ಬೆಂಗಳೂರು ವಿಭಜನೆ‌ ಪ್ರಶ್ನಿಸಿ ನ್ಯಾಯಾಲಯದ ಮೊರೆ; ಪ್ರತಿಪಕ್ಷ ನಾಯಕ ಆರ್‌. ಅಶೋಕ್

ಕಪ್ಪುಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಸುರಂಗ ರಸ್ತೆ ಯೋಜನೆ ನೀಡಲಾಗುತ್ತಿದೆ. ಸುರಂಗ ರಸ್ತೆಗೆ ಟೋಲ್‌ ಇರುವುದರಿಂದ ಶ್ರೀಮಂತರು ಮಾತ್ರ ಬಳಸಬಹುದು. ಜನಸಾಮಾನ್ಯರಿಗೆ ಇದರಿಂದ ಪ್ರಯೋಜನವಿಲ್ಲ ಎಂದು ಅಶೋಕ್‌ ಹೇಳಿದ್ದಾರೆ.;

Update: 2025-07-26 13:45 GMT

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

ಬಿಬಿಎಂಪಿ ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ತನಗೆ ಬೇಕಾದಂತೆ ಬೃಹತ್‌ ಬೆಂಗಳೂರು ಪಾಲಿಕೆಯನ್ನು ವಿಭಜನೆ ಮಾಡಿದ್ದು, ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು.

ಬೆಂಗಳೂರಿನಲ್ಲಿ ಶನಿವಾರ ಶಾಸಕರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಯನ್ನು ಅತಂತ್ರಗೊಳಿಸಲು ಐದು ಭಾಗ ಮಾಡಲಾಗಿದೆ. ಚುನಾವಣೆ ಗೆಲ್ಲಬೇಕೆಂಬ ದೃಷ್ಟಿಯಿಂದ ವಿಭಜನೆ ಮಾಡಿ, ಐದು ಪಾಲಿಕೆಗಳ ನಡುವೆ ತಾರತಮ್ಯ ಸೃಷ್ಟಿಸಲಿದೆ. ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು. 

ವಿಭಜನೆ ಮಾಡಿ ಎಂದು ಯಾರೂ ಕೇಳಿಲ್ಲ

ಬೆಂಗಳೂರನ್ನು ಒಡೆಯಿರಿ ಎಂದು ಸಾರ್ವಜನಿಕರು ಕೇಳಿಲ್ಲ. ಈಗಾಗಲೇ ನಗರದಲ್ಲಿ ತೆರಿಗೆ, ಸೆಸ್‌, ಇ- ಖಾತಾದಿಂದ ಸಮಸ್ಯೆ ಉಂಟಾಗಿದೆ. ಈ ಸಂದರ್ಭದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್‌ ಸೋಲು ಖಚಿತ ಎಂದು ಅಶೋಕ್‌ ಭವಿಷ್ಯ ನುಡಿದರು.

ಕಪ್ಪುಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಸುರಂಗ ರಸ್ತೆ (ಟನಲ್‌ ರಸ್ತೆ) ಯೋಜನೆ ನೀಡಲಾಗುತ್ತಿದೆ. ಸುರಂಗ ರಸ್ತೆಗೆ ಟೋಲ್‌ ಕೂಡ ಇರುವುದರಿಂದ ಶ್ರೀಮಂತರು ಮಾತ್ರ ಟನಲ್‌ ರಸ್ತೆ ಬಳಸಬಹುದಾಗಿದೆ. ಜನಸಾಮಾನ್ಯರಿಗೆ ಇದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಆದರೆ, ದುಡ್ಡು ಕೊಳ್ಳೆ ಹೊಡೆಯುವ ಯೋಜನೆಗಳಿಗೆ ಅಲ್ಲ. ಇಂತಹ ಯೋಜನೆಗಳನ್ನು ಬಿಜೆಪಿ ವಿರೋಧಿಸಲಿದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಭೂಕಂಪದ ನಾಡು ಮಾಡಬಾರದು ಎಂದು ಆಗ್ರಹಿಸಿದರು.

ಹೆಬ್ಬಾಳ ಮೇಲ್ಸೇತುವೆ ಬಳಿಯ ಜಂಕ್ಷನ್‌ಗೆ ಎಲ್ಲ ಕಡೆಯಿಂದ ವಾಹನಗಳು ಬರುತ್ತವೆ. ಅಂತಹ ಜಾಗವನ್ನು ಖಾಸಗಿ ಭೂ ಮಾಲೀಕರಿಗೆ ನೀಡಲು ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿಸಿ ಸದನದಲ್ಲಿ ಚರ್ಚಿಸಲಾಗುವುದು. ಇ -ಖಾತಾ ವಿಚಾರದಲ್ಲಿ ಜನರಿಗೆ ತೊಂದರೆ ನೀಡಲಾಗುತ್ತಿದೆ. ಹಣ ಲೂಟಿ ಮಾಡಲು ಬೆಂಗಳೂರನ್ನು ಬಳಸಬಾರದು ಎಂದು ಒತ್ತಾಯಿಸಿದರು.

ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿ

ಕಾಂಗ್ರೆಸ್‌ ಸರ್ಕಾರ ಬೆಂಗಳೂರನ್ನು ಹೋಳು ಮಾಡುತ್ತಿದೆ. ಎಲ್ಲೆಡೆ ಟ್ರಾಫಿಕ್‌ ಹಾಗೂ ಕಸದ ಸಮಸ್ಯೆ ಕಾಣುತ್ತಿದೆ. ಹೋಳು ಮಾಡುವುದರಿಂದ ಅಭಿವೃದ್ಧಿಯಾಗುವುದಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಅನುದಾನವಿಲ್ಲದೆ ಅಭಿವೃದ್ಧಿ ಶೂನ್ಯವಾಗಿದೆ. ಹೊಸ ಪಾಲಿಕೆಗಳ ರಚನೆಯಿಂದ ಬೆಂಗಳೂರು ಜನರ ಹೃದಯ ಚೂರಾಗಲಿದೆ. ಇದರ ವಿರುದ್ಧ ಹೋರಾಟ ಮಾಡಲು ಸಭೆ ನಡೆಸಲಾಗಿದೆ ಎಂದು ಅಶೋಕ್‌ ತಿಳಿಸಿದರು. 

ಮುಡಾ ಸೈಟು ಕೊಳ್ಳೆ ಹೊಡೆದವರೊಂದಿಗೆ ಹೋಲಿಕೆ ಸಲ್ಲದು 

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹಳೆ ಮೈಸೂರು ಭಾಗಕ್ಕೆ ನೀಡಿದ ಕೊಡುಗೆಯನ್ನು ನಾವು ಸ್ಮರಿಸಬೇಕು. ಕೆಆರ್‌ಎಸ್‌ ಜಲಾಶಯದಿಂದಾಗಿ ಜನರಿಗೆ ಜೀವಜಲ ದೊರೆತಿದೆ. ಅವರ ಸಾಧನೆಗಳಿಂದಾಗಿ ಜನರು ಅನ್ನ ತಿನ್ನುತ್ತಿದ್ದಾರೆ. ಸೋಪ್‌ ಫ್ಯಾಕ್ಟರಿ, ವಿಶ್ವವಿದ್ಯಾಲಯಗಳ ನಿರ್ಮಾಣ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದವರೇ ಅವರು. ಚಿನ್ನಾಭರಣ ಅಡವಿಟ್ಟು ಜಲಾಶಯ ನಿರ್ಮಿಸಿದವರಿಗೂ, ಮುಡಾದಲ್ಲಿ 14 ಸೈಟುಗಳನ್ನು ಕೊಳ್ಳೆ ಹೊಡೆದವರಿಗೂ ಹೋಲಿಕೆ ಮಾಡಬಾರದು. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಹಾರಾಜರ ಕುಟುಂಬಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದರು.

ಚುನಾವಣೆಯಲ್ಲಿ ಸೋತಾಗ ಇವಿಎಂ ಮೇಲೆ ಅನುಮಾನ

ಹುಲಿಗಳು ಸೇರಿದಂತೆ ವನ್ಯಜೀವಿಗಳು ಮೃತಪಡುತ್ತಿರುವುದು ನೋಡಿದರೆ ಅರಣ್ಯ ಇಲಾಖೆ ಇಲ್ಲ ಎನಿಸುತ್ತದೆ. ವಿಧಾನಸಭಾ ಚುನಾವಣೆಯಲ್ಲಿ 136 ಸೀಟುಗಳನ್ನು ಗೆದ್ದಿರುವ ಬಗ್ಗೆ ನಮಗೂ ಅನುಮಾನವಿದೆ ಎಂದು ನಾವು ಹೇಳಬಹುದು. ಚುನಾವಣೆಯಲ್ಲಿ ಸೋತಾಗ ಸಾಕ್ಷಿ ಕೇಳುತ್ತಾರೆ. ಭಯೋತ್ಪಾದಕರ ಮೇಲೆ ದಾಳಿ ಮಾಡಿದಾಗಲೂ ಹೀಗೆ ಸಾಕ್ಷಿ ಕೇಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Similar News