ಆಳಂದ ಮತಕಳವು ಆರೋಪ| ಎಸ್‌ಐಟಿ ಅಧಿಕಾರಿಗಳಿಂದ ಶೋಧ, ಸಾವಿರಾರು ಮತದಾರರ ಚೀಟಿ ವಶ

ಎಸ್‌ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಶೋಧ ಮುಂದುವರಿಸಿದ್ದು, ನಗರದ ರೋಜಾ ಬಡಾವಣೆಯಲ್ಲಿರುವ ಕಂಪ್ಯೂಟರ್ ಆಪರೇಟರ್ ಅಶ್ವಾಕ್ ಮನೆ ಹಾಗೂ ಜಮ್ ಜಮ್ಮೇ ಕಾಲೋನಿಯಲ್ಲಿರುವ ಕಂಪ್ಯೂಟ‌ರ್ ಆಪರೇಟ‌ರ್ ಅಕ್ರಂ ಮನೆ ಮೇಲೆ ದಾಳಿ ನಡೆಸಿದ್ದಾರೆ.

Update: 2025-10-17 07:15 GMT

ಸಾಂದರ್ಭಿಕ ಚಿತ್ರ

Click the Play button to listen to article

ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಕಳವು ನಡೆದಿರುವ ಕುರಿತು ರಾಹುಲ್‌ ಗಾಂಧಿ ಆರೋಪ ಮಾಡಿದ್ದ ಬೆನ್ನಲೇ ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ವಹಿಸಿತ್ತು. ಈಗ ಅಧಿಕಾರಿಗಳು ಆಳಂದದ ವಿವಿಧೆಡೆ ದಾಳಿ ಮಾಡಿ ಸಾವಿರಾರು ಗುರುತಿನ ಚೀಟಿಗಳನ್ನು ಪತ್ತೆ ಮಾಡಿದ್ದಾರೆ.

ಮತಕಳ್ಳತನದ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು, ಕಲಬುರಗಿಯಲ್ಲಿ ಶೋಧ ಮುಂದುವರಿಸಿವೆ. ಇಲ್ಲಿನ ರೋಜಾ ಬಡಾವಣೆಯ ಕಂಪ್ಯೂಟರ್ ಆಪರೇಟರ್ ಅಶ್ವಾಕ್ ಮನೆ ಹಾಗೂ ಜಮ್ ಜಮ್ಮೇ ಕಾಲೊನಿಯಲ್ಲಿರುವ ಕಂಪ್ಯೂಟ‌ರ್ ಆಪರೇಟ‌ರ್ ಅಕ್ರಂ ಮನೆ ಮೇಲೆ ದಾಳಿ ನಡೆಸಿದ್ದಾರೆ. ಐದು ಸ್ಥಳಗಳಲ್ಲಿ ನಡೆದ ತಪಾಸಣೆಯಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ.

ಇಬ್ಬರು ಆರೋಪಿಗಳ ಮನೆಯಲ್ಲಿ ರಾಶಿ ರಾಶಿ ವೋಟರ್‌ ಐಡಿಗಳು, 15 ಮೊಬೈಲ್, ಏಳು ಲ್ಯಾಪ್‌ಟಾಪ್‌ಗಳನ್ನು ಎಸ್‌ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ಅಶ್ಪಾಕ್‌ ಸದ್ಯ ದುಬೈನಲ್ಲಿದ್ದಾನೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ ? 

ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ 6670 ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿದೆ ಎಂಬುದಾಗಿ ಮುಖ್ಯಚುನಾವಣಾಧಿಕಾರಿ ಕಚೇರಿಗೆ ಶಾಸಕ ಬಿ. ಆರ್. ಪಾಟೀಲ್ ದೂರು ಸಲ್ಲಿಸಿದ್ದರು. ಚುನಾವಣಾ ಆಯೋಗವು ಪರಿಶೀಲಿಸಿದಾಗ ಒಟ್ಟು 6018 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಅರ್ಜಿಗಳು ಸ್ವೀಕೃತವಾಗಿದ್ದವು. ಅವುಗಳಲ್ಲಿ 24 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದು ಕಂಡು ಬಂದಿತ್ತು.

ಎಸ್‌ಐಟಿ ರಚಿಸಿದ್ದ ಸರ್ಕಾರ

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದರ ಕುರಿತು 5994 ಅರ್ಜಿಗಳನ್ನು ಪರಿಶೀಲಿಸಿದಾಗ ಕೆಲವು ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ವಿವಿಧ ಮೊಬೈಲ್ ಸಂಖ್ಯೆಗಳನ್ನು ಉಪಯೋಗಿಸಿ, ಮೂಲ ಮತದಾರರ ಗಮನಕ್ಕೆ ಬಾರದಂತೆ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲು ಅರ್ಜಿ ಸಲ್ಲಿಸಿರುವುದು ಕಂಡು ಬಂದಿತ್ತು. ಈ ಬಗ್ಗೆ ಕೆಎಎಸ್‌ ಅಧಿಕಾರಿ ಮಮತಾ ಕುಮಾರಿ ದೂರು ನೀಡಿದ್ದರು. ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ಸಿಐಡಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡುವುದು ಸೂಕ್ತ ಎಂದು ಪರಿಗಣಿಸಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿತ್ತು.

ಆರೋಪ ನಿರಾಕರಿಸಿದ್ದ ಆಯೋಗ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಎನ್.ಗೋಪಾಲಸ್ವಾಮಿ, ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ ಎಂಬುದು ಸುಳ್ಳು. ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಬೇಕೆಂದು ಒಟ್ಟು 6,015 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪೈಕಿ ಕೇವಲ 24 ಮಂದಿಯ ಹೆಸರನ್ನು ಮಾತ್ರವೇ ಕೈಬಿಡಲಾಗಿದೆ ಎಂದು ಹೇಳಿದ್ದರು.

ಮತದಾರರ ಅನುಕೂಲಕ್ಕಾಗಿ ಆಯೋಗವು ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಮತದಾರರು ಮೂರು ರೀತಿಯ ಕಾರಣಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರನ್ನು ಸೇರಿಸಲು, ಹೆಸರನ್ನು ಕೈಬಿಡಲು ಅಥವಾ ಗುರುತಿನ ಚೀಟಿಯಲ್ಲಿ ಯಾವುದೇ ರೀತಿಯ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಲು ಅರ್ಜಿ ಸಲ್ಲಿಸಿ ಮನವಿ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದರು.

Tags:    

Similar News