
ಸಾಂದರ್ಭಿಕ ಚಿತ್ರ
ಶಿವಮೊಗ್ಗದಲ್ಲಿ ಕೈದಿ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ, ಕಾರಾಗೃಹ ಭದ್ರತೆ ಬಗ್ಗೆ ಮತ್ತೆ ಪ್ರಶ್ನೆ
ಕೇಂದ್ರ ಕಾರಾಗೃಹದ ಕೈದಿ ದೌಲತ್ ಖಾನ್(30) ಹೊಟ್ಟೆಯಲ್ಲಿ ಒಂದು ಇಂಚು ಅಗಲ ಹಾಗೂ ಮೂರು ಇಂಚು ದಪ್ಪದ ಫೋನ್ ಪತ್ತೆಯಾಗಿದ್ದು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಮೊಬೈಲ್ ಫೋನ್‌ನನ್ನು ಹೊರತೆಗಿದಿದ್ದಾರೆ.
ರಾಜ್ಯದ ಕಾರಾಗೃಹಗಳಲ್ಲಿನ ಭದ್ರತಾ ವ್ಯವಸ್ಥೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ. ಶಿವಮೊಗ್ಗದ ಸೋಗಾನೆ ಬಳಿಯ ಕೇಂದ್ರ ಕಾರಾಗೃಹದ ಕೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆದಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿದ್ದ ದೌಲತ್ ಖಾನ್ (30) ಎಂಬ ಕೈದಿಯ ಹೊಟ್ಟೆಯಲ್ಲಿ ಸುಮಾರು ಒಂದು ಇಂಚು ಅಗಲ ಹಾಗೂ ಮೂರು ಇಂಚು ದಪ್ಪದ ಫೋನ್ ಪತ್ತೆಯಾಗಿದೆ. ನ್ಯಾಯಾಲಯದಿಂದ 10 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ದೌಲತ್ ಖಾನ್, ತಾನು ಕಲ್ಲು ನುಂಗಿದ್ದೇನೆ ಎಂದು ಜೈಲಿನ ವೈದ್ಯರಿಗೆ ತಿಳಿಸಿದ್ದ. ಹೊಟ್ಟೆ ನೋವು ಹೆಚ್ಚಾದ ಕಾರಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೊಟ್ಟೆಯಲ್ಲಿ ಕಲ್ಲು ಇರಬಹುದೆಂದು ಅನುಮಾನಿಸಿ ಎಕ್ಸ್-ರೇ ಮಾಡಿದ ವೈದ್ಯರಿಗೆ, ಕೈದಿಯ ಹೊಟ್ಟೆಯಲ್ಲಿ ಕಲ್ಲಿನ ಬದಲು ಮೊಬೈಲ್ ಫೋನ್ ಇರುವುದು ಕಂಡುಬಂದಿದೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್ ಹೊರತೆಗೆದು ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಈ ಹಿಂದೆ, ಎರಡು ವರ್ಷಗಳ ಹಿಂದೆಯೂ ಶಿವಮೊಗ್ಗ ಕೇಂದ್ರ ಕಾರಾಗೃಹದ ಮತ್ತೊಬ್ಬ ಕೈದಿಗೆ ಹೊಟ್ಟೆ ನೋವು ಬಂದಾಗ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಆತನ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿತ್ತು.
ಕೇಂದ್ರ ಕಾರಾಗೃಹದೊಳಗೆ ಮೊಬೈಲ್ ನಿಷೇಧವಿದ್ದರೂ, ಕೈದಿಗಳಿಗೆ ಮೊಬೈಲ್ ಹೇಗೆ ದೊರೆಯುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಕಾರಾಗೃಹ ಅಧೀಕ್ಷಕ ಪಿ. ರಂಗನಾಥ್ ಅವರು ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆಗಳು ಜೈಲುಗಳ ಭದ್ರತಾ ಲೋಪಗಳ ಬಗ್ಗೆ ಗಂಭೀರ ಕಳವಳ ಮೂಡಿಸಿವೆ.