ಕೆಪಿಎಸ್‌ಸಿ ಗೊಂದಲ | ಮರುಪರೀಕ್ಷೆಯಲ್ಲೂ ಮುಗ್ಗರಿಸಿದ ʼಎಡವಟ್ಟು ಕಾಂಗ್ರೆಸ್ ಸರ್ಕಾರʼ: ಬಿಜೆಪಿ ಟೀಕೆ
ಸಿದ್ದರಾಮಯ್ಯ ಸರ್ಕಾರದ ರಾಜಕೀಯ ಹಸ್ತಕ್ಷೇಪ, ಸ್ವಜನಪಕ್ಷಪಾತ, ಭ್ರಷ್ಟಾಚಾರವೇ ಪದೇಪದೆ ಈ ಎಡವಟ್ಟುಗಳು ಮರುಕಳಿಸುತ್ತಿರುವುದಕ್ಕೆ ಮೂಲ ಕಾರಣ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.
ಆಗಸ್ಟ್ ನಲ್ಲಿ ನಡೆದ 2023-24ನೇ ಸಾಲಿನ ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯಲ್ಲಿ ಭಾರಿ ಎಡವಟ್ಟು ಕಂಡುಬಂದ ನಂತರ ಅಭ್ಯರ್ಥಿಗಳ ಆಕ್ರೋಶಕ್ಕೆ ಮಣಿದು ನಿನ್ನೆ(ಡಿ.29) ನಡೆಸಲಾದ ಮರುಪರೀಕ್ಷೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಎಡವಟ್ಟುಗಳ ಮೇಲೆ ಎಡವಟ್ಟುಗಳು ಮಾಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಭಾಷಾಂತರದಲ್ಲಿ ಲೋಪ ದೋಷ, OMR ಶೀಟ್ ಮತ್ತು ನೋಂದಣಿ ಸಂಖ್ಯೆ ಅದಲು ಬದಲು, ಕೆಲವೆಡೆಗಳಲ್ಲಿ 45 ನಿಮಿಷ ತಡವಾಗಿ ಪರೀಕ್ಷೆ ಆರಂಭ ಹೀಗೆ ಸಾಲು ಸಾಲು ಎಡವಟ್ಟುಗಳಿಂದ ಕೂಡಿದ್ದ ಭಾನುವಾರದ ಮರುಪರೀಕ್ಷೆ ಮತ್ತೊಮ್ಮೆ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಮರುಪರೀಕ್ಷೆಗೆ ನೋಂದಣಿ ಮಾಡಿಕೊಂಡ್ಡ 2.10 ಲಕ್ಷ ಅಭ್ಯರ್ಥಿಗಳ ಪೈಕಿ ಕೇವಲ 1 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಆಗಸ್ಟ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.62.52% ರಷ್ಟಿದ್ದ ಹಾಜರಾತಿ, ಮರುಪರೇಕ್ಷೆಯಲ್ಲಿ ಶೇ.47.7%ಕ್ಕೆ ಕುಸಿದಿರುವುದು ಅಭ್ಯರ್ಥಿಗಳು ಸರ್ಕಾರದ ಮೇಲೆ, ಕೆಪಿಎಸ್ ಸಿ ಮೇಲೆ ನಂಬಿಕೆ ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ, ಸ್ವಜನಪಕ್ಷಪಾತವೆ ಕೆಪಿಎಸ್ ಸಿ ಪರೀಕ್ಷೆಗಳಲ್ಲಿನ ಪದೇ ಪದೇ ಎಡವಟ್ಟಿಗೆ ಕಾರಣ. ಆಗಸ್ಟ್ ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಗೆ 13.40 ಕೋಟಿ ರೂಪಾಯಿ ವೆಚ್ಚವಾಗಗಿತ್ತು. ಮರುಪರೀಕ್ಷೆಗೂ ಅಷ್ಟೇ ಮೊತ್ತ ಅಥವಾ ಅದಕ್ಕಿಂತ ಹೆಚ್ಚು ಖರ್ಚಾಗಿರುತ್ತದೆ. ಅದರಲ್ಲಿ ಸುಮಾರು 5.3 ಕೋಟಿ ರೂಪಾಯಿ ಪರೀಕ್ಷಾ ಗೋಪ್ಯತೆ ಕಾಪಾಡುವುದಕ್ಕೆ ವೆಚ್ಚ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಇಷ್ಟಾದರೂ ಈ ಪರಿ ಎಡವಟ್ಟುಗಳು ಮರುಕಳಿಸಿದೆ ಎಂದರೆ ಇದಕ್ಕೆ ಯಾರು ಹೊಣೆ? ಸಾರ್ವಜನಿಕರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದು ಯಾವ ನ್ಯಾಯ? ಒಂದಲ್ಲ, ಹತ್ತು ಬಾರಿ ಮರುಪರೀಕ್ಷೆ ನಡೆಸಿದರೂ ಈ ʼಎಡವಟ್ಟು ಕಾಂಗ್ರೆಸ್ ಸರ್ಕಾರʼಕ್ಕೆ ಸರಿಯಾಗಿ ಪರೀಕ್ಷೆ ನಡೆಸಲು ಯೋಗ್ಯತೆ ಇಲ್ಲ ಎನ್ನುವ ಅಭಿಪ್ರಾಯ ಅಭ್ಯರ್ಥಿಗಳಲ್ಲಿ ಈಗಾಗಲೇ ಮೂಡಿದೆ. ಆದ್ದರಿಂದಲೇ ಹಾಜರಾತಿ ಗಣನೀಯವಾಗಿ ಕುಸಿದಿದೆ ಎಂದು ಅವರು ಟೀಕಿಸಿದ್ದಾರೆ.
ಆಗಸ್ಟ್ ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯ ಎಡವಟ್ಟುಗಳಿಗೆ, ಲೋಪ ದೋಷಗಳಿಗೆ ಕಾರಣರಾದ ಪರೀಕ್ಷಾ ನಿಯಂತ್ರಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಅದೇ ಹುದ್ದೆಯಲ್ಲಿ ಮುಂದುವರೆಸಿದ್ದೀರಿ. ಕಾರ್ಯದರ್ಶಿಗಳನ್ನು ಮಾತ್ರ ಎತ್ತಂಗಡಿ ಮಾಡಿದ್ದೀರಿ. ತಮ್ಮ ಸರ್ಕಾರದ ರಾಜಕೀಯ ಹಸ್ತಕ್ಷೇಪ, ಸ್ವಜನಪಕ್ಷಪಾತ, ಭ್ರಷ್ಟಾಚಾರವೇ ಪದೇ ಪದೇ ಈ ಎಡವಟ್ಟುಗಳು ಮರುಕಳಿಸುತ್ತಿರುವುದಕ್ಕೆ ಮೂಲ ಕಾರಣ ಎಂದು ಅವರು ಕಿಡಿಕಾರಿದ್ದಾರೆ.
ಕೆಪಿಎಸ್‌ಸಿ ಸಂಸ್ಥೆ ಈ ರೀತಿ ನಂಬಿಕೆ ಕಳೆದುಕೊಂಡು, ಹೆಸರು ಕೆಡಸಿಕೊಂಡರೆ ಉತ್ತಮ ಅಭ್ಯರ್ಥಿಗಳನ್ನ, ಪ್ರತಿಭಾವಂತ ಯುವಕರನ್ನ ಸರ್ಕಾರಿ ಸೇವೆಯತ್ತ ಆಕರ್ಷಿಸುವುದು ಹೇಗೆ ಸಾಧ್ಯ? ಆಡಳಿತಕ್ಕೆ ಹೊಸ ರಕ್ತ ಬರದಿದ್ದರೆ ಆಡಳಿತವನ್ನು ಚುರುಕುಗೊಳಿಸುವುದು ಹೇಗೆ? ಯುವ ಜನಾಂಗ ಸಾರ್ವಜನಿಕ ಸೇವೆಗೆ ಬರದಿದ್ದರೆ ಆಡಳಿತಕ್ಕೆ ಹೊಸ ಚೈತನ್ಯ ತುಂಬಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, 16 ಸದಸ್ಯರನ್ನು ಒಳಗೊಂಡ ಕೆಪಿಎಸ್ ಸಿ ದೇಶದಲ್ಲೇ ದೊಡ್ಡ ಆಯೋಗವಾಗಿದೆ. ಅವರ ಸಂಬಳ ಸಾರಿಗೆಗೆಂದು ಸರ್ಕಾರ ಕೋಟ್ಯಂತರ ರೂಪಾಯಿ ತೆರಿಗೆ ಹಣ ವ್ಯಯ ಮಾಡುತ್ತದೆ. ಇಷ್ಟಾದರೂ ಒಂದು ಗೊಂದಲಮುಕ್ತ ಪೂರ್ವಭಾವಿ ಪರೀಕ್ಷೆ ನಡೆಸಲು ವಿಫವಾಗುತ್ತದೆ ಎಂದರೆ ಇದನ್ನ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಲೆಬೇಕು. ಲಕ್ಷಾಂತರ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಕಷ್ಟು ಹಣ, ಸಮಯ ಸಮರ್ಪಿಸುತ್ತಾರೆ. ಅನೇಕರು ತಮ್ಮ ಭವಿಷ್ಯವನ್ನೇ ಪಣಕ್ಕಿಟ್ಟು ತಯಾರಿ ನಡೆಸುತ್ತಾರೆ. ಅನೇಕ ಬಡ ಅಭ್ಯರ್ಥಿಗಳು ಸಾಲ-ಸೋಲ ಮಾಡಿ ಕೋಚಿಂಗ್ ಪಡೆಯುತ್ತಾರೆ. ಇಷ್ಟೆಲ್ಲಾ ತನು-ಮನ-ಧನ ಧಾರೆ ಎರೆದು ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳಿಗೆ ಪದೇ ಪದೇ ಈ ರೀತಿ ಗೊಂದಲವಾಗುತ್ತಿದ್ದರೆ ಸರ್ಕಾರ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಿದಂತಾಗಿತ್ತದೆ ಎಂದು ಆರ್ ಅಶೋಕ್ ಹೇಳಿದ್ದಾರೆ.
ಅಭ್ಯರ್ಥಿಗಳ ಹಿತದೃಷ್ಟಿಯಿಂದ, ಆಡಳಿತದ ಹಿತದೃಷ್ಟಿಯಿಂದ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ, ಕೆಪಿಎಸ್ಸಿಯಲ್ಲಿ ಆಮೂಲಗ್ರ ಬದಲಾವಣೆ ತರುವ ಮೂಲಕ ಇಡೀ ನೇಮಕಾತಿ ವ್ಯವಸ್ಥೆಗೆ ಹೊಸ ಕಾಯಕಲ್ಪ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ.