Alcohol Test | ಮದ್ಯ ಸೇವನೆಗೆ ಉಸಿರಾಟ ವಿಶ್ಲೇಷಣೆ ಪುರಾವೆ ಅಲ್ಲ; ಪಾಟ್ನಾ ಹೈಕೋರ್ಟ್‌

ಕಿಶನ್‌ಪುರದ ಉಪವಿಭಾಗೀಯ ಕಚೇರಿ ಗುಮಾಸ್ತರೊಬ್ಬರು ಮದ್ಯ ಸೇವಿಸಿ ಕೆಲಸಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಗುಮಾಸ್ತನ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು.;

Update: 2025-02-20 10:34 GMT
ಪಾಟ್ನಾ ಹೈಕೋರ್ಟ್‌

ಮದ್ಯ ಸೇವನೆ ಖಚಿತಪಡಿಸಿಕೊಳ್ಳಲು ವ್ಯಕ್ತಿಯ ಉಸಿರಾಟ ವಿಶ್ಲೇಷಣಾ ವರದಿಯೇ ನಿರ್ಣಾಯಕ ಪುರಾವೆ ಅಲ್ಲ ಎಂದು ಪಾಟ್ನಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಒಬ್ಬ ವ್ಯಕ್ತಿ ಮದ್ಯ ಸೇವಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿ ಮತ್ತು ಮೂತ್ರ ಪರೀಕ್ಷೆ ಸರಿಯಾದ ವಿಧಾನವಾಗಿದೆ ಎಂದು ನ್ಯಾಯಮೂರ್ತಿ ಬಿಬೇಕ್‌ ಚೌಧರಿ ನೇತೃತ್ವದ ಏಕಸದಸ್ಯ ಪೀಠ ಆದೇಶ ನೀಡಿದೆ. 

ಕಿಶನ್‌ಪುರದ ಉಪವಿಭಾಗೀಯ ಕಚೇರಿ ಗುಮಾಸ್ತರೊಬ್ಬರು ಮದ್ಯ ಸೇವಿಸಿ ಕೆಲಸಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಗುಮಾಸ್ತನ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು.  

ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರು ಮತ್ತು ಸರ್ಕಾರಿ ವಕೀಲರ ವಾದ ಹಾಗೂ ದಾಖಲೆಯಲ್ಲಿರುವ ಸಂಪೂರ್ಣ ಸಾಕ್ಷ್ಯವನ್ನು ಪರಿಶೀಲಿಸಿ, ಉಸಿರಾಟ ವಿಶ್ಲೇಷಣಾ ವರದಿಯೇ ವ್ಯಕ್ತಿಯೊಬ್ಬರು ಮದ್ಯ ಸೇವಿಸಿದ ಬಗ್ಗೆ ನಿರ್ಣಾಯಕ ಪುರಾವೆಯಲ್ಲ ಎಂದು ಹೇಳಿದೆ.

ಬಂಧಿತ ಗುಮಾಸ್ತ, ವಿಚಾರಣೆ ಬಾಕಿ ಇರುವಾಗಲೇ ಮೃತಪಟ್ಟಿದ್ದ. ತಮ್ಮ ಪತಿಯನ್ನು ಸೇವೆಯಿಂದ ಅಮಾನತು ಮಾಡಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಗುಮಾಸ್ತನ ಪತ್ನಿಯು ಹೈಕೋರ್ಟ್‌ಗೆ ದಾವೆ ಹೂಡಿದ್ದರು. ʼನನ್ನ ಪತಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಹೀಗಾಗಿ ಆಲ್ಕೋಹಾಲ್‌ ಅಂಶವನ್ನು ಒಳಗೊಂಡಿರುವ ಕೆಮ್ಮಿನ ಸಿರಪ್ ಸೇವಿಸಿದ್ದರು. ಪೊಲೀಸರು ತಮ್ಮ ಪತಿಯ ರಕ್ತ ಮತ್ತು ಮೂತ್ರದ ಮಾದರಿ ಪರೀಕ್ಷಿಸದೇ ಮದ್ಯ ಸೇವಿಸಿದ್ದಾರೆಂದು ನಿರ್ಣಯಿಸಿ ದೂರು ದಾಖಲಿಸಿದ್ದರುʼ ಎಂದು ದೂರಿದ್ದರು.

ಗುಮಾಸ್ತನನ್ನು ಬಂಧಿಸಿದಾಗ ಆತ ತೂರಾಡುತ್ತಿದ್ದ. ತೊದಲುತ್ತಿದ್ದ, ಇಲ್ಲವೇ ತೇಲುಗಣ್ಣು ಮಾಡುತ್ತಿದ್ದ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಕೇವಲ ಮದ್ಯದ ವಾಸನೆ ಬಡಿದ ಮಾತ್ರಕ್ಕೆ ಮದ್ಯ ಸೇವಿಸಿದ್ದಾನೆ ಎಂದು ನಿರ್ಣಯಿಸಲಾಗದು ಎಂಬ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ ನ್ಯಾಯಪೀಠ, ಈ ಮಹತ್ವದ ಆದೇಶ ಹೊರಡಿಸಿದೆ.

Tags:    

Similar News