾಗಿ ಬಾಯಿಬಿಟ್ಟಿದ್ದಾನೆ. ಆತನ ಮಾಹಿತಿ ಮೇರೆಗೆ ಪೊಲೀಸರು ನವೆಂಬರ್ 15 ರಂದು ದಾಳಿ ನಡೆಸಿ, 72 ಗ್ರಾಂ ಚಿನ್ನಾಭರಣ, 175 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 1.03 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 9,30,000 ರೂಪಾಯಿ ಎಂದು ಅಂದಾಜಿಸಲಾಗಿದೆ.

Tags:    

Similar News