Manmohan Singh | ಭೀಕರ ಆರ್ಥಿಕ ಪರಿಸ್ಥಿತಿ ಸರಿದಾರಿಗೆ ತಂದ ಅರ್ಥಶಾಸ್ತ್ರಜ್ಞ; ಎಚ್.ಡಿ.ದೇವೇಗೌಡ
ಮನಮೋಹನ ಸಿಂಗ್ ನಿಧನ ಬಹಳ ನೋವುಂಟು ಮಾಡಿದೆ. ನಾನು ಹಾಗೂ ಮನಮೋಹನ್ ಸಿಂಗ್ 1991ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಭೇಟಿಯಾದೆವು. ಅವರು ಪಿ.ವಿ.ನರಸಿಂಹ ರಾವ್ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನೆನಪಿಸಿಕೊಂಡರು.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನಕ್ಕೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಕಂಬನಿ ಮಿಡಿದಿದ್ದು, ಅವರ ಸಾಧನೆಗಳ ಗುಣಗಾನ ಮಾಡಿದ್ದಾರೆ. ಸರಳ ವ್ಯಕ್ತಿತ್ವ, ಸೌಮ್ಯ ಸ್ವಾಭಾವದ ಮೂಲಕ ಎಲ್ಲರ ಮನ ಗೆದ್ದಿದ್ದರು. 90ರ ದಶಕದಲ್ಲಿ ದೇಶದ ಆರ್ಥಿಕತೆ ಭೀಕರ ಪರಿಸ್ಥಿತಿ ತಲುಪಿದಾಗ ಹಣಕಾಸು ಸಚಿವರಾಗಿ ಬಂದ ಡಾ.ಮನಮೋಹನ್ ಸಿಂಗ್ ಅವರು ತಮ್ಮ ದೂರದೃಷ್ಟಿಯ ಕಾರ್ಯಕ್ರಮಗಳ ಮೂಲಕ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತಂದರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಗುಣಗಾನ ಮಾಡಿದ್ದಾರೆ.
ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಇದು ಅತ್ಯಂತ ದುಃಖದ ದಿನ. ಮನಮೋಹನ ಸಿಂಗ್ ನಿಧನ ಬಹಳ ನೋವುಂಟು ಮಾಡಿದೆ. ನಾನು ಹಾಗೂ ಮನಮೋಹನ್ ಸಿಂಗ್ 1991ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಭೇಟಿಯಾದೆವು. ಅವರು ಪಿ.ವಿ.ನರಸಿಂಹ ರಾವ್ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದರು ಎಂದು ನೆನಪಿಸಿಕೊಂಡರು.
ಆರ್ಥಿಕ ಸ್ಥಿತಿ ಹದಗೆಟ್ಟಿದ್ದ ಸಮಯ
1991ರ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಆರ್ಥಿಕತೆಯನ್ನು ಸರಿದಾರಿಗೆ ತರಲು ಸಾಕಷ್ಟು ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ದೇಶದ 130 ಟನ್ ಚಿನ್ನವನ್ನು ಒತ್ತೆ ಇಡಲಾಗಿತ್ತು. ಅಂತಹ ಭೀಕರ ಪರಿಸ್ಥಿತಿಯಲ್ಲಿ ಮನಮೋಹನ್ ಸಿಂಗ್ ಆರ್ಥಿಕ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು. ಕೆಲವೇ ವರ್ಷಗಳಲ್ಲಿ ದೇಶದ ಆರ್ಥಿಕತೆಯ ಗತಿಯನ್ನೇ ಬದಲಿಸಿದರು ಎಂದು ನೆನಪಿಸಿಕೊಂಡರು.
ಮನಮೋಹನ್ ಸಿಂಗ್ ಅವರನ್ನು ನಾನು ಬಹಳ ಟೀಕೆ ಮಾಡಿದ್ದೆ. ಅವರ ನೀತಿಗಳನ್ನು ಪ್ರಶ್ನೆ ಮಾಡಿದ್ದೆ. ಆದರೂ ಅವರು ಪಟ್ಟುಬಿಡದೇ ಖಾಸಗೀಕರಣ, ವಿದೇಶಿ ಹೂಡಿಕೆಗೆ ಅನುಮತಿ ನೀಡುವ ಮೂಲಕ ದೇಶದ ಆರ್ಥಿಕ ನೀತಿಗಳನ್ನು ಮಾರ್ಪಾಡು ಮಾಡಿದರು. ಅವರು ಹಣಕಾಸು ಸಚಿವರಾಗಿ ಬರುವುದಕ್ಕೆ ಮೊದಲು ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಬಹಳ ದೊಡ್ಡ ಅನುಭವ ಗಳಿಸಿಕೊಂಡರು. ಆರ್ಥಿಕ ವಿಚಾರದಲ್ಲಿ ಅವರು ತುಂಬಾ ಬುದ್ದಿವಂತರಾಗಿದ್ದರು ಎಂದು ದೇವೇಗೌಡರು ಸ್ಮರಿಸಿದರು.
ಮನಮೋಹನ್ ಕೊಡುಗೆ ಅಪಾರ; ಎಚ್‌ಡಿಕೆ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅಂತಿಮ ನಮನ ಸಲ್ಲಿಸಿದರು. ಶುಕ್ರವಾರ ನವದೆಹಲಿಯಲ್ಲಿ ಮನಮೋಹನ್ ಸಿಂಗ್ ನಿವಾಸಕ್ಕೆ ತೆರಳಿದ ಸಚಿವರು, ಅಗಲಿದ ಮಾಜಿ ಪ್ರಧಾನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ದೇಶದ ಅಭಿವೃದ್ಧಿಗೆ ಮನಮೋಹನ್ ಸಿಂಗ್ ಅವರು ಮಹಾನ್ ಕೊಡುಗೆ ನೀಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಅಪಾಯದಿಂದ ಪಾರು ಮಾಡಿದ್ದರು. ಆರ್ಥಿಕ ಸಚಿವರಾಗಿ, ಪ್ರಧಾನಿಯಾಗಿ ಹಾಗೂ ಹಣಕಾಸು ತಜ್ಞರಾಗಿ ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.