The Federal Interview : ಯಾವ ತರಹ ಪ್ರೂವ್‍ ಮಾಡಬೇಕೋ ಗೊತ್ತಾಗ್ತಿಲ್ಲ; ‘ವಿದ್ಯಾಪತಿʼ ನಾಯಕ ನಟ ನಾಗಭೂಷಣ್‍

‘ಒಂದು ಸಕ್ಸಸ್‍ ಕೊಟ್ಟರೂ ಅವಕಾಶಗಳು ಕಡಿಮೆಯೇ. ಇದು ನಮ್ಮಲ್ಲಿ ಮಾತ್ರ ಸಮಸ್ಯೆ. ನಮ್ಮನ್ನು ನಾವು ಇನ್ನೂ ಯಾವ ತರಹ ಪ್ರೂವ್‍ ಮಾಡಬೇಕೋ ಗೊತ್ತಿಲ್ಲ ಎನ್ನುತ್ತಾರೆ ನಟ ನಾಗಭೂಷಣ್‍.;

Update: 2025-04-10 05:24 GMT
ನಾಗಭೂಷಣ್‍ ನಾಯಕನಾಗಿ ನಟಿಸಿರುವ ‘ವಿದ್ಯಾಪತಿ’ ಚಿತ್ರವು ಏಪ್ರಿಲ್‍ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‘ಟಗರು ಪಲ್ಯ’ ಚಿತ್ರದ ನಂತರ ನಾಗಭೂಷಣ್‍ ನಾಯಕನಾಗಿ ನಟಿಸಿರುವ ‘ವಿದ್ಯಾಪತಿ’ ಸಿನಿಮಾ ಏಪ್ರಿಲ್‍ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಸಂಸ್ಥೆಯಡಿ ಧನಂಜಯ್‍ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರ ರೂಪುಗೊಂಡಿದ್ದು ಹೇಗೆ ಎನ್ನುವುದರ ಜೊತೆಗೆ ಸದ್ಯದ ಪರಿಸ್ಥಿತಿಯ ಬಗ್ಗೆ ನಾಗಭೂಷಣ್‍, ‘ದ ಫೆಡೆರಲ್‍ ಕರ್ನಾಟಕ’ ಜೊತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ ‘ಇಕ್ಕಟ್’ ಎಂಬ ಚಿತ್ರ ಮಾಡಿದ್ದರು ನಾಗಭೂಷಣ್‍. ಆ ಚಿತ್ರವನ್ನು ನಿರ್ದೇಶಿಸಿದ್ದ ಇಶಾಂ ಮತ್ತು ಹಸೀಂ ಖಾನ್, ‘ವಿದ್ಯಾಪತಿ’ ಚಿತ್ರಕ್ಕೂ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಉಪಾಧ್ಯಕ್ಷ’ ಚಿತ್ರದಲ್ಲಿ ನಾಯಕಿಯಾಗಿದ್ದ ಮಲೈಕಾ ನಾಯಕಿಯಾದರೆ, ‘ಗರುಡ’ ರಾಮ್‍ ವಿಲನ್‍ ಆಗಿ ಕಾಣಿಸಿಕೊಂಡಿದ್ದಾರೆ.

ಜನಪ್ರಿಯ ನಟಿಯ ಗಂಡನಾದ ನಾಗಭೂಷಣ್‍

‘ಇಕ್ಕಟ್’ ನಂತರ ಮುಂದೆ ಏನು ಎಂಬ ಪ್ರಶ್ನೆ ಬಂದಾಗ, ಸಿಕ್ಕ ಉತ್ತರ ‘ವಿದ್ಯಾಪತಿ’ಯಂತೆ. ‘ಈ ಕುರಿತು ಮಾತನಾಡುವ ನಾಗಭೂಷಣ್‍, ‘ಮುಂದೇನು ಎನ್ನುವಾಗ ನಿರ್ದೇಶಕರು ಈ ಕಥೆ ಹೇಳಿದರು. ಈ ಚಿತ್ರದಲ್ಲಿ ನಾನು ಒಬ್ಬ ಜನಪ್ರಿಯ ನಟಿಯ ಗಂಡ. ಒಂದು ವಿಷಯದಲ್ಲಿ ಅವನಿಗೆ ಅವಮಾನವಾಗುತ್ತದೆ. ಹೆಂಡತಿ ಮನೆಯಿಂದ ಆಚೆ ಹಾಕುತ್ತಾಳೆ. ಮುಂದೆ ಏನು ಮಾಡುತ್ತಾನೆ ಎನ್ನುವುದೇ ಕಥೆ. ಕಥೆ ಕೇಳಿ ಖುಷಿಯಾಯಿತು. ಇದನ್ನು ಒಮ್ಮೆ ಧನಂಜಯ್‍ಗೆ ಹೇಳಿದ್ದೆ. ನಿರ್ಮಾಪಕರು ಇದ್ದರೆ ಓಕೆ, ಇಲ್ಲವಾದರೆ ತಾನೇ ನಿರ್ಮಿಸುವುದಾಗಿ ಧನಂಜಯ್‍ ಹೇಳಿದರು. ಕೊನೆಗೆ ಅವರೇ ನಿರ್ಮಾಪಕರಾದರು. ಮಲೈಕಾ, ‘ಗರುಡ’ ರಾಮ್‍ ಎಲ್ಲರೂ ಕಥೆ ಇಷ್ಟವಾಗಿ ಚಿತ್ರತಂಡಕ್ಕೆ ಬಂದರು. ಇನ್ನು, ಚಿತ್ರದಲ್ಲಿ ಒಂದು ಪಾತ್ರವಿದೆ. ಅನಕೊಂಡ ಅದರ ಹೆಸರು. ಆ ಪಾತ್ರ ಯಾರು ಮಾಡುತ್ತಾರೆ ಎಂದು ಧನಂಜಯ್‍ ಕೇಳಿದರು. ಆ ಪಾತ್ರ ಇಷ್ಟವಾಗಿ ಅವರೇ ನಟಿಸಿದರು’ ಎಂದು ನೆನಪಿಸಿಕೊಳ್ಳುತ್ತಾರೆ ನಾಗಭೂಷಣ್‍.

ಪ್ರತಿಭಾವಂತರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ

‘ಟಗರು ಪಲ್ಯ’ ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳ ನಂತರ ಅವರದ್ದೊಂದು ಚಿತ್ರ ಬರುತ್ತಿದೆ. ಯಾಕೆ ಎಂದರೆ, ಯಶಸ್ಸಿನ ಹೊರತಾಗಿಯೂ ಅವಕಾಶಗಳು ಕಡಿಮೆ ಎಂಬ ಉತ್ತರ ಅವರಿಂದ ಬರುತ್ತದೆ. ‘ಒಂದು ಸಕ್ಸಸ್‍ ಕೊಟ್ಟರೂ ಅವಕಾಶಗಳು ಕಡಿಮೆಯೇ. ಇದು ನಮ್ಮಲ್ಲಿ ಮಾತ್ರ ಸಮಸ್ಯೆ. ನಮ್ಮನ್ನು ನಾವು ಇನ್ನೂ ಯಾವ ತರಹ ಪ್ರೂವ್‍ ಮಾಡಬೇಕೋ ಗೊತ್ತಿಲ್ಲ. ಇದು ಬರೀ ನನ್ನೊಬ್ಬನ ಮಾತಲ್ಲ. ನನ್ನಂತಹ ಎಷ್ಟೋ ಜನ ಇದ್ದಾರೆ. ಅವರ್ಯಾರಿಗೂ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಬೇರೆ ಭಾಷೆಗಳಲ್ಲಿ ಒಂದು ಕಿರುಚಿತ್ರದಲ್ಲಿ ಗಮನಸೆಳೆದವರನ್ನು ಗುರುತಿಸಿ ಅವಕಾಶ ನೀಡಲಾಗುತ್ತದೆ. ನಮ್ಮಲ್ಲಿ ದೊಡ್ಡ ಹಿಟ್‍ ಕೊಟ್ಟರೂ, ಪ್ರತಿಭೆ ಪ್ರೂವ್‍ ಮಾಡಿದರೂ, ಅವಕಾಶಗಳು ಸಿಗುವುದಿಲ್ಲ. ನನ್ನ ವಿಷಯದಲ್ಲಿ ಧನಂಜಯ್‍ ಹಿಂದೆ ನಿಂತು ಚಿತ್ರ ನಿರ್ಮಾಣ ಮಾಡಿ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರೆ. ಅವರಿಗೆ ನಾನು ಸದಾ ಆಭಾರಿ’ ಎನ್ನುತ್ತಾರೆ ನಾಗಭೂಷಣ್.

ಮಕ್ಕಳು ನೋಡುವಂತಹ ಚಿತ್ರಗಳೇ ಬರುತ್ತಿಲ್ಲ

‘ವಿದ್ಯಾಪತಿ’ ಒಂದು ಪಕ್ಕಾ ಫ್ಯಾಮಿಲಿ ಚಿತ್ರ ಎನ್ನುವ ಅವರು, ‘’ಇಕ್ಕಟ್‍’ ಚಿತ್ರ ನೋಡಿದವರೆಲ್ಲರೂ, ಮನೆಮಂದಿಯಲ್ಲಾ ಕೂತು ಚಿತ್ರ ನೋಡಿದ್ದಾಗಿ ಹೇಳಿದ್ದರು. ‘ಟಗರು ಪಲ್ಯ’ ಸಹ ಒಂದು ಫ್ಯಾಮಿಲಿ ಚಿತ್ರವಾಗಿತ್ತು. ಹಾಗಾಗಿ, ಈ ಬಾರಿ ಸಹ ಒಂದು ಫ್ಯಾಮಿಲಿ ಚಿತ್ರ ಮಾಡಬೇಕು ಎಂದು ನಿರ್ಧಾರ ಮಾಡಿಯೇ ಚಿತ್ರ ಮಾಡಿದ್ದೇವೆ. ಇದು ಎಮೋ ಕಾಮ್‍ ಆ್ಯಕ್ಷನ್‍ ಚಿತ್ರ. ಇಲ್ಲಿ ಸೆಂಟಿಮೆಂಟ್‍, ಹಾಸ್ಯ, ಫೈಟ್‍ ಎಲ್ಲವೂ ಇದೆ. ನಾನು ಗರುಡ ರಾಮ್‍ ಜೊತೆಗೆ ಹೊಡೆದಾಡುವುದೇ ಒಂದು ತಮಾಷೆ. ಅಂಥ ವ್ಯಕ್ತಿಯನ್ನು ನನ್ನಂತವನಿಂದ ಹೊಡೆಯೋಕೆ ಸಾಧ್ಯವಾ? ಆದರೂ ಹೊಡೆಯುತ್ತಾನೆ. ಹೇಗೆ ಎಂದು ಚಿತ್ರ ನೋಡಬೇಕು. ಇದು ಮಕ್ಕಳು ಮತ್ತು ಕುಟುಂಬದವರು ಯಾವುದೇ ಮುಜುಗರವಿಲ್ಲದೆ ನೋಡಬಹುದಾದ ಚಿತ್ರ. ಹಾಗೆ ನೋಡಿದರೆ, ಮಕ್ಕಳಿಗೆ ಚಿತ್ರಗಳೇ ಬರುತ್ತಿಲ್ಲ. ಇದು ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಇಷ್ಟವಾಗುವ ಚಿತ್ರ’ ಎನ್ನುತ್ತಾರೆ.

 ನಂಬಿಕೆ ಬರಬೇಕು ಎಂದರರೆ ವಿಭಿನ್ನ ಪ್ರಯತ್ನಗಳು ಆಗಬೇಕು

ಒಂದೊಳ್ಳೆಯ ಚಿತ್ರ ಮಾಡಿರುವ ನಂಬಿಕೆ ಮತ್ತು ಖುಷಿಯ ಜೊತೆಗೆ, ನಾಗಭೂಷಣ್‍ಗೆ ಭಯವೂ ಇದೆ. ‘ಚಿತ್ರ ಬಿಡುಗಡೆ ಹಂತಕ್ಕೆ ಬಂದರೂ ಬ್ಯುಸಿನೆಸ್‍ ಆಗಿಲ್ಲ. ಒಳ್ಳೆಯ ಪ್ರಯತ್ನಗಳಿಗೆ ಒಳ್ಳೆಯ ಬೆಂಬಲ ಬೇಕು. ಆದರೆ, ನಮ್ಮ ಚಿತ್ರದ ಡಿಜಿಟಲ್‍ ಅಥವಾ ಸ್ಯಾಟಿಲೈಟ್‍ ಬ್ಯುಸಿನೆಸ್‍ ಆಗಿಲ್ಲ. ‘ಟಗರು ಪಲ್ಯ’ ಯಶಸ್ಸಿನ ನಂತರವೂ ವ್ಯಾಪಾರ ಆಗಿಲ್ಲ. ಚಿತ್ರ ಬಿಡುಗಡೆಯಾಗಲೀ, ಹಿಟ್‍ ಆದರೆ ನೋಡೋಣ ಎನ್ನುತ್ತಾರೆ. ಅದು ಅವರ ತಪ್ಪು ಎಂದು ಹೇಳುವುದು ಕಷ್ಟ. ಏಕೆಂದರೆ, ಅವರಿಗೆ ನಂಬಿಕೆ ಹೋಗಿದೆ. ಆ ನಂಬಿಕೆ ವಾಪಸ್ಸು ಬರಬೇಕು ಎಂದರು ಒಂದಿಷ್ಟು ವಿಭಿನ್ನ ಪ್ರಯತ್ನಗಳು ಆಗಬೇಕು. ವಿಭಿನ್ನ ಪ್ರಯತ್ನಗಳು ಗೆದ್ದರೆ ಆಗ ಬೇರೆಯವರಿಗೂ ಅನುಕೂಲವಾಗುತ್ತದೆ’ ಎಂದು ಮಾತು ಮುಗಿಸುತ್ತಾರೆ ನಾಗಭೂಷಣ್‍.

Tags:    

Similar News