
ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಸದ ಯದುವೀರ್ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಸಿದ್ದರಾಮಯ್ಯ ಅವಧಿಯಲ್ಲೇ ಮೈಸೂರು ಅಭಿವೃದ್ಧಿ; ಪರ-ವಿರೋಧದ ಚರ್ಚೆ
ಮುಖ್ಯಮಂತ್ರಿಯಾಗಿ ನಮ್ಮ ತಂದೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆ" ಎಂದು ಸಿಎಂ ಪುತ್ರ ಯತೀಂದ್ರ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿನ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಿದ್ದಾರೆ ಎಂದು ಸಿಎಂ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿರುವುದು ರಾಜ್ಯಾದ್ಯಂತ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶವನ್ನು ಪ್ರತಿಪಕ್ಷಗಳು ಟೀಕಿಸಿದಕ್ಕೆ ಪ್ರತಿಕ್ರಿಯೆ ನೀಡಿದ್ದ ಯತೀಂದ್ರ, "ಮುಖ್ಯಮಂತ್ರಿಯಾಗಿ ನಮ್ಮ ತಂದೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ" ಎಂದು ತಂದೆಯ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕುರಿತಂತೆ ವಿಪಕ್ಷಗಳು ಟೀಕಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ರಾಜರಿಗೆ ಹೋಲಿಕೆ ಬೇಡ
ಮೈಸೂರು ಸಂಸ್ಥಾನವನ್ನು ಇಡೀ ವಿಶ್ವವೇ ಅಚ್ಚರಿಯಿಂದ ನೋಡುವಂತೆ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ. ಅಂತಹ ಮಹಾನ್ ಆಡಳಿತಗಾರರ ಸಾಧನೆ ಹಾಗೂ ಅಭಿವೃದ್ಧಿ ಕೆಲಸಗಳನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಬಾರದು ಎಂದು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಮೈಸೂರು ಸಂಸ್ಥಾನದಲ್ಲಿ ಕೃಷ್ಣರಾಜ ಸಾಗರ ಜಲಾಶಯ ಸೇರಿದಂತೆ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಿ ಮಹಾತ್ಮ ಗಾಂಧೀಜಿಯವರಿಂದ ರಾಜರ್ಷಿ ಎಂಬ ಬಿರುದ ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ಗೌರವಿಸಬೇಕೆ ಹೊರತು ಅದನ್ನು ಅಳೆದು ತೂಗಿ ನೋಡಬಾರದು. ಅಧಿಕಾರದಲ್ಲಿದ್ದ ಮಾತ್ರಕ್ಕೆ ಮಾಧ್ಯಮಗಳ ಮುಂದೆ ಏನು ಬೇಕಾದರೂ ಹೇಳಬಹುದು ಎಂದುಕೊಳ್ಳಬಾರದು. ಸಿಎಂ ಪುತ್ರ ಯತೀಂದ್ರ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.