The Federal Explainer | 7th Pay Commission: ಜಾರಿಗೆ ನೌಕರರ ಗಡುವು: ಏನು ಶಿಫಾರಸು? ಯಾವಾಗ ಜಾರಿ?
ಕಳೆದ ಮೂರ್ನಾಲ್ಕು ವಾರಗಳಿಂದಲೂ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಲೇ ಇದೆ. ಆಯೋಗದ ಶಿಫಾರಸುಗಳನ್ನು ಜಾರಿಗೆ ತರದೇ ಹೋದಲ್ಲಿ ಹೋರಾಟ ನಡೆಸುವುದಾಗಿ ನೌಕರರು ಹೇಳಿದ್ದಾರೆ. ಹಾಗಾದರೆ, ಏಳನೇ ವೇತನ ಆಯೋಗದ ವರದಿ ಎಂದರೇನು? ವರದಿಯ ಶಿಫಾರಸುಗಳೇನು? ವಿವರಗಳಿಗಾಗಿ ಮುಂದೆ ಓದಿ..
7th Pay Commission | ವೇತನ ಆಯೋಗ ವರದಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರೂ ಅದರ ಶಿಫಾರಸುಗಳನ್ನು ಜಾರಿಗೆ ತರದೇ ಇರುವ ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ರಾಜ್ಯ ಸರ್ಕಾರಿ ನೌಕರರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕಳೆದ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಮುನ್ನ ಏಳನೇ ವೇತನ ಆಯೋಗದ ವರದಿಯನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನೀತಿ ಸಂಹಿತೆ ಮುಗಿಯುತ್ತಲೇ ವರದಿ ಜಾರಿಗೊಳಿಸುವ ಪರೋಕ್ಷ ಸಂದೇಶ ನೀಡಿತ್ತು. ಚುನಾವಣೆಯ ಮತ ಲಾಭದ ಮೇಲೆ ಕಣ್ಣಿಟ್ಟು ನಡೆಸಿದ ಆ ಪ್ರಯತ್ನ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗಳು ತಲೆಕೆಳಗಾಗಿರುವ ಹಿನ್ನೆಲೆಯಲ್ಲಿ ಇದೀಗ ಫಲಕೊಟ್ಟಂತೆ ಕಾಣುತ್ತಿಲ್ಲ.
ಜೊತೆಗೆ ಈಗಾಗಲೇ ಗ್ಯಾರಂಟಿ ಯೋಜನೆಗಳ ಹಣಕಾಸು ಹೊರೆಯಿಂದ ತತ್ತರಿಸಿರುವ ರಾಜ್ಯ ಸರ್ಕಾರ, ಆ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆಗಾಗಿ ನಿವೃತ್ತ ಅಧಿಕಾರಿಗಳ ಗುತ್ತಿಗೆ ಸೇವೆ ರದ್ದತಿ, ಸಚಿವಾಲಯ ಮತ್ತು ಸಚಿವರ ಆಪ್ತ ಸಿಬ್ಬಂದಿಗಳ ಕಡಿತ ಮುಂತಾದ ಕ್ರಮಗಳನ್ನು ಜಾರಿಗೆ ತರುತ್ತಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಸರ್ಕಾರಿ ನೌಕರರ ವೇತನವನ್ನು ಬಹುತೇಕ ದುಪ್ಪಟ್ಟು ಮಾಡುವ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದು ಅನುಮಾನಾಸ್ಪದವಾಗಿದೆ.
ಆ ಹಿನ್ನೆಲೆಯಲ್ಲಿಯೇ ಕಳೆದ ಮೂರ್ನಾಲ್ಕು ವಾರಗಳಿಂದಲೂ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಲೇ ಇದೆ. ಇದೀಗ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಶಿವಮೊಗ್ಗದಲ್ಲಿ ಹೇಳಿಕೆ ನೀಡಿ, ಜೂನ್ ಅಂತ್ಯದೊಳಗೆ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರದೇ ಹೋದಲ್ಲಿ ಮುಂದಿನ ಹೋರಾಟದ ಕುರಿತು ಸಂಘದ ಕಾರ್ಯಕಾರಿ ಮಂಡಳಿ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಅಷ್ಟಕ್ಕೂ ಈ ಏಳನೇ ವೇತನ ಆಯೋಗದ ವರದಿ ಎಂದರೇನು? ವರದಿಯ ಶಿಫಾರಸುಗಳೇನು? ಸರ್ಕಾರ ಮತ್ತು ನೌಕರರ ಸಂಘಟನೆ ನಡುವೆ ಯಾಕೆ ಈ ಹಗ್ಗಜಗ್ಗಾಟ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದೆ ʼದ ಫೆಡರಲ್ ಕರ್ನಾಟಕʼ. ವಿವರಗಳಿಗಾಗಿ ಮುಂದೆ ಓದಿ..
ಏಳನೇ ವೇತನ ಆಯೋಗ ಎಂದರೇನು?
ಬೆಲೆ ಏರಿಕೆ, ಜೀವನ ನಿರ್ವಹಣಾ ವೆಚ್ಚ, ಹಣದ ಮೌಲ್ಯ, ನಗರ ಮತ್ತು ಪಟ್ಟಣ ಪ್ರದೇಶಗಳ ಜೀವನಮಟ್ಟ ಮುಂತಾದ ಅಂಶಗಳಲ್ಲಿ ಆಗುವ ಏರಿಳಿತಗಳನ್ನು ಅಧ್ಯಯನ ನಡೆಸಿ ಸರ್ಕಾರಿ ನೌಕರರ ವೇತನದ ಪರಿಷ್ಕರಣೆಗೆ ವೈಜ್ಞಾನಿಕ ತಳಹದಿಯ ಶಿಫಾರಸುಗಳನ್ನು ಮಾಡಲು ಸರ್ಕಾರ ನೇಮಕ ಮಾಡುವ ಆಯೋಗವನ್ನು ವೇತನ ಆಯೋಗ ಎನ್ನಲಾಗುತ್ತದೆ. ಈವರೆಗೆ ರಾಜ್ಯದಲ್ಲಿ ಏಳು ವೇತನ ಆಯೋಗಗಳು ಆಗಿಹೋಗಿವೆ. ಇದೀಗ 2022ರ ನವೆಂಬರ್ನಲ್ಲಿ ಸರ್ಕಾರಿ ನೌಕರರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಏಳನೇ ವೇತನ ಆಯೋಗ ರಚಿಸಿತ್ತು. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಆ ಆಯೋಗ ರಚನೆಯಾಗಿತ್ತು.
ಆಯೋಗದ ಶಿಫಾರಸುಗಳೇನು?
ಸರ್ಕಾರಿ ನೌಕರರ ಕನಿಷ್ಟ ಮೂಲ ವೇತನವನ್ನು ಮಾಸಿಕ 17,000 ದಿಂದ 27,000ಕ್ಕೆ ಪರಿಷ್ಕರಿಸುವುದು, ಗರಿಷ್ಠ ವೇತನ ಮಿತಿಯನ್ನು 2,41,000ಕ್ಕೆ ನಿಗದಿಪಡಿಸುವುದು, ಮಾಸಿಕ ಪಿಂಚಣಿ ಪ್ರಮಾಣವನ್ನು ಅಂತಿಮವಾಗಿ ಪಡೆದ ಮೂಲ ವೇತನದ ಶೇ.50ರಷ್ಟು ಮತ್ತು 70 ವಯಸ್ಸಿನ ಮೇಲಿನ ಪಿಂಚಣಿದಾರರಿಗೆ ಹೆಚ್ಚುವರಿಯಾಗಿ ಮೂಲ ಪಿಂಚಣಿಗೆ ಶೇ.10ರಷ್ಟು ಸೇರಿಸುವುದು, ಎ ಗ್ರೂಪ್ ನೌಕರರಿಗೆ 65 ಲಕ್ಷ ಹಾಗೂ ಉಳಿದ ನೌಕರರಿಗೆ 40 ಲಕ್ಷ ಗೃಹ ನಿರ್ಮಾಣ ಭತ್ಯೆ, ವಾರದಲ್ಲಿ ಐದು ದಿನ ಮಾತ್ರ ಕೆಲಸದ ಸೌಲಭ್ಯ, ಹೆರಿಗೆಗೆ 60 ದಿನ ಮತ್ತು ನವಜಾತ ಶಿಶು ಆರೈಕೆಗೆ 18 ತಿಂಗಳ ಹೆರಿಗೆ ರಜೆ ನೀಡುವುದು, ಹೊಸ ವೇತನ ಶ್ರೇಣಿಯನ್ನು 2022ರ ಜುಲೈ ತಿಂಗಳಿನಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರುವುದು ಸೇರಿದಂತೆ ಒಟ್ಟು ಮೂವತ್ತು ಶಿಫಾರಸುಗಳನ್ನು ಆಯೋಗ ಮಾಡಿದೆ.
ಶಿಫಾರಸು ಜಾರಿಯಿಂದ ಸರ್ಕಾರಿ ಬೊಕ್ಕಸಕ್ಕೆ ಹೊರೆ ಎಷ್ಟು?
ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದಲ್ಲಿ ಸರ್ಕಾರಕ್ಕೆ ತತಕ್ಷಣಕ್ಕೆ 17 ಸಾವಿರ ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಅಂದರೆ, ಈಗ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗೆ ಮಾಡುತ್ತಿರುವ ವೆಚ್ಚಕ್ಕಿಂತ ಹೆಚ್ಚುವರಿಯಾಗಿ ಶೇ.25ರಷ್ಟು ವೆಚ್ಚ ಮಾಡಬೇಕಾಗುತ್ತದೆ. ಆ ಪೈಕಿ ವೇತನಕ್ಕಾಗಿ 80,500 ಕೋಟಿ, ಪಿಂಚಣಿಗಾಗಿ 32,500 ಕೋಟಿ ಸೇರಿದಂತೆ ಒಟ್ಟು 1.12 ಲಕ್ಷ ಕೋಟಿ ಒಟ್ಟಾರೆ ವೇತನ ಮತ್ತು ಪಿಂಚಣಿ ಹೊರೆ ಬೀಳಲಿದೆ ಎನ್ನಲಾಗಿದೆ.
ಆಯೋಗದ ಶಿಫಾರಸಿಗೆ ಸರ್ಕಾರಿ ನೌಕರರ ಪ್ರತಿಕ್ರಿಯೆ ಏನು?
ಸರ್ಕಾರಿ ನೌಕರರು ಶೇ.35ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಆಯೋಗ ಶೇ.27.7ರಷ್ಟು ಹೆಚ್ಚಳಕ್ಕೆ ಶಿಫಾರಸು ಮಾಡಿದೆ. ಹಾಗಾಗಿ ಸಹಜವಾಗಿಯೇ ನೌಕರರ ವಲಯದಲ್ಲಿ ಆಯೋಗದ ಶಿಫಾರಸು ತಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂಬ ಅಸಮಾಧಾನ ಇದೆ. ಹಾಗೇ ಈಗ ಪಡೆಯುತ್ತಿರುವ ಡಿಎಯನ್ನು ಮೂಲವೇತನದಲ್ಲಿ ಸೇರಿಸಿ ಅದರ ಆಧಾರದ ಮೇಲೆ ವೇತನ ಪರಿಷ್ಕರಣೆ ಆಗಬೇಕು, ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಪರಿಷ್ಕರಣೆ ಆಗಬೇಕು, ವಿವಿಧ ಇಲಾಖೆಗಳ ವೃಂದಗಳ ನಡುವಿನ ವೇತನ ತಾರತಮ್ಯ ಸರಿಪಡಿಸಬೇಕು, ಖಾಲಿ ಇರುವ 2.6 ಲಕ್ಷಕ್ಕೂ ಅಧಿಕ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ನೌಕರರು ಆಯೋಗದ ಮುಂದಿಟ್ಟಿದ್ದರು.
ರಾಜ್ಯ ಸರ್ಕಾರದ ನಿಲುವು ಏನು?
ಈಗಾಗಲೇ ಏಳನೇ ವೇತನ ಆಯೋಗ ಜಾರಿ ಮಾಡಿರುವ ಕೇಂದ್ರ ಸರ್ಕಾರ, ಇದೀಗ ತನ್ನ ನೌಕರರಿಗೆ ಎಂಟನೇ ವೇತನ ಆಯೋಗದ ರಚನೆಗೆ ಮುಂದಾಗಿದೆ ಎಂಬ ವರದಿಗಳಿವೆ. ಆದರೆ, ರಾಜ್ಯದಲ್ಲಿ ಇನ್ನೂ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದೇ ಅನುಮಾನಾಸ್ಪದವಾಗಿದೆ. ಏಕೆಂದರೆ, ಆಯೋಗ ವರದಿ ಸಲ್ಲಿಸಿದ್ದು ಕಳೆದ ಮಾರ್ಚ್ ಮಧ್ಯದಲ್ಲಿ, ಆದರೂ ಈವರೆಗೆ ವರದಿಯ ಕುರಿತ ಹಣಕಾಸು ಇಲಾಖೆಯ ಅಭಿಪ್ರಾಯವನ್ನೇ ಸರ್ಕಾರ ಪಡೆದಿಲ್ಲ ಎನ್ನಲಾಗುತ್ತಿದೆ. ಜೊತೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯನ್ನೇ ನೆಪ ಮಾಡಿಕೊಂಡಿದ್ದ ಸರ್ಕಾರ, ಕಳೆದ ವಾರ ನಡೆಸಿದ ಸಂಪುಟ ಸಭೆಯಲ್ಲೂ ವೇತನ ಆಯೋಗದ ವಿಷಯ ಚರ್ಚೆಗೇ ಬಂದಿಲ್ಲ ಎಂದು ಹೇಳಿದೆ. ಹಾಗಾಗಿ ಸರ್ಕಾರ ಸದ್ಯ ವೇತನ ಆಯೋಗದ ಶಿಫಾರಸು ಜಾರಿ ಮಾಡುವ ಯೋಚನೆಯಲ್ಲಿ ಇಲ್ಲ ಎನ್ನಲಾಗುತ್ತಿದೆ.