BDA Denotification Scam | ಕುಮಾರಸ್ವಾಮಿ, ಯಡಿಯೂರಪ್ಪ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್‌

ಈ ಹಗರಣದಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಎಷ್ಟು ಪಾಲು ಮಾಡಿಕೊಂಡಿದ್ದಾರೆ ಎಂದು ಹೇಳಬೇಕು. ಯಡಿಯೂರಪ್ಪ ಅವರಿಗೆ 25 ಸಾವಿರ ದಂಡ ಹಾಕಿದ ಹೈಕೋರ್ಟ್ ತನಿಖೆ ಮುಂದುವರೆಸಿ ಎಂದು 2021 ರಲ್ಲಿ ಲೋಕಾಯುಕ್ತಕ್ಕೆ ಹೇಳಿದರೂ ಏಕೆ ತನಿಖೆ ಮುಂದುವರಿಯುತ್ತಿಲ್ಲ. ಇದರ ಬಗ್ಗೆ ಕುಮಾರಸ್ವಾಮಿ, ಯಡಿಯೂರಪ್ಪ ಸ್ಪಷ್ಟವಾದ ಉತ್ತರಗಳನ್ನು ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.;

Update: 2024-09-19 13:23 GMT

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಸೇರಿಕೊಂಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೋಟಿಫಿಕೇಷನ್ ಮಾಡಿದ್ದ 1 ಎಕರೆ 11 ಗುಂಟೆ ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಡಿನೋಟಿಫಿಕೇಷನ್ ಮಾಡಿಕೊಳ್ಳುವ ಮೂಲಕ ದೊಡ್ಡ ಹಗರಣ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಕಾಂಗ್ರೆಸ್‌ ಕಚೇರಿಯಲ್ಲಿ  ಪತ್ರಿಕಾಗೋಷ್ಠಿ ನಡೆಸಿದ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌ ಮತ್ತು ಸಂತೋಷ್‌ ಲಾಡ್‌ ಅವರು ಕುಮಾರಸ್ವಾಮಿ  ಅವರು ಯಡಿಯೂರಪ್ಪ ಸಹಾಯ ಪಡೆದು ಡಿನೋಟಿಫಿಕೇಷನ್‌ ಹಗರಣ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣದ ಮುಖ್ಯ ರೂವಾರಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪನವರು ಉತ್ತರ ಕೊಡಬೇಕು. ಮುಖ್ಯವಾಗಿ ಬಿಜೆಪಿಯವರು ನಾವು ಬಿಡುಗಡೆ ಮಾಡುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ರಾಜ್ಯಪಾಲರಿಗೆ ನೀಡಿ ಮತ್ತೊಮ್ಮೆ ತನಿಖೆಗೆ ಆದೇಶಿಸಿ ಎಂದು ಅವರಲ್ಲಿ ಮನವಿ ಮಾಡಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ತನಿಖೆ ನಡೆಸಿ ಎಂದು ರಾಜ್ಯಪಾಲರಿಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಮಠದಹಳ್ಳಿ ವ್ಯಾಪ್ತಿಯ ಗಂಗೇನಹಳ್ಳಿಯ ಸರ್ವೇ 7 (1ಸಿ), 7 ಬಿ, 7 ಸಿ, ನಂಬರ್ ಗಳ ಭೂಮಿಯನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕೆ ಎಂದು 1976 ರಲ್ಲಿ 1 ಎಕರೆ 11 ಗುಂಟೆ ಜಮೀನನ್ನು ಸ್ವಾಧೀನ ಮಾಡಿಕೊಂಡಿರುತ್ತಾರೆ. 1978 ಕ್ಕೆ ಸಂಪೂರ್ಣ ಭೂಸ್ವಾಧೀನ ಮುಗಿದು ಹೋಗಿರುತ್ತದೆ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ: ಆರೋಪಿಸಿದ್ದಾರೆ.

ಈ ಭೂಮಿಗೆ ಸಂಬಂದವೇ ಇಲ್ಲದ ಜಮೀನು ಮೂಲ ಮಾಲೀಕರಿಗೂ ಸಂಬಂಧ ಪಡದ ದಾರಿಯಲ್ಲಿ ಹೋಗುವ ದಾಸಯ್ಯ ರಾಜಶೇಖರಯ್ಯ ಎನ್ನುವ ವ್ಯಕ್ತಿ ಡಿನೋಟಿಫಿಕೇಷನ್ ಮಾಡಿ ಎಂದು 2007 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರಿಗೆ ಅರ್ಜಿ ನೀಡುತ್ತಾನೆ. ಈ ರಾಜಶೇಖರಯ್ಯ ಎನ್ನುವ ವ್ಯಕ್ತಿ ಯಾರು ಎಂಬುದೇ ಇದುವರೆಗೂ ಯಾರಿಗೂ ಗೊತ್ತಿಲ್ಲ. ಡಿನೋಟಿಫಿಕೇಷನ್ ಮಾಡಿ ಎಂದು ಬಂದಿದ್ದ ಅರ್ಜಿಯನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಕ್ರಮಕ್ಕೆ ಮುಂದಾಗುತ್ತಾರೆ. ಇದು ಮೂವತ್ತು ವರ್ಷದ ಹಿಂದೆ ನಡೆದ ಪ್ರಕರಣ ಎಂದರೂ ಮತ್ತೊಮ್ಮೆ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು  ಕುಮಾರಸ್ವಾಮಿ ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಈ ಭೂಸ್ವಾಧೀನ ಆಗಿರುವ ಭೂಮಿಯ ನಿಜವಾದ ಮಾಲೀಕರಾದ 21 ಜನರ ಜೊತೆಗೆ ಕುಮಾರಸ್ವಾಮಿ ಅವರ ಅತ್ತೆ ಜಿಪಿಎ ಮಾಡಿಕೊಂಡಿದ್ದಾರೆ. ಆನಂತರ ಸಮ್ಮಿಶ್ರ ಸರ್ಕಾರ ಬಿದ್ದು ಹೋದ ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ಈ ಫೈಲ್ ಅನ್ನು ಪುಟ್ ಅಪ್ ಮಾಡುತ್ತಾರೆ. ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಜ್ಯೋತಿ ರಾಮಲಿಂಗಂ ಅವರು ಈ ಪ್ರಕರಣ ಡಿ ನೋಟಿಫಿಕೇಶನ್ ಗೆ ಅರ್ಹವಲ್ಲ ಎಂದು ಷರಾ ಬರೆಯುತ್ತಾರೆ. ಅಧಿಕಾರಿಗಳ ಎಲ್ಲಾ ಸೂಚನೆಗಳನ್ನು ಗಾಳಿಗೆ ತೂರಿದ ಯಡಿಯೂರಪ್ಪ ಅವರು ಈ ಭೂಮಿಯನ್ನು ಭೂಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು 2009 ರಲ್ಲಿ ತಮ್ಮ ಕೈಯಾರೆ ಬರೆಯುತ್ತಾರೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಡಿನೋಟಿಫಿಕೇಷನ್ ಆದ ಜಮೀನು ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ಅವರ ಭಾಮೈದನ ಹೆಸರಿಗೆ ರಿಜಿಸ್ಟರ್ ಆಗುತ್ತದೆ. ಇದೊಂದು ವ್ಯವಸ್ಥಿತವಾದ ದರೋಡೆ. ಸತ್ತವರಿಂದ ಕುಮಾರಸ್ವಾಮಿ ಅವರ ಅತ್ತೆಯ ಹೆಸರಿಗೆ ಜಿಪಿಎ ಆಗುತ್ತದೆ, ಆನಂತರ ಭಾಮೈದನ ಹೆಸರಿಗೆ ರಿಜಿಸ್ಟರ್ ಆಗುತ್ತದೆ. ನೂರಾರು ಕೋಟಿ ಬೆಲೆ ಬಾಳುವ 1.11 ಎಕರೆ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿ, ಬಿಡಿಎ ಬಡವರಿಗೆ ಎಂದು ಮೀಸಲಿಟ್ಟಿದ್ದ ಭೂಮಿಯನ್ನು ನುಂಗಿ ಹಾಕಿರುವುದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಲೋಕಾಯುಕ್ತರು ಈ ಪ್ರಕರಣದ ತನಿಖೆ ನಡೆಸುತ್ತದೆ. ಈ ಪ್ರಕರಣವನ್ನು ವಜಾ ಮಾಡಬೇಕೆಂದು ಯಡಿಯೂರಪ್ಪನವರು ಹೈಕೋರ್ಟಿಗೆ ಸಲ್ಲಿಸುತ್ತಾರೆ. ಹೈಕೋರ್ಟ್ ಯಡಿಯೂರಪ್ಪನವರ ಅರ್ಜಿಯನ್ನು ವಜಾ ಮಾಡಿ ಅವರಿಗೆ 25,000 ದಂಡ ಹಾಕುತ್ತದೆ. ಹಾಗಾಗಿ ಕೂಡಲೇ ಲೋಕಾಯುಕ್ತದವರು ತಮ್ಮ ತನಿಖೆಯನ್ನು ಪೂರೈಸಿ ತಕ್ಷಣ ವರದಿಯನ್ನು ನೀಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅನಿತಾ ಕುಮಾರಸ್ವಾಮಿಗೇನು ಸಂಬಂಧ?

ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ದಲಿತರ ಭೂಮಿಯನ್ನು ನುಂಗಿದ್ದಾರೆ ಎಂದು ಯಾವುದೇ ದಾಖಲೆಗಳು ಇಲ್ಲದಿದ್ದರೂ ಅವರ ಮೇಲೆ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಅನಾಮಿಕರು ಬಂದು ಗಂಗೇನಹಳ್ಳಿಯ ಭೂಮಿಯ ಮೇಲೆ ಅರ್ಜಿ ಕೊಡುತ್ತಾರೆ. ಅದಕ್ಕೆ ಕೂಡಲೇ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಸ್ಪಂದನೆ ಮಾಡುತ್ತಾರೆ. ಆನಂತರ ಎಲ್ಲಾ ಕೆಲಸವೂ ಕುಮಾರಸ್ವಾಮಿ ಅವರ ಕುಟುಂಬದ ಪರವಾಗಿ ನಡೆದು ಅವರ ಕುಟುಂಬದವರಿಗೆ ಆಸ್ತಿ ತಲುಪುತ್ತದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಹೋಗುವ ತನಕ ಇದನ್ನು ಫಾಲೋ ಅಪ್ ಮಾಡುತ್ತಲೆ ಇರುತ್ತಾರೆ ಎಂದು ಅನೇಕ ಅಂಶಗಳನ್ನು ಬಯಲಿಗೆಳೆದರು

ಕುಮಾರಸ್ವಾಮಿ ಅವರ ಹೆಂಡತಿ ಅನಿತಾ ಕುಮಾರಸ್ವಾಮಿ ಅವರ ತಾಯಿಗೂ ಈ ಜಮೀನಿಗೂ ಸಂಬಂಧವೇ ಇಲ್ಲ. ಆದರೂ ಅವರ ಹೆಸರಿಗೆ 20 ದಿನಗಳಲ್ಲಿ ಜಿಪಿಎ ಆಗುತ್ತದೆ. ಕುಮಾರಸ್ವಾಮಿ ಅವರ ಅತ್ತೆ ವಿಮಲಾ ಅವರು ತಮ್ಮ ಮಗನಾದ ಚಂದ್ರಪ್ಪ ಅವರಿಗೆ ಮಾರಾಟ ಮಾಡಿರುವುದು ನಿಜವೋ ಸುಳ್ಳೋ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು. ಈ ಹಗರಣದಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ಎಷ್ಟು ಪಾಲು ಮಾಡಿಕೊಂಡಿದ್ದಾರೆ ಎಂದು ಹೇಳಬೇಕು. ಯಡಿಯೂರಪ್ಪ ಅವರಿಗೆ 25 ಸಾವಿರ ದಂಡ ಹಾಕಿದ ಹೈಕೋರ್ಟ್ ತನಿಖೆ ಮುಂದುವರೆಸಿ ಎಂದು 2021 ರಲ್ಲಿ ಲೋಕಾಯುಕ್ತಕ್ಕೆ ಹೇಳಿದರೂ ಸಹ ಏಕೆ ತನಿಖೆ ಮುಂದುವರೆಯುತ್ತಿಲ್ಲ. ಇದರ ಬಗ್ಗೆ  ಕುಮಾರಸ್ವಾಮಿ, ಯಡಿಯೂರಪ್ಪ ಸ್ಪಷ್ಟವಾದ ಉತ್ತರಗಳನ್ನು ನೀಡಬೇಕು.

ದಾಖಲೆಗಳಿವೆ

ಸಚಿವರಾದ ಸಂತೋಷ್ ಲಾಡ್ ಮಾತನಾಡಿ, ನಾವು ಮಾಡುವ ಆರೋಪಗಳು ದಾಖಲೆ ಸಮೇತ ಇವೆ. ಬಿಜೆಪಿ ಮಾಡಿರುವ ಆರೋಪಗಳಿಗೆ ಇದುವರೆಗೂ ಯಾವುದೇ ದಾಖಲೆಗಲಿಲ್ಲ. ಈ ಹಗರಣದ ಮುಖ್ಯ ರೂವಾರಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪನವರು ಉತ್ತರ ಕೊಡಬೇಕು. ಮುಖ್ಯವಾಗಿ ಬಿಜೆಪಿಯವರು ನಾವು ಬಿಡುಗಡೆ ಮಾಡುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ರಾಜ್ಯಪಾಲರಿಗೆ ನೀಡಿ ಮತ್ತೊಮ್ಮೆ ತನಿಖೆಗೆ ಆದೇಶಿಸಿ ಎಂದು ಅವರಲ್ಲಿ ಮನವಿ ಮಾಡಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ತನಿಖೆ ನಡೆಸಿ ಎಂದು ರಾಜ್ಯಪಾಲರಿಗೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಭೂಮಿಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಅನೇಕ ವಿಚಾರಗಳು ಚರ್ಚೆಯಾಗುತ್ತಿವೆ. ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಅನೇಕ ಸುಳ್ಳು ಆರೋಪಗಳನ್ನು ಮಾಡಿ, ಒಂದೇ ಸುಳ್ಳನ್ನು ಮೂರು ಬಾರಿ ಹೇಳಿ ಅದನ್ನೆ ನಿಜ ಎಂದು ಜನರಿಗೆ ನಂಬಿಸುವ ಕೆಲಸ ಆಗುತ್ತಿದೆ. ವಿರೋಧ ಪಕ್ಷಗಳ ಅನೇಕರೆ ಹಲವು ಪ್ರಕರಣಗಳನ್ನು ಎದುರಿಸಿ ಅದರ ತನಿಖೆ ನಡೆದು ಪ್ರಾಸಿಕ್ಯೂಷನ್ ಗೆ ನೀಡಿರುವ ಸಂದರ್ಭವನ್ನು ನಾವು ನೋಡಿದ್ದೇವೆ. ಅಲ್ಲದೇ ಅನೇಕ ಪ್ರಕರಣಗಳು ರಾಜ್ಯಪಾಲರ ಮುಂದೆ ಇದ್ದರೂ ಸಹ ಪಕ್ಷಪಾತಿ ಧೋರಣೆ ಅನುಸರಿಸುತ್ತಿರುವ ಅವರು ತನಿಖೆಗೆ ಅನುಮತಿ ನೀಡದೆ ಇರುವುದನ್ನು ನಾವು ಪ್ರತ್ಯಕ್ಷವಾಗಿ ನೋಡುತ್ತಾ ಇದ್ದೇವೆ ಎಂದು  ಮೂವರೂ ಸಚಿವರು ಆರೋಪಿಸಿದ್ದಾರೆ.

Tags:    

Similar News