ಕಸ ಗುಡಿಸುವ ಯಂತ್ರ ಖರೀದಿಗೆ ನಿರುತ್ಸಾಹ, ಬಾಡಿಗೆ ಪಾವತಿಸಲು ಉತ್ಸಾಹ; ಯೋಜನೆಯಲ್ಲಿದೆಯೇ ಕಿಕ್‌ಬ್ಯಾಕ್‌ ಹುನ್ನಾರ?

ಕೇಂದ್ರ ಸರ್ಕಾರದ ಜೆಮ್‌ ಪೋರ್ಟಲ್‌ನಲ್ಲಿ ಇಟಲಿ ನಿರ್ಮಿತ dulevo Self Propelled Road Sweeper with Vacuum Type ಯಂತ್ರದ ಬೆಲೆ 1.9 ಕೋಟಿ ರೂ. ಇದೆ. ಹಾಗಾಗಿ ಇದೇ ವೆಚ್ಚದಲ್ಲಿ ಯಂತ್ರ ಖರೀದಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

Update: 2025-11-22 02:40 GMT

ಬೆಂಗಳೂರಿನ ಐದು ಪಾಲಿಕೆಗಳಿಗೆ 613.25 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆ ಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮವು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಒಟ್ಟು 59 ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಆದರೆ, ಈ ಯಂತ್ರಗಳಿಗೆ ಬಾಡಿಗೆ ನೀಡುವ ಹಣದಲ್ಲೇ ಸ್ವಂತ ವಾಹನ ಖರೀದಿಸಲು ಉತ್ಸಾಹ ತೋರದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಸ ಗುಡಿಸುವ ಯಂತ್ರಗಳ ಬಾಡಿಗೆ ಹಿಂದೆ ಕಿಕ್‌ಬ್ಯಾಕ್‌ ಹುನ್ನಾರವಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. 

ಯಂತ್ರದ ಬೆಲೆ ಎಷ್ಟು, ಬಾಡಿಗೆ ದರ ಎಷ್ಟು?

ರಾಜ್ಯ ಸರ್ಕಾರವು 59 ಯಾಂತ್ರಿಕ ಕಸ ಗುಡಿಸುವ ಯಂತ್ರಗಳಿಗೆ ಏಳು ವರ್ಷಗಳ ಬಾಡಿಗೆಯನ್ನು ಪ್ರಸ್ತಾವನೆಯಲ್ಲಿ 781 ಕೋಟಿ ನಿಗದಿಪಡಿಸಿತ್ತು. ಅದರ ಪ್ರಕಾರ ಪ್ರತಿ ಯಂತ್ರಕ್ಕೆ ವಾರ್ಷಿಕ 1.9 ಕೋಟಿ ರೂ. ಬಾಡಿಗೆಯಾಗಲಿದೆ. ಇದೇ ಹಣದಲ್ಲಿ ಸ್ವಂತಕ್ಕೆ ಯಂತ್ರ ಖರೀದಿಸಬಹುದು. ಕೇಂದ್ರ ಸರ್ಕಾರದ ಜೆಮ್‌ ಪೋರ್ಟಲ್‌ನಲ್ಲಿ ಇಟಲಿ ನಿರ್ಮಿತ dulevo Self Propelled Road Sweeper with Vacuum Type ಯಂತ್ರದ ಬೆಲೆ 1.9 ಕೋಟಿ ರೂ. ಇದೆ. ಹಾಗಾಗಿ ಇದೇ ವೆಚ್ಚದಲ್ಲಿ ಯಂತ್ರ ಖರೀದಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ರಾಜ್ಯ ಸರ್ಕಾರವು ಮೂಲ ಬಂಡವಾಳ, ಕಾರ್ಯಾಚರಣೆ- ನಿರ್ವಹಣೆ ವೆಚ್ಚ ದುಬಾರಿಯಾಗುವುದರಿಂದ ಬಾಡಿಗೆ ವಿಧಾನ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರವೇ ರಚಿಸಿದ್ದ ತಾಂತ್ರಿಕ ಸಮಿತಿ ಶಿಫಾರಸು ಮಾಡಿತ್ತು. ಅಂತಿಮವಾಗಿ ನಗರಾಭಿವೃದ್ಧಿ ಇಲಾಖೆ ನೀಡಿದ 613 ಕೋಟಿ ರೂ. ಪ್ರಸ್ತಾವನೆಗೆ ಸಚಿವ ಸಂಪುಟವು ಅನುಮೋದನೆ ನೀಡಿದೆ. ಆದರೆ, ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಪ್ರತಿಪಕ್ಷವು ಕಸ ಗುಡಿಸುವ ಯಂತ್ರಗಳನ್ನು ಕಮಿಷನ್ ದಂಧೆಗಾಗಿ ಬಾಡಿಗೆಗೆ ಪಡೆಯಲಾಗುತ್ತಿದೆ ಎಂದು ಆರೋಪಿಸಿದೆ.  

"200 ಕೋಟಿ ಹಣ ಲೂಟಿ ಮಾಡುವ ಹುನ್ನಾರ ಇದರ ಹಿಂದಿದೆ. ಯಂತ್ರಗಳನ್ನು ಖರೀದಿಸಿದರೆ ಇಷ್ಟೊಂದು ದೊಡ್ಡ ಪ್ರಮಾಣದ ಹಣಕಾಸು ಅಗತ್ಯವಿಲ್ಲ. ಅದಕ್ಕೆ 613 ಕೋಟಿ ಬಾಡಿಗೆ ನೀಡಿ, 200 ಕೋಟಿ ರೂ. ಕಬಳಿಸುವ ಯೋಜನೆ ಇದಾಗಿದೆ. ಯಾರು ಇದಕ್ಕೆ ಐಡಿಯಾ ಕೊಟ್ಟರೊ ಗೊತ್ತಿಲ್ಲ, ಕೂಡಲೇ ರಾಜ್ಯ ಸರ್ಕಾರ ಪ್ರಸ್ತಾವನೆ ಕೈ ಬಿಡಬೇಕು. ಬಾಡಿಗೆ ಬದಲು ಸ್ವಂತ ಖರೀದಿಗೆ ಮುಂದಾಗಬೇಕು" ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮಹಾಪೌರ ಹರೀಶ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. 

ಯಾವ ಪಾಲಿಕೆಗೆ ಎಷ್ಟು ಯಂತ್ರಗಳು?

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 12,878.89 ಕಿ.ಮೀ. ರಸ್ತೆ ಜಾಲವಿದೆ. ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳ ಒಟ್ಟು ಉದ್ದ 1682.10 ಕಿ.ಮೀ. ಇದೆ. ಈ ರಸ್ತೆಯು ಐದು ನಗರ ಪಾಲಿಕೆಗಳಲ್ಲಿ ಹಂಚಿಕೆಯಾಗಿದೆ. ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳ ಉದ್ದ ಒಟ್ಟು 298 ಕಿ.ಮೀ. ಇದೆ. ಕಸ ಗುಡಿಸಬೇಕಾದ ಮಾರ್ಗಗಳ ಉದ್ದ 832 ಕಿ.ಮೀ ಇರಲಿದೆ. ಇದಕ್ಕಾಗಿ 10 ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ.

ಬೆಂಗಳೂರು ಪೂರ್ವ ಪಾಲಿಕೆಯಲ್ಲಿ 310 ಕಿ.ಮೀ. ರಸ್ತೆಗಳ ಉದ್ದವಿದ್ದು, ಕಸ ಗುಡಿಸಬೇಕಾದ ಉದ್ದ 870 ಕಿ.ಮೀ ಇದೆ. ಇಲ್ಲಿಗೆ 11 ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ.

ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ ರಸ್ತೆಗಳ ಉದ್ದ 390 ಕಿ.ಮೀ. ಇದ್ದರೆ, ಕಸ ಗುಡಿಸಬೇಕಾದ ರಸ್ತೆಗಳ ಉದ್ದ 1090 ಕಿ.ಮೀ ಇರಲಿದೆ. ಇದಕ್ಕಾಗಿ 14 ಯಂತ್ರಗಳನ್ನು ನೀಡಲಾಗಿದೆ.

ಬೆಂಗಳೂರು ಉತ್ತರ ಪಾಲಿಕೆಯಲ್ಲಿ ರಸ್ತೆಗಳ ಉದ್ದ 370 ಕಿ.ಮೀ. ಇದ್ದು, ಕಸ ಗುಡಿಸಬೇಕಾದ ರಸ್ತೆಗಳ ಉದ್ದ 1034 ಕಿ.ಮೀ ಹೊಂದಿದೆ. ಹಾಗಾಗಿ 13 ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ರಸ್ತೆಗಳ ಉದ್ದ 320 ಕಿ.ಮೀ. ಇದೆ. ಕಸ ಗುಡಿಸಬೇಕಾದ ರಸ್ತೆಗಳ ಉದ್ದ 894 ಕಿ.ಮೀ ಇರಲಿದೆ. ಇದಕ್ಕಾಗಿ 11 ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ.

ತಾಂತ್ರಿಕ ಸಮಿತಿ ಪ್ರಸ್ತಾವನೆ ಏನು? 

5 ನಗರ ಪಾಲಿಕೆಗಳ ವ್ಯಾಪ್ತಿಯ 1682.10 ಕಿ.ಮೀ. ಉದ್ದದ ಮುಖ್ಯ ರಸ್ತೆ ಮತ್ತು ಉಪ ರಸ್ತೆಗಳ ಸ್ವಚ್ಛತೆಗೆ 59 ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು 84 ತಿಂಗಳ ಅವಧಿಗೆ ಬಾಡಿಗೆ ಆಧಾರದಲ್ಲಿ ಪಡೆಯಲು 781.08 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆಯು 613.25ಕೋಟಿ ರೂ.ಗಳಿಗೆ ಅನುಮೋದನೆ ನೀಡಿದೆ. ಕಸ ಗುಡಿಸುವ ಯಂತ್ರಗಳಿಗೆ ಪ್ರತಿ ಕಿ.ಮೀ.ಗೆ 894.53 ರೂ. ಬಾಡಿಗೆ ನಿಗದಿ ಮಾಡಿದೆ.

ಬೇರೆ ನಗರಗಳಲ್ಲಿ ದರ ಹೇಗಿದೆ?

ಬಿಹಾರದ ಪಾಟ್ನಾ, ಪಂಜಾಬ್‌ನ ಮೊಹಾಲಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಕಸ ಗುಡಿಸುವ ದರಗಳಲ್ಲಿ ವ್ಯತ್ಯಾಸವಿದೆ. ಪಾಟ್ನಾದಲ್ಲಿ ದರ ಕಿ.ಮೀ 1,299 ಇದ್ದರೆ, ಬೆಂಗಳೂರಿನಲ್ಲಿ 894.53 ಆಗಿದೆ. ಹಾಗಾಗಿ ಬಾಡಿಗೆ ಆಧಾರದಲ್ಲಿ ಕಸ ಗುಡಿಸುವ ಯಂತ್ರಗಳನ್ನು ಪಡೆಯಲಾಗುತ್ತಿದೆ ಎಂದು ತಾಂತ್ರಿಕ ಸಮಿತಿ ಸ್ಪಷ್ಟನೆ ನೀಡಿದೆ.  

ಕಾರ್ಮಿಕರ ನೇಮಕಾತಿ ವೆಚ್ಚ ಮತ್ತು ಟೆಂಡರ್ ಪ್ರಕ್ರಿಯೆಗಳು ವಿವಿಧ ನಿಗಮಗಳಲ್ಲಿ ಭಿನ್ನವಾಗಿವೆ. ಎಲ್ಲಾ ನಿಗಮಗಳಲ್ಲಿ ಒಟ್ಟು ನೇಮಕಾತಿ ವೆಚ್ಚಗಳು ಐದು ವರ್ಷಗಳಿಗೆ ಸುಮಾರು 7.81 ಶತಕೋಟಿ ಆಗಲಿದೆ. ಯಂತ್ರಗಳ ನಿರ್ವಹಣೆ ಹಾಗೂ ಕಾರ್ಯಾಚರಣೆಗಾಗಿ ಬಜೆಟ್ ಅಗತ್ಯವಿರಲಿದೆ. ಹಾಗಾಗಿ ಇದು ದುಬಾರಿಯಾಗಿರುವುದರಿಂದ ಬಾಡಿಗೆ ರೂಪದಲ್ಲಿ ಯಂತ್ರಗಳನ್ನು ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. 

ಜಿಬಿಎ ಮುಖ್ಯ ಆಯುಕ್ತರ ಪ್ರಸ್ತಾವನೆ ಹಾಗೂ ತಾಂತ್ರಿಕ ಸಮಿತಿ ವರದಿಗಳನ್ನು ಪರಿಗಣಿಸಿದ ನಂತರ ಸುಮಾರು 1,682 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳಲ್ಲಿ ಯಾಂತ್ರಿಕ ಸ್ವಚ್ಛತೆ ಯಂತ್ರಗಳನ್ನು ಬಳಸುವುದು ಅತ್ಯಂತ ಪರಿಣಾಮಕಾರಿ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ. ಟೆಂಡರ್ ಮಾದರಿ ಮತ್ತು ಅಂದಾಜು ಪಟ್ಟಿಗಳಿಗೆ ತಾಂತ್ರಿಕ ಸಮಿತಿಯ ಒಪ್ಪಿಗೆ ಪಡೆದಿದೆ.

ತಾಂತ್ರಿಕ ಸಮಿತಿ ವರದಿ ಹೇಳಿದ್ದೇನು?

ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ. ಸೆಲ್ವಮಣಿ. ಆರ್. ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ಪರಿಶೀಲನೆ ನಡೆಸಿದೆ. ಸಮಿತಿ ನೀಡಿದ ಟೆಂಡರ್ ಪ್ರಸ್ತಾವ, ಅಂದಾಜು ವೆಚ್ಚ, ಯಂತ್ರಗಳ ನಿರ್ವಹಣಾ ವಿಧಾನ ಹಾಗೂ ಮಾನವ ಸಂಪನ್ಮೂಲ ವ್ಯವಸ್ಥೆಯನ್ನು ಪರಿಗಣಿಸಿ ಹಲವು ಶಿಫಾರಸುಗಳನ್ನು ಮಾಡಿದೆ. ಅಲ್ಲದೇ ಯಂತ್ರಗಳನ್ನು ಪಾಲಿಕೆಯೇ ಖರೀದಿಸಿ, ಸ್ವಂತವಾಗಿ ಚಾಲನೆ, ನಿರ್ವಹಣೆ ಮಾಡುವುದರಿಂದ ಆಗುವ ಅನುಕೂಲ ಹಾಗೂ ಗುತ್ತಿಗೆದಾರರಿಂದ 7 ವರ್ಷ ನಿರ್ವಹಣೆ ಮಾಡಿಸಿ ಬಳಿಕ ಪಾಲಿಕೆಗೆ ಹಸ್ತಾಂತರ ಮಾಡಿಕೊಂಡುವುದರಿಂದ ಏನಾಗಲಿದೆ, ಬಾಡಿಗೆ ಆಧಾರದಲ್ಲಿ ಯಂತ್ರಗಳನ್ನು ಪಡೆದು 7 ವರ್ಷಗಳವರೆಗೆ ಸ್ವಚ್ಛತೆ ಕಾರ್ಯ ಮಾಡಿಸುವುದಾದರೆ ಏನೆಲ್ಲಾ ಸಾಧಕ-ಬಾಧಕಗಳು ಆಗಲಿವೆ ಎಂಬುದು ಸಮಿತಿ ಪರಿಶೀಲಿಸಿ ವರದಿ ನೀಡಿದೆ. 

ಅಂತಿಮವಾಗಿ ದೊಡ್ಡ ಮೊತ್ತದ ಮೂಲ ಬಂಡವಾಳ ವೆಚ್ಚ, ಮಾನವ ಸಂಪನ್ಮೂಲ ನಿರ್ವಹಣೆ ಸವಾಲು ಹಾಗೂ ಹೊಣೆಗಾರಿಕೆಯನ್ನು ಪರಿಗಣಿಸಿ ಬಾಡಿಗೆ ಆಧಾರದಲ್ಲಿ ಯಂತ್ರಗಳನ್ನು ಬಳಸುವುದು ಸೂಕ್ತ ಸಮಿತಿ ಅಭಿಪ್ರಾಯಪಟ್ಟಿದೆ. ನಿವ್ವಳ ಪ್ರಸ್ತುತ ಮೌಲ್ಯದ (NPV) ಲೆಕ್ಕಾಚಾರದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದ ಕಾರಣದಿಂದ ಬಾಡಿಗೆ ವಿಧಾನವೇ ಆರ್ಥಿಕವಾಗಿ ಮತ್ತು ಕಾರ್ಯನಿರ್ವಹಣೆಯಲ್ಲಿ ಅನುಕೂಲಕರ ಎಂದು ಹೇಳಿದೆ.

ಪ್ರತಿ ಕಿ.ಮೀ.ಗೆ ಶೇ 5 ರಷ್ಟು ದರ ಪರಿಷ್ಕರಣೆ

2025 ನೇ ಸಾಲಿನ ಆರ್ಥಿಕ ವರ್ಷದ ಪರಿಷ್ಕರಣೆಯಂತೆ ಪ್ರತಿ ಕಿ.ಮೀ. ಸ್ವಚ್ಛತಾ ದರವನ್ನು ಶೇ 5ಕ್ಕೆ ಹೆಚ್ಚಿಸಲಾಗಿದೆ. ಬಂಡವಾಳ ವೆಚ್ಚ 10 ಕೋಟಿ ಮತ್ತು 5 ವರ್ಷಗಳ ಕಾರ್ಯಾಚರಣೆ-ನಿರ್ವಹಣಾ ವೆಚ್ಚ 31 ಕೋಟಿಯ ಆಧಾರದ ಮೇಲೆ ಪರಿಷ್ಕೃತ ದರವನ್ನು ಕಿ.ಮೀ.ಗೆ 923 ರೂ.ಗಳಿಂದ 1,220 ರೂ.ಗೆ ಪರಿಷ್ಕರಿಸಲಾಗಿದೆ.

ಐದು ಪಾಲಿಕೆಗಳಲ್ಲಿ ಕಾರ್ಮಿಕರ, ಟೆಂಡರ್ ಪ್ರೀಮಿಯಂ ಹಾಗೂ ಜಿಎಸ್‌ಟಿ ಸೇರಿ ಮೊದಲ ವರ್ಷದಲ್ಲಿಯೇ ಐದು ನಿಗಮಗಳ ಒಟ್ಟಾರೆ ವೆಚ್ಚವು 1,000 ಕೋಟಿ ಮೀರಲಿದೆ ಎಂದು ಅಂದಾಜಿಸಲಾಗಿದೆ. ವಾರ್ಷಿಕ ಬಜೆಟ್‌ನಲ್ಲಿ ಅಗತ್ಯ ಅನುದಾನ ಕಡ್ಡಾಯವಾಗಿ ಕಾಯ್ದಿರಿಸುವುದು, ಗುತ್ತಿಗೆ ಅವಧಿಯನ್ನು 7 ವರ್ಷಗಳ ಮಟ್ಟಿಗೆ ನಿಗದಿ ಮಾಡುವುದು, ಮುಚ್ಚಿದ ಲಕೋಟೆ ಕ್ರಮದಲ್ಲಿ ಕೆಟಿಪಿಪಿ ಮುಖಾಂತರ ಟೆಂಡರ್ ಕರೆಯಲು ಅನುಮೋದನೆ ನೀಡಿದೆ.

ಈಗಾಗಲೇ ಸ್ವಚ್ಛ ಭಾರತ ಮಿಷನ್ ಸೇರಿದಂತೆ ಇತರ ಯೋಜನೆಗಳಡಿ ಯಾಂತ್ರಿಕ ಸ್ವಚ್ಛತಾ ಸೇವೆಗಳು ಪ್ರಾರಂಭವಾಗಿರುವ ಸ್ಥಳಗಳಲ್ಲಿ ಒಂದರ ಮೇಲೆ ಮತ್ತೊಂದು ಒವರ್‌ಲ್ಯಾಪ್ ಆಗದಂತೆ ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ. ಜತೆಗೆ ಅಗತ್ಯವಿದ್ದಲ್ಲಿ ಯಂತ್ರಗಳ ಸಂಖ್ಯೆ ಕಡಿತಗೊಳಿಸಲು ನಗರ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ.

ಅಧಿಕ ವೆಚ್ಚದ ಆರೋಪ

ಬೆಂಗಳೂರಿನಲ್ಲಿ ಬಿಬಿಎಂಪಿ ಬಳಿ 26 ಕಸ ಗುಡಿಸುವ ಯಂತ್ರಗಳು ಬಳಕೆಯಾಗದೇ ಬಿದ್ದಿವೆ. ಆದರೆ, ಕಾಂಗ್ರೆಸ್‌ ಸರ್ಕಾರ ಈಗ 613 ಕೋಟಿ ರೂ. ವೆಚ್ಚದಲ್ಲಿ 59 ಯಂತ್ರಗಳನ್ನು ಪಡೆಯಲು ಬಯಸುತ್ತಿದೆ. ಪ್ರತಿ ಯಂತ್ರಕ್ಕೆ ವಾರ್ಷಿಕವಾಗಿ ಪಾವತಿಸುವ ಬಾಡಿಗೆ ಹಣದಲ್ಲೇ ಸ್ವಂತಕ್ಕಾಗಿ ಯಂತ್ರಗಳನ್ನು ಖರೀದಿಸಬಹುದು. ಒಂದು ವಾಹನಕ್ಕೆ 1.3 ರಿಂದ 3 ಕೋಟಿ ರೂ. ವೆಚ್ಚವಾಗಲಿದೆ. ಹೀಗಿರುವಾಗ ಬಾಡಿಗೆಗೆ ಪಡೆಯಲು ಮುಂದಾಗಿರುವುದು ಜನರ ತೆರಿಗೆ ಹಣ ದುರ್ಬಳಕೆಗೆ ಹಿಡಿದ ಕನ್ನಡಿಯಾಗಲಿದೆ ಎಂದು ಜೆಡಿಎಸ್‌ ಹಾಗೂ ಬಿಜೆಪಿ ಆರೋಪಿಸಿವೆ. 

Tags:    

Similar News