ಆಳಸಮುದ್ರದಲ್ಲಿ ಸುಳಿಗಾಳಿ, ಪ್ರಕ್ಷುಬ್ಧತೆ; ಕರಾವಳಿ ಮೀನುಗಾರಿಕೆ ಮೇಲೆ ಕರಿ ಛಾಯೆ
ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ 2022 -23ರ ಅವಧಿ ಮೀನುಗಾರರ ಪಾಲಿಗೆ ಸ್ವರ್ಣ ವರ್ಷ. ಆ ವರ್ಷ ಸುಮಾರು 3,33,532 ಟನ್ ಮೀನು ಲಭಿಸಿತ್ತು. ಸುಮಾರು ನಾಲ್ಕು ಸಾವಿರ ಕೋಟಿಗೂ ಮಿಕ್ಕಿ ವಹಿವಾಟು ನಡೆದಿತ್ತು. 2023-24ರಲ್ಲಿ ಈ ಪ್ರಮಾಣ ಅರ್ಧಕ್ಕಿಳಿದಿತ್ತು ಎನ್ನುತ್ತವೆ ಮೀನುಗಾರಿಕಾ ಇಲಾಖೆಯ ಮೂಲಗಳು.;
ಭಾರೀ ಮಳೆ ಸುರಿದಿರುವುದು, ಸಮುದ್ರಕ್ಕೆ ನೀರಿನ ಹರಿವಿನ ಹೆಚ್ಚಳ, ಬದಲಾದ ವಾತಾವರಣದಲ್ಲಿ ಹೊಸ ಆಶಾಭಾವದಿಂದ ಈ ವರ್ಷದ ಮೀನುಗಾರಿಕೆ ಆರಂಭಿಸಿದ್ದ ಮೀನುಗಾರರಿಗೆ ಸಮುದ್ರದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ವೈಪರಿತ್ಯಗಳು ತಡೆ ಒಡ್ಡಿವೆ. ಹೀಗಾಗಿ ನಿರೀಕ್ಷಿತ ಫಸಲು ಸಿಗುವ ಆತಂಕವೂ ಇದೆ. ಮಾತ್ರವಲ್ಲ ದೋಣಿಗಳ ಕಾರ್ಯಾಚರಣೆಯೇ ಅಸಾಧ್ಯವಾದಾಗ ಮೀನು ಫಸಲಿನ ಲೆಕ್ಕಾಚಾರ ಹಿಡಿಯುವುದು ಹೇಗೆ ಎಂಬ ಪ್ರಶ್ನೆಯೂ ಈ ಸಮುದಾಯದಲ್ಲಿ ಎದ್ದಿದೆ.
ಲಂಗರು ಹಾಕಿದ ದೋಣಿಗಳು
61 ದಿನಗಳ ಕಾಲ ಮೀನುಗಾರಿಕೆ ರಜೆ ಮುಗಿಸಿ ಹೊಸ ಉತ್ಸಾಹದಿಂದ ಹೊರಟವರಿಗೆ ಎದುರಾದದ್ದು ಸಮುದ್ರದ ಪ್ರಕ್ಷುಬ್ಧತೆ. ಎಲ್ಲಲ್ಲಿ ಎದ್ದಿರುವ ಚಂಡಮಾರುತ, ಸುಳಿಗಾಳಿ ಮತ್ತು ವಿಪರೀತ ಉಬ್ಬರ ಇಳಿತಗಳು ದೋಣಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ಪರಿಣಮಿಸಿವೆ. ಹೀಗಾಗಿ ದೋಣಿಗಳು ತಮ್ಮ ಕಾರ್ಯಕ್ಷೇತ್ರಕ್ಕೆ ಹತ್ತಿರವಿರುವ ಬಂದರುಗಳಲ್ಲಿ ಲಂಗರು ಹಾಕಿಬಿಟ್ಟಿವೆ.
ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್ ಬೇಂಗ್ರೆ ಅವರು ಹೇಳುವ ಪ್ರಕಾರ, ʼಹೆಜಮಾಡಿಯಿಂದ ಮಂಗಳೂರು ಮೀನುಗಾರಿಕಾ ಬಂದರಿನವರೆಗಿನ ಕಡಲ ತೀರದಲ್ಲಿ ಸುಮಾರು 120 ಪರ್ಸಿನ್ ಬೋಟುಗಳಿವೆ. ಎಲ್ಲವೂ ಮೀನುಗಾರಿಕೆಗೆ ತೆರಳಿದ್ದರೂ ವಾಸ್ತವವಾಗಿ ಚಾಲನೆಯಲ್ಲಿರುವುದು ಶೇ 20 ಮಾತ್ರ. ತೂಫಾನ್, ಕಡಲ ವೈಪರಿತ್ಯದ ಕಾರಣ ಈ ದೋಣಿಗಳೆಲ್ಲಾ ಕಾರವಾರ, ಗಂಗೊಳ್ಳಿ, ಮಲ್ಪೆ ಹೀಗೆ ಸಮೀಪದ ಬಂದರುಗಳಲ್ಲೆಲ್ಲಾ ಲಂಗರು ಹಾಕಿ ನಿಂತುಬಿಟ್ಟಿವೆʼ ಎಂದರು.
ಜಿಲ್ಲೆಯಲ್ಲಿ 1310 ಟ್ರಾಲ್ ಬೋಟುಗಳು, 1438 ನಾಡದೋಣಿಗಳು ಇವೆ. ಎಲ್ಲರ ದುಡಿಮೆಯೂ ಸಮುದ್ರದಲ್ಲಾಗುವ ಬೆಳವಣಿಗೆಗಳ ಮೇಲೆ ನಿಂತಿದೆ.
ಮೇಲೆ ಬಂದ ಆಳಸಮುದ್ರದ ಕೆಸರು
ಈ ಬೆಳವಣಿಗೆಗೆ ಪೂರಕ ಮತ್ತು ಸಮುದ್ರದಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎಂಬಂತೆ ಮಲ್ಪೆ, ಕಾಪು, ಗಂಗೊಳ್ಳಿ ಸಮುದ್ರ ಭಾಗದಲ್ಲಿ ವಿಪರೀತ ಪ್ರಕ್ಷುಬ್ದತೆ ಕಾಣಿಸಿಕೊಂಡಿದೆ. ಆಳ ಸಮುದ್ರದಲ್ಲಿ ಭಾರೀ ಬಿರುಗಾಳಿ ಎದ್ದ ಪರಿಣಾಮ ಅಲ್ಲಿನ ಕೆಸರು, ಕಲ್ಮಶಗಳು ತೇಲಿ ಮೇಲ್ಭಾಗಕ್ಕೆ ಬಂದು ನೀರಿನ ಬಣ್ಣವನ್ನೇ ಗಾಢವಾಗಿಸಿಬಿಟ್ಟಿವೆ. ಅಲ್ಲಲ್ಲಿ ಕಡಲ್ಕೊರೆತವೂ ಉಂಟಾಗಿದೆ. ಆಗಸ್ಟ್ ೨೩ರಿಂದ ೨೬ರವರೆಗೆ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಟ್ರಾಲ್ ಬೋಟು, ನಾಡದೋಣಿಗೂ ಸಂಕಷ್ಟ
ಸದ್ಯ ಟ್ರಾಲ್ ಬೋಟು ಮತ್ತು ನಾಡದೋಣಿಯ ಮೂಲಕ ಸಣ್ಣ ಪ್ರಮಾಣದ ಮೀನುಗಾರಿಕೆ ನಡೆದಿದೆ. ಆದರೆ, ಅವರೂ ಈ ಬೆಳವಣಿಗೆಗಳಿಂದ ಸಂಕಷ್ಟಲ್ಲಿದ್ದಾರೆ ಎಂದು ಮೋಹನ್ ಬೇಂಗ್ರೆ ವಿವರಿಸಿದರು.
ಹಳೆಯ ಫಸಲು ಮತ್ತೆ ಬಂದೀತೇ?
ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ 2022 -23ರ ಅವಧಿ ಮೀನುಗಾರರ ಪಾಲಿಗೆ ಸ್ವರ್ಣ ವರ್ಷ. ಆ ವರ್ಷ ಸುಮಾರು 3,33,532 ಟನ್ ಮೀನು ಲಭಿಸಿತ್ತು. ಸುಮಾರು ನಾಲ್ಕು ಸಾವಿರ ಕೋಟಿಗೂ ಮಿಕ್ಕಿ ವಹಿವಾಟು ನಡೆದಿತ್ತು. 2023-24ರಲ್ಲಿ ಈ ಪ್ರಮಾಣ ಅರ್ಧಕ್ಕಿಳಿದಿತ್ತು ಎನ್ನುತ್ತವೆ ಮೀನುಗಾರಿಕಾ ಇಲಾಖೆಯ ಮೂಲಗಳು. ಈ ಆರ್ಥಿಕ ವರ್ಷದ ಆರಂಭ ಇಂಥಹ ವೈಪರೀತ್ಯಗಳಿಂದ ಕೂಡಿದೆ. ಮುಂದೆ ಏನೋ ಕಾದು ನೋಡಬೇಕು ಎಂದು ಮೀನುಗಾರರು ಹೇಳುತ್ತಾರೆ.
ಗಡಿ ಮೀರಿದರೆ ದುಬಾರಿ ದಂಡ
ʼಮೀನುಗಾರಿಕೆ ವಹಿವಾಟಿನಲ್ಲಿ ಈಗಂತೂ ಅವೈಜ್ಞಾನಿಕತೆ ತುಂಬಿದೆ. ಕರ್ನಾಟಕದ ದೋಣಿಗಳು ರಾಜ್ಯದ ಗಡಿ ಮೀರಿ ಹೋದರೆ ಸಾಕು. ಪಕ್ಕದ ರಾಜ್ಯದ ಕರಾವಳಿ ರಕ್ಷಣಾ ಪಡೆಯ ಪೊಲೀಸರು ದಾಳಿ ನಡೆಸಿ ದೋಣಿಗಳನ್ನು ವಶಪಡಿಸಿಕೊಳ್ಳುತ್ತಾರೆ. ನಾವೇನೂ ದೇಶದ ಗಡಿ ಬಿಟ್ಟು ಹೋಗುತ್ತಿಲ್ಲ. ಆದರೂ ನಮ್ಮನ್ನು ಪರಕೀಯರಂತೆ ನೋಡುತ್ತಾರೆ. ಉದಾಹರಣೆಗೆ ನಮ್ಮ ಬೋಟ್‌ಗಳು ಕೇರಳದ ಗಡಿ ಪ್ರವೇಶಿಸಿದರೆ ಅಲ್ಲಿನ ದೊಡ್ಡ ಬೋಟ್ ಮಾಲೀಕರು ಪೊಲೀಸರಿಗೆ ದೂರು ನೀಡುತ್ತಾರೆ. ಪೊಲೀಸರು ದೋಣಿ ವಶಪಡಿಸಿಕೊಳ್ಳುತ್ತಾರೆ. ದೋಣಿಯಲ್ಲಿ ಸಂಗ್ರಹವಾದ ಮೀನಿನ ಮೌಲ್ಯದ ಮೂರು ಪಟ್ಟು ದಂಡ ಪಾವತಿಸಿ ದೋಣಿ ಬಿಡಿಸಿಕೊಳ್ಳಬೇಕಾಗುತ್ತದೆ. ಪ್ರತಿ ದೋಣಿಗೆ ಸುಮಾರು 3 ಲಕ್ಷದಿಂದ 5 ಲಕ್ಷದವರೆಗೆ ದಂಡ ಪಾವತಿಸಿದ್ದೇವೆ. ಆದರೆ, ಕರ್ನಾಟಕದಲ್ಲಿ ಪರಿಸ್ಥಿತಿ ಹಾಗಿಲ್ಲ. ಬೇರೆ ರಾಜ್ಯದ ಬೋಟ್ ಬಂದರೆ ಅದನ್ನು ವಶಪಡಿಸಿಕೊಂಡರೆ ಕೇವಲ ೫೦೦೦ ರೂಪಾಯಿ ದಂಡ ಪಾವತಿಸಿ ಬಿಡಿಸಿಕೊಂಡು ಹೋಗುತ್ತಾರೆʼ ಎಂದು ಮೀನುಗಾರರ ಸಂಘದ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.
ʼವರ್ಷದಲ್ಲಿ ಇಂಥಹ ಐದಾರು ಪ್ರಕರಣಗಳು ನಡೆಯುತ್ತವೆ. ನಮ್ಮ ಸಂಘಟನೆಯವರಿಗೆ ಈ ದೋಣಿಗಳನ್ನು ಬಿಡಿಸಿಕೊಂಡು ಬರುವುದೇ ತಲೆನೋವಾಗಿಬಿಟ್ಟಿದೆʼ ಎಂದು ಅವರು ವಿವರಿಸಿದರು.
ಯಾರ್ಯಾರೋ ಮೀನುಗಾರರು!
ʼಒಂದೆರಡು ದಶಕಗಳ ಹಿಂದೆ ನದಿ, ಸಮುದ್ರ ತೀರದಲ್ಲಿ ಮೀನುಗಾರಿಕೆಯನ್ನೇ ಕಸುಬನ್ನಾಗಿಸಿಕೊಂಡವರನ್ನು ಮೀನುಗಾರರು ಎಂದು ಗುರುತಿಸಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಈಗ ಹಾಗಲ್ಲ, ಸಮುದ್ರದ ಪರಿಚಯವೇ ಇಲ್ಲದವರಿಗೂ ರಾಜಕಾರಣಿಗಳ ಕೃಪಾಕಟಾಕ್ಷದಿಂದ ಮೀನುಗಾರರು ಎಂಬ ಪ್ರಮಾಣಪತ್ರ ನೀಡಲಾಗುತ್ತಿದೆ. ಅವರು ಯಾರದೋ ಹೆಸರಿನಲ್ಲಿ ಮೀನುಗಾರಿಕೆ ವಹಿವಾಟಿನಲ್ಲಿ ತೊಡಗಿಕೊಂಡುಬಿಡುತ್ತಾರೆ. ಇದರಿಂದ ನಿಜವಾದ ಕಸುಬುದಾರರಿಗೆ ತೊಂದರೆಯಾಗಿದೆʼ ಎಂಬುದು ಮೀನುಗಾರರ ಅಸಹಾಯಕತೆ.
ಏಕರೂಪದ ಮೀನುಗಾರಿಕಾ ನಿಯಮ ಬೇಕು
ಈ ಎಲ್ಲ ಸಮಸ್ಯೆಗಳ ಬಗ್ಗೆ ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ಅವರಿಗೂ ಮನವರಿಕೆ ಮಾಡಿದ್ದೇವೆ. ಯಾವುದೇ ಸರ್ಕಾರ ಇದ್ದರೂ ಇಂಥಹ ಸಮಸ್ಯೆಗಳ ಪರಿಹಾರ ಸಂಬಂಧಿಸಿ ಬರಿಯ ಭರವಸೆಗಳಷ್ಟೇ ಸಿಕ್ಕಿವೆ. ಒಂದು ದೇಶ, ಒಂದು ತೆರಿಗೆ, ಒಂದು ದೇಶ ಒಂದೇ ನಿಯಮ ಎಂದು ಹೇಳುವಂತೆಯೇ ಮೀನುಗಾರಿಕೆಗೂ ದೇಶದಾದ್ಯಂತ ಏಕರೂಪದ ನಿಯಮ ಇರಬೇಕು. ಮೀನುಗಾರಿಕಾ ರಜೆ ಕನಿಷ್ಠ 3 ತಿಂಗಳಿಗೆ ವಿಸ್ತರಿಸಬೇಕು. ಆಗ ಮೀನುಗಳ ಸಂತಾನೋತ್ಪತ್ತಿಗೆ ಅನುಕೂಲವಾಗುತ್ತದೆ. ಆದರೆ, ಈ ನಿಯಮವೂ ದೇಶದಾದ್ಯಂತ ಏಕರೂಪವಾಗಿ ಜಾರಿಗೆ ಬರಬೇಕು ಎಂದು ಮೀನುಗಾರರು ಒತ್ತಾಯಿಸಿದರು.