ಇಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ | ಮಧ್ಯಾಹ್ನ ಬೃಹತ್‌ ಸಮಾವೇಶ; ಒಂದು ಲಕ್ಷ ಜನ ಸೇರುವ ಸಾಧ್ಯತೆ

ಮಧ್ಯಾಹ್ನ 2 ಗಂಟೆಗೆ ದೇವಸ್ಥಾನ ಹೊರವಲಯದಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಕಾರ್ಯಕರ್ತರು, ಭಕ್ತರು ಸೇರುವ ನೀರೀಕ್ಷೆ ಇದೆ.;

Update: 2025-09-01 05:57 GMT

ಧರ್ಮಸ್ಥಳದ ವಿರುದ್ಧ ಕೆಲ ದಿನಗಳಿಂದ ನಿರಂತರ ಅಪಪ್ರಚಾರ ಹಾಗೂ ಷಡ್ಯಂತ್ರ ನಡೆಯುತ್ತಿದ್ದು, ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಒತ್ತಾಯಿಸಲು ರಾಜ್ಯ ಬಿಜೆಪಿ ಇಂದು ʼಧರ್ಮಸ್ಥಳ ಚಲೋ ಬೃಹತ್‌ ಯಾತ್ರೆʼ ಹಮ್ಮಿಕೊಂಡಿದೆ.

ಮಧ್ಯಾಹ್ನ 2 ಕ್ಕೆ ದೇವಸ್ಥಾನದ ಹೊರವಲಯದಲ್ಲಿರುವ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಹಾಗೂ ಭಕ್ತಾಧಿಗಳು ಸೇರುವ ನೀರೀಕ್ಷೆ ಇದೆ.

ಸಮಾವೇಶದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ, ಶೋಭಾ ಕರಂದ್ಲಾಜೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಇತರೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.

ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಮಾಡುವ ಮೂಲಕ ಭಕ್ತಾಧಿಗಳ ಭಾವನೆಗೆ, ಹಿಂದೂ ಸಮಾಜಕ್ಕೆ ಧಕ್ಕೆ ತರುವ ಕಾರ್ಯ ನಡೆಯುತ್ತಿದೆ. ಇದನ್ನು ಹಿಂದೂ ಸಮಾಜ ಹಾಗೂ ಬಿಜೆಪಿ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಈ ಪಿತೂರಿಯ ಹಿಂದೆ ಕಮ್ಯೂನಿಸ್ಟ್, ನಿಷೇಧಿತ ಪಿಎಫ್‌ಐ ಮುಖವಾಡ ಹೊತ್ತ ಎಸ್ಡಿಪಿಐ ಸೇರಿದಂತೆ ಕಾಣದ ಶಕ್ತಿಗಳು ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಆರೋಪಿಸಿದ್ದರು.

ಎಸ್ಐಟಿ ತನಿಖೆಯನ್ನು ಆರಂಭದಲ್ಲಿ ನಾವು ಸ್ವಾಗತಿಸಿದ್ದೇವೆ ಆದರೆ ಇಂದು ಎಸ್‌ಐಟಿ ತನಿಖೆ ದಿಕ್ಕು ತಪ್ಪುತ್ತಿದೆ. ಹೊರ ರಾಜ್ಯದವರು ಇದರಲ್ಲಿ ಭಾಗಿಯಾಗಿದ್ದಾರೆ. ವಿದೇಶದಿಂದ ಹಣ ರವಾನೆಯಾಗಿದೆ  ಎಂಬ ಮಾತುಗಳು ಕೇಳಿ ಬರುತ್ತಿದೆ. ರಾಷ್ಟ್ರ ವಿರೋಧಿ ಶಕ್ತಿಗಳು ಈ ಪ್ರಕರಣದ ಹಿಂದಿರುವ ಸಂಶಯವಿದ್ದು ಆದ್ದರಿಂದ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಧರ್ಮಸ್ಥಳ ಚಲೋ ಮೂಲಕ ಇದಕ್ಕೆ ಒಂದು ಸ್ವಷ್ಟ ಸಂದೇಶ ನೀಡಲಿದ್ದೇವೆ. ಈ ಪ್ರಕರಣವನ್ನು ಎನ್‌ಐಎಗೆ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದ್ದರು.

ಆ.31 ರಂದು ಬಿಜೆಪಿ ಮಿತ್ರ ಪಕ್ಷ ಜೆಡಿಎಸ್‌ ಕೂಡ ʼಧರ್ಮಸ್ಥಳ ಸತ್ಯ ಯಾತ್ರೆʼ ನಡೆಸುವ ಮೂಲಕ ಪ್ರಕರಣವನ್ನು ಎನ್‌ಐಎಗೆ ನೀಡಬೇಕು ಎಂದು ಒತ್ತಾಯಿಸಿತ್ತು.

Tags:    

Similar News