ಗೋಮಾಂಸ ಹೇಳಿಕೆ ವಿವಾದ | ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ದೂರು
"ಸಾವರ್ಕರ್ ಅವರು ದನದ ಮಾಂಸ ತಿನ್ನುತ್ತಿದ್ದರುʼʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ದೂರು ದಾಖಲಾಗಿದೆ.;
ʻʻವೀರ್ ಸಾವರ್ಕರ್ ಅವರು ದನದ ಮಾಂಸ ತಿನ್ನುತ್ತಿದ್ದರುʼʼ ಎಂಬ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಸಂಘಟನೆಯ ತೇಜಸ್ ಗೌಡ ಎಂಬುವರು ಬೆಂಗಳೂರಿನ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
"ಸಾವರ್ಕರ್ ಬ್ರಾಹ್ಮಣರಾಗಿದ್ದರೂ ಗೋಹತ್ಯೆ ವಿರೋಧಿಸುತ್ತಿರಲಿಲ್ಲ. ಗೋಮಾಂಸ ತಿನ್ನುತ್ತಿದ್ದರು" ಎಂದು ದಿನೇಶ್ ಗುಂಡೂರಾವ್ ಗಾಂಧಿ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
"ದಿನೇಶ್ ಗುಂಡೂರಾವ್ ಕೋಮುದ್ವೇಷ ಪ್ರಚೋದನೆಗೆ ಒತ್ತಡ ಹೇರುತ್ತಿದ್ದಾರೆ. ಬಸವನಗುಡಿಯ ನ್ಯಾಶನಲ್ ಕಾಲೇಜ್‌ನ ಮಲ್ಟಿಮೀಡಿಯಾ ಹಾಲ್‌ನಲ್ಲಿ ಗಾಂಧೀ ಜಯಂತಿ ಆಚರಣೆಯಲ್ಲಿ ದಿನೇಶ್ ಗುಂಡೂರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಭಾಷಣದಲ್ಲಿ ಅಪ್ಪಟ ರಾಷ್ಟ್ರೀಯವಾದಿ, ದೇಶಭಕ್ತ, ಹಿರಿಯ ಸ್ವಾತಂತ್ರ ಹೋರಾಟಗಾರ, ವೀರ ಸಾವರ್ಕರ್ ರವರ ಬಗ್ಗೆ ಅವಹೇಳನವಾಗಿ ಮಾತುಗಳನ್ನಾಡಿದ್ದಾರೆ. ವೀರ್ ಸಾವರ್ಕರ್ ಬ್ರಾಹ್ಮಣರಾಗಿದ್ದರೂ ಗೋಮಾಂಸವನ್ನು ತಿನ್ನುತ್ತಿದ್ದರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ" ಎಂದು ದೂರಿನಲ್ಲಿ ಹೇಳಲಾಗಿದೆ.
"ರಾಜ್ಯ ಸರ್ಕಾರದ ಆರೋಗ್ಯ ಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ದಿನೇಶ್ ಗುಂಡೂರಾವ್ ಅವಹೇಳನವಾಗಿ ಹೇಳಿಕೆ ನೀಡಿದ್ದು, ನಮಗೆ ನೋವುಂಟು ಮಾಡಿದೆ. ಕೋಮು ದ್ವೇಷ, ಕೋಮು ಪ್ರಚೋದನೆಗೆ ಹೆಚ್ಚು ಒತ್ತಡ ತರುವಂತಹ ಅಂಶಗಳ ಬಗ್ಗೆ ಮಾತನಾಡಿರುವ ಅವರ ಭಾಷಣದ ತುಣುಕು ಎಲ್ಲಾ ದೃಶ್ಯ ಮಾಧ್ಯಮದಲ್ಲಿಯೂ ಪ್ರಸಾರವಾಗಿದೆ. ಈ ಬಗ್ಗೆ ಗುಂಡೂರಾವ್ ಅವರ ವಿರುದ್ಧ ದೂರನ್ನು ದಾಖಲಿಸಿ, ಸೂಕ್ತವಾದ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು" ಎಂದು ತಮ್ಮ ದೂರಿನಲ್ಲಿ ಕೋರಿದ್ದಾರೆ.