ಸೈನಿಕ ಶಾಲೆ ಕೇಸರೀಕರಣ | ಸಂಘಪರಿವಾರಕ್ಕೆ ಶಾಲೆ ತೆರೆಯಲು ಅನುಮೋದನೆ!
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 40 ಸೈನಿಕ ಶಾಲೆ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ ಶೇ.62 ಕ್ಕಿಂತ ಹೆಚ್ಚು ಶಾಲೆಗಳನ್ನು ಆರ್‌ಎಸ್‌ಎಸ್ ಮತ್ತು ಅದರ ಸಹ ಸಂಘಟನೆಗಳಿಗೆ ನೀಡಲಾಗಿದೆ ಎಂಬುದನ್ನು ʻದಿ ರಿಪೋರ್ಟರ್ಸ್ ಕಲೆಕ್ಟಿವ್ʼ ಬಹಿರಂಗಪಡಿಸಿದೆ;
ಈ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 40 ಸೈನಿಕ ಶಾಲೆ ಆರಂಭಿಸಲು ಒಪ್ಪಂದ ಮಾಡಿಕೊಂಡಿತ್ತು. ಅದರಲ್ಲಿ 62% ಕ್ಕಿಂತ ಹೆಚ್ಚು ಶಾಲೆಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಸಹ ಸಂಘಟನೆಗಳು, ಬಿಜೆಪಿ ರಾಜಕಾರಣಿಗಳು, ಬಿಜೆಪಿಯ ಮಿತ್ರಪಕ್ಷಗಳು ಮತ್ತು ಮುಖಂಡರ ಆಪ್ತರು ಸೇರಿದಂತೆ ಒಟ್ಟಾರೆ ಹಿಂದುತ್ವಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೀಡಲಾಗಿದೆ ಎಂಬುದನ್ನು ʻದಿ ರಿಪೋರ್ಟರ್ಸ್ ಕಲೆಕ್ಟಿವ್ʼ ಹೇಳಿದೆ.
2021ರಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಸೈನಿಕ ಶಾಲೆಗಳನ್ನು ನಡೆಸಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ನೀಡಿತ್ತು. ಆ ವರ್ಷ ಕೇಂದ್ರ ಬಜೆಟ್‌ನಲ್ಲಿ, ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು.
ಸೈನಿಕ್ ಸ್ಕೂಲ್ಸ್ ಸೊಸೈಟಿಯು ನಿರ್ದಿಷ್ಟಪಡಿಸಿದ ಮೂಲಸೌಕರ್ಯವನ್ನು ಹೊಂದಿರುವ ಯಾವುದೇ ಶಾಲೆಗೆ ಹೊಸ ಸೈನಿಕ ಶಾಲೆ ನಡೆಸಲು ಅನುಮತಿ ನೀಡಬಹುದು. ಅನುಮೋದನೆ ನಿಯಮಾವಳಿ ಪ್ರಕಾರ, ಮೂಲಭೂತ ಸೌಕರ್ಯವೇ ಶಾಲೆಯ ಅನುಮೋದನೆಗೆ ಬೇಕಾದ ಏಕೈಕ ನಿರ್ದಿಷ್ಟ ಮಾನದಂಡವಾಗಿದೆ. ಈ ನಿಯಮ ಸಂಘ ಪರಿವಾರದೊಂದಿಗೆ ಸಂಪರ್ಕ ಹೊಂದಿದ ಶಾಲೆಗಳು ಮತ್ತು ಒಂದೇ ರೀತಿಯ ಸಿದ್ಧಾಂತ ಹೊಂದಿರುವ ಸಂಸ್ಥೆಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಟ್ಟಿತು. ಈ ಅವಕಾಶವನ್ನು ಬಳಸಿಕೊಂಡು ಕೇಂದ್ರ ಸರ್ಕಾರ, ಸಂಘಪರಿವಾರ ಮತ್ತು ತನ್ನ ಮಿತ್ರಪಕ್ಷಗಳ ಮುಖಂಡರಿಗೆ ಸೈನಿಕ್ ಶಾಲೆ ತೆರೆಯಲು ಅನುವು ಮಾಡಿಕೊಟ್ಟಿದೆ ಎಂದು ದೇಶದ ಮುಂಚೂಣಿ ಪತ್ರಕರ್ತರ ವೇದಿಕೆಯಾದ ʻದಿ ರಿಪೋರ್ಟರ್ಸ್ ಕಲೆಕ್ಟಿವ್ʼ ದಾಖಲೆಸಹಿತ ಬಹಿರಂಗಗೊಳಿಸಿದೆ.
ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆಗಳು ಮತ್ತು ಮಾಹಿತಿ ಹಕ್ಕು(ಆರ್‌ಟಿಐ) ಅರ್ಜಿಗಳಿಗೆ ನೀಡಿದ ಮಾಹಿತಿಯನ್ನು ಒಟ್ಟುಗೂಡಿಸಿ ʻದಿ ರಿಪೋರ್ಟರ್ಸ್ ಕಲೆಕ್ಟಿವ್ʼ, ಸೈನಿಕ ಶಾಲೆಗಳ ಆಯ್ಕೆಯ ಕುರಿತು ವರದಿ ಬಿಡುಗಡೆ ಮಾಡಿದ್ದು, ʼʼಇದುವರೆಗೆ ಕೇಂದ್ರ ಸರ್ಕಾರ 40 ಸೈನಿಕ ಶಾಲೆ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ 62% ಕ್ಕಿಂತ ಹೆಚ್ಚು ಶಾಲೆಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಸಹ ಸಂಘಟನೆಗಳು, ಬಿಜೆಪಿ ರಾಜಕಾರಣಿಗಳು, ಬಿಜೆಪಿಯ ಮಿತ್ರಪಕ್ಷಗಳು ಮತ್ತು ಮುಖಂಡರ ಆಪ್ತರು ಸೇರಿದಂತೆ ಒಟ್ಟಾರೆ ಹಿಂದುತ್ವಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೀಡಲಾಗಿದೆ ಎಂಬುದನ್ನು ದಾಖಲೆಗಳು ಬಹಿರಂಗಪಡಿಸಿವೆʼʼ ಎಂದು ವರದಿಯಲ್ಲಿ ಹೇಳಲಾಗಿದೆ.
ಹೊಸ ಸೈನಿಕ ಶಾಲೆ ನಡೆಸುವವರಾರು?
ಹೊಸ ನೀತಿ ಜಾರಿಗೆ ಬರುವವರೆಗೆ ದೇಶದಲ್ಲಿ ಒಟ್ಟು 33 ಸೈನಿಕ ಶಾಲೆಗಳಿದ್ದವು. ಅವುಗಳಲ್ಲಿ 16,000 ಕೆಡೆಟ್(ವಿದ್ಯಾರ್ಥಿಗಳು)ಗಳಿದ್ದು, ಸೈನಿಕ್ ಸ್ಕೂಲ್ಸ್ ಸೊಸೈಟಿ ಅದರ ಮಾತೃ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಸೈನಿಕ್ ಸ್ಕೂಲ್ಸ್ ಸೊಸೈಟಿ ಎನ್ನುವುದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆ.
ಸೈನಿಕ ಶಾಲೆಗಳನ್ನು ಖಾಸಗಿಯವರಿಗೆ ನೀಡುವ ಬಗ್ಗೆ ಹೆಸರು ಹೇಳಲಿಚ್ಚಿಸದ ನಿವೃತ್ತ ಮೇಜರ್ ಜನರಲ್ ಒಬ್ಬರು ʻದಿ ರಿಪೋರ್ಟರ್ಸ್ ಕಲೆಕ್ಟಿವ್ʼನೊಂದಿಗೆ ಮಾತನಾಡಿ, ʻʻತಾತ್ವಿಕವಾಗಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯು ಒಳ್ಳೆಯದು. ಆದರೆ ಈ ಒಪ್ಪಂದಗಳನ್ನು ಯಾವ ರೀತಿಯ ಸಂಸ್ಥೆಗಳೊಂದಿಗೆ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ನನ್ನ ಆತಂಕವಿದೆ. ಮಾಲೀಕತ್ವದ ಬಹುಪಾಲು ಬಿಜೆಪಿ-ಸಂಬಂಧಿತ ವ್ಯಕ್ತಿಗಳು/ ಸಂಘಟನೆಗಳ ಕೈಯಲ್ಲಿದ್ದರೆ, ಆ ಪಕ್ಷಪಾತವು ಶಿಕ್ಷಣದ ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯ ಸೈನಿಕ ಶಾಲೆಗಳಂತೆ, ಈ ಶಾಲೆಗಳ ವಿದ್ಯಾರ್ಥಿಗಳು ಸಹ ಸಶಸ್ತ್ರ ಪಡೆಗಳಿಗೆ ಸೇರಿದರೆ, ಅವರು ಪಡೆದ ಶಿಕ್ಷಣವು ಖಂಡಿತವಾಗಿಯೂ ಸಶಸ್ತ್ರ ಪಡೆಗಳ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತದೆʼʼ ಎಂದು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆ(RTI ) ಪ್ರಕಾರ, ಮೇ 05, 2022 ಮತ್ತು ಡಿಸೆಂಬರ್ 27, 2023 ರ ನಡುವೆ ಕನಿಷ್ಠ 40 ಶಾಲೆಗಳು ಸೈನಿಕ್ ಸ್ಕೂಲ್ಸ್ ಸೊಸೈಟಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿವೆ. 40 ಶಾಲೆಗಳಲ್ಲಿ 11 ನೇರವಾಗಿ ಬಿಜೆಪಿ ರಾಜಕಾರಣಿಗಳ ಒಡೆತನದಲ್ಲಿವೆ ಅಥವಾ ಅವರ ಅಧ್ಯಕ್ಷತೆಯ ಟ್ರಸ್ಟ್‌ಗಳಿಂದ ನಿರ್ವಹಿಸಲ್ಪಡುತ್ತಿವೆ ಅಥವಾ ಬಿಜೆಪಿ ನಾಯಕರ ಆಪ್ತರು, ಇಲ್ಲವೇ ಮಿತ್ರಪಕ್ಷಗಳ ನಾಯಕರಿಗೆ ಸೇರಿವೆ ಎಂಬ ಸಂಗತಿಯನ್ನು ಬಯಲು ಮಾಡಿವೆ.
"8 ಶಾಲೆಗಳು ಆರ್‌ಎಸ್‌ಎಸ್ ಮತ್ತು ಅದರ ಸಹ ಸಂಸ್ಥೆಗಳಿಂದ ನೇರವಾಗಿ ನಿರ್ವಹಿಸಲ್ಪಡುತ್ತಿವೆ. ಹೆಚ್ಚುವರಿಯಾಗಿ, 6 ಶಾಲೆಗಳು ಹಿಂದುತ್ವ ಸಂಘಟನೆಗಳು ಅಥವಾ ಬಲಪಂಥೀಯ ಹೋರಾಟಗಾರರು ಮತ್ತು ಇತರ ಹಿಂದೂ ಧಾರ್ಮಿಕ ಸಂಘಟನೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಅನುಮೋದಿತ ಶಾಲೆಗಳಲ್ಲಿ ಯಾವುದನ್ನೂ ಕ್ರಿಶ್ಚಿಯನ್ ಅಥವಾ ಮುಸ್ಲಿಂ ಸಂಘಟನೆಗಳು ಅಥವಾ ಭಾರತದ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರಿಂದ ನಡೆಸುತ್ತಿಲ್ಲʼʼ ಎಂಬುದು ಆರ್‌ಟಿಐ ಮಾಹಿತಿ ಮೂಲಕ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.
ಸೈನಿಕ ಶಾಲೆಗಳ ಕೇಸರೀಕರಣ
ಖಾಸಗಿ ಸೈನಿಕ ಶಾಲೆಗಳನ್ನು ನಡೆಸಲು ಕೇವಲ ಬಿಜೆಪಿ ನಾಯಕರು ಮಾತ್ರವಲ್ಲದೇ, ಆರ್‌ಎಸ್ಎಸ್ ಸಂಸ್ಥೆಗಳು ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಹಲವಾರು ಹಿಂದೂ ಬಲಪಂಥೀಯ ಗುಂಪುಗಳಿಗೂ ಅನುಮೋದನೆ ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಲೆಫ್ಟಿನೆಂಟ್ ಜನರಲ್ ಪ್ರಕಾಶ್ ಮೆನನ್, ʻʻಈ ಹೊಸ ನೀತಿ ಬದಲಾವಣೆಗಳಿಂದಾಗಿ ಸೈನಿಕ ಶಾಲೆಗಳನ್ನು ಹಿಂದುತ್ವವಾದಿಗಳ ಕೈಗೆ ಕೊಟ್ಟಿರುವುದು ಕಳವಳಕಾರಿ. ಇದು ಸಶಸ್ತ್ರ ಪಡೆಗಳಿಗೆ ಒಳ್ಳೆಯದಲ್ಲ. ಅಂತಹ ಸಂಸ್ಥೆಗಳಿಗೆ ಗುತ್ತಿಗೆಗಳನ್ನು ನೀಡುವುದು ಸಶಸ್ತ್ರ ಪಡೆಗಳ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೇಳಿದರು. ಮೆನನ್ ಅವರು ಪ್ರಸ್ತುತ ತಕ್ಷಶಿಲಾ ಸಂಸ್ಥೆಯಲ್ಲಿ ರಕ್ಷಣಾ ಕಾರ್ಯತಂತ್ರ ಅಧ್ಯಯನ ವಿಭಾಗದ ನಿರ್ದೇಶಕರಾಗಿದ್ದಾರೆ.
ʼಆರ್ ಎಸ್ ಎಸ್, ಸ್ಕೂಲ್ ಟೆಕ್ಸ್ಟ್ ಅಂಡ್ ದ ಮರ್ಡರ್ ಆಫ್ ಮಹಾತ್ಮ ಗಾಂಧಿ: ದ ಹಿಂದೂ ಕಮ್ಯುನಲ್ ಪ್ರಾಜೆಕ್ಟ್ʼ ಪುಸ್ತಕದ ಸಹ ಲೇಖಕ ಆದಿತ್ಯ ಮುಖರ್ಜಿ ಅವರು ʻದಿ ರಿಪೋರ್ಟರ್ಸ್ ಕಲೆಕ್ಟಿವ್ʼ ಜೊತೆ ಮಾತನಾಡಿದ್ದು, ʻʻಇಂತಹ ಶಾಲೆಗಳು ರಕ್ಷಣಾ ಸಚಿವಾಲಯದಿಂದ ಪ್ರಾಯೋಜಕತ್ವ ಮತ್ತು ಅಧಿಕೃತ ಬೆಂಬಲವನ್ನು ಪಡೆದಿರುವುದು ಆಘಾತಕಾರಿ. ಅಲ್ಪಸಂಖ್ಯಾತರ ವಿರುದ್ಧ ಅವರು ಹರಡುತ್ತಿರುವ ದ್ವೇಷದ ಹಿನ್ನೆಲೆಯಲ್ಲಿ ನೋಡಿದರೆ ಪ್ರಜಾಪ್ರಭುತ್ವದಲ್ಲಿ ʼವಿದ್ಯಾಭಾರತಿʼ ರೀತಿಯ ಶಾಲೆಗಳು ಅಸ್ತಿತ್ವದಲ್ಲಿರಬಾರದು. ಅವು ಕೇವಲ ಆರ್‌ಎಸ್ಎಸ್ ಶಾಲೆಗಳಾಗಿದ್ದವು. ಇದೀಗ ಅಂತಹ ಶಾಲೆಗಳನ್ನು ರಾಷ್ಟ್ರೀಯ ಸಂಸ್ಥೆಗಳಿಗೆ, ವಿಶೇಷವಾಗಿ ಸೈನಿಕ ಶಾಲೆಗಳ ಜಾಲದಲ್ಲೂ ಸೇರಿಸುವ ಮೂಲಕ, ಸರ್ಕಾರವು ದೇಶಕ್ಕೆ ದೊಡ್ಡ ಅಪಾಯವನ್ನು ತರುತ್ತಿದೆ. ಬಹುಸಂಖ್ಯಾತ, ಕೋಮುವಾದಿ ದೃಷ್ಟಿಕೋನದಿಂದ ಇದು ರಕ್ಷಣಾ ಪಡೆಗಳಿಗೆ ತೊಂದರೆ ಉಂಟುಮಾಡುತ್ತದೆʼʼ ಎಂದು ಮುಖರ್ಜಿ ತಿಳಿಸಿದರು.
ಸೆಂಟ್ರಲ್ ಹಿಂದೂ ಮಿಲಿಟರಿ ಎಜುಕೇಶನ್ ಸೊಸೈಟಿ ನಡೆಸುತ್ತಿರುವ ನಾಗ್ಪುರದ ಭೋನ್ಸಾಲಾ ಮಿಲಿಟರಿ ಶಾಲೆಯನ್ನು ಸೈನಿಕ ಶಾಲೆಯಾಗಿ ನಡೆಸಲು ಅನುಮೋದಿಸಲಾಗಿದೆ. ಇದೇ ರೀತಿ ಹಲವಾರು ಇತರ ಹಿಂದೂ ಧಾರ್ಮಿಕ ಟ್ರಸ್ಟಗಳು, ಅದರಲ್ಲೂ ಕೆಲವು ಉಗ್ರ ಹಿಂದುತ್ವವಾದಿಗಳಿಂದ ಸ್ಥಾಪಿತವಾಗಿರುವ ಟ್ರಸ್ಟಗಳು ಕೂಡ ಈಗಾಗಲೇ ಇರುವ ತಮ್ಮ ಸಂಸ್ಥೆಗಳ ಮೂಲಕವೇ ಸೈನಿಕ ಶಾಲೆಗಳನ್ನು ನಡೆಸಲು ಅನುಮೋದನೆ ಪಡೆದಿವೆ.
"ಈ ಸಂಬಂಧ ಈಗಾಗಲೇ ʼದಿ ಕಲೆಕ್ಟಿವ್ʼ ವಿವರವಾದ ಪ್ರಶ್ನೆಗಳನ್ನು ರಕ್ಷಣಾ ಸಚಿವಾಲಯ ಮತ್ತು ಸೈನಿಕ್ ಸ್ಕೂಲ್ಸ್ ಸೊಸೈಟಿಗೆ ಕಳುಹಿಸಿದೆ. ಆದರೆ ಈ ವರೆಗೂ ಉತ್ತರ ಬಂದಿಲ್ಲ. ಪರಮ ಶಕ್ತಿ ಪೀಠದ ಸಂಸ್ಥಾಪಕಿ ಸಾಧ್ವಿ ಋತಂಭರ ಮತ್ತು ಪ್ರಧಾನ ಕಾರ್ಯದರ್ಶಿ ಸಂಜಯ್ ಗುಪ್ತಾ ಅವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಕೋರಿದರೂ ಆ ಮನವಿಗೂ ಉತ್ತರ ಸಿಕ್ಕಿಲ್ಲʼʼ ಎಂದು ʻದಿ ರಿಪೋರ್ಟರ್ಸ್ ಕಲೆಕ್ಟಿವ್ʼ ತನ್ನ ವರದಿಯಲ್ಲಿ ತಿಳಿಸಿದೆ.