ಬೆಂಗಳೂರು ಮಹಾಮಳೆ | ರಾಜಕೀಯ ಕೆಸರೆರಚಾಟ: ಸಿಲಿಕಾನ್‌ ಸಿಟಿಯ ಮಾನ ಹರಾಜು ಹಾಕಬೇಡಿ ಎಂದ ನೆಟ್ಟಿಗರು

ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಸುರಿಯುತ್ತಿರುವ ಮಳೆಯನ್ನು ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ. ಪ್ರಕೃತಿಗೆ ಕಡಿವಾಣ ಹಾಕಲು ಸಾಧ್ಯವೇ? ಚಂಡಮಾರುತ ತಡೆಯಲು ಸಾಧ್ಯವೇ? ಇದನ್ನು ಅರ್ಥ ಮಾಡಿಕೊಳ್ಳದ ವಿರೋಧ ಪಕ್ಷಗಳು ರಾಜ್ಯದ ಮಾನ ಹರಾಜು ಹಾಕುತ್ತಿವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಆರೋಪಿಸಿದ್ದಾರೆ.;

Update: 2024-10-16 08:51 GMT

ಬೆಂಗಳೂರಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಹಾಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇದೀಗ ರಾಜಕೀಯ ಕೆಸರೆರಚಾಟಕ್ಕೂ ವೇದಿಕೆಯಾಗಿ ಪರಿಣಮಿಸಿದೆ.

"ಭಾರತದ ಸಿಲಿಕಾನ್ ವ್ಯಾಲಿ ಒಂದೇ ಮಳೆಗೆ ಕೆರೆಯಂತಾಗಿದೆ. ಹೂಡಿಕೆದಾರರ ಸ್ವರ್ಗ ಇನ್ನಿಲ್ಲದ ದುಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಕೆಟ್ಟ ನೀತಿಗಳು ಕಾರಣ" ಎಂದು ಟೀಕಿಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬುಧವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

"ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಸುರಿಯುತ್ತಿರುವ ಮಳೆಯನ್ನು ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ. ಪ್ರಕೃತಿಗೆ ಕಡಿವಾಣ ಹಾಕಲು ಸಾಧ್ಯವೇ? ಚಂಡಮಾರುತ ತಡೆಯಲು ಸಾಧ್ಯವೇ? ಇದನ್ನು ಅರ್ಥ ಮಾಡಿಕೊಳ್ಳದ ವಿರೋಧ ಪಕ್ಷಗಳು ರಾಜ್ಯದ ಮಾನ ಹರಾಜು ಹಾಕುವುದನ್ನು ನಿಲ್ಲಿಸಬೇಕು" ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಮಳೆ ಮುಂದುವರಿದಿರುವ ಕಾರಣ ಸಂಚಾರ ದಟ್ಟಣೆ ಉಂಟಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡಬೇಕು" ಎಂದು ಹೇಳಿದರು.

ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಕಾರ್ಯಕ್ರಮದಿಂದ ಮರಳಿದ ಬಳಿಕ ಇಂದು ಸಂಜೆ (ಅ.16) ಪೊಲೀಸ್ ಇಲಾಖೆ, ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ ಎಂದು ತಿಳಿಸಿದರು.

"ಪ್ರಕೃತಿಗೆ ನಾವು ಕಡಿವಾಣ ಹಾಕಿ, ಬುದ್ದಿಹೇಳಲು ಸಾಧ್ಯವೇ? ಚಂಡಮಾರುತದ ಪರಿಣಾಮ ಅನಿರೀಕ್ಷಿತವಾಗಿ ಮಳೆ ಸುರಿಯುತ್ತಿದೆ. ಇನ್ನು ಹೆಚ್ಚಿನ ಮಳೆ ಬಂದರೂ ಅದನ್ನು ನಿಭಾಯಿಸಲು ಸಾರ್ವಜನಿಕರು ಹಾಗೂ ಸರ್ಕಾರ ಸಮರ್ಥವಾಗಿದೆ" ಎಂದು ಹೇಳಿದರು.

ಮಂಗಳವಾರ ರಾತ್ರಿ ಮಾನ್ಯತಾ ಟೆಕ್ ಪಾರ್ಕ್ ಜಲಾವೃತವಾಗಿರುವ ವಿಡಿಯೊ ಉಲ್ಲೇಖಿಸಿ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು.

"ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ʼಐಟಿ ಕಾರಿಡಾರ್'ನಲ್ಲಿ ಪ್ರವಾಹ ಸದೃಶ ಪರಿಸ್ಥಿತಿ ತಲೆದೋರಿದೆ" ಎಂದು ದೂರಿದ್ದರು.

"ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ. ಸರ್ಕಾರದ ಘೋರ ವೈಫಲ್ಯದಿಂದ ಬೆಂಗಳೂರಿನ ಜನರು ಮಳೆಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಕೆಟ್ಟ ನೀತಿಗಳು ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರವನ್ನು ಹಾಳುಗೆಡವಿದೆ" ಎಂದು ಕುಮಾರಸ್ವಾಮಿ ಟೀಕಿಸಿದ್ದರು.

ಕುಮಾರಸ್ವಾಮಿ ಟೀಕೆಗೆ ನೆಟ್ಟಿಗರ ತಿರುಗೇಟು

ಇನ್ನು ಮಳೆಯಿಂದ ಹಾನಿಗೊಳಗಾದ ಮಾನ್ಯತಾ ಟೆಕ್ ಪಾರ್ಕ್ ಹಾಗೂ ಬೆಂಗಳೂರಿನ ಪರಿಸ್ಥಿತಿ ಕುರಿತು ಟೀಕಿಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಟ್ವೀಟ್‌ಗೆ ನೆಟ್ಟಿಗರು ಕೂಡ ತಿರುಗೇಟು ನೀಡಿದ್ದಾರೆ.

"ಈಗ ನೀವೇ ಮುಖ್ಯಮಂತ್ರಿಯಾಗಿದ್ದು, ಮಳೆ ಬಂದಿದ್ದರೆ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿತ್ತಾ ಸರ್, ಅವ್ಯವಸ್ಥೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪಾಲೂ ಇದೆ. ಸುಮ್ಮನೆ ಯಾಕೆ ಬೆಂಗಳೂರಿನ ಮಾನ ಹರಾಜಾಕುತ್ತೀರಾ" ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಟ್ವೀಟ್ನಲ್ಲಿ "ನೀವು ಎರಡು ಬಾರಿ ಸಿಎ ಆಗಿದ್ದಿರಿ. ಬಿಜೆಪಿ ಜೊತೆ ಮೈತ್ರಿ ಸರ್ಕಾರ ನಡೆಸಿದ್ದಿರಿ, ಬಿಬಿಎಂಪಿಯಲ್ಲಿ ನಿಮ್ಮದೇ ಪಕ್ಷದ ಅಧಿಕಾರವಿತ್ತು. ನೀವೆ ಏನು ಮಾಡಿಲ್ಲ. 15 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಏಕೆ ದೂರುತ್ತಿದ್ದೀರಿ. ಇಲ್ಲಿ ಯಾವ ಸರ್ಕಾರ ಬಂದರೂ ಮಳೆಗೆ ರಸ್ತೆಗಳು ಜಲಾವೃತವಾಗುತ್ತವೆ. ಏಕೆಂದರೆ ಬೆಂಗಳೂರಿನ ಚರಂಡಿ ವ್ಯವಸ್ಥೆ ಬ್ರಿಟೀಷರ ಕಾಲದ್ದು, ಹೀಗಿರುವಾಗ ಸುಮ್ಮನೆ ರಾಜಕೀಯಕ್ಕಾಗಿ ಬೆಂಗಳೂರಿನ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜಾಕಬೇಡಿ" ಎಂದು ಸಲಹೆ ನೀಡಿದ್ದಾರೆ.

Tags:    

Similar News