ದರ್ಶನ್ ರಾಜ್ಯಾತಿಥ್ಯ ಫೋಟೋ | ಜೋಷಿ ಹೇಳಿಕೆಗೆ ಕಾಂಗ್ರೆಸ್ ನಾಯಕರ ತಿರುಗೇಟು

ಮಾಧ್ಯಮ ಮತ್ತು ಜನರ ಗಮನ ಬೇರೆಡೆ ಸೆಳೆದು ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣಗಳನ್ನು ಮರೆಮಾಚಲು ರಾಜ್ಯ ಸರ್ಕಾರವೇ ದರ್ಶನ್ ರಾಜಾತಿಥ್ಯದ ಫೋಟೋ ಹೊರಬಿಟ್ಟಿದೆ ಎಂಬ ಕೇಂದ್ರ ಸಚಿವ ಪಲ್ಹಾದ್ ಜೋಷಿ ಅವರ ಹೇಳಿಕೆಗೆ ಕಾಂಗ್ರೆಸ್ ಪಾಳೆಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ.

Update: 2024-09-07 10:00 GMT

ಮಾಧ್ಯಮ ಮತ್ತು ಜನರ ಗಮನ ಬೇರೆಡೆ ಸೆಳೆದು ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಸೇರಿದಂತೆ ತನ್ನ ಸಾಲು ಸಾಲು ಹಗರಣಗಳನ್ನು ಮರೆಮಾಚಲು ರಾಜ್ಯ ಸರ್ಕಾರವೇ ದರ್ಶನ್ ರಾಜಾತಿಥ್ಯದ ಫೋಟೋ ಹೊರಬಿಟ್ಟಿದೆ ಎಂಬ ಕೇಂದ್ರ ಸಚಿವ ಪಲ್ಹಾದ್ ಜೋಷಿ ಅವರ ಹೇಳಿಕೆಗೆ ಕಾಂಗ್ರೆಸ್ ಪಾಳೆಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ದರ್ಶನ್ ಫೋಟೋಗಳನ್ನು ಹೊರಬಿಟ್ಟು ಸರ್ಕಾರವೇ ತನ್ನ ಹಗರಣಗಳನ್ನು ಮುಚ್ಚಿ ಹಾಕಲು ಯತ್ನಿಸಿದೆ ಎಂದು ಪಲ್ಹಾದ್ ಜೋಷಿ ಶುಕ್ರವಾರ ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ನ ಸಾಲು ಸಾಲು ನಾಯಕರು ಮುಡಾ ಹಗರಣದಲ್ಲಿ ಏನಿದೆ ಮುಚ್ಚಿಡಲು?. ಜೋಷಿಯವರು ಇಂತಹ ಹೇಳಿಕೆ ನೀಡುವ ಬದಲು ರಾಜ್ಯಕ್ಕೆ ಕೇಂದ್ರದಿಂದ ಏನು ಅನುಕೂಲ ಮಾಡಿಸಬಹುದು? ಮಹದಾಯಿ ಯೋಜನೆ ವಿಷಯದಲ್ಲಿ ಏನು ಮಾಡಬಹುದು ಎಂಬುದನ್ನು ಚರ್ಚಿಸಲಿ ಎಂದು ತಿರುಗೇಟು ನೀಡಿದ್ದಾರೆ.

ಡೈವರ್ಟ್ ಮಾಡೋಕೆ ನಿಮ್ಮ ನಾಯಕರ ಸಿಡಿನೇ ಇತ್ತಲ್ಲ?

ವಿಷಯ ಡೈವರ್ಟ್ ಮಾಡೋದಾಗಿದ್ರೆ ನಿಮ್ಮ ನಾಯಕರ ಸಿಡಿನೇ ಇತ್ತಲ್ಲ? ಎಂದು ಪ್ರಶ್ನಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಿಡಿ ಬಿಡುಗಡೆ ಮಾಡಬಾರದು ಎಂದು ಇಂಜೆಕ್ಷನ್ ಆರ್ಡರ್ ತೆಗೆದುಕೊಂಡಿದ್ದಾರಲ್ಲಾ, ಯಾರು ಮಾಡಿಸಿದ್ದು ಅದನ್ನು? ಎಂದು ಕೇಳಿದ್ದಾರೆ.

ಅಲ್ಲದೆ, ಜೋಶಿ ರಾಜ್ಯದ ವಿಚಾರವಾಗಿ ಮಾತನಾಡಿದ್ದನ್ನು ನಾನು ಎಂದೂ ನೋಡಿಲ್ಲ. ಮಹದಾಯಿ ವಿಚಾರದಲ್ಲಿ ನಮಗೆ ಇನ್ನೂ ಅನುಮತಿಯೇ ಸಿಕ್ಕಿಲ್ಲ. ಆ ಬಗ್ಗೆ ಯಾವತ್ತಾದ್ರೂ ಕೇಂದ್ರ ಸಚಿವ ಜೋಶಿ ಮಾತನಾಡಿದ್ದಾರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬಾಲಿಶ ಹೇಳಿಕೆ ಕೊಡೋದು ಬಿಟ್ಟು ರಾಜ್ಯದ ಅಭಿವೃದ್ಧಿಯ ಬಗ್ಗೆ ಗಮನ ಕೊಡಿ. ಮೋದಿ‌ ಸರ್ಕಾರ ಬಂದು‌ 10 ವರ್ಷ ಆಯ್ತು ರಾಜ್ಯಕ್ಕೆ ಏನ್ ಸಿಕ್ಕಿದೆ? ಜೋಶಿ ಮಂತ್ರಿಯಾಗಿ ರಾಜ್ಯಕ್ಕೆ ಮಾಡಿರುವ ಕೆಲಸ ಏನು ಅಂತಾ ಹೇಳಿದ್ದಾರಾ? ಇಲ್ಲಸಲ್ಲದ ಆರೋಪ ಮಾಡೋದು ಸಚಿವ ಜೋಶಿಗೆ ಹವ್ಯಾಸ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಡಾ ಬಿಡಿ, ಮಹದಾಯಿ ಅನುಮತಿ ಕೊಡಿಸ್ರಪ್ಪಾ..

ಜೋಶಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , “ದರ್ಶನ್ ವಿಚಾರ ಹಾಗೂ ಮುಡಾ ಆರೋಪದ ವಿಚಾರ ಬಿಡಿ. ಈಗ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ತೊಂದರೆಯಾಗಿದೆ. ಹಾಗಾಗಿ ಮಹದಾಯಿ ಯೋಜನೆಗೆ ಅನುಮತಿ ಕೊಡಿಸ್ರಪ್ಪ..” ಎಂದಿದ್ದಾರೆ.

ಮಹದಾಯಿ ಯೋಜನೆ ಜಾರಿ ಮಾಡಲು ಕೇಂದ್ರದಿಂದ ದುಡ್ಡು ಕೊಡಿಸ್ರಪ್ಪ. ಗಣೇಶ ಚತುರ್ಥಿ ಹಬ್ಬದ ದಿನವೇ ವಿಘ್ನ ನಿವಾರಣೆ ಆಗಲಿ. ಇಲ್ಲಿಂದಲೇ ನಿಮಗೆ ದೀರ್ಘದಂಡ ನಮಸ್ಕಾರ ಹಾಕುತ್ತೇನೆ.. ಯೋಜನೆಗೆ ಅನುಮತಿ, ದುಡ್ಡು ಕೊಡಿಸಿ ಎಂದು ವ್ಯಂಗ್ಯವಾಡಿದ್ದಾರೆ.

ತಿಳಿದವರು ಹೀಗೆಲ್ಲಾ ಮಾತನಾಡಬಾರದು…

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೂಡ ಜೋಷಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ಕೊಲೆ ಆರೋಪಿ ದರ್ಶನ್ ರಾಜಾತಿಥ್ಯ ಗಂಭೀರವಾದ ವಿಷಯ. ಅದಕ್ಕಾಗಿಯೇ ದರ್ಶನ್ ಮತ್ತು ಟೀಮನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಿದ್ದೇವೆ. ಮುಡಾ ಕೇಸ್ ಡೈವರ್ಟ್ ಮಾಡುವುದಕ್ಕೆ ಅದರಲ್ಲಿ ಏನಿದೆ” ಎಂದು ಪ್ರಶ್ನಿಸಿದ್ದಾರೆ.

“ನಾನೂ ಕೂಡ ಗೃಹ ಸಚಿವನಾಗಿದ್ದೆ. ಜೈಲಲ್ಲಿ ಇಂಥ ವ್ಯವಸ್ಥೆ ನೋಡಿದ್ದೇನೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಜೋಶಿ ತಿಳಿದವರು, ಸುಮ್ಮನೆ ಈ ರೀತಿ ಮಾತನಾಡುವುದು ಸರಿಯಲ್ಲ” ಎಂದು ಕಾಲೆಳೆದಿದ್ದಾರೆ.

Tags:    

Similar News