Pahalgam Terror Attack | ಪಾಕಿಸ್ತಾನ ಮಾಧ್ಯಮದಲ್ಲಿ ಸಿದ್ದರಾಮಯ್ಯ ಸುದ್ದಿ: ಸಿಎಂ ಹೇಳಿದ್ದೇನು? ಆಗಿದ್ದೇನು?

ಪಾಕಿಸ್ತಾನದ ಮೇಲೆ ಯುದ್ಧ ಅಗತ್ಯವಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಪಾಕಿಸ್ತಾನದ ಜಿಯೋ ಸುದ್ದಿ ವಾಹಿನಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆದಿದೆ. ಇದರ ವಿರುದ್ಧ ಬಿಜೆಪಿ ಕಿಡಿಕಾರಿದರೆ, ಕಾಂಗ್ರೆಸ್‌ ಹೈಕಮಾಂಡ್‌ ಅಂತರ ಕಾಯ್ದುಕೊಂಡಿದೆ.;

Update: 2025-04-28 11:56 GMT

ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ನರಮೇಧಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ತವಕಿಸುತ್ತಿದೆ. ಉಗ್ರರ ಪೋಷಕ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ನಿರ್ಬಂಧಗಳನ್ನು ಹೇರುವ ಮೂಲಕ ಬಿಸಿ ಮುಟ್ಟಿಸಿದೆ. ದಾಳಿ ನಡೆಸಿದವರು, ದಾಳಿಯ ಸೂತ್ರಧಾರರನ್ನು ಹುಡುಕಿ ಹೊಡೆಯುವುದಾಗಿ ಪ್ರಧಾನಿ ಮೋದಿ ಅವರು ಶಪಥ ಕೂಡ ಮಾಡಿದ್ದಾರೆ.

ಆದರೆ, ʼಯುದ್ಧದ ಅಗತ್ಯತೆ" ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಬಿಜೆಪಿಗೆ ಹೊಸ ಅಸ್ತ್ರವಾಗಿ ಬದಲಾಗಿದೆ. ಜತೆಗೆ, ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್‌ನ ಪಾಕಿಸ್ತಾನ ನೀತಿ ಕುರಿತು ಟೀಕಿಸಲು ಅವಕಾಶ ಸೃಷ್ಟಿಯಾಗಿದೆ. ಆ ಕಾರಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕೂಡಾ, ಯಾವುದೇ ಪ್ರತಿಕ್ರಿಯೆ ನೀಡದೆ ವಿವಾದದಿಂದ ಅಂತರ ಕಾಯ್ದುಕೊಂಡಿದೆ.

ಜತೆಗೆ, ಸಿದ್ದರಾಮಯ್ಯ ಅವರ " ಪಾಕಿಸ್ತಾನದ ಜತೆ ಯುದ್ಧ ಬೇಡ," ಎಂಬರ್ಥದ ಹೇಳಿಕೆ ಇದೀಗ ಪಾಕಿಸ್ತಾನದಲ್ಲಿ ಹೆಚ್ಚು ಪ್ರಚಾರ ಪಡೆದಿದೆ. ಪಾಕ್ ನ ಪ್ರಮುಖ ಸುದ್ದಿ ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ಅವರ ಯುದ್ಧ ವಿರೋಧಿ ಹೇಳಿಕೆ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರಿಂದ ಕಾಂಗ್ರೆಸ್ ವಿರುದ್ಧದ ಬಿಜೆಪಿ ದಾಳಿಗೆ ಅವಕಾಶ ಕಲ್ಪಿಸಿದಂತಾಗಿದೆ.

ಬಿಜೆಪಿಗೆ ಅಸ್ತ್ರ

"ಸಿದ್ದರಾಮಯ್ಯ ಪಾಕಿಸ್ತಾನ ಪರ, ಹಿಂದೂಗಳ ವಿರೋಧಿ," ಎಂದು ಬಿಂಬಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿರುವ ಕಾರಣದಿಂದ ತನ್ನ ದಾಳಿಯನ್ನು ಮೊನಚುಗೊಳಿಸಿದೆ. ಅದೇ ಕಾರಣಕ್ಕೆ ಬೆಳಗಾವಿಯಲ್ಲಿ ಸೋಮವಾರ ನಡೆದ "ಕೇಂದ್ರ ಸರ್ಕಾರದ ವಿರುದ್ಧ ದರ ಏರಿಕೆ ಕುರಿತ ಖಂಡನಾ ಸಮಾವೇಶ"ದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಕಪ್ಪುಪಟ್ಟಿ ಧರಿಸಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. 

ಅಂತರ ಕಾಯ್ದುಕೊಂಡ ಹೈಕಮಾಂಡ್

ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಹಾಗೂ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ಸೇರಿ ಎಲ್ಲಾ ಪಕ್ಷಗಳು ಸರ್ವಾನುಮತದ ಬೆಂಬಲ ನೀಡಿವೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಿಂದ ಹೈಕಮಾಂಡ್ ಸಂಪೂರ್ಣ ಅಂತರ ಕಾಯ್ದುಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಲಿ, ರಾಹುಲ್ ಗಾಂಧಿ ಅವರಾಗಲಿ ಯಾವುದೇ ಹೇಳಿಕೆ ನೀಡದಿರುವುದು ಕುತೂಹಲ ಕೆರಳಿಸಿದೆ.

ಕರ್ನಾಟಕ ಸರ್ಕಾರದಲ್ಲಿ ಮತ್ತು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಪಾರುಪತ್ಯದ ವಿರುದ್ಧ ತುಟಿಬಿಚ್ಚಲು ಧೈರ್ಯವಿಲ್ಲದಿದ್ದರೂ, ಕೆಲವು ನಾಯಕರು ಸಿದ್ದರಾಮಯ್ಯ ʼವಿವಾದದಲ್ಲಿ ಸಿಲುಕಿಕೊಂಡಿರುವುದಕ್ಕೆ" ಒಳಗೊಳಗೇ ಖುಷಿಯಾಗಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರೂ "ಸಮರ್ಥಿಸಿದರೆ ಮತ್ತೆ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ," ಎಂಬ ಆತಂಕದಿಂದ ಮಾತನಾಡಲು ಹಿಂಜರಿಯುತ್ತಿದ್ದಾರೆ.

ಆದರೆ, ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ "ಶಾಂತಿ ಸ್ಥಾಪನೆ ದೃಷ್ಟಿಯಲ್ಲಿ ಮುಖ್ಯಮಂತ್ರಿ ಆ ರೀತಿ ಹೇಳಿಕೆ ನೀಡಿದ್ದರು. ಅನಿವಾರ್ಯ ಸಂದರ್ಭದಲ್ಲಿ ಭಾರತ ಯುದ್ಧದ ಮೂಲಕ ಹಿಂದೆ ಪರಿಹಾರ ಕಂಡುಕೊಂಡಿದೆ," ಎಂದು ಹೇಳುವ ಮೂಲಕ ಸಮರ್ಥನೆ ನೀಡಿದ್ದಾರೆ. ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರು "ನಮ್ಮಲ್ಲಿ ಯಾರು ಏನೇ ಹೇಳಿದರೂ, ಮೋದಿ ಮಾತೇ ಅಂತಿಮ ಅನ್ನುವ ಪರಿಸ್ಥಿತಿ ಇದೆ," ಎನ್ನುವ ಮೂಲಕ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ಆದರೆ, ಈ ವಿವಾದದಿಂದ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಪ್ರಬಲರಾಗುತ್ತಾರೆ ಅಥವಾ ಕಾಂಗ್ರೆಸ್‌ ನೀತಿಯನ್ನು ಪ್ರದರ್ಶಿಸುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರ ಮಟ್ಟಿಗೆ  ಪ್ರಿಯರಾಗುತ್ತಾರೆ ಎಂಬ ಆತಂಕವೂ ಕೆಲವು ನಾಯಕರಿಗಿದೆ. ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯ ವಿಷಯ ಪ್ರಸ್ತಾಪವಾಗುವುದು ಹಾಗೂ ಪ್ರಬಲ ಬಿಜೆಪಿ ಮತ್ತು ಅದರ ನಾಯಕತ್ವದ ವಿರುದ್ಧ ಕಟುವಾಗಿ ಟೀಕೆ ಮಾಡುವ ಶಕ್ತಿಯುಳ್ಳ ಸಿದ್ದರಾಮಯ್ಯ ಏಕಾಏಕಿ ಇನ್ನೊಮ್ಮೆ ಪ್ರಸಿದ್ಧಿಗೆ ಬರುವುದೂ ಕೆಲವು ಕಾಂಗ್ರೆಸ್‌ ನಾಯಕರಿಗೆ ಬೇಕಿಲ್ಲ ಎನ್ನಲಾಗಿದೆ. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ದರಾಮಯ್ಯ ಸುದ್ದಿ

ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಕ್ರಮಗಳಿಗೆ ಸಹಕಾರ ನೀಡುವ ಘೋಷಣೆ ಹೊರಡಿಸಿದ್ದರೆ, ಸಿದ್ದರಾಮಯ್ಯ ಅವರ ಈ ಹೇಳಿಕೆ ಮಾತ್ರ ಬಿಜೆಪಿಗರು ಹಾಗೂ ಹಿಂದೂಗಳ ವಿರೋಧಕ್ಕೆ ಕಾರಣವಾಗಿದೆ. ಕರ್ನಾಟಕದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನ ರತ್ನ ಎಂದು ಕರೆದರೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಅವರು ಪಾಕ್ ಏಜೆಂಟ್ ಎಂದು ಕರೆದು ವಾಗ್ದಾಳಿ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ.

ಪಾಕಿಸ್ತಾನದ ಮೇಲೆ ಯುದ್ಧ ಬೇಡ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಪಾಕಿಸ್ತಾನದ ಮಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯಿತು. ಪಾಕ್ ನ ಜಿಯೋ ಸುದ್ದಿ ವಾಹಿನಿ ಸೇರಿದಂತೆ ಹಲವು ಮಾಧ್ಯಮಗಳು ಸಿದ್ದರಾಮಯ್ಯ ಹೇಳಿಕೆಯನ್ನು ಬಿತ್ತರಿಸಿದವು. ಇದನ್ನು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಸಿದ್ದರಾಮಯ್ಯ 'ಪಾಕಿಸ್ತಾನ ರತ್ನ' ಎಂದು ಟೀಕಿಸಿದ್ದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್, ಶಾಸಕ ಜನಾರ್ಧನ ರೆಡ್ಡಿ, ಶಾಸಕ ಅರವಿಂದ ಬೆಲ್ಲದ, ಸಂಸದ ಜಗದೀಶ್ ಶೆಟ್ಟರ್ ಸೇರಿ ಬಹುತೇಕ ಬಿಜೆಪಿ ನಾಯಕರು ಪಾಕ್ ಟಿವಿ ಪ್ರಸಾರ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕಿಡಿಕಾರಿದ್ದರು.

ಸಿದ್ದರಾಮಯ್ಯ ಪಾಕಿಸ್ತಾನ ರತ್ನ ಎಂದ ಅಶೋಕ್

ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನ ರತ್ನ ಎಂದು ಜರಿದು ಟ್ವೀಟ್ ಮಾಡಿದ್ದರು. 

ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಸಿಎಂ ಸಿದ್ದರಾಮಯ್ಯ ಅವರು ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದಾರೆ. ಮುಂದೆಂದಾದರೂ ಅವರು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ರಾಜಾತಿಥ್ಯ ಗ್ಯಾರೆಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕ್ ಸರ್ಕಾರ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದ್ದರು.

ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದೀರಲ್ಲ. ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಟ್ವೀಟ್ ಮಾಡಿದ್ದರು.

ಸಂಸದ ಜಗದೀಶ ಶೆಟ್ಟರ್ ವಾಗ್ದಾಳಿ

ಜಮ್ಮು ಕಾಶ್ಮೀರದಲ್ಲಿ ಉಗ್ರರು 26 ಜನರನ್ನು ಹತ್ಯೆ ಮಾಡಿದ್ದಕ್ಕೆ ಇಡೀ ದೇಶವೇ ದುಃಖದಲ್ಲಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಯುದ್ಧ ವಿರೋಧಿ ಹೇಳಿಕೆ ನೀಡಿ, ಪಾಕಿಸ್ತಾನದ ಬಗ್ಗೆ ಕರುಣೆ ತೋರುತ್ತಿರುವುದು ದುರ್ದೈವದ ಸಂಗತಿ. ಪಾಕಿಸ್ತಾನದಲ್ಲಿ ಪ್ರಖ್ಯಾತರಾಗಿರುವ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವುದು ಉತ್ತಮ ಎಂದು ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುವ ಮೂಲಕ ಪಾಕಿಸ್ತಾನದ ಮಾಧ್ಯಮಗಳಲ್ಲಿ ವಿಜೃಂಬಿಸುತ್ತಿದ್ದಾರೆ. ಯುದ್ಧ ಬೇಡ ಎಂಬ ಹೇಳಿಕೆ ಕೊಡುವುದನ್ನು ಬಿಟ್ಟು ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ಕೊಡಿ, ಇಲ್ಲದಿದ್ದರೆ ನಿಮಗೂಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದರು.

ಶಾಸಕ ಅರವಿಂದ್ ಬೆಲ್ಲದ ಕೂಡ ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೂ, ಉಗ್ರರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಆರೋಪಿಸಿದ್ದರು.

ಯುದ್ಧದ ಕುರಿತು ಸಿಎಂ ಹೇಳಿದ್ದೇನು?

ಮೈಸೂರಿನಲ್ಲಿ ಏ. 26ರಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಸಂದರ್ಭದಲ್ಲಿ ಪತ್ರಕರ್ತರು ಪಹಲ್ಗಾಮ್‌ ಭಯೋತ್ಪಾದಕ ದಾಳಿ ಸಂಬಂಧ ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆಯುತ್ತಿದ್ದರು. "ಭಾರತ ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ, ನಿಮ್ಮ ಅಭಿಪ್ರಾಯವೇನು?

ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, "ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯತೆ ಇಲ್ಲ. ಆದರೆ, ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರವಾಸಿ ಸ್ಥಳವಾದ ಪಹಲ್ಗಾಮ್ ನಲ್ಲಿ ಸಾಕಷ್ಟು ಭದ್ರತೆ ಕೈಗೊಳ್ಳಬೇಕಿತ್ತು. ಈ ಹಿಂದೆ ಪುಲ್ವಾಮಾ ದಾಳಿಯಲ್ಲೂ ಘೋರ ದುರಂತ ಸಂಭವಿಸಿತ್ತು. ಕೇಂದ್ರ ಸರ್ಕಾರವೇ ಭದ್ರತಾ ವೈಫಲ್ಯವೇ ದಾಳಿಗೆ ಕಾರಣ​. ಈಗ ಏನೇ ಕ್ರಮ ತೆಗೆದುಕೊಂಡರೂ 26 ಜನರ ಜೀವ ಹಿಂತಿರುಗುತ್ತದೆಯೇ," ಎಂದಿದ್ದರು.

"ನಾವು ಯುದ್ಧದ ಪರ ನಾವು ಇಲ್ಲ. ಶಾಂತಿ ನೆಲೆಸಬೇಕು. ಜನರಿಗೆ ಭದ್ರತೆ ಒದಗಿಸಬೇಕು. ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು," ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯೇ ಈಗ ವಿವಾದಾತ್ಮಕ ಹೇಳಿಕೆಯಾಗಿ ಪರಿವರ್ತನೆಯಾಗಿದೆ. ಅಥವಾ ಬಿಜೆಪಿ , ಸಿದ್ದರಾಮಯ್ಯ ಹೇಳಿಕೆಯನ್ನು "ಪಾಕಿಸ್ತಾನ ಪರ" ಎಂಬಂತೆ ಬಿಂಬಿಸುತ್ತಿದೆ. ಜತೆಗೆ ಸಿದ್ದರಾಮಯ್ಯ ಹೇಳಿಕೆಯ ವಿಡಿಯೋ ಪಾಕಿಸ್ತಾನದಲ್ಲೂ ಅನುರಣಿಸುತ್ತಿದ್ದು, ಸಿದ್ದರಾಮಯ್ಯ ವಿರುದ್ಧ ದಾಳಿಗೆ ಕಾಯುತ್ತಿದ್ದ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಹಾಗಾಗಿ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಒಬ್ಬೊಬ್ಬರಾಗಿ ಟೀಕಿಸಲು ಆರಂಭಿಸಿದ್ದಾರೆ.

ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ 

ಯುದ್ಧದ ಕುರಿತು ಸಿಎಂ ನೀಡಿದ್ದ ಹೇಳಿಕೆಗೆ ಪರ - ವಿರೋಧದ ಚರ್ಚೆ ಚರ್ಚೆ, ಟೀಕೆಗಳು ಹೆಚ್ಚಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. "ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ‌ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ.  ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು," ಎಂದಿದ್ದಾರೆ.

"ಪಹಲ್ಗಾಮ್ ನಲ್ಲಿ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಗೆ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವುದು ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆಯಾಗಿದೆ. ಮೊದಲು ಈ ಲೋಪವನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ," ಎಂದವರು ಹೇಳಿದ್ದಾರೆ.

"ಸಿಂಧೂ ನದಿ ಒಪ್ಪಂದದ ರದ್ದತಿಯೂ ಸೇರಿದಂತೆ ಕೇಂದ್ರ ಸರ್ಕಾರ ಕೆಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಮುಂದೆ ಇದಕ್ಕಿಂತಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆ ನಮಗಿದೆ. ಅವುಗಳನ್ನೆಲ್ಲ ಬಹಿರಂಗ ಪಡಿಸುವ ಅಗತ್ಯವಿಲ್ಲ. ಅಂತಹ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ,"  ಎಂದು ಭರವಸೆ ನೀಡಿದ್ದಾರೆ.

Tags:    

Similar News