ಈ ವರ್ಷ ಒಂದನೇ ತರಗತಿ ಸೇರ್ಪಡೆಗೆ ಮಕ್ಕಳಿಗೆ ಆಗಬೇಕು ಕನಿಷ್ಠ 5 ವರ್ಷ 5 ತಿಂಗಳು!

ಈ ವರ್ಷ 5 ವರ್ಷ 5 ತಿಂಗಳಾಗಿದ್ದರೂ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದರು.;

Update: 2025-04-16 12:35 GMT

ರಾಜ್ಯದಲ್ಲಿ ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ ಈ ವರ್ಷಕ್ಕೆ  ತುಸು ಸಡಿಲಗೊಳಿಸಿದೆ. 5 ವರ್ಷ 5 ತಿಂಗಳಾಗಿದ್ದರೂ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ  ಘೋಷಿಸಿದರು.

ರಾಜ್ಯ ಶಿಕ್ಷಣ ನೀತಿ ವರದಿ ಆಧಾರದ ಮೇಲಿನ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಇದು ಈ ವರ್ಷಕ್ಕೆ ಮಾತ್ರ ಅನ್ವಯ. ಮುಂದಿನ ವರ್ಷದಿಂದ ಕಡ್ಡಾಯ ವಯೋಮಿತಿ 6 ವರ್ಷವೇ ಇರಲಿದೆ ಎಂದು ಅವರು ತಿಳಿಸಿದ್ದಾರೆ. 

ಮಕ್ಕಳು ಎಲ್​ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ. ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಶಾಲಾ ಶಿಕ್ಷಣ ಇಲಾಖೆ 2022ರ ನವೆಂಬರ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ, ಜೂನ್ 1, 2025ರ ಒಳಗೆ ಆರು ವರ್ಷಗಳನ್ನು ಪೂರ್ಣಗೊಳಿಸಿದ ಮಕ್ಕಳು 2025-26 ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಇದರಿಂದ ಸಾವಿರಾರು ಮಕ್ಕಳ ಪ್ರವೇಶಕ್ಕೆ ಅಡ್ಡಿಯಾಗಿದೆ. ಮೊದಲು ಇದ್ದಂತೆ ಪೋಷಕರ ಇಚ್ಛೆಗೆ ಅನುಗುಣವಾಗಿ ಶಾಲೆಗೆ ಸೇರಿಸಲು ವಯೋಮಿತಿ ಸಡಿಲಿಕೆಯ ಅವಕಾಶ ನೀಡಬೇಕು ಎಂದು ಹಲವು ಪೋಷಕರು ಮನವಿ ಮಾಡಿದ್ದರು. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪೋಷಕರ ವಿನಂತಿಯನ್ನುರಾಜ್ಯ ಶಿಕ್ಷಣ ನೀತಿ ಆಯೋಗದ ಗಮನಕ್ಕೆ ತಂದಿದ್ದರು. ಆಯೋಗದ ಶಿಫಾರಸಿನಂತೆ ಒಂದು ವರ್ಷಕ್ಕೆ ಸೀಮಿತಗೊಳಿಸಿ, ವಯೋಮಿತಿ ಸಡಿಲಿಕೆ ಅವಕಾಶ ನೀಡಿದ್ದಾರೆ.

 

 

 

Tags:    

Similar News