Hubballi Kims Hospital| ನವಜಾತ ಶಿಶುವಿನಲ್ಲೊಂದು ಭ್ರೂಣಾಕೃತಿ ; ವೈದ್ಯ ಲೋಕದ ಅಚ್ಚರಿ

ಕುಂದಗೋಳದ ಗರ್ಭಿಣಿಯೊಬ್ಬರು ಎರಡನೇ ಹೆರಿಗೆಗೆ ಕೆಎಂಸಿಆರ್‌ಐನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದರು. ಸೆ.23ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಅದು ಆರೋಗ್ಯವಾಗಿದೆ.

Update: 2025-10-03 05:24 GMT

ಸಾಂದರ್ಭಿಕ ಚಿತ್ರ

Click the Play button to listen to article

ಮಗುವಿನೊಳಗೆ ಮತ್ತೊಂದು ಮಗುವಿನ ಭ್ರೂಣ ಪತ್ತೆಯಾಗಿರುವ ಅಪರೂಪದ ಪ್ರಕರಣ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಕಿಮ್ಸ್‌) ಯಲ್ಲಿ ಬೆಳಕಿಗೆ ಬಂದಿದೆ.

ಕುಂದಗೋಳದ ಗರ್ಭಿಣಿಯೊಬ್ಬರು ಎರಡನೇ ಹೆರಿಗೆಗಾಗಿ ಕಿಮ್ಸ್‌ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದರು. ಗರ್ಭಿಣಿಯು ಸೆ.23ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ನವಜಾತ ಶಿಶುವಿನಲ್ಲಿ ಬೇರೆ ಬೇರೆ ಬದಲಾವಣೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ತಪಾಸಣೆಗೆ ಒಳಪಡಿಸಿದಾಗ ಮಗುವಿನೊಳಗೆ ಮತ್ತೊಂದು ಭ್ರೂಣ ಇರುವುದು ತಿಳಿದು ಬಂದಿದೆ.  ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಶಸ್ತ್ರಚಿಕಿತ್ಸಕರು ಭ್ರೂಣದ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದಾರೆ. 

ಪತ್ತೆಯಾಗಿದ್ದು ಹೇಗೆ? 

ಆಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಮಾಡಿಸಿದಾಗ ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರುವ ಭ್ರೂಣ ಕಂಡಿದೆ.  ಎಂಆರ್‌ಐ ಸ್ಕ್ಯಾನ್ ಮಾಡಿಸಿದಾಗಲೂ ನವಜಾತ ಶಿಶುವಿನ ದೇಹದೊಳಗೊಂದು ಮಗು ಇರುವುದು ಖಚಿತವಾಗಿದೆ. ಇನ್ನೂ ಕೆಲವು ತಪಾಸಣೆ ವರದಿ ಬಂದ ನಂತರ ಪಾಲಕರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.

ಅಂಗಗಳು ಕಾರ್ಯ ನಿರ್ವಹಿಸಲ್ಲ

ನವಜಾತ ಶಿಶುವಿನ ದೇಹದೊಳಗೆ ಅಸಹಜ ದ್ರವ್ಯರಾಶಿ ಬೆಳೆಯುವ ಅಪರೂಪದ ಸ್ಥಿತಿಯಾಗಿದೆ. ಈ ದ್ರವ್ಯರಾಶಿಯು ತಲೆಬುರುಡೆ, ಸ್ಯಾಕ್ರಮ್ (ಬೆನ್ನುಮೂಳೆಯ ಬುಡದಲ್ಲಿರುವ ತ್ರಿಕೋನ ಮೂಳೆ) ಅಥವಾ ಬಾಯಿಯ ಒಳಭಾಗದಂತಹ ಆಸಾಮಾನ್ಯ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಹುದು. ಕೆಲ ಸಂದರ್ಭಗಳಲ್ಲಿ ಇದು ಬೆನ್ನುಮೂಳೆಯ ಕಾಲಂ, ಅಂಗ ಮೊಗ್ಗುಗಳು ಅಥವಾ ಮೂಲ ಅಂಗಗಳಂತಹ ಲಕ್ಷಣ ತೋರಿಸಬಹುದು. ಆದರೆ, ಇವು ಎಂದಿಗೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವುದಿಲ್ಲ. ಜತೆಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಎರಡು ಲಕ್ಷ ಜನನದಲ್ಲಿ ಒಂದು ಸಯಾಮಿ ಅವಳಿ

ಸಯಾಮಿ ಅವಳಿಗಳು ಅಥವಾ ಸಂಯೋಜಿತ ಅವಳಿಗಳು ಗರ್ಭದಿಂದಲೇ ಶರೀರವನ್ನು ಜೋಡಿಸಿಕೊಂಡು ಜನಿಸುತ್ತವೆ. ಸುಮಾರು 50 ಸಾವಿರದಿಂದ 2 ಲಕ್ಷದವರೆಗಿನ ಜನನ ಪ್ರಮಾಣದಲ್ಲಿ ಒಂದು ಸಯಾಮಿ ಅವಳಿ ಜನಿಸುವ ಸಂಭವ ಇದೆ ಎಂದು ವೈದ್ಯಕೀಯ ಸಂಶೋಧನೆಗಳು ತಿಳಿಸುತ್ತವೆ. ಸಾಮಾನ್ಯವಾಗಿ ಮಗು ಜನಿಸುವಾಗಲೇ ಅವಳಿಗಳ ದೇಹ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಜತೆಗೆ ತದ್ರೂಪವಾಗಿರುತ್ತದೆ. ಆದರೆ, ಮಗುವಿನಲ್ಲಿ ಮಗು ಕಂಡುಬರುವ ಪ್ರಕಣಗಳು ಅತ್ಯಂತ ವಿರಳ. ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಆವಿಷ್ಕಾರ ಮತ್ತು ತಂತ್ರಜ್ಞಾನ ಮುಂದುವರಿದಿದೆ.

Tags:    

Similar News