Mysore MUDA case | ಸಿಎಂಗೆ ಭೂಕಂಟಕದ ತಲೆಬೇನೆ; ಪಾರ್ವತಿ ವಿರುದ್ಧ ಮೂಲ ಮಾಲಿಕನ ಸಂಬಂಧಿ ದಾವೆ
ಮುಡಾ ಪ್ರಕರಣಕ್ಕೆ ಕಾರಣವಾದ ಕೆಸರೆ ಗ್ರಾಮದ ಜಮೀನಿನ ಮೂಲ ಮಾಲೀಕ ದೇವರಾಜು ವಿರುದ್ಧ ಸೋದರನ ಪುತ್ರಿ ಜಮುನಾ ಎಂಬುವರು ಭಾಗಾಂಶದ ದಾವೆ ಹೂಡಿದ್ದಾರೆ. ದಾವೆಯಲ್ಲಿ ಸಿಎಂ ಪತ್ನಿ, ಬಾಮೈದ ವಿರುದ್ಧ ದೂರು ದಾಖಲಿಸಿದ್ದಾರೆ.;
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದ ಬಳಿಕ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಮತ್ತೊಂದು ಭೂಕಂಟಕ ತಲೆಬೇನೆ ತಂದಿಟ್ಟಿದೆ.
ಮುಡಾ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ಸೋದರನ ಪುತ್ರಿ ಜಮುನಾ ಎಂಬುವರು ಕೆಸರೆ ಗ್ರಾಮದ ಸರ್ವೇ 464ರಲ್ಲಿರುವ 3.16 ಎಕರೆ ಜಮೀನಿನಲ್ಲಿ ಭಾಗಾಂಶ ಕೋರಿ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಸೇರಿ 12 ಜನರ ವಿರುದ್ಧ ದೂರು ಸಲ್ಲಿಸಿದ್ದಾರೆ.
ಕೆಸರೆ ಗ್ರಾಮದ 3.16 ಎಕರೆ ಜಾಗವನ್ನು ಮುಡಾ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು, ಸಿಎಂ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದರು. ಇದೇ ಜಮೀನನ್ನು ಸಿಎಂ ಪತ್ನಿ ಪಾರ್ವತಿಯವರಿಗೆ ಮಲ್ಲಿಕಾರ್ಜುನಸ್ವಾಮಿ ಅರಿಶಿಣ-ಕುಂಕುಮಕ್ಕಾಗಿ ದಾನದ ರೂಪದಲ್ಲಿ ಕೊಟ್ಟಿದ್ದರು.
ಬಳಿಕ ಜಮೀನನು ಮುಡಾ ಸ್ವಾಧೀನಪಡಿಸಿಕೊಂಡು ನಿವೇಶನ ಹಂಚಿಕೆ ಮಾಡಿತ್ತು. ಸಿಎಂ ಪತ್ನಿ ಪಾರ್ವತಿಯವರಿಗೆ 50:50 ಅನುಪಾತದಲ್ಲಿ ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಹಂಚಿಕೆ ಮಾಡಿತ್ತು. ನಿವೇಶನ ಹಂಚಿಕೆ ಪ್ರಕರಣದಲ್ಲಿ ಅವ್ಯವಹಾರದ ಆರೋಪ ಕೇಳಿಬಂದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಪತ್ನಿ 14 ನಿವೇಶನಗಳನ್ನು ಮುಡಾ ಹಿಂತಿರುಗಿಸಿದ್ದರು. ಸದ್ಯ ಮುಡಾ ನಿವೇಶನ ಹಂಚಿಕೆ ಪ್ರಕರಣ ಕುರಿತಂತೆ ಲೋಕಾಯುಕ್ತ ಪೊಲೀಸರು ಹಾಗೂ ಜಾರಿನಿರ್ದೇಶನಾಲಯ ಪ್ರತ್ಯೇಕ ತನಿಖೆ ನಡೆಸುತ್ತಿವೆ.
ಪಾಲಿಗಾಗಿ ನ್ಯಾಯಾಲಯದಲ್ಲಿ ದಾವೆ
ಮುಡಾ ಪ್ರಕರಣಕ್ಕೆ ಕಾರಣವಾದ ಕೆಸರೆ ಗ್ರಾಮದ ಜಮೀನಿಗೆ ಸಂಬಂಧಿಸಿ ಮೂಲ ಮಾಲೀಕ ದೇವರಾಜು ಸೋದರನ ಪುತ್ರಿ ಜಮುನಾ ಎಂಬುವರು ಪಾಲು ಕೋರಿ ದೇವರಾಜು, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಸೇರಿ 12 ಜನರ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಸಿಎನ್ಆರ್ ನಂಬರ್ KAMS020031832024ರ ಅಡಿ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದಲ್ಲದೇ ಜಮೀನಿಗೆ ಸಂಬಂಧಿಸಿ ಮುಡಾ ಆಯುಕ್ತ, ಮೈಸೂರಿನ ಮಾಜಿ ಜಿಲ್ಲಾಧಿಕಾರಿ ವಿರುದ್ಧವೂ ದೂರು ದಾಖಲಾಗಿದೆ.
ಸಹಿ ಪಡೆಯದೇ ಮಾರಾಟ ಆರೋಪ
ಮೈಸೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದೇವರಾಜು ಅವರ ಸೋದರ ಮೈಲಾರಯ್ಯ ಅವರ ಪುತ್ರಿ ಜಮುನಾ ಅವರು, ದೇವರಾಜು ಅವರು ನಮ್ಮ ಗಮನಕ್ಕೆ ತರದೇ ಸಿಎಂ ಕುಟುಂಬಕ್ಕೆ ಜಮೀನು ಮಾರಾಟ ಮಾಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ. 464ರಲ್ಲಿ 3.16 ಗುಂಟೆ ಜಮೀನಿನಲ್ಲಿ ನಮಗೂ ಪಾಲಿದೆ. ಜಮೀನು ಮಾರಾಟ ಮಾಡಿದ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರ ಸಹಿ ಪಡೆದಿಲ್ಲ. ನಮ್ಮ ಚಿಕ್ಕಪ್ಪ ದೇವರಾಜು ಅವರಿಂದ ಮೋಸವಾಗಿದೆ ಎಂದು ದೂರಿದ್ದಾರೆ.
ಮೈಲಾರಯ್ಯ ಅವರ ಪುತ್ರ ಮಂಜುನಾಥ್ ಮಾತನಾಡಿ, ನಮ್ಮ ಚಿಕ್ಕಪ್ಪ ದೇವರಾಜು ಜಮೀನಿನ ಖಾತೆ ಮಾಡಿಸಿಕೊಡುವುದಾಗಿ ಹೇಳಿ ನಮಗೆ ತಿಳಿಯದೇ ಜಮೀನು ಮಾರಾಟ ಮಾಡಿದ್ದಾರೆ. ಖಾತೆ ಮಾಡಿಸಿಕೊಡುವ ವೇಳೆ ನಾನು ಹಾಗೂ ನನ್ನ ತಾಯಿ ಇಬ್ಬರಷ್ಟೇ ಸಹಿ ಮಾಡಿದ್ದೆವು. ಆದರೆ, ನಮ್ಮ ಹೆಸರಿಗೆ ಜಮೀನು ಮಾಡಿಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗ ನಾನು ಸಹಿ ಹಾಕಿರುವ ಕಾರಣ ನನ್ನ ಸೋದರಿ ಜಮುನಾ ಅವರು ನನ್ನ ಮೇಲೂ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಕೆಸರೆ ಗ್ರಾಮದ ಜಮೀನು ನಮ್ಮ ತಂದೆ ಮೈಲಾರಯ್ಯ ಅವರಿಗೆ ಸೇರುವ ಜಮೀನು. ನಮ್ಮ ಕುಟುಂಬವನ್ನು ವಂಚಿಸಿ ಸಿಎಂ ಕುಟುಂಬಕ್ಕೆ ಜಮೀನು ಮಾರಾಟ ಮಾಡಿದ್ದಾರೆ ಎಂದು ದೂರಿದ್ದಾರೆ.
ಮುಡಾ ಪ್ರಕರಣದ ಮೂಲವಾಗಿರುವ ಕೆಸರೆ ಗ್ರಾಮದ ಜಮೀನಿಗೆ ಸಂಬಂಧಿಸಿ ಈಗಾಗಲೇ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತ ಪೊಲೀಸರು ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ವಿಚಾರಣೆ ನಡೆಸಿದ್ದು, ಯಾರಿಂದ ಭೂಮಿ ಬಂದಿತ್ತು. ಮಾರಾಟ ಮಾಡಿದ್ದು ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಿದೆ. ಈಗ ಇನ್ನೊಂದು ದಾವೆ ದಾಖಲಾಗಿರುವುದು ಸಿಎಂ ಕುಟುಂಬವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.