ಎಸ್‌ಟಿಗೆ ಕುರುಬ ಸಮುದಾಯ ಸೇರ್ಪಡೆ ವಿಚಾರ: ಸಿದ್ದರಾಮಯ್ಯ ಸರ್ಕಾರದಿಂದಲೇ ಅಧಿಕೃತ ಸಭೆ

ಕುರುಬ ಸಮುದಾಯವನ್ನುಎಸ್‌ಟಿಗೆ ಸೇರಿಸುವ ಕುರಿತು ಚರ್ಚೆ ನಡೆಸಲು ಕರೆದಿರುವ ಸಭೆಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.;

Update: 2025-09-16 00:30 GMT

ಪರಿಶಿಷ್ಟ ಜಾತಿಯ ಮೀಸಲಾತಿ ಪರಿಷ್ಕರಣೆ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಇದೀಗ ಮತ್ತೊಂದು ಮೀಸಲಾತಿ ಪರಿಷ್ಕರಣೆಗೆ ಮುಂದಾಗಿದೆ. ಬಹು ವರ್ಷದ ಬೇಡಿಕೆಯಾಗಿರುವ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದೇ ಆಗಿರುವ ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮಂಗಳವಾರ (ಸೆ.16) ಸಭೆ ನಡೆಯಲಿದೆ. 

ಸಭೆಯ ಸೂಚನಾ ಪತ್ರದಲ್ಲಿ ಎರಡು ಅಜೆಂಡಾಗಳನ್ನು ಉಲ್ಲೇಖಿಸಲಾಗಿದೆ. ಮೊದಲನೆಯದಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕುರಿತು ಎಂದು ಉಲ್ಲೇಖವಾಗಿದೆ. ಎರಡನೇಯದಾಗಿ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯವು ರಾಜ್ಯದ ಗೊಂಡ ಸಮುದಾಯದ ಜತೆ ಸಾಮ್ಯತೆ ಹೊಂದಿರುವ ಬಗ್ಗೆ ಚರ್ಚೆ ಎಂದು ತಿಳಿಸಲಾಗಿದೆ. ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ಹಾಜರಾಗುವಂತೆ  ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. 

ಮಂಗಳವಾರ ನಡೆಯುವ ಸಭೆಯಲ್ಲಿ ಯಾವೆಲ್ಲಾ ಚರ್ಚೆಗಳು ನಡೆಯಲಿವೆ ಎಂಬ ಕುತೂಹಲ ಮೂಡಿಸಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮತ್ತು ಕೇಂದ್ರದ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಯಾವೆಲ್ಲಾ ಅಂಶಗಳ ಬಗ್ಗೆ ಶಿಫಾರಸ್ಸು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ. ಎಸ್‌ಟಿ ವರ್ಗಕ್ಕೆ ಕುರುಬ ಸಮುದಾಯವನ್ನು ಸೇರಿಸುವ ಕುರಿತು  ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಕೇಂದ್ರ ಸರ್ಕಾರವು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತಷ್ಟು ಅಂಶಗಳ ಕುರಿತು ಚರ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ ಎನ್ನಲಾಗಿದೆ.



ಪರಿಶಿಷ್ಟ ಜಾತಿಯ ಮೀಸಲಾತಿ ಪರಿಷ್ಕರಣೆ ಮುಗಿಸಿ ಎಲ್ಲಾ101 ಜಾತಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ, ಒಳ ಮೀಸಲಾತಿ ನೀಡಿದೆ. ಇದಕ್ಕೆ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳು ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಇದರ ಜತೆಗೆ ಅಲೆಮಾರಿ ಸಮುದಾಯಗಳು ತಮಗೆ ನ್ಯಾ. ನಾಗಮೋಹನ್‌ ದಾಸ್‌ ಸಮಿತಿಯ ಶಿಫಾರಸ್ಸಿನಂತೆ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕು ಎಂದು ಆಗ್ರಹಿಸಿವೆ. ಇದೀಗ ಕುರುಬ ಸಮುದಾಯಕ್ಕೆ ಮೀಸಲಾತಿ ಪರಿಷ್ಕರಣೆಗೆ ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ. 

ಪ್ರಸ್ತುತ 2ಎ ಗ್ರೂಪ್‌ನಲ್ಲಿ ಕುರುಬ ಸಮುದಾಯ

ಪ್ರಸ್ತುತ ರಾಜ್ಯದಲ್ಲಿ ಕುರುಬ ಸಮುದಾಯವು 2ಎ ಗ್ರೂಪ್ ನಲ್ಲಿದ್ದು, ಶೇ.15 ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. ಆದರೇ, 2 ಎ ಗ್ರೂಪ್ ನಲ್ಲಿ ಕುರುಬ ಸಮುದಾಯ ಸೇರಿದಂತೆ, ವಿಶ್ವಕರ್ಮ, ಕುಂಬಾರ, ದೇವಾಂಗ, ನೇಕಾರ, ಮಡಿವಾಳ, ಅಗಸ, ತಿಗಳ, ಪಟ್ಟೇಗಾರ, ಬೌದ್ಧ ಸೇರಿದಂತೆ 100 ಸಮುದಾಯಗಳಿವೆ. ಪರಿಶಿಷ್ಟ ಪಂಗಡಗಳಿಗೆ ಸದ್ಯ ರಾಜ್ಯದಲ್ಲಿ ಶೇ.7 ರಷ್ಟು ಮೀಸಲಾತಿ ಸೌಲಭ್ಯವನ್ನು ನೀಡಲಾಗಿದೆ. ವಾಲ್ಮೀಕಿ ನಾಯಕ ಸಮುದಾಯ ಸೇರಿದಂತೆ 51 ಸಮುದಾಯಗಳು ಎಸ್‌ಟಿ ಮೀಸಲಾತಿ ಲಾಭ ಹಾಗೂ ಸೌಲಭ್ಯವನ್ನು ಪಡೆಯುತ್ತಿವೆ. ಒಂದು ವೇಳೆ ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಿದರೆ, ಈಗ ಶೇ.7 ರ ಮೀಸಲಾತಿಯನ್ನು ವಾಲ್ಮೀಕಿ ನಾಯಕ ಸಮುದಾಯವು ಕುರುಬ ಸಮುದಾಯದ ಜೊತೆಗೆ ಹಂಚಿಕೊಳ್ಳಬೇಕಾಗುತ್ತದೆ. ಇದಕ್ಕೆ ವಾಲ್ಮೀಕಿ ನಾಯಕ ಸಮುದಾಯ ಸಿದ್ದವಿದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. 

ಈ ಮೊದಲು ರಾಜ್ಯದಲ್ಲಿ ಎಸ್‌ಟಿ ಮೀಸಲಾತಿಯ ಪ್ರಮಾಣ ಶೇ.4 ರಷ್ಟಿತ್ತು. ಅದನ್ನು ಹೋರಾಟ, ಪ್ರತಿಭಟನೆ, ಬೇಡಿಕೆ ಇಟ್ಟ ಬಳಿಕ ಶೇ.7 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಎಸ್‌ಟಿ ವಾಲ್ಮೀಕಿ ನಾಯಕ ಸಮುದಾಯದಲ್ಲಿ ತೃಪ್ತಿ, ಸಮಾಧಾನ ಇದೆ. ಈಗ ತಮಗೆ ನೀಡಿರುವ ಶೇ.7 ರ ಮೀಸಲಾತಿಯ ಪಾಲು ಅನ್ನು ಕುರುಬ ಸಮುದಾಯದ ಜೊತೆಗೆ ಹಂಚಿಕೊಳ್ಳಬೇಕು ಎಂದು ಹೇಳಿದರೆ, ಎಸ್‌ಟಿ ಕೆಟಗರಿಯಲ್ಲಿರುವ ಸಮುದಾಯಗಳು ಒಪ್ಪಿಕೊಳ್ಳಲಿವೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. 

ಈಶ್ವರಪ್ಪ ಪ್ರಯತ್ನ

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಬಿಜೆಪಿ ಮುಖಂಡ ಹಾಗೂ ಕುರುಬ ಸಮೂದಾಯದ ನಾಯಕ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಕುರುಬ ಸಂಘಟನೆಗಳು ಮತ್ತು ಮಠಗಳು ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸಿ ಕುರುಬ ಸಮುದಾಯವನ್ನು ಎಸ್‌ಟಿ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿಲಾಗಿತ್ತು. ಆಗಿನ ಸರ್ಕಾರವೂ ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿತ್ತು. 

ಆ ಮೂಲಕ ಕುರುಬ ಸಮುದಾಯದ ಜನರಿಗೆ  ಉದ್ಯೋಗ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಹೆಚ್ಚಿನ ಮೀಸಲಾತಿ ಒದಗಿಸುವ ಸಂಬಂಧ  ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಬಗ್ಗೆ ಹೆಚ್ಚು ಬೇಡಿಕೆ ಬಂದಿತ್ತು. 

ಕುಲಶಾಸ್ತ್ರೀಯ ಅಧ್ಯಯನ ವರದಿ ಮೇರೆಗೆ ಕೇಂದ್ರಕ್ಕೆ ಶಿಫಾರಸು

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಸಚಿವ ಸಂಪುಟ ಸಭೆಯು 2023ರ ಮಾರ್ಚ್‌ನಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಕುರುಬ ಸಮುದಾಯವನ್ನು ಎಸ್‌.ಟಿ. ಪಟ್ಟಿಗೆ ಸೇರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಐಎಎಸ್‌ ಅಧಿಕಾರಿ ಪಿ.ಮಣಿವಣ್ಣನ್ ಕೇಂದ್ರದ ಬುಡಕಟ್ಟು ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ವರದಿ ಸಲ್ಲಿಸಿದ್ದರು. 

ಮೈಸೂರು, ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ವಾಸಿಸುತ್ತಿರುವ ಕಾಡು ಕುರುಬರು, ಜೇನು ಕುರುಬರು ಎಸ್‌ಟಿ ಮೀಸಲಾತಿಯ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದ ಕುರುಬ ಸಮುದಾಯ ಪ್ರಸ್ತುತ ರಾಜ್ಯದ 2 'ಎ' ಪಟ್ಟಿಯಲ್ಲಿದೆ. ಹೀಗಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು.

ಕುರುಬರು ಭಾರತದ ಮೂಲ ನಿವಾಸಿಗಳಾಗಿದ್ದು, 1868 ಮತ್ತು 1901ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಕೈಬಿಡಲಾಯಿತು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಆಡಳಿತದ ಅವಧಿಯಲ್ಲಿ ಜೇನು ಕುರುಬ ಮತ್ತು ಕಾಡು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು. ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಸೌಲಭ್ಯ ಸಿಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಕುರುಬರನ್ನೂ ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂಬುದು ಸಮುದಾಯದ ಬೇಡಿಕೆಯಾಗಿದೆ ಎಂದು ಹೇಳಲಾಗಿದೆ. 

ಎಸ್‌ಟಿಗೆ ಸೇರ್ಪಡೆಯಾದರೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯ

ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾದರೆ, ರಾಜ್ಯ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ವಿಧಾನಸಭಾ ಕ್ಷೇತ್ರಗಳು ಹಾಗೂ ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲು ಅವಕಾಶ ಲಭ್ಯವಾಗಲಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರಗಳು ಸದ್ಯ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಲೋಕಸಭಾ ಕ್ಷೇತ್ರಗಳಾಗಿವೆ. ಎಸ್‌ಟಿ ವರ್ಗಕ್ಕೆ ಕುರುಬರು ಸ್ಪರ್ಧೆಯಾದರೆ ಈ ಕ್ಷೇತ್ರದಲ್ಲಿಯೂ ಸ್ಪರ್ಧಿಸಬಹುದಾಗಿದೆ. ಹೀಗಾಗಿ ರಾಜಕೀಯ ಮೀಸಲಾತಿ ಪಡೆಯುವ ಉದ್ದೇಶವೂ ಎಸ್‌ಟಿ ಸೇರ್ಪಡೆಯ ಪ್ರಯತ್ನದ ಹಿಂದೆ ಇರಬಹುದು ಎಂಬ ಲೆಕ್ಕಾಚಾರದ ಮಾತುಗಳು ರಾಜಕೀಯದಲ್ಲಿ ಕೇಳಿಬಂದಿವೆ. 

ಈಗ ಮತ್ತೆ ಕುರುಬ ಸಮುದಾಯವನ್ನು ಎಸ್‌.ಟಿ. ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ವೇಗ ಸಿಗುತ್ತಿದೆ. ನಾಳೆಯ ಸಭೆಯ ಬಳಿಕ ವರದಿಯನ್ನು ರಾಜ್ಯದ ಕ್ಯಾಬಿನೆಟ್‌ಗೆ ಮತ್ತು ಕೇಂದ್ರ ಸರ್ಕಾರಕ್ಕೆ ಕಳಿಸಬಹುದು. ಇದನ್ನು ವಾಲ್ಮೀಕಿ ನಾಯಕ ಸೇರಿದಂತೆ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ 51 ಸಮುದಾಯಗಳು ಒಪ್ಪಿಕೊಳ್ಳುತ್ತಾವಾ, ಎಸ್‌.ಟಿ. ಮೀಸಲಾತಿಯ ಪ್ರಮಾಣವನ್ನು ಶೇ.7 ರಿಂದ ಮತ್ತಷ್ಟು ಹೆಚ್ಚಿಸಬೇಕೆಂದು ಬೇಡಿಕೆ ಇಡುತ್ತಾವಾ ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ.

ರಾಜ್ಯದಲ್ಲಿ 45 ಲಕ್ಷ ಕುರುಬ ಸಮುದಾಯದ ಸಂಖ್ಯೆ

ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಅಧ್ಯಯನ ವರದಿ ಪ್ರಕಾರ ರಾಜ್ಯದಲ್ಲಿ ಕುರುಬ ಸಮುದಾಯದ 45 ಲಕ್ಷ ಮಂದಿ ಇದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾವಾರು 7.31 ರಷ್ಟು ಇದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 36 ಲಕ್ಷಕ್ಕೂ ಹೆಚ್ಚಿದ್ದರೆ, ನಗರ ಪ್ರದೇಶದಲ್ಲಿ7 ಲಕ್ಷಕ್ಕೂ ಹೆಚ್ಚಿದ್ದಾರೆ ಎಂಬ ಮಾಹಿತಿ ಇದೆ. ಲಿಂಗಾಯತ, ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯಗಳ ನಂತರ ಕುರುಬರು ರಾಜ್ಯದ ನಾಲ್ಕನೇ ಅತಿ ದೊಡ್ಡ ಜಾತಿಯಾಗಿದ್ದಾರೆ. ಕುರುಬರು ಸಾಂಪ್ರದಾಯಿಕವಾಗಿ ಕುರಿ ಸಾಕಣೆ ಮಾಡುವ ಸಮುದಾಯವಾಗಿದೆ. 

ರಾಜಕೀಯ ಪ್ರಾತಿನಿಧ್ಯ: ಕುರುಬ ಸಮುದಾಯದಿಂದ 14 ಶಾಸಕರು 

ಪ್ರಸ್ತುತ ವಿಧಾನಸಭೆಯಲ್ಲಿ ಕುರುಬ ಸಮುದಾಯದಿಂದ 14 ಶಾಸಕರು ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸೇರಿದಂತೆ 14 ಶಾಸಕರು ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ನಿಂದ 10 ಶಾಸಕರು ಇದ್ದು, ಬಿಜೆಪಿ ಮತ್ತು ಜೆಡಿಎಸ್‌ನಿಂದ ತಲಾ ಇಬ್ಬರು ಶಾಸಕರು ಇದ್ದಾರೆ. 

ಕುರುಬ ಸಮುದಾಯದ ಜನಪ್ರತಿನಿಧಿಗಳ ವಿವರ ಇಂತಿದೆ.

ಕಾಂಗ್ರೆಸ್‌ ಶಾಸಕರು ಮತ್ತು ಕ್ಷೇತ್ರದ ಮಾಹಿತಿ

1.ಸಿದ್ದರಾಮಯ್ಯ - ವರುಣ ಕ್ಷೇತ್ರ

2.ರವಿಶಂಕರ - ಕೆ.ಆರ್.‌ ನಗರ ಕ್ಷೇತ್ರ

3.ಬೈರತಿ ಸುರೇಶ್ - ಹೆಬ್ಬಾಳ ಕ್ಷೇತ್ರ

4.ಗೋವೀಂದಪ್ಪ - ಹೊಸದುರ್ಗ ಕ್ಷೇತ್ರ

5.ಆನಂದ್ - ಕಡೂರು ಕ್ಷೇತ್ರ

6.ಶ್ರೀನಿವಾಸ್ - ತರೀಕೆರೆ ಕ್ಷೇತ್ರ

7.ಬಸವರಾಜ್ ಶಿವಣ್ಣನವರ್ - ಹಾವೇರಿ ಕ್ಷೇತ್ರ

8. ಚಿಮ್ಮುನ ಕಟ್ಟಿ - ಬಾದಾಮಿ ಕ್ಷೇತ್ರ

9.ರಾಘವೇಂದ್ರ - ಕೊಪ್ಪಳ ಕ್ಷೇತ್ರ

10.ಹುಲ್ಲಪ್ಪ ಮೇಟಿ - ಬಾಗಲಕೋಟೆ ಕ್ಷೇತ್ರ

ಜೆಡಿಎಸ್ ಶಾಸಕರು ಮತ್ತು ಕ್ಷೇತ್ರ

1.ಸುರೇಶ್ ಬಾಬು - ಚಿಕ್ಕನಾಯಕನಹಳ್ಳಿ ಕ್ಷೇತ್ರ

2.ಮಂಜುನಾಥ - ಹನೂರು ಕ್ಷೇತ್ರ


ಬಿಜೆಪಿ ಶಾಸಕರು ಮತ್ತು ಕ್ಷೇತ್ರ 

1. ದೋಡ್ಡನಗೌಡ ಪಾಟೀಲ್‌ - ಕುಷ್ಠಗಿ ಕ್ಷೇತ್ರ 

2. ಬೈರತಿ ಬಸವರಾಜ್‌ - ಕೆ.ಆರ್‌.ಪುರ ಕ್ಷೇತ್ರ

Tags:    

Similar News