ಪಬ್ಲಿಕ್ ಪರೀಕ್ಷೆ | ಬಗೆಹರಿಯದ ಗೊಂದಲ; ಶಿಕ್ಷಣ ಇಲಾಖೆ ವಿರುದ್ಧ ಪೋಷಕರ ಆಕ್ರೋಶ

ಕಳೆದ ಮಾರ್ಚ್ 6ರಂದು ಪಬ್ಲಿಕ್ ಪರೀಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕ ಈವರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲೀ, ಸ್ವತಃ ಶಾಲಾ ಶಿಕ್ಷಣ ಸಚಿವರಾಗಲೀ ಮಕ್ಕಳು ಮತ್ತು ಪೋಷಕರ ಆತಂಕ ದೂರ ಮಾಡುವ ಪ್ರಯತ್ನವನ್ನೇ ಮಾಡಿಲ್ಲ. ಒಂದು ಹೇಳಿಕೆ, ಮಾಧ್ಯಮ ಪ್ರಕಟಣೆಯನ್ನು ಕೂಡ ನೀಡಿಲ್ಲ. ಅಸಲಿಗೆ ಶಿಕ್ಷಣ ಇಲಾಖೆ ಈ ಬಾರಿ ಪರೀಕ್ಷೆ ನಡೆಸುವುದೇ? ಅಥವಾ ಇಲ್ಲವೇ? ಎಂಬುದನ್ನೂ ಇಲಾಖೆ ಖಚಿತಪಡಿಸಿಲ್ಲ;

Update: 2024-03-21 08:25 GMT

ಮಾರ್ಚ್ 11 ಮತ್ತು 12ರಂದು ಎರಡು ವಿಷಯಗಳ ಪರೀಕ್ಷೆ ಬರೆದ ಬಳಿಕ ಕೋರ್ಟ್ ತಡೆಯಾಜ್ಞೆ ಬಿದ್ದ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿಯ ಮಕ್ಕಳು ಮುಂದಿನ ವಿಷಯಗಳ ಪರೀಕ್ಷೆ ಎದುರು ನೋಡುತ್ತಿದ್ದಾರೆ. ಪೋಷಕರು ಆತಂಕದಿಂದ ದಿನ ಎಣಿಸುತ್ತಿದ್ದಾರೆ.

ಕಳೆದ ಸೋಮವಾರ ಪ್ರರಕಣದ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ, ತೀರ್ಪು ಕಾಯ್ದಿರಿಸಿದೆ. ಎಳೆಯ ಮಕ್ಕಳು ಮತ್ತು ಅವರ ಪೋಷಕರ ಗೊಂದಲ, ಆತಂಕ ದೂರ ಮಾಡಬೇಕಿದ್ದ ರಾಜ್ಯ ಶಿಕ್ಷಣ ಇಲಾಖೆ, ಸಚಿವರು ಮತ್ತು ಮುಖ್ಯಮಂತ್ರಿಗಳು ಮಾತ್ರ ಇಡೀ ಪರೀಕ್ಷೆ ಗೊಂದಲದ ವಿಷಯದಲ್ಲಿ ಯಾವುದೇ ಹೇಳಿಕೆಯನ್ನಾಗಲೀ, ಸ್ಪಷ್ಟನೆಯನ್ನಾಗಲೀ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ಸೋಮವಾರದಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ

ಮಾ.25ರ ಸೋಮವಾರದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದೆ. ಈ ನಡುವೆ ಇನ್ನುಳಿದಿರುವುದು ಶುಕ್ರವಾರ ಮತ್ತು ಶನಿವಾರ ಮಾತ್ರ. ಕೋರ್ಟು ಇಂದೇ ತೀರ್ಪು ನೀಡಿದರೂ ಬಾಕಿ ಉಳಿದಿರುವ ನಾಲ್ಕು ವಿಷಯಗಳ ಪರೀಕ್ಷೆಯನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮುನ್ನ ನಡೆಸುವುದು ಅಸಾಧ್ಯದ ಮಾತು. ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಯವುದು ಏಪ್ರಿಲ್ 6ಕ್ಕೆ. ಏಪ್ರಿಲ್ 10ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಫಲಿತಾಂಶ ಪ್ರಕಟಿಸುವುದು ರೂಢಿ. ಹಾಗಿರುವಾಗ ಬಾಕಿ ಪರೀಕ್ಷೆಗಳನ್ನು ಇಲಾಖೆ ಯಾವಾಗ ನಡೆಸುತ್ತದೆ?

ಹಾಗೇ ಈ ಬಾರಿ ಎಸ್ ಎಸ್ ಎಲ್ಸಿ ಗೆ ಮೂರು ಪರೀಕ್ಷೆಗಳನ್ನು ನಡೆಸಲು ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜೊತೆಗೆ ಲೋಕಸಭಾ ಚುನಾವಣಾ ಕರ್ತವ್ಯಕ್ಕೂ ಶಿಕ್ಷಕರು ಹಾಜರಾಗಬೇಕಿದೆ. ಹಾಗಾದರೆ, ಈ ಬಾರಿ ಪರೀಕ್ಷೆಗಳನ್ನು ನಡೆಸಲು ಶಿಕ್ಷಕರಿಗೆ ಸಮಯ ಎಲ್ಲಿದೆ?

ಬಿರು ಬಿಸಿಲ ಬೇಸಿಗೆ

ಜೊತೆಗೆ, ಈ ಬಾರಿ ಹಿಂದೆಂದೂ ಕಂಡರಿಯದ ಪ್ರಮಾಣದ ಭೀಕರ ಬರ ಇದೆ. ಹಾಗಾಗಿ ಬಿಸಿಲ ಬೇಗೆ ಮಾರ್ಚ್ ತಿಂಗಳಲ್ಲೇ ಅತಿಯಾಗಿದ್ದು, ಮಕ್ಕಳಿರಲಿ ದೊಡ್ಡವರು ಕೂಡ ಮನೆಯಿಂದ ಹೊರಹೋಗಲಾರದ ಸ್ಥಿತಿ ಇದೆ. ಅಲ್ಲದೆ, ಉತ್ತರಕರ್ನಾಟಕದ ಭಾಗದಲ್ಲಂತೂ ಬಿರುಬಿಸಿಲೊಂದಿಗೆ ಕುಡಿಯುವ ನೀರಿನ ಹಾಹಾಕಾರ ಕೂಡ ಹೆಚ್ಚಾಗಿದೆ. ಇಂತಹ ಅಪಾಯಕಾರಿ ವಾತಾವರಣದಲ್ಲಿ ಐದನೇ ತರಗತಿಯಲ್ಲಿರುವ ಚಿಕ್ಕಮಕ್ಕಳಿಗೆ ಪರೀಕ್ಷೆ ಬರೆಸುವುದು ಯಾವ ಮಟ್ಟದ ಅಮಾನುಷ ನಡೆ ಎಂಬ ಪ್ರಶ್ನೆ ಕೂಡ ಪಾಲಕರನ್ನು ಕಾಡುತ್ತಿದೆ.

ಹೀಗೆ ಒಂದು ಕಡೆ ಎಸ್ ಎಸ್ ಎಲ್ ಸಿಯ ಸಾಲುಸಾಲು ಪರೀಕ್ಷೆ, ಚುನಾವಣಾ ಕರ್ತವ್ಯ ಮತ್ತು ಭೀಕರ ಬೇಸಿಗೆಯ ರಣಬಿಸಿಲು,.. ಇಷ್ಟೆಲ್ಲಾ ಸವಾಲು, ವ್ಯತಿರಿಕ್ತ ಪರಿಸ್ಥಿತಿಯ ನಡುವೆಯೂ ರಾಜ್ಯ ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆ ನಡೆಸುವ ಹಠಕ್ಕೆ ಬಿದ್ದಿದೆ. ಮಕ್ಕಳು, ಪೋಷಕರ ಹಿತ, ಅವರ ಆರೋಗ್ಯ, ಮಾನಸಿಕ ನೆಮ್ಮದಿಯನ್ನು ಬಲಿಕೊಟ್ಟಾದರೂ ಸರಿ ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಸರ್ಕಾರದ ಈ ಧೋರಣೆ ಈಗ ತುಘಲಕ್ ದರ್ಬಾರ್ ಎಂಬ ಕಟು ಟೀಕೆಗೆ ಗುರಿಯಾಗಿದೆ.

ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ

ಸರ್ಕಾರದ ಧೋರಣೆಗೆ ಬೇಸತ್ತಿರುವ ಮಕ್ಕಳ ಪೋಷಕರು, ಕೋರ್ಟಿನಲ್ಲಿ ಪ್ರಕರಣ ಏನೇ ನಡೆಯಲಿ. ಕನಿಷ್ಟ ಈ ಸರ್ಕಾರಕ್ಕೆ, ಶಿಕ್ಷಣ ಸಚಿವರಿಗೆ ಮಕ್ಕಳ ಆತಂಕ, ಪೋಷಕರ ಗೊಂದಲಗಳು ಅರ್ಥವಾಗುವುದೇ ಇಲ್ಲವೇ? ಕನಿಷ್ಟ ಪರೀಕ್ಷೆ ನಡೆಸುತ್ತೇವೋ, ಇಲ್ಲವೋ? ನಡೆಸಿದರೆ ಯಾವಾಗ ನಡೆಸುತ್ತೇವೆ? ಎಂಬ ಕನಿಷ್ಟ ಮಾಹಿತಿಯನ್ನು ನೀಡುವ ಜವಾಬ್ದಾರಿ ಕೂಡ ಬೇಡವೇ? ಎಂದು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾವಿರಾರು ಪೋಷಕರು ಇಂತಹದ್ದೇ ಪ್ರಶ್ನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಟ್ಯಾಗ್ ಮಾಡಿ ಕೇಳುತ್ತಿದ್ದಾರೆ.

“ಮಕ್ಕಳು ಎರಡು ಪರೀಕ್ಷೆ ಬರೆದು ಮನೆಯಲ್ಲಿವೆ. ಮುಂದಿನ ಪರೀಕ್ಷೆಗಳನ್ನು ನಡೆಸುತ್ತಾರೋ, ಇಲ್ಲವೋ ಎಂಬುದು ಶಿಕ್ಷಕರಿಗೂ ಗೊತ್ತಿಲ್ಲ, ಶಾಲಾ ಆಡಳಿತಕ್ಕೂ ಗೊತ್ತಿಲ್ಲ. ಬೇಸಿಗೆ ರಜೆ ಬರ್ತಿದೆ. ಈ ನಡುವೆ ಚುನಾವಣೆ, ಎಸ್ಎಸ್ಎಲ್ಸಿ ಪರೀಕ್ಷೆ, ಮೌಲ್ಯಮಾಪನ ಅಂತ ಶಿಕ್ಷಕರೂ ಬ್ಯುಸಿಯಾಗ್ತಾರೆ. ಹಾಗಾದರೆ ನಮ್ಮ ಮಕ್ಕಳ ಪರೀಕ್ಷೆಯ ಗತಿ ಏನು? ಅದರ ಬಗ್ಗೆ ಮಾಹಿತಿ ಕೊಡಬೇಕು ಅನ್ನೋ ಕನಿಷ್ಟ ಪ್ರಜ್ಞೆ ಕೂಡ ಈ ಸಚಿವರಿಗೆ, ಸರ್ಕಾರಕ್ಕೆ ಇಲ್ಲವೆ? ನೋಡಿ.. ಸಚಿವರಿಗೆ ಮಕ್ಕಳ ಪರೀಕ್ಷೆಯ ಬಗ್ಗೆ ಮಾತಾಡೋಕೆ ಪುರುಸೊತ್ತಿಲ್ಲ. ಆದರೆ, ಶಿವಮೊಗ್ಗದಲ್ಲಿ ಹೋಗಿ ಅಕ್ಕನ ಚುನಾವಣಾ ಪ್ರಚಾರಕ್ಕೆ ಮಾತ್ರ ಪುರುಸೊತ್ತಿದೆ… ಇದೇನು ಕರ್ಮ ನಮ್ಮದು..” ಎಂಬುದು ಮೈಸೂರಿನ ಐದನೇ ತರಗತಿ ಮಗುವಿನ ಪೋಷಕ ರಮೇಶ್ ಗೌಡರ ಹತಾಶೆಯ ಮಾತು.

ಭಾವನೆಗಳ ಜೊತೆ ಆಟವಾಡ್ತಿದಾರಲ್ಲ... 

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, “ಇವರಿಗೆ ಬೋರ್ಡ್ ಪರೀಕ್ಷೆ ಮಾಡಿ ಅಂತ ಹೇಳಿದೋರು ಯಾರು ಸ್ವಾಮಿ. ನಾವು ಹೇಳಿದ್ವಾ, ಇಲ್ಲ ನಮ್ಮ ಮಕ್ಕಳು ಹೇಳಿದ್ವಾ? ಅದೂ ಐದನೇ ತರಗತಿ ಮಕ್ಕಳಿಗೆ ಪಬ್ಲಿಕ್ ಎಕ್ಸಾಂ ಮಾಡ್ತೀವಿ ಅಂತ ಹೀಗೆ ನಮ್ಮ ಭಾವನೆಗಳ ಜೊತೆ ಆಟವಾಡ್ತಿದಾರಲ್ಲ ಇವರೇನು ಮನುಷ್ಯರಾ? ನೀವೇ ಹೇಳಿ.. ಪರೀಕ್ಷೆ ಬೇಡ ಅಂತ ಹೈಕೋರ್ಟ್ ಹೇಳಿದ ಮೇಲೆ ಕೇಳ್ಕೊಂಡು ಮಾಮೂಲಿ ಪರೀಕ್ಷೆ ಮಾಡಿ ಮುಗಿಸೋದು ಬಿಟ್ಟು ರಿಟ್ ಹಾಕಿ ಅಗಣಿ ತೆಗಿಯೋಕೆ ಹೋಗಿ ಬಾಗಿಲು ಬೀಳಿಸ್ಕೊಂಡ ಹಾಗೆ ಮಾಡಿಕೊಂಡಿದ್ದು ಇವರೇ ಅಲ್ಲವಾ? ಈಗ ನೋಡಿ ಇವರು ಮಾಡಿದ್ದು ಮಾಡಿ ಆರಾಮಾಗಿ ಚುನಾವಣೆ ಪ್ರಚಾರ ಮಾಡ್ಕೊಂಡು ಕಾಲ ಕಳಿತಿದಾರೆ, ನಾವು, ನಮ್ಮ ಮಕ್ಕಳು ಅನುಭವಿಸ್ತಿದೀವಿ.. ಇಂಥ ಚೆಂದಕ್ಕೆ ಯಾಕ್ರೀ ಬೇಕು ಇವರಿಗೆ ಇವೆಲ್ಲಾ..” ಎಂದು ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಪರೀಕ್ಷೆಯ ಅಯೋಮಯ ಸ್ಥಿತಿಯ ಕುರಿತು ಶಿಕ್ಷಣ ತಜ್ಞ ಡಾ ವಿ ಪಿ ನಿರಂಜನಾರಾಧ್ಯ ಅವರನ್ನು ʼದ ಫೆಡರಲ್ ಕರ್ನಾಟಕʼ ಸಂಪರ್ಕಿಸಿದಾಗ, “ಇದು ಶಿಕ್ಷಣ ಸಚಿವರು ಮತ್ತು ಸರ್ಕಾರದ ಹೊಣೆಗೇಡಿತನದ ಪರಮಾವಧಿ. ಇವರಿಗೆ ಕನಿಷ್ಟ ಸಾಮಾನ್ಯ ಜ್ಞಾನವೂ ಇಲ್ಲ. ಕನಿಷ್ಟ ಜವಾಬ್ದಾರಿ ಇದ್ದಿದ್ದರೆ ಹೈಕೋರ್ಟ್ ತೀರ್ಪಿನ ಬಳಿಕ ಮತ್ತೆ ಮೇಲ್ಮನವಿ ಸಲ್ಲಿಸುತ್ತಿರಲಿಲ್ಲ. ಈಗ ಶಿಕ್ಷಕರು ನಾಡಿದ್ದಿನಿಂದ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ತಯಾರಿ, ಪರೀಕ್ಷೆ ನಡೆಸುವುದು, ಮೌಲ್ಯಮಾಪನ ಅಂತ ತೊಡಗಿಸಿಕೊಂಡರೆ, ಈ ಮಕ್ಕಳ ಪರೀಕ್ಷೆ ನಡೆಸುವುದು ಯಾವಾಗ? ಬೇಸಿಗೆ ಬಿಸಿಲು, ಕೆಲವು ಕಡೆ ಕುಡಿಯುವ ನೀರಿಗೂ ಗತಿ ಇಲ್ಲ. ಚುನಾವಣೆ ಕರ್ತವ್ಯ ಬೇರೆ ಇದೆ. ಇದೆಲ್ಲಾ ಯೋಚನೆ ಮಾಡುವಷ್ಟು ತಿಳಿವಳಿಕೆ ಕೂಡ ಇಲಾಖೆಯ ಅಧಿಕಾರಿಗಳಿಗೆ, ಸಚಿವರಿಗೆ ಇಲ್ಲ. ಅವರ ಆಸಕ್ತಿಗಳೇ ಬೇರೆ. ಯಾಕೆ ಮಕ್ಕಳ ಜೊತೆ ಚೆಲ್ಲಾಟ ಆಡ್ತಿದಾರೆ ಗೊತ್ತಾಗ್ತಿಲ್ಲ..” ಎಂದು ಪ್ರತಿಕ್ರಿಯಿಸಿದರು.

ಈ ನಡುವೆ, ಎರಡು ವಿಷಯಗಳ ಪರೀಕ್ಷೆ ನಡೆದು ಈಗಾಗಲೇ ಎರಡು ವಾರವಾಗಿದೆ. ಮಕ್ಕಳು ಪರೀಕ್ಷೆಯ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಹಾಗಾಗಿ ಓದು ನಿಲ್ಲಿಸಿ, ಆಟೋಟದಲ್ಲಿ ಮುಳುಗಿದ್ದಾರೆ. ಇದೀಗ ಮತ್ತೆ ಪರೀಕ್ಷೆ ನಡೆಸಿದರೂ ಮೊದಲಿ ಆಸಕ್ತಿಯಾಗಲೀ, ಗಮನವಾಗಲೀ ಇರದು. ಹಾಗಾಗಿ ಮಕ್ಕಳ ಬುದ್ಧಿಮತ್ತೆ ಪರೀಕ್ಷೆಗಾಗಿ, ಕಲಿಕಾ ಸಾಮರ್ಥ್ಯ ಪರೀಕ್ಷೆಗಾಗಿ ಪಬ್ಲಿಕ್‌ ಪರೀಕ್ಷೆ ನಡೆಸುತ್ತಿದ್ದೇವೆ ಎಂಬ ಶಿಕ್ಷಣ ಇಲಾಖೆಯ ಟೊಳ್ಳು ವಾದವೇ ಅರ್ಥಹೀನ. ಅಷ್ಟಕ್ಕೂ ಇಲಾಖೆಗೆ ಕಲಿಕಾ ಸಾಮರ್ಥ್ಯ, ಬೋಧನಾ ಸಾಮರ್ಥ್ಯ ಪರೀಕ್ಷೆಗೆ ವರ್ಷವಿಡೀ ನಡೆಸಿರುವ ಸಿಸಿಎ, ಎಸ್‌ ಎ ಪರೀಕ್ಷೆಗಳ ಫಲಿತಾಂಶ ಕೈಯಲ್ಲಿದೆ. ಜೊತೆಗೆ ಸ್ಯಾಟ್ಸ್‌ ಎಂಬ ಮಕ್ಕಳ ಕಲಿತಾ ಪ್ರಗತಿ ದಾಖಲಾತಿ ವ್ಯವಸ್ಥೆಯೂ ಇದೆ. ಅದೆಲ್ಲಾ ನೆಪ ಹೇಳಿ ಇನ್ನಾವುದೋ ಲಾಭಕ್ಕಾಗಿ ಈ ಪರೀಕ್ಷೆ ಸಮರ್ಥಿಸುವುದು ನಾಚಿಕೆಗೇಡು ಎಂಬ ಅಭಿಪ್ರಾಯ ಕೂಡ ಶಿಕ್ಷಣ ವಲಯದಲ್ಲಿದೆ.

ಪೋಷಕರು ಮತ್ತು ಮಕ್ಕಳ ಆತಂಕದ ಕುರಿತು ಪ್ರತಿಕ್ರಿಯೆ ಕೇಳಲು ಪ್ರಯತ್ನಿಸಿದರೂ, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಾಗಲೀ, ಸ್ವತಃ ಶಿಕ್ಷಣ ಸಚಿವರಾಗಲೀ ಕರೆ ಸ್ವೀಕರಿಸಲಿಲ್ಲ. ಹಾಗೆ ನೋಡಿದರೆ, ಕಳೆದ ಮಾರ್ಚ್ 6ರಂದು ಪಬ್ಲಿಕ್ ಪರೀಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕ ಈವರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲೀ, ಸ್ವತಃ ಶಾಲಾ ಶಿಕ್ಷಣ ಸಚಿವರಾಗಲೀ ಮಕ್ಕಳು ಮತ್ತು ಪೋಷಕರ ಆತಂಕ ದೂರ ಮಾಡುವ ಪ್ರಯತ್ನವನ್ನೇ ಮಾಡಿಲ್ಲ. ಒಂದು ಹೇಳಿಕೆ, ಮಾಧ್ಯಮ ಪ್ರಕಟಣೆಯನ್ನು ಕೂಡ ನೀಡಿಲ್ಲ. ಅಸಲಿಗೆ ಶಿಕ್ಷಣ ಇಲಾಖೆ ಈ ಬಾರಿ ಪರೀಕ್ಷೆ ನಡೆಸುವುದೇ? ಅಥವಾ ಇಲ್ಲವೇ? ಎಂಬುದನ್ನೂ ಇಲಾಖೆ ಖಚಿತಪಡಿಸಿಲ್ಲ. ಎಳೆಯ ಮಕ್ಕಳ ವಿಷಯದಲ್ಲಿ ಇಲಾಖೆ ತೋರುತ್ತಿರುವ ನಿರ್ಲಕ್ಷ್ಯ ಮತ್ತು ಉಡಾಫೆಯ ಧೋರಣೆ ರಾಜ್ಯವ್ಯಾಪಿ ಖಂಡನೆಗೆ ಗುರಿಯಾಗಿದೆ.

Tags:    

Similar News