Cubbon Park : ಕಬ್ಬನ್​ ಪಾಕ್​​ನಲ್ಲಿ ಖಾಸಗಿ ಕಲಾ ಉದ್ಯಾನ? ಪರಿಸರ ಪ್ರೇಮಿಗಳ ವಿರೋಧ, ಪ್ರತಿಭಟನೆಗೆ ಸಜ್ಜು

Cubbon Park : ಪ್ರಸ್ತಾಪಿತ ಕಲಾ ಉದ್ಯಾನವು ವೆಂಕಟಪ್ಪ ಆರ್ಟ್ ಗ್ಯಾಲರಿಯ ಸಮೀಪ ನಿರ್ಮಾಣಗೊಳ್ಳುತ್ತಿದೆ ಎಂದು ವರದಿಯಾಗಿದೆ.;

Update: 2025-02-17 14:44 GMT
ಚಿತ್ರ ಕೃಪೆ- ಸಂಸದ ಪಿಸಿ ಮೋಹನ್ ಎಕ್ಸ್​ ಖಾತೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್‌ನಲ್ಲಿ (Cubbon Park ) ಖಾಸಗಿ ಸಂಸ್ಥೆಯೊಂದರ ನಿರ್ವಹಣೆಯಲ್ಲಿ ಕಲಾ ಉದ್ಯಾನ (ಆರ್ಟ್ ಪಾರ್ಕ್) ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ನಿರ್ಧಾರವನ್ನು ವಿರೋಧಿಸಿ, ಬೆಂಗಳೂರಿನ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ನಿರಂತರ ಪ್ರತಿಭಟನೆಗಳನ್ನು ಆಯೋಜಿಸಲು ತೀರ್ಮಾನಿಸಿದೆ. ಒಂದು ವೇಳೆ ಯೋಜನೆ ಜಾರಿಗೆ ಬಂದರೆ ಕೋರ್ಟ್ ಮೊರೆ ಹೋಗಲು ಪರಿಸರ ಪ್ರೇಮಿಗಳು ನಿರ್ಧರಿಸಿದ್ದಾರೆ.

"ಕಬ್ಬನ್ ಪಾರ್ಕ್ ಬೆಂಗಳೂರಿನ ಪ್ರಮುಖ ಹಸಿರು ಪ್ರದೇಶಗಳಲ್ಲಿ ಒಂದು. ಇದು ಒಂದು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು , ವ್ಯಾಪಾರ ಕೇಂದ್ರವೆಂದು ಪರಿಗಣಿಸುವಂತಿಲ್ಲ . ಅಲ್ಲದೇ, ಖಾಸಗಿ ಸಂಸ್ಥೆಯೊಂದಕ್ಕೆ ಕಲಾ ಉದ್ಯಾನ ಸ್ಥಾಪನೆ ಮತ್ತು ನಿರ್ವಹಣೆ ಜವಾಬ್ದಾರಿ ನೀಡಿದರೆ ಪಾರ್ಕ್‌ನ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಪಾರ್ಕ್​ನ ಶಾಂತಿ ಮತ್ತು ಶ್ರೇಷ್ಠತೆ ಕುಂದಲಿದೆ ," ಎಂದು ಅಸೋಸಿಯೇಷನ್ ಅಧ್ಯಕ್ಷ ಎಸ್. ಉಮೇಶ್ 'ದ ಫೆಡರಲ್​' ತಿಳಿಸಿದ್ದಾರೆ.

ಪ್ರಸ್ತಾಪಿತ ಕಲಾ ಉದ್ಯಾನವು ವೆಂಕಟಪ್ಪ ಆರ್ಟ್ ಗ್ಯಾಲರಿಯ ಸಮೀಪ ನಿರ್ಮಾಣಗೊಳ್ಳುತ್ತಿದೆ ಎಂದು ವರದಿಯಾಗಿದೆ.

"ಕೊನೆಯ ಎರಡು ವರ್ಷಗಳಲ್ಲಿ, ಕಬ್ಬನ್ ಪಾರ್ಕ್‌ನ ಬಹುತೇಕ ಭಾಗಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಈ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇದ್ದಂತಿಲ್ಲ. ರಾತ್ರಿ ವೇಳೆಯೂ ಪಾರ್ಕ್ ಒಳಗಡೆ ಕಾಂಪ್ಯಾಕ್ಟರ್ ವಾಹನಗಳು ಹಾಗೂ ಲಾರಿಗಳು ಸಂಚರಿಸುತ್ತಿವೆ. ಅಧಿಕಾರಿಗಳು ಈ ಎಲ್ಲ ಚಟುವಟಿಕೆಗಳ ಮೇಲೂ ಕಣ್ಣಿಟ್ಟಿರಬೇಕು. ಜನರಿಗಾಗಿ ಇರುವ ಉದ್ಯಾನದಲ್ಲಿ ಸಾರ್ವಜನಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಅಧಿಕಾರಿಗಳು ಶ್ರಮವಹಿಸುತ್ತಿದ ಪಾರ್ಕ್ ಒಳಗಿನ ಕಟ್ಟಡ ನಿರ್ಮಾಣದ ಬಗ್ಗೆ ಮಾತ್ರ ಮೌನವಾಗಿದ್ದಾರೆ," ಎಂದು ಉಮೇಶ್ ಆರೋಪಿಸಿದ್ದಾರೆ.

ಪ್ರತಿಭಟನೆಗೆ ಸಜ್ಜು

ಈ ಪರಿಸರ ವಿರೋಧಿ ಯೋಜನೆ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಸಾರ್ವಜನಿಕ ಅಭಿಪ್ರಾಯ ಸಂಘಟಿಸಲು ನಡಿಗೆದಾರರ ಸಂಘ ಮುಂದಾಗಿದೆ. ''ಭಾರಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಯೋಜನೆ ರೂಪಿಸುತ್ತಿದ್ದೇವೆ. ಉದ್ಯಾನದ ನೈಜ ಹಿತಾಸಕ್ತಿಗಳನ್ನು ರಕ್ಷಿಸಲು ಕಾನೂನಿನ ಮೊರೆ ಹೋಗಲೂ ಸಿದ್ಧರಿದ್ದೇವೆ," ಎಂದು ನಡಿಗೆದಾರರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಎಂ ಅವರನ್ನು ಸಂಪರ್ಕಿಸಲು 'ದ ಫೆಡರಲ್​' ಪ್ರಯತ್ನಿಸಿತ್ತು. ಹಲವು ಪ್ರಯತ್ನಗಳ ಹೊರತಾಗಿಯೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಕುಸುಮಾ (ಉಪನಿರ್ದೇಶಕಿ, ಕಬ್ಬನ್ ಪಾರ್ಕ್) ಸಹ ಪ್ರತಿಕ್ರಿಯೆ ನೀಡಲು ಲಭ್ಯರಾಗಿರಲಿಲ್ಲ.

ಹಿಂದಿನ ಹೋರಾಟಗಳು

ಕಬ್ಬನ್ ಪಾರ್ಕ್ ಕೇವಲ ಜನರಿಗೆ ನಗರದ ಗದ್ದಲದಿಂದ ದೂರ ಸರಿಯಲು ಸ್ಥಳ ನೀಡುವಷ್ಟೇ, ಜನಸಾಮಾನ್ಯರು ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಲು ಮತ್ತು ಜನಾಂದೋಲನ ಮಾಡುವ ವೇದಿಕೆಯೂ ಆಗಿದೆ.

1998ರಲ್ಲಿ, ಕರ್ನಾಟಕ ಸರ್ಕಾರವು ಸುಮಾರು 45 ಎಕರೆ ಕಬ್ಬನ್ ಪಾರ್ಕ್ ಪ್ರದೇಶವನ್ನು "ಕಾನೂನುಬಾಹಿರ ಬಳಕೆ" ಎಂದು ಪರಿಗಣಿಸಿ ಪುನರ್ ವ್ಯವಸ್ಥೆ ಮಾಡಲು ಮುಂದಾದಾಗ , ಅದು ಭಾರಿ ಸಾರ್ವಜನಿಕ ಆಕ್ರೋಶ ಉಂಟುಮಾಡಿತ್ತು. ಬೆಂಗಳೂರಿನಲ್ಲಿ ಅತೀ ದೊಡ್ಡ ನಾಗರಿಕ ಪ್ರತಿಭಟನೆಯಾಗಿ ಪರಿವರ್ತನೆಯಾಗಿತ್ತು. 40 ದಿನಗಳವರೆಗೆ ನಡೆದ ಈ ಹೋರಾಟದಲ್ಲಿ ಸುಮಾರು 30,000 ರಿಂದ 40,000 ಮಂದಿ ಭಾಗವಹಿಸಿದ್ದರು, ಈ ಪೈಕಿ ನೌಕರರು, ವಿದ್ಯಾರ್ಥಿಗಳು ಮತ್ತು ಪರಿಸರ ಪ್ರೇಮಿಗಳು ಸೇರಿದ್ದರು.

2024ರ ಫೆಬ್ರವರಿಯಲ್ಲಿ, ಕರ್ನಾಟಕ ಹೈಕೋರ್ಟ್‌ಗೆ 10 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಕಬ್ಬನ್ ಪಾರ್ಕ್ ಪ್ರದೇಶವನ್ನು ಬಳಸಲು ಮುಂದಾದಾಗ ಅದು ಸಾರ್ವಜನಿಕ ವಿರೋಧಕ್ಕೆ ಕಾರಣವಾಯಿತು. ಪರಿಸರ ಪ್ರೇಮಿಗಳು, ನಡಿಗೆದಾರರು ಮತ್ತು ಸಾರ್ವಜನಿಕರು ಈ ಯೋಜನೆಯ ವಿರುದ್ಧ ಒಗ್ಗೂಡಿದ್ದರು. ಇದು ಪಾರ್ಕ್‌ನ ಪರಿಸರ ಸಮತೋಲನಕ್ಕೆ ಅಪಾಯಕಾರಿಯಾಗಬಹುದು ಮತ್ತು ಬೆಂಗಳೂರಿನ ಹಸಿರಿಗೆ ಹಾನಿ ಮಾಡಬಹುದು ಎಂದು ವಾದಿಸಲಾಗಿತ್ತು.

ವಾಹನ ಪ್ರವೇಶ ವಿವಾದ

ಕಬ್ಬನ್ ಪಾರ್ಕ್‌ನಲ್ಲಿ ಸಾರ್ವಜನಿಕ ರಜಾದಿನಗಳು ಮತ್ತು ವಾರಾಂತ್ಯದಲ್ಲಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. , ಇದರಿಂದ ಪರಿಸರದ ಸಮತೋಲನ ಮತ್ತು ಪಾರ್ಕ್‌ನ ಶಾಂತಿ ಕಾಪಾಡಲು ಸಾಧ್ಯವಾಗುತ್ತಿತ್ತು. ಆದರೆ, ಈ ನಿಯಮದಲ್ಲಿ ಇತ್ತೀಚೆಗೆ ಬದಲಾವಣೆ ತರಲಾಯಿತು.

2025ರ ಜನವರಿಯಲ್ಲಿ, ಕರ್ನಾಟಕ ಸರ್ಕಾರವು ಕೇಂದ್ರ ವ್ಯಾಪಾರ ಜಿಲ್ಲೆಯ (CBD) ಟ್ರಾಫಿಕ್ ಸಮಸ್ಯೆ ನಿವಾರಣೆಗೆ, ಕಬ್ಬನ್ ಪಾರ್ಕ್‌ನಲ್ಲಿ ಮಾಸದಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ರಾತ್ರಿ 7 ಗಂಟೆಯಿಂದ 10 ಗಂಟೆಯವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮೂರು ತಿಂಗಳ ಪ್ರಯೋಗ ಆರಂಭಿಸಿತು. ಈ ನಿರ್ಧಾರ ಪರಿಸರ ಪ್ರೇಮಿಗಳು ಮತ್ತು ನಿಯಮಿತ ವಾಕರ್‌ಗಳಿಂದ ತೀವ್ರ ವಿರೋಧಕ್ಕೆ ಗುರಿಯಾಗಿದೆ. 

Tags:    

Similar News