ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ| ಡಿಸೆಂಬರ್‌ 21ರಿಂದ ಮಂಡ್ಯದಲ್ಲಿ ಮೂರು ದಿನ ಕನ್ನಡ ಹಬ್ಬ

ಈ ಕುರಿತು ಕೆಮ್ಮಣ್ಣುಗುಂಡಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಮಹೇಶ್‌ ಜೋಶಿ ಅವರು ʻದ ಫೆಡರಲ್‌-ಕರ್ನಾಟಕಕ್ಕೆ ತಿಳಿಸಿದ್ದಾರೆ.;

Update: 2024-06-22 02:18 GMT

ಹಲವು ಬಾರಿ ಹಲವು ಕಾರಣಗಳಿಗಾಗಿ ಮುಂದೂಡಿಕೆಯಾಗಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೊನೆಗೂ ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಕರ್ನಾಟಕವನ್ನು ಕಾಡಿದ ಬರ, ಅದರ ಬೆನ್ನಿಗೆ ಲೋಕಸಭಾ ಚುನಾವಣೆ ಹಾಗೂ ಇನ್ನಿತರ ಕಾರಣಗಳಿಂದ ಮಂಡ್ಯದಲ್ಲಿ ನಡೆಯಬೇಕಿದ್ದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ ತಿಂಗಳ 21, 22 ಹಾಗೂ 23ರಂದು ಮೂರು ದಿನಗಳ ಕಾಲ ಸಕ್ಕರೆಯ ನಾಡಿನಲ್ಲಿ ನಡೆಯಲಿದೆ.

ಈ ಕುರಿತು ಕೆಮ್ಮಣ್ಣುಗುಂಡಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಮಹೇಶ್‌ ಜೋಶಿ ಅವರು ʻದ ಫೆಡರಲ್‌-ಕರ್ನಾಟಕಕ್ಕೆ ತಿಳಿಸಿದ್ದಾರೆ.

“ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಹಾಗೂ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾದ ಎನ್‌ ಚಲುವರಾಯಸ್ವಾಮಿ ಅವರುಗಳಿಗೆ ಪತ್ರ ಬರೆದು ತಿಳಿಸಲಾಗಿದೆ. ಸಮ್ಮೇಳನ ನಡೆಸಲು ಸರ್ಕಾರ ಎಲ್ಲ ರೀತಿಯ ನೆರವನ್ನೂ ನೀಡುವಂತೆ ಕೋರಲಾಗಿದೆ. ಕನ್ನಡ ನಾಡಿನ ಸರ್ಕಾರ ಸಮ್ಮೇಳನಕ್ಕೆ ಸಕಲ ಬೆಂಬಲವನ್ನು ನೀಡುತ್ತದೆ ಎಂಬ ನಂಬಿಕೆ ನಮ್ಮದು” ಎಂದು ಮಹೇಶ್‌ ಜೋಶಿ ಹೇಳಿದರು.

ಮಳೆ, ಚುನಾವಣೆಗಾಗಿ ಸಮ್ಮೇಳನ ಮುಂದೂಡಿಕೆ

2024ರ ಜೂನ್‌ 7, 8 ಮತ್ತು 9ರಂದು ಮಂಡ್ಯದಲ್ಲಿ ನಡೆಯಬೇಕಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಗ ಸುರಿದ ಧಾರಾಕಾರ ಮಳೆ ಹಾಗೂ ತಯಾರಿಯ ಕೊರತೆಯ ಕಾರಣ ಮುಂದೂಡಲಾಗಿತ್ತು. ಈಗ ಸಕಲ ಸಿದ್ಧತೆಗಳೊಂದಿಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿ, ಕೇವಲ ದೇಶದ ಮೂಲೆಮೂಲೆಗಳಲ್ಲಿರುವ ಕನ್ನಡಿಗರಷ್ಟೇ ಅಲ್ಲದೆ, ವಿದೇಶದಲ್ಲಿ ನೆಲೆಸಿರುವ, ಕನ್ನಡದ ಹಬ್ಬದಲ್ಲಿ ಭಾಗವಹಿಸಲು ಇಚ್ಛಿಸಿರುವ ಕನ್ನಡಿಗರೂ ಪಾಲ್ಗೊಳ್ಳಲು ಅನುಕೂಲವಾಗುವಂತೆ ಡಿಸೆಂಬರ್‌ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜೋಶಿ ಹೇಳಿದ್ದಾರೆ.

ಈ ಜೂನ್‌ ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಮ್ಮೇಳನ ಯಶಸ್ವಿಯಾಗಿ ನಡೆಸಲು ಮಂಡ್ಯ ಜಿಲ್ಲೆಯ ಹಿರಿಯ ಸಾಹಿತಿಗಳು, ಕನ್ನಡ ಅಭಿಮಾನಿಗಳು, ಸಾಹಿತ್ಯ ಪ್ರೇಮಿಗಳು, ಜನಪ್ರತಿನಿಧಿಗಳು, ಹಿರಿಯ ಸಾಹಿತ್ಯಾಸಕ್ತರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ತೀರ್ಮಾನಿಸಿ. ಈ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು, ಕೇಂದ್ರ ಸಾಹಿತ್ಯ ಪರಿಷತ್ತಿನ ಸಲಹೆಗಳೊಂದಿಗೆ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರನ್ನೂ ಒಳಗೊಂಡಂತೆ 25 ಸಮಿತಿಗಳನ್ನು ರಚಿಸಲು ತೀರ್ಮಾನ ಕೂಡ ತೆಗೆದುಕೊಳ್ಳಲಾಗಿತ್ತು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಉತ್ತಮವಾದ ಸ್ಥಳವನ್ನು ನಿಗದಿಮಾಡಿ, ಹಿರಿಯ ಸಾಹಿತ್ಯ ದಿಗ್ಗಜರಿಗೆಲ್ಲ ಆಹ್ವಾನ ನೀಡಿ. ಮಂಡ್ಯ ನಗರದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ, ಸಮ್ಮೇಳನಕ್ಕೆ ಬಂದ ಪ್ರತಿಯೊಬ್ಬರಿಗೂ ಸಹ ಯಾವುದೇ ಲೋಪದೋಷವಾಗದಂತೆ ನೋಡಿಕೊಳ್ಳು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಸಮ್ಮೇಳನಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಒದಗಿಸುವುದಾಗಿ ಭರವಸೆ ಕೂಡ ನೀಡಿತ್ತು. ಆದರೆ, ರಾಜ್ಯವನ್ನು ಕಾಡಿದ ಬರ ಮತ್ತು, ಲೋಕಸಭಾ ಚುನಾವಣೆ ಸನ್ನಿಹಿತವಾಗಿದ್ದರಿಂದ ಜೂನ್‌ನಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನು ಮುಂದೂಡಲಾಗಿತ್ತು.

ಮೂರನೇ ಬಾರಿಗೆ ಮಂಡ್ಯದ ಕನ್ನಡ ಆತಿಥ್ಯ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯಲು ಆರಂಭವಾದ ನಂತರ ಮಂಡ್ಯ ನಗರದಲ್ಲಿ ನಡೆಯುತ್ತಿರುವ ಮೂರನೇ ಸಮ್ಮೇಳನವಿದು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯಲು ಆರಂಭವಾದದ್ದು 1915ರಲ್ಲಿ. ಆ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಿತ್ತು. ಎಚ್.‌ ವಿ. ನಂಜುಂಡಯ್ಯ ಅದರ ಅಧ್ಯಕ್ಷರಾಗಿದ್ದರು. ಮಂಡ್ಯ ನಗರದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದದ್ದು 1971ರಲ್ಲಿ. ಅದು 48ನೇ ಸಮ್ಮೇಳನ. ಆಗ ಪಂಡಿತೋತ್ತಮರಾದ ಜಯದೇವಿ ತಾಯಿ ಲಿಗಾಡೆಯವರು ಅಧ್ಯಕ್ಷರಾಗಿದ್ದರು. ಮಂಡ್ಯದಲ್ಲಿ ಮತ್ತೆ ಸಮ್ಮೇಳನ ನಡೆದಿದ್ದು 1994ರಲ್ಲಿ. ಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್)‌ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅದಾಗಿ 30 ವರ್ಷಗಳ ನಂತರ ಮತ್ತೆ ಮಂಡ್ಯ ನಗರದಲ್ಲಿ ಅಖಿಲ ಭಾತತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

“ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಸಮ್ಮೇಳನದ ದಿನಗಳಾದ ಡಿಸೆಂಬರ್‌ ತಿಂಗಳ 21, 22 ಹಾಗೂ 23 ನ್ನು ಆಖೈರುಗೊಳಿಸಬೇಕೆಂದು ಮನವಿ ಮಾಡಿದ್ದೇವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರದಲ್ಲಿಯೇ ಸಭೆಯೊಂದನ್ನು ಕರೆದು, ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ. ಅವರು ದಿನಾಂಕವನ್ನು ಅಂತಿಮಗೊಳಿಸಿದ ನಂತರ ಸಮ್ಮೇಳನದ ಸಿದ್ಧತೆ ಆರಂಭವಾಗಲಿದೆ” ಎಂದು ಜೋಶಿ ಹೇಳಿದರು.

ಜೂನ್‌ ತಿಂಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದ್ದ ಕಾರಣ, ಕನ್ನಡ ಸಾಹಿತ್ಯ ಪರಿಷತ್‌ ಫೆಬ್ರುವರಿ ತಿಂಗಳಿಂದಲೇ ಸಿದ್ಧತೆಗಳನ್ನು ಆರಂಭಿಸಿತ್ತು. ಫೆಬ್ರುವರಿಯಲ್ಲಿ ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೂನ್‌ ತಿಂಗಳಲ್ಲಿ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಾಹಿತ್ಯ ಪರಿಷತ್ತಿನ ಪದಾದಿಕಾರಿಗಳಿಗೆ ಸೂಚಿಸಿದರು. ಆದರೆ 2023ರಲ್ಲಿ ಮಳೆಯ ಕೊರತೆಯಿಂದಾಗಿ ಮಂಡ್ಯ ಜಿಲ್ಲೆಯ ಕೆಲವು ತಾಲ್ಲೂಕುಗಳೂ ಸೇರಿದಂತೆ ರಾಜ್ಯದ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತು. ಬರದ ಕಾಲದಲ್ಲಿ ಕನ್ನಡಿಗರು ಕಷ್ಟನಷ್ಟಗಳನ್ನು ಎದುರಿಸುತ್ತಿರುವಾಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಸರಿಯಲ್ಲ ಎಂದು ಸಮ್ಮೇಳನವನ್ನು ಮುಂದೂಡಲು ನಿರ್ಧರಿಸಲಾಯಿತು. ಈ ನಡುವೆ ಏಪ್ರಿಲ್‌ 2024ರಲ್ಲಿ ಲೋಕಸಭಾ ಚುನಾವಣೆಗಳು ಘೋಷಣೆಯಾಗಿ, ಜೂನ್‌ನಲ್ಲಿ ಸಮ್ಕೇಳನ ನಡೆಸಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಲಾಯಿತು. ಇದಕ್ಕೆ ಚುನಾವಣೆ ನೀತಿ ಸಂಹಿತೆ ಕೂಡ ಅಡ್ಡಿಯಾಯಿತು. ಚುನಾವಣೆಗಳ ಫಲಿತಾಂಶ ಪ್ರಕಟವಾದ ನಂತರ ಮತ್ತೆ ಈಗ ಸಮ್ಮೇಳನ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಅನುದಾನ ನೀಡುವಲ್ಲಿ ವಿಳಂಬ

ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅಗತ್ಯವಾದ 30 ಕೋಟಿ ರೂಪಾಯಿಗಳಿಗಾಗಿ ಮಹೇಶ್‌ ಜೋಶಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯನಿರ್ವಹಣೆಗೆಂದು 5 ಕೋಟಿ ರೂಪಾಯಿಗಳನ್ನು ಆಯವ್ಯಯದಲ್ಲಿ ಮೀಸಲಿಟ್ಟ ರಾಜ್ಯ ಸರ್ಕಾರ, ಸಮ್ಮೇಳನಕ್ಕೆ ಪರಿಷತ್‌ ಕೇಳಿದ ಹಣವನ್ನು ನಿಗದಿ ಮಾಡಿಲ್ಲ ಹಾಗೂ ಹಣವನ್ನು ಬಿಡುಗಡೆ ಮಾಡಿಲ್ಲ ಎಂಬ ಆಕ್ಷೇಪವೂ ಇದೆ. ಈ ಕುರಿತು ಜೋಶಿ ಅವರನ್ನು ಪ್ರಶ್ನಿಸಿದರೆ, “ಹಿಂದಿನ ಸರ್ಕಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು 25 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇ ಅಲ್ಲದೆ, ಆ ಹಣವನ್ನು ಬಿಡುಗಡೆ ಕೂಡ ಮಾಡಿತು. ಈ ಬಾರಿ ನಾವು 30 ಕೋಟಿ ರೂಪಾಯಿಗಳನ್ನು ಕೇಳಿದ್ದೇವೆ. ಹಾಗೆಯೇ ಅದನ್ನು ಆಯವ್ಯಯದಲ್ಲಿ ಘೋಷಿಸುವಂತೆ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಆಯವ್ಯಯದಲ್ಲಿ ಹಣವನ್ನು ಮೀಸಲಿಟ್ಟಿಲ್ಲ. ಆದರೆ, ಸಮ್ಮೇಳನಕ್ಕಾಗಿ ಅಗತ್ಯವಾದ ಹಣವನ್ನು ಬಿಡುಗಡೆ ಮಾಡುವುದಾಗಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ” ಎಂದು ಜೋಶಿ ಉತ್ತರಿಸಿದರು.

“ಸರ್ಕಾರ ಕೊಡುತ್ತದೆ ಎಂಬ ನಂಬಿಕೆ ನಮಗಿದೆ. ಏಕೆಂದರೆ ಇದು ಕನ್ನಡದ ಕೆಲಸ. ಇದು ಕನ್ನಡದ ಸರ್ಕಾರ. ಅಕಸ್ಮಿಕವಾಗಿ ಸರ್ಕಾರ ಈ ವಿಷಯದಲ್ಲಿ ಎಡವುತ್ತದೆಂದು ಅನ್ನಿಸಿದರೆ, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡು ಸಮ್ಮೇಳನ ನಡೆಸಲು ಯೋಚಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಡಿಸೆಂಬರ್‌ ತಿಂಗಳಲ್ಲಿ ಗೊತ್ತುಪಡಿಸಿದ ದಿನದಂದು ಸಮ್ಮೇಳನ ನಡೆದೇ ನಡೆಯುತ್ತದೆ” ಎಂದು ಜೋಶಿ ಹೇಳಿದರು.

“ಈ ಕುರಿತು ನಾನೀಗಾಗಲೇ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾದ ಚಲುವರಾಯ ಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಈಗ ಮುಂಗಾರಿನ ಕಾಲ. ನವೆಂಬರ್‌ ತಿಂಗಳಿಗೆ ಮೈಸೂರು ಕರ್ನಾಟಕವೆಂದು ಪುನರ್‌ ನಾಮಕರಣಗೊಂಡು 50 ವರ್ಷ ತುಂಬುತ್ತದೆ. ಹಾಗಾಗಿ ಡಿಸೆಂಬರ್‌ ತಿಂಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಕಾಲ. ಆ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಕನ್ನಡಿಗರು ಬರಲು ಕೂಡ ಸಕಾಲ. ಆಗ ಸಮ್ಮೇಳನ ನಡೆಸಿದರೆ ಕನ್ನಡಕ್ಕೆ, ಕನ್ನಡ ಸಾಹಿತ್ಯಕ್ಕೆ, ನಾಡು ನುಡಿಗೆ ಗೌರವ ಸಲ್ಲಿಸಿದಂತಾಗುತ್ತದೆ” ಎಂದ ಜೋಶಿ ಅವರು, ಮತ್ತೊಮ್ಮೆ ಡಿಸೆಂಬರ್ ನ ನಿಗದಿತ ದಿನಾಂಕದಂದು ಸಮ್ಮೇಳನ ನಡೆಯುತ್ತದೆ ಎಂದು ಮತ್ತೊಮ್ಮೆ ಖಚಿತ ಪಡಿಸಿದರು.

Tags:    

Similar News