ಇವಿಎಂಗೆ ರಾಜ್ಯ ನಕಾರ| ಸ್ಥಳೀಯ ಸಂಸ್ಥೆ ಚುನಾವಣೆ; ಮತ್ತೆ ಬ್ಯಾಲೆಟ್ ಪೇಪರ್ ಬಳಕೆಗೆ ಸದ್ಯದಲ್ಲೇ ಸುಗ್ರೀವಾಜ್ಞೆ
ಮತಪತ್ರ ಬಳಕೆ, ಮತದಾರರ ಪಟ್ಟಿ ತಯಾರಿಸಲು ಮೂರು ಕಾಯ್ದೆಗಳಿಗೆ ತಿದ್ದುಪಡಿ ತಂದು ಜಾರಿಗೊಳಿಸಬೇಕು. ಸದ್ಯಕ್ಕೆ ಅಧಿವೇಶನ ಇಲ್ಲದ ಕಾರಣ ಸುಗ್ರೀವಾಜ್ಞೆ ಮೂಲಕ ಅನುಷ್ಠಾನಗೊಳಿಸಬೇಕು.;
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆ ಮತ್ತು ರಾಜ್ಯ ಚುನಾವಣಾ ಆಯೋಗವು ಪ್ರತ್ಯೇಕ ಮತದಾರರ ಪಟ್ಟಿ ಸಿದ್ದಪಡಿಸಲು ಅವಕಾಶ ನೀಡುವ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದೆ. ಈ ತೀರ್ಮಾನದ ಬೆನ್ನಲ್ಲೇ ಇದೀಗ ಮತಪತ್ರಗಳ ಬಳಕೆಯ ಕೂಗಿಗೆ ಮತ್ತಷ್ಟು ಬಲಬಂದಂತಾಗಿದೆ.
ಈ ನಡುವೆ, ಮತಪತ್ರ ಬಳಕೆ ಮತ್ತು ಮತದಾರರ ಪಟ್ಟಿ ತಯಾರಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಣಯವು ಕಾಯ್ದೆ ಮೂಲಕ ಜಾರಿಗೊಳಿಸಬೇಕು. ಹಾಗಿದ್ದಲ್ಲಿ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಸಾಧ್ಯ ಮತ್ತು ಪ್ರತ್ಯೇಕ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಅವಕಾಶ ಸಿಗಲಿದೆ. ಸದ್ಯಕ್ಕೆ ಅಧಿವೇಶನ ಇಲ್ಲದ ಕಾರಣ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಣಯವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಬೇಕಾಗಿದೆ. ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ರಾಜ್ಯ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಸಿದ್ಧಪಡಿಸುವುದಕ್ಕೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ.
ಮೂರು ಕಾಯ್ದೆಗಳಿಗೆ ತಿದ್ದುಪಡಿ ಅಗತ್ಯ:
ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮತದಾರರ ಪಟ್ಟಿ ಸಿದ್ಧಪಡಿಸಬೇಕಾದರೆ ಮತ್ತು ಬ್ಯಾಲೆಟ್ ಪೇಪರ್ ಬಳಕೆಗೆ ಮೂರು ಕಾಯ್ದೆಗಳಿಗೆ ರಾಜ್ಯ ಸರ್ಕಾರವು ತಿದ್ದುಪಡಿ ಜಾರಿಗೊಳಿಸಬೇಕಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, ಕರ್ನಾಟಕ ಕಾರ್ಪೋರೇಷನ್ ಕಾಯ್ದೆ ಮತ್ತು ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ. ಪ್ರಸ್ತುತ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದಲೇ ಪಡೆದುಕೊಂಡು ಚುನಾವಣೆ ನಡೆಸುತ್ತಿದೆ. ಮುಖ್ಯ ಚುನಾವಣಾಧಿಕಾರಿ ಕಚೇರಿ ನೀಡಿದ ದತ್ತಾಂಶದಿಂದಲೇ ಚುನಾವಣೆ ನಡೆಸುತ್ತಿದೆ. ಮತದಾರರಪಟ್ಟಿಯಲ್ಲಿ ಹೊಸ ಹೆಸರುಗಳನ್ನು ಸೇರ್ಪಡೆ ಮಾಡುವುದಾಗಲಿ, ತೆಗೆದು ಹಾಕುವುದಾಗಲಿ ಸಾಧ್ಯವಿರಲಿಲ್ಲ. ಇದೀಗ ಸರ್ಕಾರ ಸಚಿವ ಸಂಪುಟದಲ್ಲಿ ಕೈಗೊಂಡಿರುವ ತೀರ್ಮಾನದ ಆಧಾರದ ಮೇಲೆ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಮತದಾರರಪಟ್ಟಿಯಲ್ಲಿ ಹೊಸ ಹೆಸರುಗಳನ್ನು ಸೇರಿಸುವುದು ಮತ್ತು ತೆಗೆದು ಹಾಕುವುದಕ್ಕೆ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ಲಭಿಸಿದಂತಾಗುತ್ತದೆ. ಅಲ್ಲದೇ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಳಕೆ ಮಾಡುವ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಅವಕಾಶ ನೀಡಿದಂತಾಗುತ್ತದೆ. ಇದರಿಂದ ಮುಖ್ಯಚುನಾವಣಾಧಿಕಾರಿ ಕಚೇರಿಯ ಮೇಲೆ ಅವಲಂಬಿತವಾಗಿರಬೇಕಾದ ಅಗತ್ಯ ಇರುವುದಿಲ್ಲ.
ಮುಂದಿನ ತಿಂಗಳಿನಿಂದ ಕಾರ್ಯಾರಂಭ ಸಾಧ್ಯತೆ?
ಮತದಾರರ ಪಟ್ಟಿ ತಯಾರಿಸುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ನೀಡುವುದು ಮತ್ತು ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ವಿಚಾರ ಕುರಿತು ಸರ್ಕಾರವು ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಿದೆ. ಮತದಾರರ ಪಟ್ಟಿ ಪರಿಷ್ಕರಿಸಿ, ಹೊಸಪಟ್ಟಿ ತಯಾರಿಸಲು ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಹೊಸ ನಿಯಮಾವಳಿಗಳನ್ನು ರೂಪಿಸಲಾಗುತ್ತದೆ. ಈ ಬಗ್ಗೆ ಮುಂದಿನ 15 ದಿನಗಳಲ್ಲಿ ನಿಯಮಗಳನ್ನು ಅಂತಿಮಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ತಿಳಿಸಿದೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಮತದಾರರ ಪಟ್ಟಿ ತಯಾರಿಸುವ ಕಾರ್ಯ ಮುಂದಿನ ತಿಂಗಳಿನಿಂದ ರಾಜ್ಯ ಚುನಾವಣಾ ಆಯೋಗವು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಅಂಗೀಕರಿಸಿದ ಬಳಿಕ ಆಯೋಗದ ಕಾರ್ಯಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗುತ್ತದೆ.
ಕೇಂದ್ರ ಚುನಾವಣಾ ಆಯೋಗದ ಅನುಮತಿ ಬೇಕಿಲ್ಲ:
ಮೂರು ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ರಾಜ್ಯ ಚುನಾವಣಾ ಆಯೋಗ ವ್ಯಾಪ್ತಿಯ ಚುನಾವಣೆಗಳಲ್ಲಿ ಮತಪತ್ರವನ್ನು ಬಳಸಲು ಅವಕಾಶವಿದೆ. ಇದಕ್ಕಾಗಿ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯುವ ಅಗತ್ಯವಿಲ್ಲ. ರಾಜ್ಯ ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಹಿಂದೆ ಚುನಾವಣೆಗಳಲ್ಲಿ ಮತಪತ್ರದ ಬದಲಿಗೆ ಇವಿಎಂ ಬಳಕೆ ಸಂಬಂಧ ಕಾಯ್ದೆ- ನಿಯಮಾವಳಿಗೆ ತಿದ್ದುಪಡಿ ತಂದ ಬಳಿಕವಷ್ಟೇ ಇವಿಎಂ ಬಳಕೆಗೆ ಅವಕಾಶವಾಯಿತು. ಲೋಕಸಭೆ, ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇವಿಎಂ ಬಳಕೆಗೆ ಮುಂದಾದಾಗಲೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಆಕ್ಷೇಪವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಹೀಗಾಗಿ ಕಾಯ್ದೆ-ನಿಯಮಾವಳಿಗೆ ತಿದ್ದುಪಡಿ ತಂದ ಬಳಿಕವಷ್ಟೇ ಇವಿಎಂ ಬಳಕೆ ಆರಂಭವಾಯಿತು. ಅದರಂತೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯ ಚುನಾವಣಾ ಆಯೋಗ ನಡೆಸುವ ಚುನಾವಣೆಗಳಲ್ಲಿ ಮತಪತ್ರ ಬಳಸಲುವ ಅವಕಾಶ ಮಾಡಿಕೊಳ್ಳಬಹುದಾಗಿದೆ ಎಂದು ಆಯೋಗದ ಮೂಲಗಳು ಹೇಳಿವೆ.
ಕಳ್ಳಮತಗಳ ವಿರುದ್ಧ ರಾಹುಲ್ ಗಾಂಧಿ ಹೋರಾಟ:
ಚುನಾವಣೆ ಸಂದರ್ಭದಲ್ಲಿಇವಿಎಂ ತಿರುಚಲಾಗುತ್ತದೆ ಎಂಬ ಆರೋಪಗಳು ಕೇಳಿಬರುತ್ತಿದ್ದಂತೆ ದೇಶದಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಾಕಾಷ್ಟು ಒತ್ತಾಯಗಳು ಕೇಳಿಬಂದವು. ಕೇಂದ್ರದಲ್ಲಿನ ಆಡಳಿತರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಇವಿಎಂ ತಿರುಚಲಾಗುತ್ತಿದೆ ಎಂದು ಬಲವಾದ ಆರೋಪ ಮಾಡಿತು. ಆಗ ಬ್ಯಾಲೆಟ್ ಪೇಪರ್ ಬಳಕೆ ಕುರಿತು ದೇಶಾದ್ಯಂತ ಕೂಗು ಕೇಳಿಬಂದವು. ಈ ನಡುವೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಕಳ್ಳಮತ ಮತ್ತು ಅದೇ ಕ್ಷೇತ್ರದ ಒಂದೇ ಮನೆಯಲ್ಲಿ ೮೦ ಮತಗಳಿರುವ ಬಗ್ಗೆ ಹೇಳಿಕೆ ನೀಡಿದ್ದರು. ಇದು ದೇಶದಲ್ಲಿಯೇ ದೊಡ್ಡ ಸಂಚಲನವನ್ನು ಸೃಷ್ಟಿಸಿತು. ಅಲ್ಲದೇ, ಭಾರೀ ಚರ್ಚೆಗೆ ಗ್ರಾಸವಾಯಿತು.
ಕಳ್ಳಮತದ ವಿರುದ್ಧ ರಾಹುಲ್‌ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಸಮರ ಸಾರುತ್ತಿದ್ದಂತೆ ಬ್ಯಾಲೆಟ್ ಪೇಪರ್ ಬಳಕೆ ಕುರಿತ ಚರ್ಚೆಗೆ ಮತ್ತಷ್ಟು ಬಲಬಂದಂತಾಯಿತು. ಬಿಜೆಪಿ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮತಕಳ್ಳತನದ ಆರೋಪ ಹೊರಿಸಿರುವ ರಾಹುಲ್‌ಗಾಂಧಿ ದೇಶವ್ಯಾಪಿ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಪಕ್ಷದ ನೇತಾರನ ಮಹಾ ಸಮರಕ್ಕೆ ಬೆಂಬಲ ಸೂಚಿಸಲು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್, ಕೇಂದ್ರಕ್ಕೆ ಸಡ್ಡು ಹೊಡೆಯುವತ್ತ ಹೊಸ ಹೆಜ್ಜೆ ಇಟ್ಟಿರುವುದು ಸ್ಪಷ್ಟ ಸಂದೇಶ ನೀಡಿದೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಅವರು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಸೆಕ್ಷನ್ 35 ಅನ್ನು ಉಲ್ಲೇಖಿಸಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಅದರ ಆಧಾರದ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಬ್ಯಾಲೆಟ್ ಪೇಪರ್‌ನ ಅನುಕೂಲ
* ಮತದಾರರ ಹಕ್ಕು ಚಲಾವಣೆ ಬಗ್ಗೆ ಅನುಮಾನದ ಪ್ರಶ್ನೆ ಇರುವುದಿಲ್ಲ
* ತಾಂತ್ರಿಕ ದೋಷ, ಆನ್‌ಲೈನ್‌ನಲ್ಲಿ ತಿರುಚಲಿದ್ದಾರೆ ಎಂಬ ಭೀತಿಯೂ ಇರುವುದಿಲ್ಲ
* ಚುನಾವಣಾ ವೆಚ್ಚ ಪ್ರಮಾಣ ಗಣನೀಯವಾಗಿ ಇಳಿಕೆ
* ಮತದಾರರ ಖಾಸಗಿತನ ಕಾಯ್ದುಕೊಳ್ಳುವ ಜತೆಗೆ ಚಲಾಯಿಸುವ ಹಕ್ಕಿನ ರಕ್ಷಣೆ
ಬ್ಯಾಲೆಟ್ ಪೇಪರ್ ಅನಾನುಕೂಲ
* ಮತಪತ್ರಗಳಿರುವ ಪೆಟ್ಟಿಗೆ ಸಾಗಣೆ, ಸಂರಕ್ಷಣೆಗೆ ಹೆಚ್ಚಿನ ಸಮಯ, ಸ್ಥಳಾವಕಾಶದ ಅಗತ್ಯತೆ
* ಮತದಾರರು ಮತ್ತೆ ಮತಪತ್ರ ಬಳಕೆಗೆ ಹೊಂದಿಕೊಳ್ಳುವಂತೆ ಜಾಗೃತಿ ಮೂಡಿಸುವ ಸವಾಲು
* ಮತ ಎಣಿಕೆ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆದು ಫಲಿತಾಂಶ ಪ್ರಕಟಣೆ ವಿಳಂಬವಾಗುವ ಸಾಧ್ಯತೆ
ಮತಪತ್ರ ಬಳಕೆಗೆ ಆಯೋಗ ಸಿದ್ಧ:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಮತಪತ್ರ ಬಳಸಲು ರಾಜ್ಯ ಚುನಾವಣಾ ಆಯೋಗ ಸಿದ್ಧವಿದೆ. ಪ್ರಸ್ತುತ ಇರುವ ನಿಯಮಗಳಿಗೆ ರಾಜ್ಯಸರ್ಕಾರ ತಿದ್ದುಪಡಿ ಮಾಡಿದ ಬಳಿಕ ಬ್ಯಾಲೆಟ್ ಪೇಪರನ್ನೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ಚುನಾವಣಾ ಮುಖ್ಯ ಆಯುಕ್ತ ಜಿ.ಎಸ್. ಸಂಗ್ರೇಶಿ ಹೇಳಿದರು.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವೇ ಮತಪಟ್ಟಿಯನ್ನು ಸಿದ್ಧಪಡಿಸಲು ಅವಕಾಶವಿದೆ. ರಾಜ್ಯ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಹಾಗೂ ಸ್ವಾಯತ್ತ ಸಂಸ್ಥೆ. ಇವಿಎಂ ಬದಲು ಮತಪತ್ರದ ಮೂಲಕ ಚುನಾವಣೆ ನಡೆಸಲು ಕಾಯ್ದೆ ನಿಯಮಗಳಿಗೆ ತಿದ್ದುಪಡಿ ಮಾಡಿದ ಬಳಿಕ ಹೊಸ ನಿಯಮಾವಳಿ ಪ್ರಕಾರವೇ ಚುನಾವಣೆ ನಡೆಸಲಾಗುವುದು ಎಂದರು.
ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ತಿದ್ದುಪಡಿ ಮಾಡಬೇಕಾದರೆ ಭಾರತೀಯ ಚುನಾವಣಾ ಆಯೋಗದ ಅನುಮತಿ ಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗದ ಅನುಮತಿ ಬೇಕಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತಪತ್ರ ಬಳಸುವುದರಿಂದ ಮತದಾರರಿಗೆ ಗೊಂದಲವಾಗುವ ಸಾಧ್ಯತೆ ಕಡಿಮೆ.ಈ ಹಿಂದೆ ಹಲವು ಚುನಾವಣೆಗಳಲ್ಲಿ ಮತಪತ್ರ ಬಳಕೆಯಾಗಿದೆ ಎಂದರು.