ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಆರೋಪ: ಮೂವರ ಬಂಧನ

ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರ ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ ವಿಧಾನಸೌಧ ಆವರಣದೊಳಗೆ ಪಾಕ್‌ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Update: 2024-03-04 13:28 GMT

ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರ ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ದೆಹಲಿ ಮೂಲದ ಇಲ್ತಾಝ್, ಆರ್ ಟಿ ನಗರ ಮೂಲದ ಮುನವ್ವರ್ ಮತ್ತು ಹಾವೇರಿಯ ಬ್ಯಾಡಗಿ ಮೂಲದ ಮಹಮ್ಮದ್ ನಾಶಿಪುಡಿ ಬಂಧಿತರು.

ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಮತ್ತು ಆರೋಪಿಗಳ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವಿಡಿಯೋದಲ್ಲಿರುವ ಧ್ವನಿಗೂ, ಆರೋಪಿಗಳ ಧ್ವನಿಗೂ ಸಾಮ್ಯತೆ ಇರುವುದರಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎಫ್‌ಎಸ್‌ಎಲ್‌ ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿರುತ್ತದೆ ಎಂದು ಬೆಂಗಳೂರು ಕೇಂದ್ರ ವಿಭಾಗ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಎಫ್‌ ಎಸ್‌ ಎಲ್‌ ವರದಿ ಬಂದಿಲ್ಲ ಎಂದಿದ್ದ ಗೃಹ ಸಚಿವರು

ಈ ನಡುವೆ, ಸೋಮವಾರ ಮಧ್ಯಾಹ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ್‌, ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ ಎಸ್‌ ಎಲ್‌ ವರದಿ ಬಂದಿಲ್ಲ ಎಂದು ಹೇಳಿದ್ದರು. ಬಿಜೆಪಿ ರಾಜ್ಯ ಘಟಕ ಬೆಳಿಗ್ಗೆಯಿಂದಲೇ ಎಫ್‌ ಎಸ್‌ ಎಲ್‌ ವರದಿ ಬಂದಿದೆ. ಪಾಕ್‌ ಪರ ಘೋಷಣೆ ಕೂಗಿರುವುದು ದೃಢಪಟ್ಟಿದೆ ಎಂದು ವರದಿಯ ದಾಖಲೆಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿತ್ತು. ಕೆಲವು ಮಾಧ್ಯಮಗಳಲ್ಲಿಯೂ ವರದಿ ಬಂದಿದ್ದು ಪಾಕ್‌ ಪರ ಘೋಷಣೆ ದೃಢಪಟ್ಟಿದೆ ಎಂಬ ವರದಿಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ವರದಿ ಬಂದೇ ಇಲ್ಲ. ಬಿಜೆಪಿಯವರ ಹಂಚುತ್ತಿರುವ ವರದಿ ಸರ್ಕಾರದ ಅಧಿಕೃತ ವರದಿಯಲ್ಲ ಎಂದು ಹೇಳಿದ್ದರು.

ಘಟನೆಯ ಹಿನ್ನೆಲೆ

ಕಳೆದ ವಾರ ರಾಜ್ಯಸಭಾ ಚುನಾವಣೆಯ ಫಲಿತಾಂಶವಾದ ಬೆನ್ನಲ್ಲೇ ವಿಧಾನಸೌಧದ ಒಳಗೆ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್‌ ಹುಸೇನ್‌ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದರು. ನಾಸಿರ್‌ ಅವರಿಗೆ ಹೂಹಾರ ಹಾಕಿ, ಘೋಷಣೆ ಕೂಗಿ ಸಂಭ್ರಮಿಸುತ್ತಿರುವಾಗ ನಾಸಿರ್‌ ಖಾನ್‌ ಜಿಂದಾಬಾದ್‌, ನಾಸಿರ್‌ ಹುಸೇನ್‌ ಜಿಂದಾಬಾದ್‌ ಎಂಬ ಘೋಷಣೆಗಳ ನಡುವೆ ʼಪಾಕಿಸ್ತಾನ್‌ ಜಿಂದಾಬಾದ್‌ʼ ಎಂದೂ ಘೋಷಣೆ ಕೂಗಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆ ವರದಿಯ ಬೆನ್ನಲ್ಲೇ ಘೋಷಣೆ ವಿವಾದ ರಾಜ್ಯ ರಾಜಕಾರಣದಲ್ಲಿ ಭಾರೀ ವಾಗ್ವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು.

Tags:    

Similar News