ಪಬ್ಲಿಕ್ ಪರೀಕ್ಷೆ | ಇಂದೇ ಫಲಿತಾಂಶ ಎಂದ ಇಲಾಖೆ: ಲೋಪ ಇದ್ದಲ್ಲಿ ವಿತ್‌ ಹೆಲ್ಡ್‌ ಎಂದ ಕ್ಯಾಮ್ಸ್‌

ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ನಿಗದಿತ ದಿನಾಂಕಕ್ಕಿಂತ ಎರಡು ದಿನ ಮುಂಚೆಗೆ ಹಿಂದಕ್ಕೆ ಹಾಕಿ, ಅವಸರದಲ್ಲಿ ಫಲಿತಾಂಶ ಪ್ರಕಟಿಸಲು ಮುಂದಾಗಿರುವ ಇಲಾಖೆ, ಮೌಲ್ಯಮಾಪನ ಲೋಪಗಳ ಹಿನ್ನೆಲೆಯಲ್ಲಿ ತರಾತುರಿ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಲಾಗಿದೆ;

Update: 2024-04-08 03:46 GMT

ಪರೀಕ್ಷೆ ವೇಳಾಪಟ್ಟಿಯಿಂದ ಮೌಲ್ಯಮಾಪನದವರೆಗೆ ಸಂಪೂರ್ಣ ಗೊಂದಲ ಮತ್ತು ಅವ್ಯವಸ್ಥೆಯಿಂದಲೇ ಕೂಡಿದ್ದ 5, 8 ಮತ್ತು 9 ನೇ ತರಗತಿಯ ಬೋರ್ಡ್‌ ಪರೀಕ್ಷೆ(ಪಬ್ಲಿಕ್‌ ಪರೀಕ್ಷೆ)ಯ ಫಲಿತಾಂಶವನ್ನು ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೋಮವಾರವೇ(ಏ. 8 )ರಂದು ಪ್ರಕಟಿಸಲಿದೆ.

ಸೋಮವಾರ ಬೆಳಿಗ್ಗೆ 9  ಗಂಟೆಯ ಒಳಗೆ ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸುವಂತೆ ಇಲಾಖೆ ಏ. 6 ರಂದು ಆದೇಶ ಹೊರಡಿಸಿದೆ. 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರು, ಶಾಲಾ ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಏ. 8 ರಂದು ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಸಬೇಕು ಮತ್ತು ಅಂದು 9 ಗಂಟೆಯೊಳಗೆ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿದ್ದಾರೆ. ಆದರೆ, ಈ ಹಿಂದಿನ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, ಪ್ರಾಥಮಿಕ ಶಾಲೆಗಳಿಗೆ ಮಾತ್ರ  ಏ. 8 ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಸುವಂತೆಯೂ, ಪ್ರೌಢಶಾಲಾ ಹಂತದ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಏ. 10 ರಂದು ನಡೆಸುವಂತೆಯೂ ಸೂಚಿಸಲಾಗಿತ್ತು.


ಇದೀಗ ಪಬ್ಲಿಕ್‌ ಪರೀಕ್ಷೆ ಮೌಲ್ಯಮಾಪನದಲ್ಲಿ ಗಂಭೀರ ಲೋಪಗಳಾಗಿವೆ. ಇದರಿಂದ ಲಕ್ಷಾಂತರ ಮಕ್ಕಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಮರು ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಿ, ಆಗಿರುವ ಲೋಪಗಳನ್ನು ಸರಿಪಡಿಸಿ, ಎಲ್ಲಾ ಉತ್ತರಪತ್ರಿಕೆಗಳ ಲೋಪ ಸರಿಪಡಿಸಿ ನ್ಯಾಯಯುತವಾಗಿ ಮೌಲ್ಯಮಾಪನ ಮಾಡಿ ಮುಗಿಸುವವರೆಗೆ ಅವಸರದಲ್ಲಿ ಫಲಿತಾಂಶ ಪ್ರಕಟಿಸಬಾರದು ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್)‌ ಇಲಾಖೆಯನ್ನು ಒತ್ತಾಯಿಸಿದ ಬೆನ್ನಲ್ಲೇ ಇಲಾಖೆ ಅವಸರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಒಂದೇ ದಿನ ಸಮುದಾಯದತ್ತ ಶಾಲಾ ಕಾರ್ಯಕ್ರಮ ಘೋಷಿಸಿ, ಬೆಳಿಗ್ಗೆ ಒಂಭತ್ತು ಗಂಟೆಯ ಒಳಗೇ ಫಲಿತಾಂಶ ಪ್ರಕಟಿಸುವಂತೆ ಮತ್ತು ಫಲಿತಾಂಶ ಪ್ರಕಟಿಸಿದ ಬಗ್ಗೆ ವರದಿ ಸಲ್ಲಿಸುವಂತೆ ಪ್ರತಿ ಶಾಲೆಗೂ ಕಟ್ಟುನಿಟ್ಟಿನ ಆದೇಶ ನೀಡಿರುವುದು ಅನುಮಾನಕ್ಕೆ ಎಡೆಮಾಡಿದೆ.

ಮೌಲ್ಯಮಾಪನ ಅವ್ಯವಸ್ಥೆ, ಅವಾಂತರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಅವಸರದಲ್ಲಿ ಫಲಿತಾಂಶ ಪ್ರಕಟಿಸಿ ಕೈತೊಳೆದುಕೊಳ್ಳಲು ಮುಂದಾಗಿದೆಯೇ? ಮಕ್ಕಳು ಮತ್ತು ಪೋಷಕರು ಮೌಲ್ಯಮಾಪನ ಅವಾಂತರದ ಬಗ್ಗೆ ದನಿ ಎತ್ತುವ ಮುನ್ನೇ ಫಲಿತಾಂಶ ಪ್ರಕಟಿಸಿ ಬೀಸುವ ದೊಣ್ಣೆಯಿಂದ ಪಾರಾಗುವ ಲೆಕ್ಕಾಚಾರ ಇಲಾಖೆಯದ್ದೇ? ಎಂಬ ಅನುಮಾನಗಳನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.

ಲೋಪವಿದ್ದಲ್ಲಿ ಫಲಿತಾಂಶ ವಿತ್‌ ಹೆಲ್ಡ್‌

ಈ ನಡುವೆ, ಮೌಲ್ಯಮಾಪನದ ಗಂಭೀರ ಲೋಪಗಳ ಕುರಿತು ಇಲಾಖೆಯ ಮುಖ್ಯಸ್ಥರು, ಆಯುಕ್ತರ ಗಮನಕ್ಕೆ ತರಲಾಗಿದ್ದರೂ, ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಿದ್ದರೂ ಅದಾವುದನ್ನೂ ಪರಿಗಣಿಸದೆ ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲು ಮುಂದಾಗಿರುವ ಇಲಾಖೆಯ ಕ್ರಮವನ್ನು ಕ್ಯಾಮ್ಸ್‌ ಖಂಡಿಸಿದೆ. 

ಈ ಕುರಿತು ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್‌, "ನಾವು ಈಗಾಗಲೇ ಮೌಲ್ಯಮಾಪನ ಗಂಭೀರ ಲೋಪಗಳ ಕುರಿತು ಇಲಾಖೆಯ ಆಯುಕ್ತರ ಗಮನ ಸೆಳೆದಿದ್ದೇವೆ. ಲೋಪಗಳನ್ನು ಸರಿಪಡಿಸಲು ಮರು ಮೌಲ್ಯಮಾಪನ ನಡಸಿ, ಮಕ್ಕಳಿಗೆ ನ್ಯಾಯ ಕೊಡಿ ಎಂದು ಕೇಳಿದ್ದೇವೆ. ಆದರೂ ಇಲಾಖೆ ಅವಸರದಲ್ಲಿ ಫಲಿತಾಂಶ ಪ್ರಕಟಿಸಲು ಮುಂದಾಗಿದೆ. ಈಗ ನಮಗೆ ಬೇರೆ ದಾರಿಯೇ ಇಲ್ಲ. ಮೌಲ್ಯಮಾಪನ ಲೋಪ ಕಂಡುಬಂದ ಉತ್ತರಪತ್ರಿಕೆಗಳ ಫಲಿತಾಂಶವನ್ನು ತಡೆ  ಹಿಡಿದು(ವಿತ್‌ ಹೆಲ್ಡ್)‌ ಉಳಿದ ವಿಷಯಗಳ ಫಲಿತಾಂಶವನ್ನು ಮಾತ್ರ ಪ್ರಕಟಿಸಲು ನಾವು(ಕ್ಯಾಮ್ಸ್)‌ ನಿರ್ಧರಿಸಿದ್ದೇವೆ. ಆದರೆ, ಬಹುತೇಕ ವಿಷಯಗಳ ಮೌಲ್ಯಮಾಪನ ಕಾಟಾಚಾರದಿಂದ ಕೂಡಿದೆ. ಹಾಗಾಗಿ ಮಕ್ಕಳಿಗೆ ಹೇಗೆ ಸಮಾಧಾನ ಹೇಳುವುದು? ಪೋಷಕರನ್ನು ಹೇಗೆ ನಿಭಾಯಿಸುವುದು ಎಂಬುದೇ ಸಮಸ್ಯೆ" ಎಂದು ಹೇಳಿದರು.


Tags:    

Similar News