
ಆಳಂದದಲ್ಲಿ ಸಾವಿರಾರು ಮತಗಳನ್ನು ಅಳಿಸಿರುವ ಪ್ರಕರಣ: ತನಿಖೆಗೆ ಎಸ್‌ಐಟಿ ರಚನೆ
ಆಳಂದ ಪ್ರಕರಣದ ತನಿಖಾ ತಂಡದ ಸಾರಥ್ಯವನ್ನು ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಅವರಿಗೆ ವಹಿಸಲಾಗಿದೆ. ಸಿಐಡಿ ಎಸ್‌ಪಿ ಸೈದುಲು ಅದಾವತ್ ಮತ್ತು ಶುಭಾನ್ವಿತ ಅವರನ್ನು ತಂಡದಲ್ಲಿ ಸೇರಿಸಲಾಗಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಪ್ರಕರಣ ಬಳಿಕ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿರುವ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಮತಗಳನ್ನು ಅಳಿಸಿರುವ ಪ್ರಕರಣದ ಹೆಚ್ಚಿನ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ ಆದೇಶ ಹೊರಡಿಸಿದೆ.
ತನಿಖಾ ತಂಡದ ಸಾರಥ್ಯವನ್ನು ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ (ಬಿ.ಕೆ.ಸಿಂಗ್) ಅವರಿಗೆ ವಹಿಸಲಾಗಿದೆ. ಸಿಐಡಿ ಎಸ್‌ಪಿ ಸೈದುಲು ಅದಾವತ್ ಮತ್ತು ಶುಭಾನ್ವಿತ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಪ್ರಸ್ತುತ ಸರ್ಕಾರವು ಈ ಮೂವರು ಅಧಿಕಾರಿಗಳನ್ನು ನೇಮಕ ಮಾಡಿದ್ದು, ಉಳಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಿ.ಕೆ.ಸಿಂಗ್ ನಿಯೋಜನೆ ಮಾಡಿಕೊಳ್ಳಲಿದ್ದಾರೆ. ಎಸ್‌ಐಟಿ ರಚನೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿತ್ತು.
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಹೆಚ್ಚು ಮತದಾರರನ್ನು ಮತಪಟ್ಟಿಯಿಂದ ಕೈಬಿಟ್ಟಿರುವ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸಲಿದೆ. ಈ ಸಂಬಂಧ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಥವಾ ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಡಿಜಿ ಮತ್ತು ಐಜಿಪಿಯವರು ವರ್ಗಾಯಿಸಬೇಕು. ಅಲ್ಲದೇ, ವಿಶೇಷ ತನಿಖಾ ತಂಡಕ್ಕೆ ಅವಶ್ಯವಿರುವ ಇತರೆ ಅಧಿಕಾರಿ, ಸಿಬ್ಬಂದಿಯನ್ನು ಒದಗಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ತನಿಖಾ ತಂಡವು ಸಿಐಡಿಯಲ್ಲಿನ ಹಾಗೂ ಸ್ಥಳೀಯ ಪೊಲೀಸ್ ಘಟಕದ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು. ವಿಶೇಷ ತನಿಖಾ ತಂಡವು ಎಲ್ಲಾ ಆಯಾಮಗಳಲ್ಲಿ ದಾಖಲಾಗಬಹುದಾದ ಇತರೆ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಂಡು ಶೀಘ್ರವೇ ತನಿಖೆಯನ್ನು ಪೂರ್ಣಗೊಳಿಸಿ ತನಿಖಾ ವರದಿಯನ್ನುಸಲ್ಲಿಸಬೇಕು ಎಂದು ತಿಳಿಸಿದೆ.
ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ 6670 ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿದೆ ಎಂಬುದಾಗಿ ಮುಖ್ಯಚುನಾವಣಾಧಿಕಾರಿ ಕಚೇರಿಗೆ ಶಾಸಕ ಬಿ. ಆರ್. ಪಾಟೀಲ್ ದೂರು ಸಲ್ಲಿಸಿದ್ದರು. ಚುನಾವಣಾ ಆಯೋಗವು ಪರಿಶೀಲಿಸಿದಾಗ ಒಟ್ಟು 6018 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಅರ್ಜಿಗಳು ಸ್ವೀಕೃತವಾಗಿದ್ದವು. ಅವುಗಳಲ್ಲಿ 24 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದು ಕಂಡು ಬಂದಿರುತ್ತದೆ.
ಆದರೆ, 5994 ಅರ್ಜಿಗಳನ್ನು ಪರಿಶೀಲಿಸಿದಾಗ ಕೆಲವು ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ವಿವಿಧ ಮೊಬೈಲ್ ಸಂಖ್ಯೆಗಳನ್ನು ಉಪಯೋಗಿಸಿ, ಮೂಲ ಮತದಾರರ ಗಮನಕ್ಕೆ ಬಾರದಂತೆ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲು ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಕೆಎಎಸ್ ಅಧಿಕಾರಿ ಮಮತಾ ಕುಮಾರಿ ದೂರು ನೀಡಿದ್ದರು. ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ಸಿಐಡಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡುವುದು ಸೂಕ್ತ ಎಂದು ಪರಿಗಣಿಸಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮತಗಳ್ಳತನ ಬಗ್ಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಬಲ ದನಿ ಎತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ಮತಗಳ್ಳತನ ಜಾಲ ಭೇದಿಸಲು ಎಸ್‌ಐಟಿ ರಚನೆ ಮಾಡಿದ್ದಾರೆ ಎನ್ನಲಾಗಿದೆ.