ನಮ್ಮ ತಾತ ವಿಎಚ್‌ಪಿಯಲ್ಲಿದ್ದರು ಎಂದಿದ್ದ ಯದುವೀರ್‌ಗೆ ರಹಮತ್ ತರೀಕೆರೆ ಇತಿಹಾಸ ಪಾಠ
x

ನಮ್ಮ ತಾತ ವಿಎಚ್‌ಪಿಯಲ್ಲಿದ್ದರು ಎಂದಿದ್ದ ಯದುವೀರ್‌ಗೆ ರಹಮತ್ ತರೀಕೆರೆ ಇತಿಹಾಸ ಪಾಠ


ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯದುವೀರ್ ಒಡೆಯರ್ ಅವರು ಸಂದರ್ಶನವೊಂದರಲ್ಲಿ ತಮ್ಮ ತಾತ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ನಲ್ಲಿದ್ದರು ಎಂದು ಉಲ್ಲೇಖಿಸಿ, ತಮ್ಮ ರಾಜಕೀಯ ಪಕ್ಷದ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ನಾಡಿನ ಹೆಸರಾಂತ ಲೇಖಕ, ಚಿಂತಕ ರಹಮತ್ ತರೀಕೆರೆ ಅವರು ದಾಖಲೆ ಸಮೇತ ಪ್ರತಿಕ್ರಿಯೆ ನೀಡುವ ಮೂಲಕ ಯಧುವೀರ್‌ ಅವರಿಗೆ ವಾಸ್ತವ ಇತಿಹಾಸವನ್ನು ನೆನಪಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರಹಮತ್ ತರೀಕೆರೆ ಅವರು, ʻʻಮೈಸೂರನ್ನು ರಾಜಕೀಯವಾಗಿ ಪ್ರತಿನಿಧಿಸುವ ಯಾರೇ ಆಗಲಿ, ತಮ್ಮ ಪೂರ್ವ ಪರಂಪರೆಯನ್ನಾಗಿ ನಿಜವಾಗಿ ಸ್ಮರಿಸಬೇಕಾದುದು ಮತ್ತು ಅನುಸರಿಸಬೇಕಾದುದು, ಜಾತ್ಯತೀತತೆಯ, ಸರ್ವಧರ್ಮ ಸಮಭಾವದ ಮತ್ತು ಸಾಮಾಜಿಕ ನ್ಯಾಯ ಪ್ರಜ್ಞೆಯ ಧೀಮಂತ ನಾಲ್ವಡಿಯವರನ್ನು; ಮೈಸೂರನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಆತ್ಮಶ್ರೀಗಾಗಿ ನಿರಂಕುಶಮತಿ ವಿಶ್ವಮಾನವ ಪ್ರಜ್ಞೆಯ ಸಂದೇಶ ನೀಡಿದ ಕುವೆಂಪು ಅವರನ್ನು; ಮೈಸೂರ ಮಣ್ಣಿನಮಗನಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸರನ್ನುʼʼ ಎಂದು ಹೇಳಿದ್ದಾರೆ.

ʻʻಇವತ್ತಿಗೂ ದಲಿತ ಸಂಘಟನೆಗಳು ನಾಲ್ವಡಿಯವರ ಪಟವನ್ನು ಅಂಬೇಡ್ಕರ್, ಶಾಹುಮಹಾರಾಜ, ಟಿಪ್ಪುಸುಲ್ತಾನ್, ಫುಲೆ ಅವರ ಪಟಗಳೊಟ್ಟಿಗೆ ತಮ್ಮ ಭಿತ್ತಿಪತ್ರ ಕರಪತ್ರಗಳಲ್ಲಿ ಯಾಕೆ ಹಾಕಿಕೊಳ್ಳುತ್ತೇವೆ? ನಾಲ್ವಡಿಯವರು ಮಿಲ್ಲರ್ ವರದಿಯನ್ನು ದಿವಾನ ವಿಶ್ವೇಶ್ವರಯ್ಯನವರ ಪ್ರತಿಭಟನೆಯನ್ನು ಲೆಕ್ಕಿಸದೆ ಜಾರಿಗೊಳಿಸಿದವರು. ಅನೇಕರ ವಿರೋಧ ಲೆಕ್ಕಿಸದೆ ಸಹಪಾಠಿ ಮಿರ್ಜಾ ಇಸ್ಮಾಯಿಲರನ್ನು ದಿವಾನರನ್ನಾಗಿ ಮಾಡಿಕೊಂಡಿದ್ದವರು. ಅವರೊಬ್ಬ ಕರ್ನಾಟಕ ಕಟ್ಟುವ ದಾರ್ಶನಿಕ ಆಡಳಿತಗಾರರಾಗಿದ್ದರು. ಅವರು ತಮ್ಮ ಅಂಗರಕ್ಷಕ ಪಡೆಯವರಿಗಾಗಿ ಅರಮನೆಯ ಸಮೀಪದಲ್ಲಿಯೇ ಮಸೀದಿ ಕಟ್ಟಿಸಿ ಮಾಡಿದ ಭಾಷಣ ಗಮನಿಸಬೇಕುʼʼ ಎಂದು ತಿಳಿಸಿದ್ದಾರೆ.

ʻʻಮಹಾರಾಜರು ತಮ್ಮ ಸಿಂಹಾಸನಾರೋಹಣದ ಬೆಳ್ಳಿಹಬ್ಬದಲ್ಲಿ ಆಹ್ವಾನಪತ್ರಿಕೆಯನ್ನು ಕನ್ನಡ ಇಂಗ್ಲೀಶು ಉರ್ದು- ಮೂರೂ ಭಾಷೆಗಳಲ್ಲಿ ಸ್ವಹಸ್ತಾಕ್ಷರದಲ್ಲಿ ಬರೆದು ಹಂಚಿದ್ದರು. ಸರ್ವರನ್ನು ಒಳಗೊಳ್ಳುವ ಮುಂಗಾಣ್ಕೆಯ ರಾಜಕಾರಣದ ಪ್ರತೀಕವಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಸೂರು ಸಂಸ್ಥಾನ ಪ್ರತಿಕೂಲವಾಗಿದ್ದರೂ ಗಾಂಧಿಯವರು ಅವರನ್ನು ಶ್ರೇಷ್ಠರಾಜ ಎಂದು ಕರೆದರು. ನಾಲ್ವಡಿ, ಕುವೆಂಪು, ದೇವರಾಜ ಅರಸರ ಮೌಲ್ಯಗಳನ್ನು ಪ್ರತಿನಿಧಿಸುವ ಹಾದಿ ಬೇರೆಯೇ ಇದೆʼʼ ಎಂದು ಹೇಳುವ ಮೂಲಕ ಸಾಕ್ಷಿ ಸಮೇತ ಇತಿಹಾಸದ ನೆನಪಿಸಿದ್ದಾರೆ.

Read More
Next Story