ಶಿಕ್ಷಣ ಮತ್ತು ಕೈಗಾರಿಕೆಗಳ ಸಹಭಾಗಿತ್ವಕ್ಕೆ ಬೆಂಗಳೂರು ಕೌಶಲ್ಯ ಶೃಂಗಸಭೆಯಲ್ಲಿ ತಜ್ಞರ ಕರೆ
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಕೌಶಲ್ಯಯುತ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರಿ ತಿವಾರಿ ತಿಳಿಸಿದ್ದಾರೆ
"ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆಯು ಹಳೆಯ ಚೌಕಟ್ಟಿನಿಂದ ಹೊರಬಂದು, ಉದ್ಯೋಗ ಆಧಾರಿತ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ," ಎಂದು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅವರು ಪ್ರತಿಪಾದಿಸಿದರು.
ನಗರದಲ್ಲಿ ನಡೆಯುತ್ತಿರುವ "ಬೆಂಗಳೂರು ಕೌಶಲ್ಯ ಶೃಂಗಸಭೆ 2025" ರಲ್ಲಿ "ನಾಳೆಯ ಕೌಶಲ್ಯಗಳನ್ನು ಇಂದೇ ನಿರ್ಮಿಸುವುದು" ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಕೈಗಾರಿಕೆಗಳ ನಡುವಿನ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು.
ಶಿಕ್ಷಣ ಮತ್ತು ಕೈಗಾರಿಕೆಗಳ ಸಹಭಾಗಿತ್ವ ಅತ್ಯಗತ್ಯ
ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತಿದ್ದರೂ, ನಾವು ಇನ್ನೂ ಹಳೆಯ ವ್ಯವಸ್ಥೆಯಲ್ಲೇ ಸಿಲುಕಿದ್ದೇವೆ ಎಂದು ಅತುಲ್ ಕುಮಾರ್ ತಿವಾರಿ ಕಳವಳ ವ್ಯಕ್ತಪಡಿಸಿದರು. "ಪದವಿಗಾಗಿ ಓದುವ ಬದಲು, ಜೀವನ ನಡೆಸಲು ಮತ್ತು ಉದ್ಯೋಗ ಪಡೆಯಲು ಬೇಕಾದ ಕೌಶಲ್ಯಗಳಿಗಾಗಿ ಕಲಿಯುವ ವಾತಾವರಣ ನಿರ್ಮಾಣವಾಗಬೇಕು. ಇದಕ್ಕಾಗಿ ಸರ್ಕಾರ ಮತ್ತು ಕೈಗಾರಿಕೆಗಳು ಕೈಜೋಡಿಸಬೇಕು. ಶಿಕ್ಷಣ ವ್ಯವಸ್ಥೆಯನ್ನು ಹೊಸತನದಿಂದ ವಿನ್ಯಾಸಗೊಳಿಸುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ," ಎಂದು ಅವರು ಹೇಳಿದರು. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಅವರು ಶ್ಲಾಘಿಸಿದರು.
ಕೌಶಲ್ಯವಿಲ್ಲದ ಶಿಕ್ಷಣ ವ್ಯರ್ಥ
"ಜೀವನದಲ್ಲಿ ಯಶಸ್ಸು ಗಳಿಸಲು ಪ್ರತಿಯೊಬ್ಬ ವಿದ್ಯಾರ್ಥಿಗೂ ಕೌಶಲ್ಯ ಅತ್ಯಂತ ಮುಖ್ಯ," ಎಂದು ತಿವಾರಿ ಒತ್ತಿ ಹೇಳಿದರು. "ಇಂದಿನ ದಿನಗಳಲ್ಲಿ, ಯಾವುದೇ ಉದ್ಯೋಗ ಅಥವಾ ವ್ಯಾಪಾರದಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಕೌಶಲ್ಯ ಅತ್ಯಗತ್ಯ. ಕೌಶಲ್ಯಯುತ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶಗಳು ಹೆಚ್ಚು. ಒಂದು ವೇಳೆ ಕೌಶಲ್ಯ ಇಲ್ಲದಿದ್ದರೆ, ಎಷ್ಟೇ ಓದಿದರೂ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಇದಕ್ಕಾಗಿಯೇ ಶಾಲಾ ದಿನಗಳಿಂದಲೇ ಮಕ್ಕಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳಿಗೆ ಕೌಶಲ್ಯ ನೀಡದೆ, ಉದ್ಯೋಗವನ್ನು ಹೆಚ್ಚಿಸಲು ಸಾಧ್ಯವಾಗದಿದ್ದರೆ, ನಾವು ಏನು ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ," ಎಂದು ಅವರು ಎಚ್ಚರಿಸಿದರು.
ಬೆಂಗಳೂರನ್ನು ಮೀರಿದ ಅಭಿವೃದ್ಧಿ
ಶಿಕ್ಷಣ ಕ್ಷೇತ್ರದಲ್ಲಿನ ಹೂಡಿಕೆಯು ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಎಂದು ಅವರು ಆಗ್ರಹಿಸಿದರು. "ಬೆಂಗಳೂರು ಹೊರತುಪಡಿಸಿ, ಇತರೆ ಜಿಲ್ಲೆಗಳಲ್ಲಿ ಕೇವಲ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಸಾಲದು, ಅಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಬೇಕು. ಶಾಲಾ-ಕಾಲೇಜುಗಳಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ, ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿಯೇ ಒದಗಿಸಬೇಕು," ಎಂದು ಅವರು ಸಲಹೆ ನೀಡಿದರು.
ಜಾಗತಿಕ ಬೇಡಿಕೆಗೆ ತಕ್ಕಂತೆ ಶಿಕ್ಷಣ
ಗ್ಲೋಬಲ್ ಫೌಂಡೇಶನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಚಡ್ಡಾ ಮಾತನಾಡಿ, "ಭವಿಷ್ಯದ ದೃಷ್ಟಿಯಿಂದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕಾಲಕ್ಕೆ ತಕ್ಕಂತೆ ಬದಲಿಸಬೇಕು. ಇಂದಿನ ಶಿಕ್ಷಣವು ಕೇವಲ ತರಗತಿಗೆ ಸೀಮಿತವಾಗಿಲ್ಲ, ಬದಲಿಗೆ ಅದು ಜಗತ್ತಿಗೆ ಬೇಕಾದ ಜ್ಞಾನವನ್ನು ನೀಡುವಂತಿರಬೇಕು. ಪ್ರತಿ ಕ್ಷೇತ್ರದಲ್ಲೂ ಕೌಶಲ್ಯವುಳ್ಳವರಿಗೆ ಬೇಡಿಕೆ ಹೆಚ್ಚಾಗಿದ್ದು, ಇದರ ವ್ಯಾಪ್ತಿ ಬಹಳ ವಿಸ್ತಾರವಾಗಿದೆ. ಹೀಗಾಗಿ, ಯಾವುದೋ ಒಂದು ಕ್ಷೇತ್ರಕ್ಕೆ ಮಾತ್ರವಲ್ಲ, ಪ್ರತಿ ಕ್ಷೇತ್ರಕ್ಕೂ ಕೌಶಲ್ಯ ಅತ್ಯಗತ್ಯ. ಈ ದಿಸೆಯಲ್ಲಿ ಸರ್ಕಾರಗಳು ಕಾರ್ಯನಿರ್ವಹಿಸಬೇಕು," ಎಂದು ಕರೆ ನೀಡಿದರು.