Cabinet Meeting | ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಸಚಿವ ಸಂಪುಟ ಸಭೆ

ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಮೂಢನಂಬಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ ಕ್ಷೇತ್ರಗಳ ಕಡೆಗಣನೆ, ಮೂಲ ಸೌಕರ್ಯಗಳ ಕೊರತೆಯಿಂದಾಗಿ ಅತ್ಯಂತ ಹಿಂದುಳಿದ ಜಿಲ್ಲೆ ಎನ್ನುವ ಕುಖ್ಯಾತಿ ಪಡೆದುಕೊಂಡಿದೆ. ಇದೀಗ ಏ.24ರಂದು ನಡೆಸಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯ ಮೇಲೆ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.;

Update: 2025-04-24 02:30 GMT

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಗುರುವಾರ (ಏ.24) ನಿಗದಿಯಾಗಿದೆ‌.

ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಮೂಢನಂಬಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ ಕ್ಷೇತ್ರಗಳ ಕಡೆಗಣನೆ, ಮೂಲ ಸೌಕರ್ಯಗಳ ಕೊರತೆಯಿಂದಾಗಿ ಅತ್ಯಂತ ಹಿಂದುಳಿದ ಜಿಲ್ಲೆ ಎನ್ನುವ ಕುಖ್ಯಾತಿ ಪಡೆದುಕೊಂಡಿದೆ. ಇದೀಗ ಏ.24ರಂದು ನಡೆಸಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯ ಮೇಲೆ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ವಿವಿಧ ಇಲಾಖೆಗಳಿಂದ ಪ್ರಸ್ತಾವನೆಗಳನ್ನು ಪಡೆದುಕೊಂಡಿದೆ. ಮುಖ್ಯವಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಮಾನವ-ಪ್ರಾಣಿ ಸಂಘರ್ಷ, ಆಸ್ಪತ್ರೆಗಳ ಕೊರತೆ, ಶಿಕ್ಷಣ, ಹಾಡಿ ಜನತೆಗೆ ಮೂಲ ಸೌಕರ್ಯ ಕಲ್ಪಿಸುವುದು, ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿ, ಪ್ರವಾಸೋದ್ಯಮ ಸೇರಿ ಹಲವು ವಿಚಾರಗಳ ಅಜೆಂಡಾ ಈಗಾಗಲೇ ಸಿದ್ಧವಾಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿರುವ ವಿವಿಧ ಉಪ ಸಮಿತಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಮಾಡಿ ಮುಗಿಸಿದ್ದು, ವಜ್ರಮಲೆ ಭವನದ ಮುಂಭಾಗದಲ್ಲಿ ನಿರ್ಮಾಣವಾಗಿರುವ ಜರ್ಮನ್ ಶೆಡ್ ನಲ್ಲಿ ಸಭೆ ನಡೆಯಲಿದೆ.

ಮಲೆ ಮಹದೇಶ್ವರ ಬೆಟ್ಟದ ದೀಪದ ಒಡ್ಡುವಿನ ಮಲೆ ಮಹದೇಶ್ವರರ ಪ್ರತಿಮೆ ಬಳಿ ಸಭೆ ನಡೆಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ಈ ಪ್ರದೇಶ ಎತ್ತರದಲ್ಲಿ ಇರುವುದರಿಂದ, ಇಲ್ಲಿ ಹೆಚ್ಚಿನ ಗಾಳಿ ಬೀಸುವುದರಿಂದ ಜರ್ಮನ್ ಶೆಡ್ ಗಳ ನಿರ್ಮಾಣ, ಅದರ ಒಳಗೆ ಸಭೆ ನಡೆಸುವುದು ಸುರಕ್ಷಿತವಲ್ಲ ಎಂದು ತಜ್ಞರು ವರದಿ ನೀಡಿದ್ದರು. ಹೀಗಾಗಿ ಬೆಟ್ಟದ ಮೇಲೆ ನೂತನವಾಗಿ ನಿರ್ಮಾಣಗೊಂಡಿರುವ ವಜ್ರಮಲೆ ಭವನದ ಮುಂಭಾಗದಲ್ಲಿ ಸಭೆಗೆ ಸಿದ್ಧತೆ ಪೂರ್ಣಗೊಂಡಿದೆ.


ಚುನಾವಣಾ ಆಯೋಗದ ಅನುಮತಿ ಬೇಕಿಲ್ಲ

ರಾಜ್ಯಾದ್ಯಂತ ವಿವಿಧ ಕಾರಣಗಳಿಂದ ತೆರವಾಗಿರುವ 260 ಗ್ರಾಮ ಪಂಚಾಯತಿ ಕ್ಷೇತ್ರಗಳಿಗೆ ಮೇ 11 ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು‌. ಅದರಂತೆ ಏ. 22 ರಂದು ಅಧಿಸೂಚನೆ ಹೊರಡಿಸಬೇಕಿತ್ತು. ಆಗ ಸಚಿವ ಸಂಪುಟ ಸಭೆ ನಡೆಸುವುದು ನಿಯಮಬಾಹಿರ ಆಗಬಹುದೇ ಎನ್ನುವ ವಿಚಾರವೂ ಎದ್ದಿತ್ತು. ಈ ಸಂಬಂಧ ಡಿಸಿ ಶಿಲ್ಪಾ ನಾಗ್ ಅವರು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಅವರಿಗೆ ಪತ್ರ ಬರೆದಿದ್ದರು. ಇದೀಗ ಹದಿನೈದು ದಿನ ಚುನಾವಣೆಯನ್ನು ಮುಂದೂಡಲಾಗಿದ್ದು, ಸಭೆ ನಿರಾತಂಕವಾಗಿ ನಡೆಯಲಿದೆ.

ಭಕ್ತರಿಗೆ ಕೊಠಡಿಗಳಿಲ್ಲ

ಸಚಿವ ಸಂಪುಟ ಸಭೆ ನಡೆಯುವ ಕಾರಣ ಮಲೆ ಮಹದೇಶ್ಚರ ಬೆಟ್ಟಕ್ಕೆ ಭೇಟಿ ಕೊಡುವ ಭಕ್ತರು ತಮ್ಮ ವೇಳಾಪಟ್ಟಿ ಬದಲಿಸಿಕೊಂಡರೆ ಉತ್ತಮ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಎಲ್ಲ ಸಚಿವರು, ಹಿರಿಯ ಅಧಿಕಾರಿಗಳು ಸೇರಿ ಇಡೀ ಸರ್ಕಾರವೇ ಬೆಟ್ಟದಲ್ಲಿ ನೆಲೆಯಾಗುವುದರಿಂದ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರಕ್ಕೆ ಸೇರಿದ ಎಲ್ಲಾ ಕೊಠಡಿಗಳನ್ನು ಅವರಿಗೆ ಮೀಸಲಿರಿಸಲಾಗಿದೆ. ಇದರಿಂದಾಗಿ ಏ. 22,23,24 ರಿಂದ  ಭಕ್ತರಿಗೆ ಕೊಠಡಿ ಸಿಗುತ್ತಿಲ್ಲ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದರೊದಿಗೆ ವಿವಿಧ ಮಠಗಳಿಗೆ ಸೇರಿದ ಮತ್ತು ಖಾಸಗಿ ವಸತಿ ಗೃಹಗಳೂ ಇದ್ದು, ಅವುಗಳನ್ನು ಆಡಳಿತ ಪಕ್ಷದ ಕಾರ್ಯಕರ್ತರು, ಮುಖಂಡರು ಈಗಾಗಲೇ ಕಾಯ್ದಿರಿಸಿದ್ದಾರೆ. ಹೀಗಾಗಿ ಭಕ್ತರು ಏ. 24 ರ ನಂತರ ಬೆಟ್ಟಕ್ಕೆ ಪ್ರವಾಸದ ಯೋಜನೆ ರೂಪಿಸಿಕೊಂಡರೆ ಸೂಕ್ತ.


2000 ಪೊಲೀಸರ ನಿಯೋಜನೆ; ಬಿಗಿ ಭದ್ರತೆ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರು, ಹಿರಿಯ ಅಧಿಕಾರಿಗಳು ಭಾಗಿಯಾಗಲಿರುವ ಸಂಪುಟ ಸಭೆಗೆ ಸಾಕಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಾಸಕರು, ಮುಖ್ಯ ಕಾರ್ಯದರ್ಶಿ, ಅಪರ ಕಾರ್ಯದರ್ಶಿ ಸೇರಿದಂತೆ ರಾಜ್ಯ ಮಟ್ಟದ ಎಲ್ಲಾ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಜ್ರಮಲೆ ಭವನದ ಕೆಳ ಹಂತಸ್ತಿನಲ್ಲಿ ಸಿಎಂ, ಡಿಸಿಎಂ, ಸಚಿವರು ಸೇರಿ ಹಿರಿಯ ಅಧಿಕಾರಿಗಳ 300 ವಾಹನಗಳಿಗೆ  ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸಚಿವ ಸಂಪುಟ ಸಭೆಯ ಬಂದೋಬಸ್ತ್ ಗಾಗಿ ಇಬ್ಬರು ಡಿಐಜಿ, ಇಬ್ಬರು ಎಸ್ಪಿ, 11 ಮಂದಿ ಡಿವೈಎಸ್ಪಿ, 31 ಮಂದಿ ಇನ್ಸ್ ಪೆಕ್ಟರ್ ಸೇರಿದಂತೆ ಸುಮಾರು 2000 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

3 ಹೆಲಿಪ್ಯಾಡ್ ಗಳ ನಿರ್ಮಾಣ

ಸಿಎಂ, ಡಿಸಿಎಂ ಮತ್ತು ಸಚಿವರು ಹೆಲಿಕಾಪ್ಟರ್ ನಲ್ಲಿ ಬರುವ ಹಿನ್ನಲೆ, ಹೆಚ್ಚುವರಿ ತಾತ್ಕಾಲಿಕ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗುತ್ತಿದೆ. ನಾಗಮಲೆಗೆ ಹೋಗುವ ದಾರಿಯಲ್ಲಿ ಇರುವ ಹಾಲಿ ಇರುವ ಹೆಲಿಪ್ಯಾಡ್ ಜೊತೆ ಹಳೆಯೂರು ಬಳಿ ಇನ್ನೂ 3 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.

ವಜ್ರಮಲೆ ಭವನ ಲೋಕಾರ್ಪಣೆ

ಮಲೆ ಮಹದೇಶ್ವರ ಬೆಟ್ಟದ ವಜ್ರಮಲೆ ಭವನದಲ್ಲಿ  ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ಪೂಜೆ  ನೆರವೇರಿಸಲಾಗಿದೆ. 69 ಕೋಟಿ ರೂ. ವೆಚ್ಚದಲ್ಲಿ 300  ವಸತಿ ಗೃಹಗಳ ಸಮುಚ್ಚಯ ನಿರ್ಮಾಣ ಮಾಡಲಾಗಿದ್ದು, ಇದಕ್ಕೆ ವಜ್ರಮಲೆ ಭವನ ಎಂದು ಹೆಸರಿಡಲಾಗಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಅವರೇ ಏ. 24 ರಂದು ಲೋಕಾರ್ಪಣೆಗೆ ಮಾಡಲಿದ್ದಾರೆ.

Tags:    

Similar News