Port Project | ಮೀನುಗಾರರಿಗೆ ಮುಳುವಾದ ಉತ್ತರಕನ್ನಡದ ಸರಣಿ ಬಂದರು ಯೋಜನೆ
ಕೇಣಿ, ಕಾಸರಕೋಡು ಬಂದರು ಯೋಜನೆಯಿಂದ ಮೀನುಗಾರರ ಸ್ಥಿತಿ ಅತಂತ್ರವಾಗಿದೆ. ಆಳ ಸಮುದ್ರ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ನೀಡುವ ಬಂದರು ಯೋಜನೆ ವಿರೋಧಿಸಿ ಸರ್ಕಾರದ ವಿರುದ್ಧ ದಿಟ್ಟ ಹೋರಾಟ ಆರಂಭಿಸಿದ್ದಾರೆ.;
ಕೇಣಿ ಕಡಲತೀರದಲ್ಲಿ ಬಂದರು ಯೋಜನೆ ವಿರೋಧಿಸಿ ಪ್ರತಿಭಟನೆಗೆ ಇಳಿದ ಮೀನುಗಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು
ಕರಾವಳಿ ಕಡಲ ತೀರದಲ್ಲಿ ವಿವಿಧ ಬಂದರು ಯೋಜನೆಗಳಿಗೆ ಸ್ಥಳೀಯರ ಪ್ರತಿರೋಧದ ಅಲೆ ಅಪ್ಪಳಿಸುತ್ತಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ, ಹೊನ್ನಾವರದಲ್ಲಿ ಬಿಸಿಲ ಝಳದೊಂದಿಗೆ ಪ್ರತಿಭಟನೆಯ ಬಿಸಿಯೂ ದಿನೇದಿನೆ ಕಾವೇರುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅಂಕೋಲಾದ ಕೇಣಿ ಗ್ರೀನ್‌ಫೀಲ್ಡ್ ಬಂದರು, ಹೊನ್ನಾವರ ಬಂದರು ಹಾಗೂ ಪಾವಿನಕುರ್ವೆ ಖಾಸಗಿ ವಾಣಿಜ್ಯ ಬಂದರು ಯೋಜನೆ ಜಾರಿಗೆ ಭರದ ಸಿದ್ಧತೆ ನಡೆದಿದೆ. ಆದರೆ, ಯೋಜನೆಗೆ ಕಡಲ ಮಕ್ಕಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಕರಾವಳಿ ಜನರ ಹೋರಾಟ ಹತ್ತಿಕ್ಕಲು ಜಿಲ್ಲಾಡಳಿತ ಪೊಲೀಸ್ ಬಲ ಬಳಸುತ್ತಿದೆ. ಜಿಲ್ಲಾಡಳಿತದ ನಿಷೇಧಾಜ್ಞೆ ನಡುವೆಯೂ ಸ್ಥಳೀಯರು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿದು, ಪ್ರತಿಭಟಿಸುವ ಮೂಲಕ ಯೋಜನೆ ತಡೆಗೆ ಟೊಂಕಕಟ್ಟಿ ನಿಂತಿದ್ದಾರೆ. ಕರಾವಳಿ ಜನರ ಈ ಹೋರಾಟಕ್ಕೆ ಇದೀಗ ಗೋವಾ, ಆಂಧ್ರಪ್ರದೇಶ ಕರಾವಳಿಗಳ ಜನರು ಕೂಡ ಕೈ ಜೋಡಿಸುತ್ತಿರುವುದು ಯೋಜನೆಗೆ ಜಾರಿಗೆ ಸವಾಲಾಗಿ ಪರಿಣಮಿಸಿದೆ.
ಉತ್ತರಕನ್ನಡ ಜಿಲ್ಲೆಯ ಭೂಪ್ರದೇಶ ಶೇ 80ರಷ್ಟು ಅರಣ್ಯದಿಂದ ಕೂಡಿದೆ. ಉಳಿದ ಶೇ 20ರಷ್ಟು ಕಂದಾಯ ಭೂಮಿಯಲ್ಲಿ ಸ್ಥಳೀಯರು ಕೃಷಿ ಕೆಲಸ ಮಾಡುತ್ತಿದ್ದಾರೆ. ಬಂದರು, ವಿದ್ಯುತ್ ಸ್ಥಾಪನೆ, ನೌಕಾನೆಲೆ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಇರುವ ತುಂಡು ಭೂಮಿಯನ್ನೂ ಸ್ವಾಧೀನಪಡಿಸಿಕೊಂಡರೆ ಕರಾವಳಿ ಜನರು ಬದುಕುವುದು ಹೇಗೆ? ಎಂಬುದು ಹೋರಾಟನಿರತ ಸ್ಥಳೀಯರು ಹಾಗೂ ಮೀನುಗಾರರ ಪ್ರಶ್ನೆಯಾಗಿದೆ.
ಕಾರವಾರದಲ್ಲಿ ನೌಕಾನೆಲೆ, ಕೈಗಾ ಅಣುವಿದ್ಯುತ್ ಸ್ಥಾವರ, ತದಡಿ ಉಷ್ಣ ವಿದ್ಯುತ್ ಸ್ಥಾವರಕ್ಕೆ 14ಕ್ಕೂ ಹೆಚ್ಚು ಕಡಲತೀರಗಳು ಹಾಗೂ ಗ್ರಾಮಗಳ 15 ಸಾವಿರ ಎಕರೆ ಭೂಮಿ ಪರಾಭಾರೆಯಾಗಿದೆ. ಈಗ ಉಳಿದಿರುವ ಸಂರಕ್ಷಿತ ಕಡಲ ತೀರವಾದ ಕೇಣಿ ಪ್ರದೇಶದ ಮೇಲೆ ಬಂಡವಾಳಶಾಹಿಗಳ ಕಣ್ಣು ಬಿದ್ದಿದೆ.
ಬಂದರಿನಿಂದ ಸ್ಥಳೀಯರಿಗೆ ಲಾಭವಿಲ್ಲ
ಬಂದರು ನಿರ್ಮಾಣದಿಂದ ಸ್ಥಳೀಯರಿಗೆ ಯಾವುದೇ ಲಾಭವಿಲ್ಲ. ಬದಲಿಗೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಕೊನೆಯ ಮೊಳೆ ಹೊಡೆದಂತಾಗಲಿದೆ ಎಂಬುದು ಮೀನುಗಾರರ ಅಳಲು. ವಾಣಿಜ್ಯ ಬಂದರಿನಲ್ಲಿ ನಾನಾ ರೀತಿಯ ಸರಕು ಸಾಗಣೆ ನಡೆಯಲಿದೆ. ಅದಿರು, ತೈಲ, ಅನಿಲ ಸಾಗಣೆಕೆಯಿಂದ ಕರಾವಳಿಯ ಪರಿಸರ ಹಾನಿಯಾಗಲಿದೆ. ಜಲಚರಗಳೂ ಕೂಡ ಕ್ಷೀಣಿಸಲಿವೆ ಎಂದು ಕರಾವಳಿ ಭಾಗದ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕರಾವಳಿಯಲ್ಲಿ 13 ಕಿರು ವಾಣಿಜ್ಯ ಬಂದರುಗಳಿದ್ದು, ಕಾರವಾರ ಬಂದರಿನಲ್ಲಿ ಮಾತ್ರ ಸರಕು ಸಾಗಣೆ ನಡೆಯುತ್ತಿದೆ. ಉಳಿದಂತೆ ಬೇಲೆಕೇರಿ, ಜಟ್ಟಿ ಬಂದರು ನಿಷ್ಪ್ರಯೋಜಕವಾಗಿದೆ. ಹೀಗಿರುವಾಗ ಕೇಣಿ ಹಾಗೂ ಹೊನ್ನಾವರದ ಕಾಸರಕೋಡು ಬಂದರು ಯೋಜನೆ ಅಗತ್ಯವೇನಿತ್ತು ಎಂಬ ಪ್ರಶ್ನೆ ಎದುರಾಗಿದೆ.
ಬಂದರು ಯೋಜನೆಗೆ ಟೆಂಡರ್ ಕರೆಯುವ ಮುನ್ನ ಸ್ಥಳೀಯರ ಅಭಿಪ್ರಾಯ, ಅಹವಾಲು ಆಲಿಸದೇ ಸರ್ಕಾರ ಗುತ್ತಿಗೆ ನೀಡಿದೆ. ಸಾಧಕ-ಬಾಧಕ ಪರಿಶೀಲಿಸದೇ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದಿರುವುದು ಕರಾವಳಿಗೆ ಮಾಡಿದ ಮೋಸ. ಬಂದರು ಯೋಜನೆ ವಿರೋಧಿಸಿ ಹೋರಾಟ ತೀವ್ರಗೊಳ್ಳಬೇಕಿದೆ ಎಂದು ಉತ್ತರಕನ್ನಡ ಜಿಲ್ಲೆ ಸಾಂಪ್ರಾದಾಯಿಕ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಹರಿಕಾಂತರ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಬಂದರು ಯೋಜನೆ ವಿಚಾರದಲ್ಲಿ ರಾಜಕಾರಣಿಗಳ ಮೇಲಾಟದಿಂದ ಮೀನುಗಾರರ ಪರಿಸ್ಥಿತಿ ಅಯೋಮಯವಾಗಿದೆ. ಈ ಹಿಂದೆ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ಅವಧಿಯಲ್ಲೂ ವಿರೋಧ ವ್ಯಕ್ತವಾದಾಗ ರಾಜಕಾರಣಿಗಳು ಮೀನುಗಾರ ಮುಖಂಡರಿಗೆ ಆಮಿಷ ತೋರಿ, ಹೋರಾಟ ಹತ್ತಿಕ್ಕಿದ್ದರು. ಕರ್ನಾಟಕದ ಕರಾವಳಿ ಪರಿಸರ ಅತ್ಯಂತ ಶುದ್ಧವಾಗಿದೆ. ಈಗಾಗಲೇ ಕೆಲವು ಕಡೆ ಮಲಿನ ನೀರು ಸೇರಿ ಶೇ 50ರಷ್ಟು ಸಮುದ್ರ ಮಲೀನವಾಗಿದೆ. ಪ್ರಪಂಚದಲ್ಲೇ ಕರ್ನಾಟಕದ ಕರಾವಳಿ ಮೀನುಗಾರಿಕೆ ಸಮೃದ್ಧವಾಗಿದೆ. ಆದರೆ, ಅಕ್ರಮ ಮೀನುಗಾರಿಕೆಯಿಂದ ಆಳ ಸಮುದ್ರದ ಮೀನಿನ ಕಣಜ ಅರ್ಧ ನಾಶವಾಗಿದೆ. 70ವರ್ಷದ ಹಿಂದೆ ಶರಾವತಿ ಮುಖಜ ಪ್ರದೇಶ ದಕ್ಷಿಣದ ಸೇತುವೆ ಬಳಿಯೇ ಇತ್ತು. ಈಗ ಕಡಲ ಕೊರೆತದಿಂದ ಎರಡೂವರೆ ಕಿ.ಮೀ. ದೂರ ಸರಿದಿದೆ. ಹೊನ್ನಾವರ ಹಾಗೂ ಅಂಕೋಲಾದಲ್ಲಿ ಸಮುದ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳು ಬಂದರು ಯೋಜನೆಯಿಂದ ಮನೆ-ಮಠ ಕಳೆದುಕೊಳ್ಳಲಿವೆ" ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಂಕೋಲಾದ ಕೇಣಿಯಲ್ಲಿ ಸ್ಥಳೀಯರು ಬಂದರು ಯೋಜನೆ ವಿರೋಧಿಸಿ ಸಮುದ್ರಕ್ಕೆ ಇಳಿದು ಪ್ರತಿಭಟನೆ ನಡೆಸಿದರು
ಕಾಸರಕೋಡು ಬಂದರಿಗೂ ವಿರೋಧ
ಹೊನ್ನಾವರ ತಾಲೂಕಿನ ಕಾಸರಕೋಡು ಬಂದರು ನಿರ್ಮಾಣಕ್ಕೂ ಸರಿಸುಮಾರು ಐದಾರು ವರ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕಾಸರಕೋಡು ಸುತ್ತ ಸೇತುವೆ, ನದಿ, ಫಲವತ್ತಾದ ಭೂಮಿ ಇದೆ. ಇಲ್ಲಿ ಬಂದರು ಕಾರ್ಯಾಚರಣೆ ಆರಂಭಿಸಿದರೆ ತೈಲ, ಅನಿಲ, ಅದಿರು ಸೇರಿದಂತೆ ನಾನಾ ರೀತಿಯ ಕಚ್ಚಾ ಸರಕುಗಳ ಸಾಗಣೆಯಾಗಲಿದೆ. ಅನಿಲ ಸೋರಿಕೆಯಿಂದ ಮತ್ತೊಂದು ಭೂಪಾಲ್ ದುರಂತ ಸಂಭವಿಸಲೂಬಹುದು ಎಂದು ಸದಾನಂದ ಹರಿಕಾಂತರ ತಿಳಿಸಿದರು.
ಯೋಜನೆ ಜಾರಿಯಿಂದ ಸುಮಾರು ಆರೆಂಟು ಕಿ.ಮೀ. ಪ್ರದೇಶ ಬಂದರು ವಸಾಹತು ಆಗಲಿದೆ. ಆಗ ಆಳ ಸಮುದ್ರದ ಮೀನುಗಾರಿಕೆ ನಿಷಿದ್ಧವಾಗಲಿದೆ. ಮೀನುಗಾರಿಕೆ ಉದ್ಯಮ ಅವಲಂಬಿತರು ಬೀದಿಗೆ ಬೀಳಲಿದ್ದಾರೆ ಎಂದು ಹೇಳಿದರು.
ಮೀನು ಸಿಕ್ಕರೆ ಶಿಕಾರಿ, ಇಲ್ಲದಿದ್ದರೆ ಬಿಕಾರಿ
ಸಾಮಾನ್ಯವಾಗಿ ಎಲ್ಲ ತೀರ ಪ್ರದೇಶದಲ್ಲಿ ಮೀನುಗಳು ಇರುವುದಿಲ್ಲ. ಆರೇಳು ಕಿ.ಮೀ. ಆಳ ಸಮುದ್ರದಲ್ಲಿ ಇರುತ್ತವೆ. ಬಂದರು ನಿರ್ಮಾಣ ಚಟುವಟಿಕೆಗಳು ಆರಂಭವಾದರೆ ಅವು ವಲಸೆ ಹೋಗುವ ಭೀತಿ ಎದುರಾಗಿದೆ. ಇಂದು ಕಾರವಾರದಲ್ಲಿದ್ದರೆ, ನಾಳೆ ಗೋವಾಗೆ ತೆರಳಲಿವೆ. ಈಗಾಗಲೇ ಮೀನುಗಾರಿಕೆಗೆ ತೆರಳುವವರ ಸ್ಥಿತಿಯಂತೂ ʼಸಿಕ್ಕಿದರೆ ಶಿಕಾರಿ ಇಲ್ಲದಿದ್ದರೆ ಬಿಕಾರಿʼ ಎಂಬಂತಾಗಿದೆ. ಹಾಗಾಗಿ ಬಂದರು ಯೋಜನೆಗಳಿಂದ ಸ್ಥಳೀಯರಿಗೆ ಯಾವುದೇ ಉಪಯೋಗವಿಲ್ಲ. ಕರಾವಳಿ ತೀರ ಹೊಂದಿರದ ಉತ್ತರಪ್ರದೇಶ, ಪಂಜಾಬಿನವರಿಗೆ ಉದ್ಯೋಗ ಮಾತ್ರ ಸಿಗಲಿದೆ ಎಂದು ಹೇಳಿದರು.
ನೌಕಾನೆಲೆ ಯೋಜನೆಗೆ ಭೂಮಿ ಕಳೆದುಕೊಂಡವರು ಈಗ ಆಟೊ ಓಡಿಸುತ್ತಾ, ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಮೀನುಗಾರರಿಗೆ ಯಾವುದೇ ಪರಿಹಾರವೂ ಸಿಗುವುದಿಲ್ಲ ಎಂದರು.
ಬಂದರು ಯೋಜನೆ ವಿರೋಧಿಸಲು ಮೀನುಗಾರರಲ್ಲೇ ಸರಿಯಾದ ಒಗ್ಗಟ್ಟಿಲ್ಲ. ಯೋಜನೆ ಬಾಧಕಗಳ ಕುರಿತು ಅಧಿಕಾರಿಗಳ ಮುಂದೆ ಸಮರ್ಥವಾಗಿ ವಾದ ಮಂಡನೆ ಮಾಡುವವರಿಲ್ಲ. ಇನ್ನು ಪರ್ಸಿಯನ್ ಬೋಟ್ ಮಾಲೀಕರು ಹೋರಾಟ ಬೆಂಬಲಿಸುವುದಿಲ್ಲ. ರಾಜಕಾರಣಿಗಳ ಹಿಂಬಾಲಕರಾಗಿ ನಿಯಮ ಮೀರಿ ಮೀನುಗಾರಿಕೆ ನಡೆಸುತ್ತಾರೆ ಎಂದು ಸದಾನಂದ ಹರಿಕಾಂತರ ದೂರಿದರು.
ರಾಜಕೀಯ ಪ್ರೇರಿತ ಹೋರಾಟ
ಬಂದರು ಯೋಜನೆ ವಿರೋಧಿಸಿ ಉತ್ತರಕನ್ನಡ ಜಿಲ್ಲೆಯಲ್ಲಿ ಕೆಲವರು ರಾಜಕೀಯ ಪ್ರೇರಿತ ಹೋರಾಟ ನಡೆಸುತ್ತಿದ್ದಾರೆ. ಮೀನುಗಾರರ ನಿಜವಾದ ಸಮಸ್ಯೆಗಳ ಬಗ್ಗೆ ಬಹುತೇಕರಿಗೆ ಕಾಳಜಿ ಇಲ್ಲ. ಸರ್ಕಾರಗಳು ಕರಾವಳಿಯನ್ನು ಗುರಿಯಾಗಿಸಿಕೊಂಡೇ ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ, ಈ ಯೋಜನೆಗಳಿಂದ ಜನರಿಗೆ ಯಾವುದೇ ಅನುಕೂಲ ಇಲ್ಲ. ಬಂಡವಾಳ ಶಾಹಿಗಳ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೇಣಿ ಹಾಗೂ ಕಾಸರಕೋಡು ಬಂದರು ಯೋಜನೆಯು ಮೀನುಗಾರರ ಪಾಲಿಗೆ ʼನೀರಿನಲ್ಲಿರುವ ಮೀನನ್ನು ಹೊರತೆಗೆದಂತೆʼ ಆಗುತ್ತಿದೆ ಎಂದು ಉತ್ತರಕನ್ನಡ ಜಿಲ್ಲೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬಾಬು ರಾಯನಾಯಕ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮೀನುಗಾರರ ಸ್ಥಿತಿ ಅತಂತ್ರ
ಮೀನುಗಾರ ಕುಟುಂಬಗಳು ಶ್ರಮಜೀವಿಗಳು. ಬಂದರು ಯೋಜನೆಯ ಮೊದಲ ಹೊಡೆತ ಬೀಳುವುದೇ ಮೀನುಗಾರರಿಗೆ. ಅಂಕೋಲಾ, ಹೊನ್ನಾವರದಲ್ಲಿ ಬಂದರು ಯೋಜನೆ ಅನುಷ್ಠಾನಗೊಳಿಸುವುದರಿಂದ ಕಡಲ ತೀರಗಳು ನಾಶವಾಗಲಿವೆ. ಕಾರವಾರದ ನೌಕಾನೆಲೆ, ರವೀಂದ್ರನಾಥ ಕಡಲತೀರವೂ ನಿಷೇಧಿತ ಪ್ರದೇಶವಾಗಿ ಮಾರ್ಪಟ್ಟಿದೆ. ಯೋಜನೆ ವಿರೋಧಿಸಿ ಅಪ್ಪಿಕೋ ಚಳವಳಿ, ಕಡಲ ಸಂರಕ್ಷಣಾ ಸಮಿತಿ ಕಟ್ಟಿಕೊಂಡು ಹೋರಾಟ ಮಾಡಿದರೂ ಬದಲಾವಣೆ ಆಗಲಿಲ್ಲ. ಈಗ ನೈಸರ್ಗಿಕವಾದ ಕಡಲತೀರಗಳನ್ನು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ಕಡಲ ತೀರಗಳಲ್ಲಿ ನೀಲಿಕಲ್ಲುಗಳು ಸಿಗುತ್ತಿದ್ದವು. ಬಂದರು ನಿರ್ಮಾಣಗೊಂಡ ಅದಿರು ಸಾಗಣೆ ಆರಂಭವಾದ ಬಳಿಕ ನೀಲಿಕಲ್ಲು ಕಾಣುವುದೇ ಇಲ್ಲ. ಜಲಚರ, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ರಾಜ್ಯದಲ್ಲಿ ಗೋವಾಗಿಂತ ಹೆಚ್ಚು ಕಡಲತೀರಗಳಿವೆ. 6ಸಾವಿರ ಕುಟುಂಬಗಳು ಮೀನುಗಾರಿಕೆ ನೆಚ್ಚಿಕೊಂಡಿವೆ. ಕರಾವಳಿ ಭಾಗದಲ್ಲಿ ಒಂದು ಕಡೆ ಅರಣ್ಯ, ಮತ್ತೊಂದು ಕಡೆ ಸಮುದ್ರವಿದೆ. ಅಳಿದುಳಿದಿರುವ ತುಂಡು ಭೂಮಿಯನ್ನೂ ಕಿತ್ತುಕೊಂಡು ಪ್ರಾಣಿಗಳಿಗಿಂತ ಕಡೆಯಾಗಿ ನೋಡಲಾಗುತ್ತಿದೆ ಎಂದು ವ್ಯವಸ್ಥೆ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಣಿಯಲ್ಲಿ ಸ್ಥಳೀಯರು ಸಮುದ್ರಕ್ಕೆ ಇಳಿದು ಬಂದರು ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದರು
ಯಾವ ಬಂದರಿಗೆ ಎಷ್ಟು ಹೂಡಿಕೆ?
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾರಿಗೆ ಉದ್ದೇಶಿಸಿರುವ ಅಂಕೋಲಾದ ಕೇಣಿ ಗ್ರೀನ್‌ಫೀಲ್ಡ್ ಬಂದರು ಯೋಜನೆಯನ್ನು 4,119ಕೋಟಿ ರೂ. ವೆಚ್ಚ ಮಾಡುತ್ತಿದೆ.
ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಎಚ್‌ಪಿಪಿಎಲ್) ವತಿಯಿಂದ ಕಾಸರಕೋಡು ಕಡಲತೀರದಲ್ಲಿ 600ಕೋಟಿ ವೆಚ್ಚದಲ್ಲಿ ಖಾಸಗಿ ಬಂದರು ನಿರ್ಮಿಸಲು ಉದ್ದೇಶಿಸಿದ್ದು, ಆರಂಭದಿಂದಲೇ ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ. ಬಂದರು ನಿರ್ಮಾಣದಿಂದ ಕಡಲಾಮೆಗಳ ಸಂತತಿ ಕ್ಷೀಣಿಸಲಿದೆ ಎಂಬುದು ಮೀನುಗಾರರ ಆತಂಕವಾಗಿದೆ.
ಪಾವಿನಕುರ್ವೆಯಲ್ಲಿ 3,047ಕೋಟಿ ರೂ. ವೆಚ್ಚದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಉದ್ದೇಶಿಸಿದ್ದು, ಇದಕ್ಕೂ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರಾವಳಿ ಶುದ್ಧ ಪರಿಸರ ಹಾಗೂ ಸಮುದ್ರವನ್ನು ಕಲುಷಿತ ಮಾಡಲಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಏನಿದು ಕೇಣಿ ಬಂದರು ಯೋಜನೆ?
ಪಿಪಿಪಿ(ಸರ್ಕಾರಿ- ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಕೇಣಿಯಲ್ಲಿ ಜೆಎಸ್‌ಡಬ್ಲ್ಯು ಕಂಪನಿಯು 4 ಸಾವಿರ ಕೋಟಿ ವೆಚ್ಚದಲ್ಲಿ ಸರ್ವ ಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರು ಅಭಿವೃದ್ಧಿ ಯೋಜನೆ ಜಾರಿಗೆ ನಿರ್ಧರಿಸಿದೆ.
ಇದು ಕೇಂದ್ರವು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಯೋಜನೆಯ ಸರ್ವೇ ಕಾರ್ಯ ಆರಂಭವಾಗಿದೆ. ಯೋಜನೆ ಪರಿಶೀಲನೆ ಬಳಿಕ ಬಂದರು ನಿರ್ಮಾಣಕ್ಕೆ ಸೂಕ್ತ ಎಂದು ಕಂಡು ಬಂದಲ್ಲಿ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಾರ್ವಜನಿಕರ ಅಹವಾಲು ಸಭೆ ನಡೆಯಲಿದೆ. ಅಹವಾಲು ಸಭೆ ಹಾಗೂ ಪರಿಸರ ಅನುಮತಿ ದೊರೆತ ಬಳಿಕ ಮುಂದಿನ ಹಂತದ ಕಾಮಗಾರಿ ಆರಂಭಿಸಲಾಗುವುದು ಎಂದು ಜೆಎಸ್‌ಡಬ್ಲ್ಯು ಕಂಪೆನಿ ಸಾರ್ವಜನಿಕ ತಿಳಿವಳಿಕೆಯ ನೋಟಿಸ್‌ನಲ್ಲಿ ತಿಳಿಸಿದೆ.
ರೈಲು ಮತ್ತು ರಸ್ತೆ ನಿರ್ಮಾಣಕ್ಕಾಗಿ 150 ಎಕರೆ ಭೂಮಿ ಅಗತ್ಯವಿದ್ದು, ಇದನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಮನೆ ಹಾಗೂ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲಾಗುವುದು. ಬಂದರು ಚಟುವಟಿಕೆ ಇಲ್ಲದ ಕಡೆಗಳಲ್ಲಿ ಎಂದಿನಿಂತೆ ಮೀನುಗಾರಿಕೆಗೆ ಅವಕಾಶ ನೀಡಲಾಗುವುದು. ಅನಗತ್ಯ ಗೊಂದಲಗಳಿಗೆ ಸ್ಥಳೀಯರು ಕಿವಿಗೊಡಬಾರದು ಎಂದು ಯೋಜನೆ ಸಂಬಂಧಿತ ಸಾರ್ವಜನಿಕ ಸಂಪರ್ಕಾಧಿಕಾರಿ ರೇಷ್ಮಾ ಉಳ್ಳಾಲ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಜೆಎಸ್‌ಡಬ್ಲ್ಯುದಿಂದ ಆಮಿಷ
ಕೇಣಿ ಬಂದರು ನಿರ್ಮಾಣದಿಂದ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೂ ಸಹಕಾರಿಯಾಗಲಿದೆ. ಉತ್ತರಕನ್ನಡದಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಆಗಲಿದ್ದು, ಉದ್ಯೋಗಾವಕಾಶಗಳು ಸಿಗಲಿವೆ.
ಕೇಣಿ, ಬಾವಿಕೆರೆ, ಅಂಕೋಲಾ, ಅಲಿಗೇರಿ, ಶಿರಕುಳಿ ಇತರೆ ಕಡೆಗಳಲ್ಲಿ ಸಿಎಸ್ಆರ್ ನಿಧಿಯಡಿ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸ್ಥಳೀಯರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಹಾಗೂ ವ್ಯಾಪಾರದ ಅವಕಾಶಗಳು ಸಿಗಲಿವೆ ಎಂದು ಕಂಪನಿ ಸಾರ್ವಜನಿಕರಿಗೆ ಆಶ್ವಾಸನೆ ನೀಡಿದೆ.