ಪಬ್ಲಿಕ್ ಪರೀಕ್ಷೆ ಅವಾಂತರ | ಸ್ಯಾಟ್ಸ್ ಅಪ್ಲೋಡ್ ಆಗದೆ ದಾಖಲಾತಿ ಬಿಕ್ಕಟ್ಟು
ಸ್ಯಾಟ್ಸ್‌ಗೆ 5, 8 ಮತ್ತು 9ನೇ ತರಗತಿ ಫಲಿತಾಂಶ ಅಪ್‌ಡೇಟ್ ಆಗಿಲ್ಲ. ಹಾಗಾಗಿ ಪಬ್ಲಿಕ್ ಪರೀಕ್ಷೆಯ ಗೊಂದಲದ ಭೂತ ಇನ್ನಷ್ಟು ದಿನ ಕಾಡಲಿದೆ. ಮಕ್ಕಳ ಪ್ರವೇಶಾತಿ ಮತ್ತು ಶಾಲೆ ಬದಲಾವಣೆಯ ಕೆಲಸಗಳಿಗೆ ಇನ್ನೂ ಕೆಲವು ದಿನ ಕಾಯಬೇಕಾಗಬಹುದು. ರಾಜ್ಯದ 30 ಲಕ್ಷ ಮಕ್ಕಳ ಆತಂಕ ಇನ್ನೂ ಮುಂದುವರಿದಿದೆ.;
ಬಹುತೇಕ ಖಾಸಗಿ ಶಾಲೆಗಳಲ್ಲಿ ಮುಂದಿನ ವಾರದಿಂದ ಪ್ರೌಢಶಾಲಾ ತರಗತಿಗಳು ಆರಂಭವಾಗುತ್ತಿವೆ. ಆದರ್ಶ, ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ವಸತಿ ಶಾಲೆಗಳ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿವೆ. ಆದರೆ, 5, 8 ಮತ್ತು 9ನೇ ತರಗತಿ ಪರೀಕ್ಷೆಗಳ ಫಲಿತಾಂಶ ಅಧಿಕೃತವಾಗಿ ಇನ್ನೂ ಪ್ರಕಟವಾಗಿಲ್ಲ, ಸ್ಯಾಟ್ಸ್‌ನಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಮತ್ತು ಇತರೆ ವಿವರಗಳು ಅಪ್ಡೇಟ್ ಆಗಿಲ್ಲ!
ಮುಂದಿನ ತರಗತಿಗೆ ದಾಖಲಾತಿಗೆ, ಶಾಲೆ ಬದಲಾವಣೆಗೆ ಅಗತ್ಯವಾಗಿ ಬೇಕಾದ ಸ್ಯಾಟ್ಸ್(Students Achiement Tracking System) ತಂತ್ರಾಂಶದಲ್ಲಿ 5, 8, 9 ನೇ ತರಗತಿ ಮಕ್ಕಳ ಫಲಿತಾಂಶ ಮಾಹಿತಿ ಅಪ್ಡೇಟ್ ಆಗಿಲ್ಲ. ಹಾಗಾಗಿ ಶಾಲೆ ಬದಲಾಯಿಸುವವರು, ವಸತಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಸುವವರು ಮತ್ತು ಇರುವ ಶಾಲೆಗಳಲ್ಲೇ ಮುಂದಿನ ತರಗತಿಗೆ ದಾಖಲಾತಿ ಮಾಡಿಸುವವರು ಸೇರಿದಂತೆ ರಾಜ್ಯದ 30 ಲಕ್ಷ ಮಕ್ಕಳ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳಿಗೆ ಆತಂಕ ಎದುರಾಗಿದೆ.
ಬೋರ್ಡ್ ಪರೀಕ್ಷೆ(ಪಬ್ಲಿಕ್ ಪರೀಕ್ಷೆ) ವಿಷಯದಲ್ಲಿ ಕೋರ್ಟ್ ಮೆಟ್ಟಿಲೇರಿರುವ ಶಾಲಾ ಶಿಕ್ಷಣ ಇಲಾಖೆ, ಪ್ರಕರಣದ ವಿಷಯದಲ್ಲಿ ವಿಳಂಬ ಧೋರಣೆ ತಳೆಯುತ್ತಿದ್ದು, ಕೋರ್ಟಿನ ಸೂಚನೆಯ ಹೊರತಾಗಿಯೂ ನಿಗದಿತ ದಿನದಂದ ತನ್ನ ಹೇಳಿಕೆ ದಾಖಲಿಸಲು ಇಲಾಖೆ ವಿಫಲವಾಗಿದೆ. ಹಾಗಾಗಿ ಕಳೆದ ಏ.23ರಂದು ಪ್ರಕರಣದ ತೀರ್ಪು ಮುಂದೆ ಹೋಗಿದೆ. ಕೊನೆಗೆ ಏ.30ರಂದು ನೀಡಿದ್ದ ಎರಡನೇ ಗಡುವಿನ ದಿನವೂ ಪ್ರಕರಣ ಪೀಠದ ಮುಂದೆ ಬಂದಿಲ್ಲ. ಹಾಗಾಗಿ ಪದೇಪದೆ ವಿಷಯದ ಮುಂದೆ ಹೋಗುತ್ತಿದ್ದು, ಅಧಿಕೃತವಾಗಿ ಫಲಿತಾಂಶವನ್ನು ಸ್ಯಾಟ್‌ಗೆ ಅಪ್ಲೋಡ್ ಮಾಡುವುದು ಇನ್ನಷ್ಟು ವಿಳಂಬವಾಗಬಹುದು ಎಂದು ಇಲಾಖೆಯ ಮೂಲಗಳು ಹೇಳುತ್ತಿವೆ.
ಹಾಗಾಗಿ 5, 8 ಮತ್ತು 9ನೇ ತರಗತಿಯ ಮಕ್ಕಳು ಮತ್ತು ಮಕ್ಕಳ ಪೋಷಕರಿಗೆ ಪಬ್ಲಿಕ್ ಪರೀಕ್ಷೆಯ ಗೊಂದಲದ ಭೂತ ಇನ್ನಷ್ಟು ದಿನ ಕಾಡಲಿದೆ. ಮಕ್ಕಳ ಪ್ರವೇಶಾತಿ ಮತ್ತು ಶಾಲೆ ಬದಲಾವಣೆಯ ಕೆಲಸಗಳಿಗೆ ಇನ್ನೂ ಕೆಲವು ದಿನ ಕಾಯಬೇಕಾಗಬಹುದು.
ಆದರೆ, ಈಗಾಗಲೇ ಪರೀಕ್ಷೆ ಮತ್ತು ಫಲಿತಾಂಶದ ವಿಷಯದಲ್ಲಿ ಇಲಾಖೆಯ ಹೊಣೆಗೇಡಿತನದಿಂದಾಗಿ ಸಾಕಷ್ಟು ಗೊಂದಲ, ಆತಂಕವನ್ನು ಅನುಭವಿಸಿರುವ ನಾವು, ಇನ್ನೂ ಎಷ್ಟು ದಿನ ಈ ಇಲಾಖೆಯ ಬೇಜವಾಬ್ದಾರಿಗೆ ಹೊಣೆಯಾಗಬೇಕು ಎಂದು ಪೋಷಕರು ಕೇಳುತ್ತಿದ್ದಾರೆ.
“ಮಾರ್ಚ್ ಮೊದಲ ವಾರದಿಂದ ಶುರುವಾಗಿರುವ ಈ ಪಬ್ಲಿಕ್ ಪರೀಕ್ಷೆ ಕುರಿತು ಇಲಾಖೆಯ ಕಣ್ಣಾಮುಚ್ಚಾಲೆ ಆಟ ಬರೋಬ್ಬರಿ ಎರಡು ತಿಂಗಳ ಬಳಿಕವೂ ಮುಂದುವರಿದಿದೆ. ಪರೀಕ್ಷೆ ಇದೆ, ಇಲ್ಲ,.. ಎಂಬ ಗೊಂದಲದಲ್ಲೇ 10-14 ವರ್ಷ ವಯಸ್ಸಿನ ಚಿಕ್ಕಮಕ್ಕಳು ಬರೋಬ್ಬರಿ ಒಂದು ತಿಂಗಳ ಸುದೀರ್ಘ ಅವಧಿಗೆ ಪರೀಕ್ಷೆ ಬರೆದರು. ಆ ಬಳಿಕ ಫಲಿತಾಂಶಕ್ಕಾಗಿ ಮಕ್ಕಳನ್ನು ಮತ್ತೆ ಸತಾಯಿಸಲಾಯಿತು. ಇದೀಗ ಮಕ್ಕಳ ಮುಂದಿನ ತರಗತಿ ಅಡ್ಮಿಷನ್, ಶಾಲೆ ಬದಲಾವಣೆ, ವಸತಿ ಶಾಲೆ ಪ್ರವೇಶಕ್ಕೂ ಇಲಾಖೆ ದಾಖಲಾತಿ ಅಪ್ಲೋಡ್ ಮಾಡದೇ ಸತಾಯಿಸುತ್ತಿದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಇರಬೇಕಾಗಿದ್ದ ಇಲಾಖೆ, ಅದರ ಬದಲಿಗೆ ಚಿತ್ರಹಿಂಸೆ ಕೊಡಲು ಇರುವಂತಿದೆ. ಜನರ ತೆರಿಗೆ ಹಣದಲ್ಲಿ ಈ ಇಲಾಖೆಯನ್ನು ನಡೆಸುತ್ತಿರುವುದು ಮಕ್ಕಳು, ಪೋಷಕರ ಅನುಕೂಲಕ್ಕಾಗಿಯೋ ಅಥವಾ ಅವರಿಗೆ ಕಿರುಕುಳ ನೀಡಲೆಂದೋ ಎಂಬುದನ್ನು ಈ ಸರ್ಕಾರವೇ ಹೇಳಬೇಕು” ಎಂದು ಆದರ್ಶ ವಿದ್ಯಾಲಯಕ್ಕೆ ಮಗುವಿನ ಪ್ರವೇಶಕ್ಕಾಗಿ ಸ್ಯಾಟ್ಸ್ ಮಾಹಿತಿ ಅಪ್ಲೋಡ್‌ಗಾಗಿ ಕಾಯುತ್ತಿರುವ ಬಾಗಲಕೋಟೆಯ ಪೋಷಕರೊಬ್ಬರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಸ್ಯಾಟ್ಸ್ ನಲ್ಲಿ ಮಕ್ಕಳ ಅಂಕಪಟ್ಟಿ ಮತ್ತು ಟಿಸಿ(ವರ್ಗಾವಣೆ ಪತ್ರ) ಅಪ್ಲೋಡ್ ಮಾಡದೇ ಪ್ರವೇಶ ನೀಡಲಾಗದು ಎಂಬ ಹಿನ್ನೆಲೆಯಲ್ಲಿ ಇಲಾಖೆಯ ವಿರುದ್ಧ ಪೋಷಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸಮಗ್ರ ಶಿಕ್ಷಣ ಯೋಜನಾ ನಿರ್ದೇಶಕರು, ಮೇ 7ಕ್ಕೆ ಇದ್ದ ಆದರ್ಶ ವಿದ್ಯಾಲಯ ಪ್ರವೇಶ ಗಡುವನ್ನು ಮೇ 18ರವರೆಗೆ ವಿಸ್ತರಿಸಿ ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳ ಧೋರಣೆ ನೋಡಿದರೆ ಮೇ 18ಕ್ಕೆ ಮುನ್ನ ಕೂಡ ಮಕ್ಕಳ ಮಾಹಿತಿ ಸ್ಯಾಟ್ಸ್‌ಗೆ ಸಂಪೂರ್ಣವಾಗಿ ಅಪ್ಲೋಡ್ ಆಗುವುದು ಅನುಮಾನವಿದೆ ಎಂದು ಇಲಾಖೆಯ ಆಂತರಿಕ ಮೂಲಗಳು ಹೇಳುತ್ತಿವೆ.
ಪೋಷಕರ ಈ ಆತಂಕದ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರನ್ನು ʼದ ಫೆಡರಲ್ ಕರ್ನಾಟಕʼ ಮಾತನಾಡಿಸಿದಾಗ, “ಸ್ಯಾಟ್ಸ್ ಅಪ್ಲೋಡ್ ಆಗದೇ ಇರುವ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲಿಸಲು ಹೇಳುವೆ. ಆದರೆ, ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ನಾವೇನೂ ಮಾಡಲಾಗದು” ಎಂದು ಕೈಚೆಲ್ಲಿದರು. ಕೋರ್ಟ್ ಪ್ರಕರಣದ ಪ್ರಸ್ತಾಪ ಮಾಡಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಇನ್ನು ಪಬ್ಲಿಕ್ ಪರೀಕ್ಷೆಯನ್ನು ನಡೆಸುವ ಸರ್ಕಾರ ನಿರ್ಧಾರ ಮಕ್ಕಳ ಹಕ್ಕುಗಳು ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ರುಪ್ಸಾ(ಖಾಸಗಿ ಶಾಲೆಗಳ ಸಂಘಟನೆ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರನ್ನು ́ದ ಫೆಡರಲ್ ಕರ್ನಾಟಕʼ ಸಂಪರ್ಕಿಸಿದಾಗ, “ಬೋರ್ಡ್ ಪರೀಕ್ಷೆ ನಡೆಸುವುದು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂಕೋರ್ಟ್, ಫಲಿತಾಂಶ ಪ್ರಕಟಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಜೊತೆಗೆ ಸರ್ಕಾರಕ್ಕೆ ಏ.23ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು. ಆದರೆ, ಸರ್ಕಾರ ಇನ್ನಷ್ಟು ಸಮಯ ಕೇಳಿತ್ತು. ಬಳಿಕ ಏ.30ರಂದು ಗಡುವು ನೀಡಿತ್ತು. ಆಗಲೂ ಪೀಠದ ಮುಂದೆ ವಿಷಯ ಬಂದಿಲ್ಲ. ಈಗ ಆಗುತ್ತಿರುವ ಎಲ್ಲಾ ಗೊಂದಲ, ವಿಳಂಬಕ್ಕೆ ಇಲಾಖೆಯ ಧೋರಣೆಯೇ ಕಾರಣ” ಎಂದು ಪ್ರತಿಕ್ರಿಯಿಸಿದರು.
ಮೊದಲೇ ಎಚ್ಚರಿಸಿದ್ದ ಸುಪ್ರೀಂಕೋರ್ಟ್
ಕಳೆದ ಏ.8 ರಂದು ಸರ್ವೋಚ್ಛ ನ್ಯಾಯಾಲಯ, ಬೋರ್ಡ್ ಪರೀಕ್ಷೆಯೇ ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟು, ಆ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲೂ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಕಟ್ಟಾಜ್ಞೆ ಹೊರಡಿಸಿತ್ತು. ಆದರೆ, ನ್ಯಾಯಾಲಯ ರಿಟ್ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ಸೂಚನೆ ಅರಿತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಿಂದಿನ ತಡ ರಾತ್ರಿ ಶಾಲಾ ಮುಖ್ಯಸ್ಥರಿಗೆ ಸುತ್ತೋಲೆ ಕಳಿಸಿ, ಏ.8ರಂದು ಬೆಳಿಗ್ಗೆ 9 ಗಂಟೆಯೊಳಗೆ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತ್ತು.
ಇಲಾಖೆಯ ಈ ರಂಗೋಲಿ ಕೆಳಗೆ ನುಸುಳುವ ಯತ್ನವನ್ನು ಗಮನಿಸಿದ್ದ ನ್ಯಾಯಾಲಯ, ಒಂದು ವೇಳೆ ತನ್ನ ಆದೇಶ ಹೊರಬೀಳುವ ಮುನ್ನ ಫಲಿತಾಂಶ ಪ್ರಕಟಿಸಿದರೂ ಅದನ್ನು ತಡೆ ಹಿಡಿಯಬೇಕು ಮತ್ತು ಯಾವುದೇ ಪೋಷಕರು ಅಥವಾ ಮಕ್ಕಳಿಗೆ ಅದನ್ನು ನೀಡಬಾರದು. ಅಲ್ಲದೆ, ಇನ್ನಾವುದೇ ಉದ್ದೇಶಕ್ಕೂ ಆ ಫಲಿತಾಂಶವನ್ನು ಬಳಸಕೂಡದು. ಸ್ಯಾಟ್ಸ್ ತಂತ್ರಾಂಶಕ್ಕೂ ಅಪ್ಲೋಡ್ ಮಾಡಕೂಡದು ಎಂದು ಸ್ಪಷ್ಟವಾಗಿ ಹೇಳಿತ್ತು. ಜೊತೆಗೆ ಈ ಬಗ್ಗೆ ಯಾವುದೇ ಆಕ್ಷೇಪ, ವಿವರಗಳನ್ನು ಸಲ್ಲಿಸುವುದಿದ್ದರೆ ಏ.23ರ ಒಳಗೆ ಸಲ್ಲಿಸುವಂತೆಯೂ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಸರ್ಕಾರ ಹೆಚ್ಚುವರಿ ಸಮಯ ಕೇಳಿತ್ತು. ಏ.30ಕ್ಕೆ ಮತ್ತೊಂದು ಗಡುವು ನೀಡಿದ್ದರೂ ಇಲಾಖೆ ಸಕಾಲದಲ್ಲಿ ಪ್ರತಿಕ್ರಿಯಿಸಿಲ್ಲ. ಆ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥವಾಗಿಲ್ಲ ಎನ್ನಲಾಗಿದೆ.
ಹಾಗಾಗಿ, ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪಬ್ಲಿಕ್ ಪರೀಕ್ಷೆ ಬರೆದಿರುವ ರಾಜ್ಯದ 30 ಲಕ್ಷ ಮಕ್ಕಳು ಮುಂದಿನ ತರಗತಿಗೆ, ಹೊಸ ಶಾಲೆಗೆ ಪ್ರವೇಶ ಪಡೆಯಲು ಮತ್ತೆ ಆತಂಕ ಎದುರಾಗಿದೆ.