Cabinet Meeting | ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸಿ ಸಚಿವ ಸಂಪುಟ ಸಭೆ ನಿರ್ಣಯ

ವಸತಿ ಯೋಜನೆಗಳಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಶೇ.15ಕ್ಕೆ ಹೆಚ್ಚಳ ಮಾಡಿ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್‌.ಕೆ ಪಾಟೀಲ್‌ ತಿಳಿಸಿದ್ದಾರೆ.;

Update: 2025-06-19 12:43 GMT

ಸರ್ಕಾರಿ ಯೋಜನೆಗಳ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4 ರಷ್ಟು ಮೀಸಲಾತಿ ನೀಡಿದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ವಸತಿ ಯೋಜನೆಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸಿ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಸತಿ ಯೋಜನೆಗಳಲ್ಲಿಇದ್ದ ಶೇ.10ರಷ್ಟು ಮೀಸಲಾತಿಯನ್ನು ಶೇ.15ಕ್ಕೆ ಹೆಚ್ಚಳ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ. ವಸತಿ  ಸಚಿವ ಜಮೀರ್ ಅಹ್ಮದ್ ಖಾನ್ ಈ ಕುರಿತ ಪ್ರಸ್ತಾಪವನ್ನು ಸಂಪುಟ ಸಭೆಯಲ್ಲಿಟ್ಟು ಅನುಮೋದನೆ ಪಡೆದುಕೊಂಡಿದ್ದಾರೆ. 

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಿಂದಾಗಿ ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸುವ ವಿವಿಧ ವಸತಿ ಯೋಜನೆಯಲ್ಲಿ ಮೀಸಲಾತಿ ಸೌಲಭ್ಯ ಲಭ್ಯವಾಗಲಿವೆ. ಈ ಸೌಲಭ್ಯವು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೇ, ಕ್ರೈಸ್ತ, ಜೈನ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತ ವ್ಯಾಪ್ತಿಯಲ್ಲಿ ಬರುವವರಿಗೆ ಈ ಸೌಲಭ್ಯ ಸಿಗಲಿದೆ.

ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಮೀಸಲಾತಿ ನಿಗದಿಯಾಗಿದೆ. ಇದನ್ನು ಶೇ.15ಕ್ಕೆ ಹೆಚ್ಚಳ ಮಾಡಲಾಗಿದೆ. 

ಸಚಿವ ಸಂಪುಟ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದಲ್ಲಿನ ಎಲ್ಲಾ ವಸತಿ ಯೋಜನೆಗಳಲ್ಲಿಯೂ ಮೀಸಲಾತಿ ಅನ್ವಯವಾಗಲಿದೆ. ಎಸ್‌ಸಿ/ಎಸ್‌ಟಿ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಯಾವ ಸಮುದಾಯದಲ್ಲಿ ಎಷ್ಟು ಮಂದಿಗೆ ವಸತಿ ಲಭ್ಯ ಇದೆ ಎಂಬುದರ ಕುರಿತು ವರದಿ ಇದೆ. ಅದರಲ್ಲಿನ ಅಂಕಿ ಅಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳು ಸೌಲಭ್ಯ ಕಲ್ಪಿಸಬೇಕು ಎಂದು ಕೇಂದ್ರವು ಸೂಚನೆ ನೀಡಿದೆ. ವಸತಿ ಹೀನರ ಸಂಖ್ಯೆ ಎಲ್ಲಿ ಹೆಚ್ಚಳ ಇದೆ ಎಂಬುದನ್ನು ತಿಳಿದು ಅಲ್ಲಿ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಹೇಳಿದರು. 

ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರಿಗೆ ಕೊರತೆಯಿದ್ದ ವಸತಿಯನ್ನು ಗಮನಿಸಿ ಸೂಚನೆ ನೀಡಿದೆ. ಸರ್ಕಾರವು ಸಮುದಾಯದವರ ವಸತಿರಹಿತರನ್ನು ಮತ್ತು  ಸಾಮಾಜಿಕ ನ್ಯಾಯವನ್ನು ಗಮನದಲ್ಲಿರಿಸಿಕೊಂಡು ಮೀಸಲಾತಿ ಹೆಚ್ಚಿಸಲಾಗಿದೆ. ನ್ಯಾ.ಸಾಚಾರ್ ಸಮಿತಿ ವರದಿಯನ್ನು ಸಹ ಗಮನಿಸಿ ತೀರ್ಮಾನಿಸಲಾಗಿದೆ. ಈ ಬಗ್ಗೆ ರಾಜಕೀಯ ಮಾತನಾಡುವವರಿಗೆ ಉತ್ತರ ನೀಡುವುದಿಲ್ಲ. ಸಾಮಾಜಿಕ ನ್ಯಾಯ ಪಾಲನೆ ನಮ್ಮ ಉದ್ದೇಶವಾಗಿದೆ ಎಂದರು. 

ಮರುನಾಮಕರಣ

ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬಸಾಪೂರ ಗ್ರಾಮದ ಹೆಸರನ್ನು ಗೇರುಗುಡ್ಡ ಬಸಾಪೂರ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಲ್ಲಿನ ಜನರು ಭಾರೀ ಪ್ರಮಾಣದಲ್ಲಿ ಒತ್ತಾಯ ಮಾಡುತ್ತಿದ್ದ ಕಾರಣ ಗೇರುಗುಡ್ಡ ಬಸಾಪೂರ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 

ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿಯ 742 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. ಯೋಜನೆಯ ಮೊತ್ತವು 612 ಕೋಟಿ ರೂ. ವೆಚ್ಚ ಇತ್ತು. ಎಲ್ಲದರ ಬೆಲೆ ಹೆಚ್ಚಳ ಕಾರಣದಿಂದಾಗಿ ಪರಿಷ್ಕೃತ ಅಂದಾಜು ಸಹ ಹೆಚ್ಚಳ ಮಾಡಲಾಗಿದೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಸಂಪುಟ ಸಭೆಯ ಇತರೆ ನಿರ್ಣಯಗಳು

  • ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸಂಜಯ್ ಬಿ.ಭಟ್ ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
  • ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರ ತೀರದ 6 ಕಿ.ಮೀ ವರೆಗಿನ ಪ್ರದೇಶ ಹಾಗೂ ಅರಣ್ಯ ಪ್ರದೇಶ ಒಳಗೊಂಡ ಒಟ್ಟು 5959.322 ಹೆಕ್ಟೇರ್ ಪ್ರದೇಶವನ್ನು ಅಪ್ಸರಕೊಂಡ- ಮುಗಲಿ ಕಡಲ ವನ್ಯ ಜೀವಿಧಾಮ ಎಂದು ಘೋಷಿಸಲು ನಿರ್ಣಯ. 
  • ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿಗಳು ಮತ್ತು ಅವರ ಅವಲಂಬಿತರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ವಾರ್ಷಿಕವಾಗಿ 5 ಲಕ್ಷಗಳವರೆಗೆ ನಗದು ರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ.
  • ಎಆರ್‌ಎಸ್‌; ನಾಮನಿರ್ದೇಶನ ಮಾಡುವ ಅಧಿಕಾರದಲ್ಲಿನ ಬದಲಾವಣೆಗೆ ಸಂಪುಟ ನಿರ್ಣಯ.
  • ಸ್ಪೋಕ್ ಯೋಜನೆಯ 12.87 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
  • 23.51 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ.
  • ರಾಯಚೂರು ಜಿಲ್ಲಾ ಕುರುಬರ ಸಂಘಕ್ಕೆ ಕನಕದಾಸ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ರಾಯಚೂರು ನಗರದ ಸಿಯತಲಾಬ್ ಬಡಾವಣೆಯಲ್ಲಿ ರಾಯಚೂರು ಮಹಾನಗರ ಪಾಲಿಕೆಗೆ ಸೇರಿದ 1200 ಚದರ ಅಡಿ ಅಳತೆಯ ಖಾಲಿ ನಿವೇಶನವನ್ನು ಶೇ 50 ರಷ್ಟು ರಿಯಾಯಿತಿ ದರದಲ್ಲಿ ಮಂಜೂರು ಮಾಡುವ ಬಗ್ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ಕನಕನಾಲಾ ಆಧುನೀಕರಣ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ರಾಯಚೂರು ತಾಲ್ಲೂಕಿನ ಸಿಂಧನೂರು ತಾಲ್ಲೂಕಿನ ಚನ್ನಬಸವೇಶ್ವರ (ಒಳಬಳ್ಳಾರಿ) ಏತ ನೀರಾವರಿ ಯೋಜನೆಯ ಜಾಕ್ ವೆಲ್ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಮಾಡುವ 43.10 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ರಾಜ್ಯದ ದುರ್ಗಮ ಪ್ರದೇಶದ ಸಂಪರ್ಕ ರಹಿತ ಪ್ರದೇಶಗಳಿಗೆ ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳನ್ನು 15.97 ಕೋಟಿ ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನ ಮಾಡಲು ಸಚಿವ ಸಂಫುಟ ನಿರ್ಧರಿಸಿದೆ.
Tags:    

Similar News