Hassan Convention| ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಗೊಂದಲಕ್ಕೆ ತೆರೆ; ಖರ್ಗೆ, ಸುರ್ಜೇವಾಲ ಭಾಗಿ

ಜೆಡಿಎಸ್‌ನ ಭದ್ರಕೋಟೆ ಹಾಸನದಲ್ಲಿ ಡಿ. 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ನಡೆಸಲು ಉದ್ದೇಶಿಸಿರುವ "ಸ್ವಾಭಿಮಾನಿ ಸಮಾವೇಶ" ಸಂಬಂಧ ಗೊಂದಲವನ್ನು ಕಾಂಗ್ರೆಸ್‌ ಹೈಕಮಾಂಡ್‌ ನಿವಾರಿಸಿದೆ.

Update: 2024-12-01 12:28 GMT

ಜೆಡಿಎಸ್‌ನ ಭದ್ರಕೋಟೆ ಎಂದೇ ಹೇಳಲಾದ ಹಾಸನದಲ್ಲಿ  ಇದೇ ಡಿಸೆಂಬರ್‌ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ನಡೆಸಲು ಉದ್ದೇಶಿಸಿರುವ "ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ" ಸಂಬಂಧ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಕೊನೆಗೂ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಿದೆ.

ಸ್ವತಃ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಸನದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕೆಲದ ದಿನಗಳ ಹಿಂದೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ದೆಹಲಿ ಭೇಟಿ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸಮಾವೇಶ ಗೊಂದಲಕ್ಕೆ ತೆರೆ ಎಳೆದು ಹಸಿರು ನಿಶಾನೆ ತೋರಿಸಿದ್ದರೂ, ಇನ್ನೂ ಗೊಂದಲ ತಣ್ಣಗಾಗಿರಲಿಲ್ಲ.

ಸ್ವತಹ ಸಿದ್ದರಾಮಯ್ಯ ಅವರ ಬೆಂಬಲಿಗರು ಪಕ್ಷವನ್ನು ಕಡೆಗಣಿಸಿ ಸ್ವಾಭಿಮಾನಿ ಸಮಾವೇಶ ಮಾಡುತ್ತಿರುವುದು ಸರಿಯಲ್ಲ ಎಂದು ಕೆಲವು ಪಕ್ಷ ಕಾರ್ಯಕರ್ತರು ಪತ್ರ ಬರೆಯುವ ಮೂಲಕ ಹೈಕಮಾಂಡ್‌ ಗಮನಸೆಳೆದಿದ್ದರು. ವಿಧಾನಸಭಾ ಚುನಾವಣೆಗೆ ಮುನ್ನ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ʼಸಿದ್ದರಾಮೋತ್ಸವʼ ನಡೆಸಿದಾಗಲೂ ಇದೇ ರೀತಿಯ ಗೊಂದಲ ಉಂಟಾಗಿದ್ದು, ಕೊನೆಗೆ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದು ಮುಂದೆ ನಡೆದ ಚುನಾವಣೆಗೂ ʼಅಹಿಂದ ವರ್ಗವನ್ನುʼ ಸಂಘಟಿಸುವ ಕಾರ್ಯದ ಮೂಲಕ ಸಹಾಯಕವಾಗಿತ್ತು.

ಈಗ, ಮುಡಾ ಪ್ರಕರಣ, ವಾಲ್ಮೀಕಿ ನಿಗಮ ಹಗರಣ, ವಕ್ಫ್‌ ಭೂ ವ್ಯಾಜ್ಯ, ಬಿಪಿಎಲ್‌ ಕಾರ್ಡ್‌ ಗೊಂದಲ ಸೇರಿದಂತೆ ಹಲವು ಆಪಾದನೆಗಳನ್ನು ಕಾಂಗ್ರೆಸ್‌ ಸರ್ಕಾರ ಮತ್ತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಿಸುತ್ತಿರುವ ಸಂದರ್ಭದಲ್ಲಿ ಉಪ ಚುನಾವಣೆಯ ಮೂರೂ ಕ್ಷೇತ್ರಗಳ ಗೆಲುವು ತುಸು ಬಲ ನೀಡಿದೆ. ಆದರೆ ಡಿಸೆಂಬರ್‌ ಎರಡನೇ ವಾರ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ದಾಳಿಯನ್ನು ಎದುರಿಸುವ ಹಿನ್ನೆಲೆಯಲ್ಲಿ ʼಸಿದ್ದರಾಮಯ್ಯ ಸ್ವಾಬಿಮಾನಿ ಸವಾವೇಶʼ ಪ್ರಮುಖ ಪಾತ್ರ ವಹಿಸಲಿದೆ. ಜತೆಗೆ, ತನ್ನ ಜತೆ ಇನ್ನೂ ಜನಬೆಂಬಲ ಇದೆ ಎನ್ನುವುದನ್ನು ಸಾಬೀತು ಪಡಿಸುವುದೂ ಅಹಿಂದ ನಾಯಕ ಸಿದ್ದರಾಮಯ್ಯ ತಂತ್ರವಾಗಿದೆ ಎನ್ನಲಾಗಿದೆ.

ಈ ಸಮಾವೇಶ ʼಸ್ವಾಭಿಮಾನಿ ಸಮಾವೇಶʼ ಎಂದು ಗುರುತಿಸಿಕೊಂಡಿದ್ದರೂ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳ ಬೆಂಬಲ ತನ್ನ ಜತೆಗಿದೆ ಎನ್ನುವುದು ಸಿದ್ದರಾಮಯ್ಯ ಉದ್ದೇಶವಾಗಿದೆ. ಆದರೆ, ಈ ಸಮಾವೇಶ ಕಾಂಗ್ರೆಸ್‌ ಪಕ್ಷದ ಚಿಹ್ನೆಯಡಿ ಆಗುತ್ತಿಲ್ಲ ಎನ್ನುವ ದೂರಿನ ಬಳಿಕ ಹೈಕಮಾಂಡ್‌ ಮಧ್ಯ ಪ್ರವೇಶ ಮಾಡಿತ್ತು. ಬಳಿಕ ಪಕ್ಷದ ವೇದಿಕೆಯಡಿಯಲ್ಲಿಯೇ ಈ ಕಾರ್ಯಕ್ರಮ ನಡೆಯಬೇಕೆನ್ನುವ ಆಶಯವನ್ನು ಹೈಕಮಾಂಡ್‌ ವ್ಯಕ್ತಪಡಿಸಿತ್ತು. ಸಿದ್ದರಾಮಯ್ಯ ಅವರ ಜನಬೆಂಬಲವನ್ನು ಪಕ್ಷದ ಜತೆಗೆ ಇರಿಸಬೇಕೆನ್ನುವ ಇರಾದೆ ಹೈಕಮಾಂಡ್‌ನದು ಎನ್ನಲಾಗಿದೆ.

ಈ ಮೂಲಕ ಸಿದ್ದರಾಮಯ್ಯ ಅವರು ಜನಬೆಂಬಲ ಹಾಗೂ ಕಾಂಗ್ರೆಸ್‌ ಪಕ್ಷವನ್ನು ರಾಜ್ಯಮಟ್ಟಿಗೆ ತನ್ನ ಹತೋಟಿಯಲ್ಲೇ ಇಟ್ಟುಕೊಂಡಂತಾಗಿದೆ. ಜತೆಗೆ ಎಷ್ಟೇ ಆರೋಪಗಳಿದ್ದರೂ, ತನ್ನ ʼಇಮೇಜ್‌ʼಗೆ ಧಕ್ಕೆ ಬರುತ್ತಿರುವ ಯತ್ನಕ್ಕೆ ತಕ್ಕ ಉತ್ತರ ನೀಡಲು ಸಿದ್ದರಾಮಯ್ಯ ಯಶಸ್ವಿಯಾಗುತ್ತಿದ್ದಾರೆ ಎಂದು ಅವರ ಸಹವರ್ತಿಗಳು ಭಾವಿಸಿದ್ದಾರೆ.

ಅಹಿಂದ ಸಮಾವೇಶ

ಹಿಂದೆ ಜನತಾದಳದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ವೇಳೆ ಅಹಿಂದ ಸಮಾವೇಶ ನಡೆಸಿ ಪಕ್ಷ ತ್ಯಜಿಸಿದರೆಂಬ ಜೆಡಿಎಸ್‌ ನಾಯಕರ ಟೀಕೆಗೂ ಸಿದ್ದರಾಮಯ್ಯ ಉತ್ತರಿಸಿದ್ದಾರೆ. "ನಾನು ಪಕ್ಷವನ್ನು ಬಿಡಲಿಲ್ಲ. ನನ್ನನ್ನು ದೇವೇಗೌಡರು ಉಚ್ಚಾಟಿಸಿದರು. ನಂತರ ನಾನು ಬೇರೆ ದಾರಿ ಇಲ್ಲದೆ ಅಹಿಂದ ಸಮಾವೇಶ ನಡೆಸಿದೆ, ಹಾಸನದಲ್ಲಿಯೂ ಸಮಾವೇಶ ಮಾಡಿದ್ದೆ, ಎಂದು ನೆನಪಿಸಿದ್ದಾರೆ.

ಈಗಿನ ಸ್ವಾಭಿಮಾನ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹಾಸನದಲ್ಲಿ ಈ ವಾರ ಹಮ್ಮಿಕೊಂಡಿರುವ ಸಮಾವೇಶ ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಒಕ್ಕೂಟದಿಂದ ಸಮಾವೇಶ ಎಂದು ಸಮರ್ಥಿಸಿಕೊಂಡಿದ್ದಾರೆ.

"ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿದೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಆಹ್ವಾನಿಸಲಾಗಿದೆ . ಪಕ್ಷವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ," ಎಂದು ಹೇಳಿದ್ದಾರೆ. ಆ ಮೂಲಕ ಸ್ವಾಭಿಮಾನಿ ಸಮಾವೇಶಕ್ಕೆ ಪಕ್ಷದ ಸಹಕಾರ ಇದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ.

ಜೆಡಿಎಸ್‌ಗೆ ಸವಾಲು

ಹಾಸನ ಜೆಡಿಎಸ್‌ ಪಕ್ಷದ ಮೂಲ ನೆಲೆ ಹಾಗೂ ದೇವೇಗೌಡರ ತವರರೂರಾದ ಈ ಜಿಲ್ಲೆಯಲ್ಲಿ ʼಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶʼ ಸಂಘಟಿಸುವ ಮೂಲಕ ಸಿದ್ದರಾಮಯ್ಯ ಅವರು ಜೆಡಿಎಸ್‌ ನಾಯಕರಿಗೆ ನೇರ ಸವಾಲು ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ  ಎಚ್‌.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಸರ್ಕಾರವನ್ನು ಪತನಗೊಳಿಸಲು ಯೋಜನೆ ರೂಪಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬಳಿಕ ಸಿದ್ದರಾಮಯ್ಯ ಉದ್ದೇಶ ಪೂರ್ವಕವಾಗಿ ಈ ಸಮಾವೇಶಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಜತೆಗೆ, ತನ್ನ ನಾಯಕತ್ವಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ವಪಕ್ಷೀಯರಿಗೂ ಸಂದೇಶ ನೀಡುವುದು ಇದರ ಹಿನ್ನೆಲೆಯಾಗಿದೆ ಎಂದು ಹೇಳಲಾಗಿದೆ. 

Tags:    

Similar News