ಮಹದೇವಪುರದಲ್ಲಿ ಮತಗಳ್ಳತನ ಆರೋಪ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ
x

ಮಹದೇವಪುರದಲ್ಲಿ ಮತಗಳ್ಳತನ ಆರೋಪ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು, ಅರ್ಜಿದಾರರು ತಮ್ಮ ಮನವಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಂದಿಟ್ಟು ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ.


ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಮತ್ತು ಇತರ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಆರೋಪಗಳ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು, ಅರ್ಜಿದಾರರು ತಮ್ಮ ಮನವಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಂದಿಟ್ಟು ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ. "ಸಾರ್ವಜನಿಕ ಹಿತಾಸಕ್ತಿಯಿಂದ ಸಲ್ಲಿಸಲಾಗಿದೆ ಎನ್ನಲಾದ ಈ ಅರ್ಜಿಯನ್ನು ನಾವು ಪರಿಗಣಿಸಲು ಒಲವು ತೋರುತ್ತಿಲ್ಲ. ಅರ್ಜಿದಾರರು ಇಚ್ಛಿಸಿದಲ್ಲಿ, ಚುನಾವಣಾ ಆಯೋಗದ ಮುಂದೆ ತಮ್ಮ ಮನವಿಯನ್ನು ಮುಂದುವರಿಸಬಹುದು," ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿಯಲ್ಲಿದ್ದದ್ದು ಏನು?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ, "ಬಿಜೆಪಿ ಮತ್ತು ಚುನಾವಣಾ ಆಯೋಗದ ಶಾಮೀಲಾಗಿ ಚುನಾವಣೆಗಳಲ್ಲಿ 'ದೊಡ್ಡ ಅಪರಾಧಿಕ ವಂಚನೆ' ನಡೆಸಿದೆ. ಇದು "ಮತಗಳ ಕಳ್ಳತನ" ಎಂದು ಗಂಭೀರ ಆರೋಪ ಮಾಡಿದ್ದರು. ಕರ್ನಾಟಕದ ಒಂದು ಕ್ಷೇತ್ರದ ಮತದಾರರ ಪಟ್ಟಿಯ ವಿಶ್ಲೇಷಣೆಯನ್ನು ಉಲ್ಲೇಖಿಸಿ ಅವರು ಈ ಆರೋಪ ಮಾಡಿದ್ದರು.

ಈ ಆರೋಪಗಳ ಆಧಾರದ ಮೇಲೆ ವಕೀಲ ರೋಹಿತ್ ಪಾಂಡೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಎಸ್‌ಐಟಿ ರಚಿಸಬೇಕು ಮತ್ತು ಮತದಾರರ ಪಟ್ಟಿಗಳ ಸ್ವತಂತ್ರ ಲೆಕ್ಕಪರಿಶೋಧನೆ ಪೂರ್ಣಗೊಳ್ಳುವವರೆಗೆ, ಯಾವುದೇ ಪರಿಷ್ಕರಣೆ ಅಥವಾ ಅಂತಿಮಗೊಳಿಸುವಿಕೆಯನ್ನು ಕೈಗೊಳ್ಳಬಾರದು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಅರ್ಜಿದಾರರ ಪರ ವಕೀಲರು, "ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ, ಆದರೆ ಅದನ್ನು ಸ್ವೀಕರಿಸಲಾಗಿಲ್ಲ" ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಚುನಾವಣಾ ಆಯೋಗವು ತಮ್ಮ ಮನವಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ನಿರ್ಧರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದರು. ಆದರೆ, ನ್ಯಾಯಪೀಠವು ಈ ಮನವಿಯನ್ನು ತಿರಸ್ಕರಿಸಿತು.

Read More
Next Story