ಆನೆಕಲ್ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ; ಫೇಸ್‌ಬುಕ್ ವಿಡಿಯೊ ಮಾಡಿಟ್ಟು ಹಲವರ ಬಗ್ಗೆ ಆರೋಪ
ಸಮಂದು ಕಿರಣ್, ಗೋಕುಲ್, ಪ್ಯಾಶನ್ ಹರೀಶ್, ಭಾಸ್ಕರ್, ನಾರಾಯಣಪ್ಪ ದೊಡ್ಡಹಾಗೆ, ಮಧುಗೌಡ, ಮತ್ತು ಸರವಣ ಎಂಬವರ ಹೆಸರುಗಳನ್ನು ವಿಡಿಯೊದಲ್ಲಿ ಉಲ್ಲೇಖಿಸಿದ್ದು. “ಯಾರನ್ನೇ ಬಿಟ್ಟರೂ ಕಿರಣ್‌ನನ್ನು ದಯವಿಟ್ಟು ಬಿಡಬೇಡಿ” ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.;
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು (35) ಎಂಬುವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕೊಡಗು ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವು ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಆನೇಕಲ್ ಪಟ್ಟಣದ ಎಸ್‌ವಿಎಂ ಸ್ಕೂಲ್ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ಪ್ರವೀಣ್ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಸಾವಿಗೆ ಕಾರಣರಾದವರ ಹೆಸರುಗಳನ್ನು ಉಲ್ಲೇಖಿಸಿ, ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪ್ರವೀಣ್ ಗೌಡ ಬೇಲೂರು ತಮ್ಮ ಫೇಸ್‌ಬುಕ್ ವಿಡಿಯೋದಲ್ಲಿ ಕಳೆದ ಎರಡು ತಿಂಗಳಿಂದ ಮಾನಸಿಕವಾಗಿ ಕುಗ್ಗಿದ್ದ ತಮ್ಮ ಅನುಭವವನ್ನು ವಿವರಿಸಿದ್ದಾರೆ. ತಮ್ಮ ಸಾವಿಗೆ ಕೆಲವರು ನೇರವಾಗಿ ಕಾರಣರಾಗಿದ್ದಾರೆ ಎಂದು ಆರೋಪಿಸಿ, ಸಮಂದು ಕಿರಣ್, ಗೋಕುಲ್, ಪ್ಯಾಶನ್ ಹರೀಶ್, ಭಾಸ್ಕರ್, ನಾರಾಯಣಪ್ಪ ದೊಡ್ಡಹಾಗೆ, ಮಧುಗೌಡ, ಮತ್ತು ಸರವಣ ಎಂಬವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. “ಯಾರನ್ನೇ ಬಿಟ್ಟರೂ ಕಿರಣ್‌ನನ್ನು ದಯವಿಟ್ಟು ಬಿಡಬೇಡಿ” ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ವಿಡಿಯೋದಲ್ಲಿ ಪ್ರವೀಣ್, ಕಿರಣ್ ಹಲವು ಯುವತಿಯರಿಗೆ ಫೋನ್ ಮೂಲಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. “ಕಿರಣ್‌ನ ಈ ಕೃತ್ಯಗಳೆಲ್ಲ ನನ್ನ ಮೇಲೆ ಬಂದಿವೆ. ಹಣದ ವಿಚಾರದಲ್ಲಿ ಮಾತುಕತೆಗೆಂದು ಕರೆಸಿಕೊಂಡು ನನ್ನ ಮೇಲೆ ಹಲ್ಲೆ ನಡೆಸಲಾಗಿದೆ” ಎಂದು ದೂರಿದ್ದಾರೆ.
ಇದೇ ವೇಳೆ, ಬಿಜೆಪಿ ಮುಖಂಡ ನಾಯನಹಳ್ಳಿ ಮುನಿರಾಜು ಅವರ ಮನೆಗೆ ತಮ್ಮನ್ನು ಕರೆಸಿಕೊಂಡಿದ್ದಾಗ, ಆನೇಕಲ್ ಕೌನ್ಸಿಲರ್ ಭಾಗ್ಯ ಮತ್ತು ಆಕೆಯ ಪತಿ ಶ್ರೀನಿವಾಸ್ ಹತ್ತಾರು ಮಂದಿಯನ್ನು ಕರೆತಂದು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. “ನನ್ನ ಮೊಬೈಲ್ ಕಿತ್ತುಕೊಂಡು, ಎರಡು ಗಂಟೆಗಳ ಕಾಲ ಹಲ್ಲೆ ಮಾಡಿದ್ದಾರೆ. ಮನಸೋ ಇಚ್ಛೆ ಗಾಯಗೊಳಿಸಿದ್ದಾರೆ” ಎಂದು ಪ್ರವೀಣ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ತಮ್ಮ ಸಾವಿನ ಬಳಿಕ ದೇಹದ ಮೇಲಿರುವ ಗಾಯದ ಗುರುತುಗಳನ್ನು ಪರಿಶೀಲಿಸಿ, ಪೊಲೀಸರು ನ್ಯಾಯ ಕೊಡಿಸಬೇಕು ಎಂದು ಪ್ರವೀಣ್ ಮನವಿ ಮಾಡಿದ್ದಾರೆ. ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ, ಗುರುವಾರ ರಾತ್ರಿ ಎಸ್‌ವಿಎಂ ಸ್ಕೂಲ್ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸರ ತನಿಖೆ ಆರಂಭ
ಘಟನೆಯ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಪ್ರವೀಣ್‌ನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಡಿಯೋದಲ್ಲಿ ಉಲ್ಲೇಖಿತ ವ್ಯಕ್ತಿಗಳನ್ನು ವಿಚಾರಣೆಗೆ ಕರೆಯಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ದೇಹದ ಮೇಲಿನ ಗಾಯದ ಗುರುತುಗಳನ್ನು ಆಧರಿಸಿ, ಹಲ್ಲೆಯ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.