ಸಹಕಾರ ಸೌಹಾರ್ದ ತಿದ್ದುಪಡಿ ವಿಧೇಯಕ ಅಂಗೀಕಾರ; ವಂಚನೆ ಎಸಗಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸ್ಥಾನಗಳ ಪುನರ್‌ಪರಿಶೀಲನೆ ಮಾಡಲಾಗಿದೆ.;

Update: 2025-08-19 07:10 GMT

ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ವಿಸ್ತೃತ ಚರ್ಚೆಯ ಬಳಿಕ 2025ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು.

ಸಹಕಾರ ವಲಯದಲ್ಲಿ ನಡೆಯುವ ದುರ್ವಿನಿಯೋಗ, ವಂಚನೆ ಪ್ರಕರಣಗಳನ್ನು ತಡೆಯುವ ಜೊತೆಗೆ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರಲು ಉದ್ದೇಶಿಸಿರುವ ಈ ತಿದ್ದುಪಡಿ ವಿಧೇಯಕವನ್ನು ಸಹಕಾರ ಸಚಿವರ ಜವಾಬ್ದಾರಿ ಹೊತ್ತಿರುವ ಎಚ್.ಕೆ. ಪಾಟೀಲ್ ಮಂಡಿಸಿ, ಅನುಮೋದನೆ ಪಡೆದರು. 

ತಿದ್ದುಪಡಿ ವಿಧೇಯಕದಲ್ಲಿ ಒಟ್ಟು ಠೇವಣಿಯ ಕನಿಷ್ಠ ಶೇ.20 ರಷ್ಟು ಮೊತ್ತವನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯವಾಗಿ ಉಳಿಸುವುದು ಕಡ್ಡಾಯಗೊಳಿಸಲಾಗಿದೆ. ಸಹಕಾರಿಗಳಿಗೆ ತಕ್ಷಣದ ಬಳಕೆಗಾಗಿ ಅಗತ್ಯವಿಲ್ಲದ ನಿಧಿಗಳನ್ನು ಅದರ ವ್ಯವಹಾರಗಳ ಹೊರಗೆ ಹೂಡಿಕೆ ಮಾಡುವುದಕ್ಕೆ ನಿಯಂತ್ರಣ ತರಲಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಮೀಸಲಿರಿಸಿದ ಸ್ಥಾನಗಳಿಗೆ ಮತ ಚಲಾಯಿಸುವ ವಿಧಾನವನ್ನು ನಿಯಮಿತಗೊಳಿಸಲಾಗಿದೆ.

ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸ್ಥಾನಗಳ ಪುನರ್‌ಪರಿಶೀಲನೆ ಮಾಡಲಾಗಿದೆ. ದುರ್ವಿನಿಯೋಗ ನಿಯಂತ್ರಿಸಲು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಪ್ರತಿ ವರ್ಷದ ಕೊನೆಯಲ್ಲಿ ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ಘೋಷಣೆ ಮಾಡುವುದು ಕಡ್ಡಾಯವಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಅನಗತ್ಯ ವೆಚ್ಚ ಮತ್ತು ಸಮಯ ವ್ಯಯವನ್ನು ತಪ್ಪಿಸುವ ಜೊತೆಗೆ ಲೆಕ್ಕಪರಿಶೋಧನೆಯ ಗುಣಮಟ್ಟ ಖಚಿತಪಡಿಸಲು ಕ್ರಮ ಕೈಗೊಳ್ಳಲಾಗಿದೆ. ವಂಚನೆ ಅಥವಾ ದುರ್ವಿನಿಯೋಗದಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ವ್ಯವಸ್ಥೆ ಕೂಡ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

“ಈ ತಿದ್ದುಪಡಿ ವಿಧೇಯಕವು ಸಹಕಾರಿ ವಲಯದಲ್ಲಿ ಶಿಸ್ತನ್ನು ತರಲು, ಜನರ ವಿಶ್ವಾಸವನ್ನು ಬಲಪಡಿಸಲು ಹಾಗೂ ಪಾರದರ್ಶಕತೆ ಖಾತ್ರಿಪಡಿಸಲು ಸಹಾಯಕವಾಗಲಿದೆ”  ಎಂದು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

Tags:    

Similar News