ಕಾನ್‌ ಚಲನಚಿತ್ರೋತ್ಸವ | ಪ್ರಶಸ್ತಿ ಗೆದ್ದ ಕನ್ನಡ ಕಿರುಚಿತ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಶುಭಾಶಯ

Update: 2024-05-24 14:04 GMT

ಪ್ರತಿಷ್ಟಿತ ಕಾನ್‌ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ಕನ್ನಡ ಕಿರುಚಿತ್ರ ʻಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ʻʻಕಾನ್‌ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುಚಿತ್ರ ಅತ್ಯುತ್ತಮ ಕಿರುಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ʻಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳುʼʼ ಎಂದು ಹೇಳಿದ್ದಾರೆ.

ʻʻಒಬ್ಬ ಹೆಮ್ಮೆಯ ಕನ್ನಡಿಗನಾಗಿ, ನೀವು ಕನ್ನಡ ಜಾನಪದವನ್ನು ಜಾಗತಿಕ ಮಟ್ಟಕ್ಕೆ ತಗೆದುಕೊಂಡು ಹೋಗಿರುವುದು ಸ್ಪೂರ್ತಿದಾಯಕವಾಗಿದೆ. ಅನೇಕರಿಗೆ ಇವರು ಪ್ರೇರಣೆಯಾಗುತ್ತಾರೆ ಎಂದು ನನಗೆ ಖಾತ್ರಿಯಿದೆʼʼ ಎಂದು ಚಿತ್ರ ತಂಡದ ಬಗ್ಗೆ ಸಿದ್ದರಾಮಯ್ಯ ಹೆಮ್ಮೆಪಟ್ಟಿದ್ದಾರೆ.

ಈ ಕಿರುಚಿತ್ರವನ್ನು ಪುಣೆಯ ಫಿಲ್ಮ್‌ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ (ಎಫ್‌ಟಿಐಐ) ಸಂಸ್ಥೆ ನಿರ್ಮಿಸಿದೆ. ವಿ.ಮನೋಜ್- ಸಂಕಲನ, ಸೂರಜ್ ಠಾಕೂರ್ ಛಾಯಾಗ್ರಹಣ, ಅಭಿಷೇಕ್ ಕದಂ ಅವರು ಶಬ್ದವಿನ್ಯಾಸ ಮಾಡಿದ್ದು, ಕಿರುಚಿತ್ರ ಕೇವಲ 16 ನಿಮಿಷ ಇದೆ. ಈ ವಿಭಾಗದಲ್ಲಿ ಭಾಗವಹಿಸಿದ್ದ 2,263 ಕಿರುಚಿತ್ರಗಳಲ್ಲಿ 18 ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಅವುಗಳಲ್ಲಿ ಇದ್ದ ಏಕೈಕ ಭಾರತೀಯ ಸಿನಿಮಾ ಇದಾಗಿತ್ತು. ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಅಜ್ಜನಾಗಿ ನಟಿಸಿದ್ದಾರೆ.

ಇನ್ನು ಈ ಸಿನಿಮಾವನ್ನು ನಿರ್ದೇಶನ ಮಾಡಿರುವ ಡಾ ಚಿದಾನಂದ್ ಎಸ್ ನಾಯ್ಕ್‌ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಎಂಬಿಬಿಎಸ್ ಮುಗಿಸಿ ಕೆಲ ಸಮಯ ವೈದ್ಯರಾಗಿ ಕಾರ್ಯನಿರ್ವಹಿಸಿ ಚಿದಾನಂದ್ ನಂತರದಲ್ಲಿ ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟ್ ಸೇರಿದರು. ಅಲ್ಲಿ ಟೆಲಿವಿಷನ್ ವಿಭಾಗದಲ್ಲಿ ಡೈರೆಕ್ಷನ್ ಕಲಿತು, ಅದರ ಭಾಗವಾಗಿಯೇ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು...' ಶೀರ್ಷಿಕೆಯ ಪ್ರಾಯೋಗಿಕ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಸರ್ಕಾರದಿಂದ ಈ ಕಿರುಚಿತ್ರ ನಿರ್ಮಾಣಕ್ಕೆ ಒಂದು ಲಕ್ಷ ವೆಚ್ಚ ಮಾಡಲಾಗಿದೆ. ಇದೀಗ ಕಾನ್‌ ಪ್ರಶಸ್ತಿ ಗೆಲ್ಲುವ ಮೂಲಕ ಚಿತ್ರ 15000 ಯೂರೊ(13.5 ಲಕ್ಷ) ಬಹುಮಾನ ಗಳಿಸಿದೆ.

Tags:    

Similar News