ಸಿಎಂ ಮಹತ್ವದ ಸಭೆ ; ಜಾತಿಗಣತಿ ಕುರಿತ ಭವಿಷ್ಯ ಇಂದು ತೀರ್ಮಾನ ?
ಸಾಮಾಜಿಕ ಸಮೀಕ್ಷೆ ನಡೆಸಬೇಕೆ, ಬೇಡವೇ ಎಂಬುದರ ಕುರಿತು ಇಂದು ಅಂತಿಮ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿಗಣತಿ ಕುರಿತಂತೆ ಅನಿಶ್ಚಿತತೆ ಎದುರಾಗಿದೆ.
ಸಮೀಕ್ಷೆಯಲ್ಲಿ ಲಿಂಗಾಯತರ ಪ್ರತ್ಯೇಕ ಧರ್ಮದ ಕೂಗು, ಮತಾಂತರ ಕ್ರೈಸ್ತರ ಸೇರ್ಪಡೆಗೆ ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದಲ್ಲೇ ಕೆಲ ಪ್ರಭಾವಿ ಸಚಿವರು ಜಾತಿಗಣತಿಗೆ ವಿರೋಧ ವ್ಯಕ್ತಪಡಿಸಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವದು ಗುರುವಾರ ತಡರಾತ್ರಿವರೆಗೆ ಸಚಿವರ ಸಭೆ ನಡೆಸಿದ್ದು, ಶುಕ್ರವಾರವೂ ಸಭೆ ಮುಂದುವರಿದಿದೆ. ಸಾಮಾಜಿಕ ಸಮೀಕ್ಷೆ ನಡೆಸಬೇಕೆ, ಬೇಡವೇ ಎಂಬುದರ ಕುರಿತು ಇಂದು ಅಂತಿಮ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಚಿವರ ಜತೆ ಸಿಎಂ ಸಭೆ
ಗುರುವಾರ ತಡರಾತ್ರಿವರೆಗೂ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕಾವೇರಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇರಿ ಹಲವು ಸಚಿವರ ಜತೆ ಚರ್ಚೆ ನಡೆಸಿದ್ದರು. ಆದರೆ, ಸಭೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರು ಗೈರಾಗಿದ್ದರು. ಇದರಿಂದ ಯಾವುದೇ ನಿರ್ಧಾರ ಕೈಗೊಳ್ಳದೇ ಸಭೆ ಮುಂದೂಡಲಾಗಿತ್ತು.
ಇಂದು ಅಂತಿಮ ತೀರ್ಮಾನ ಸಾಧ್ಯತೆ
ಇಂದು ಮತ್ತೆ ಪ್ರಮುಖ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದು, ಸಭೆಯಲ್ಲಿ ಸಮೀಕ್ಷೆಯನ್ನು ಮುಂದುವರಿಸಬೇಕೋ, ಬದಲಾವಣೆ ಮಾಡಿ ಮರು ದಿನಾಂಕ ನಿಗದಿ ಮಾಡಬೇಕೋ, ಅಥವಾ ಸಮೀಕ್ಷೆಯನ್ನೇ ಕೈಬಿಡಬೇಕೋ ಎಂಬ ಮಹತ್ವದ ಚರ್ಚೆ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಮೀಕ್ಷೆ ಮುಂದುವರಿಸಿದರೆ ಲಿಂಗಾಯತ ಉಪಜಾತಿಗಳು, ಕ್ರೈಸ್ತ ಕುರುಬ, ಕ್ರೈಸ್ತ ಒಕ್ಕಲಿಗ ಎಂಬ ಪದಗಳನ್ನು ಪಟ್ಟಿಯಿಂದ ಕೈಬಿಡುವ ಬಗ್ಗೆಯೂ ಚರ್ಚೆ ನಡೆದಿದೆ. ಎಲ್ಲರ ವಿರೋಧ ಕಟ್ಟಿಕೊಂಡು ಸಮೀಕ್ಷೆ ನಡೆಸಿದರೆ ಪಕ್ಷ ಹಾಗೂ ಸರ್ಕಾರಕ್ಕೆ ರಾಜಕೀಯವಾಗಿ ಹಿನ್ನಡೆಯಾಗಬಹುದು ಎಂಬ ಆತಂಕವೂ ಸಚಿವರಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ. ಕೆಲ ಪ್ರಬಲ ನಾಯಕರು “ಸಮೀಕ್ಷೆ ನಡೆಸಬಾರದು” ಎಂಬ ನಿಲುವಿಗೆ ಅಂಟಿಕೊಂಟಿದ್ದು, ಮತ್ತೆ ಕೆಲವರು “ಸ್ವಲ್ಪ ಬದಲಾವಣೆ ಮಾಡಿ ನಡೆಸಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆಗೆ ಆಯೋಗದ ಸದಸ್ಯರಿಗೂ ಆಹ್ವಾನ
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಕೂಡ ಸಭೆಗೆ ಆಹ್ವಾನಿಸಿರುವ ಸಿಎಂ, ಎಲ್ಲರ ಅಭಿಪ್ರಾಯವನ್ನು ತಿಳಿದುಕೊಂಡು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸರ್ಕಾರ ಸೆ. 22ರಿಂದ ಅ. 7ರವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಆದರೆ ಈಗ ಸಮೀಕ್ಷೆಗೆ ಅಪಸ್ವರಗಳು ಕೇಳಿ ಬರುತ್ತಿರುವುದರಿಂದ ಸರ್ಕಾರ ನಿರ್ಧಾರ ಬದಲಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಒಟ್ಟಾರೆ ಇಂದು ನಡೆಯುವ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಸಮೀಕ್ಷೆ ನಡೆಯಲಿದೆಯೋ, ಕೈಬಿಡಲಾಗುತ್ತದೆಯೋ ಎಂಬ ಕುತೂಹಲ ಕೆರಳಿಸಿದೆ.