Akka Cafe | ಮಹಿಳೆಯರ ಸಾರಥ್ಯದಲ್ಲಿ 50 ‘ಅಕ್ಕ ಕೆಫೆ': ಶರಣಪ್ರಕಾಶ್‌ ಪಾಟೀಲ್‌

ರಾಜ್ಯದಾದ್ಯಂತ 50 'ಅಕ್ಕ ಕೆಫೆ' ತೆರೆಯಲು ಯೋಜನೆ ರೂಪಿಸಲಾಗಿದೆ. ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳ ಜತೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಜಾರಿಗೆ ತರಲಾಗಿದೆ.;

Update: 2024-10-09 07:25 GMT
ರಾಜ್ಯದಲ್ಲಿ ಮಹಿಳೆಯರ ಸಾರಥ್ಯದಲ್ಲಿ 50 ‘ಅಕ್ಕ ಕೆಫೆ’ಯನ್ನು ಸಚಿವ ಶರಣ ಪ್ರಕಾಶ ಪಾಟೀಲ ಉದ್ಘಾಟಿಸಿದರು.
Click the Play button to listen to article

ಮಹಿಳಾ ಸಬಲೀಕರಣ ಉತ್ತೇಜಿಸಲು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡಲು 'ಅಕ್ಕ ಕೆಫೆ' ಸಹಕಾರಿಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದರು.

ದೇವನಹಳ್ಳಿಯ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ನಿರ್ಮಿಸಿರುವ 'ಅಕ್ಕ-ಬೇಕರಿ, ಕೆಫೆ' ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಕರ್ನಾಟಕ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಜ್ಯದಲ್ಲಿಯೇ ಎರಡನೇ ಅಕ್ಕ ಕೆಫೆ-ಬೇಕರಿ ದೇವನಹಳ್ಳಿಯಲ್ಲಿ ಪ್ರಾರಂಭಿಸಲಾಗಿದೆ ಎಂದರು. ರಾಜ್ಯದಾದ್ಯಂತ 50 'ಅಕ್ಕ ಕೆಫೆ' ತೆರೆಯಲು ಯೋಜನೆ ರೂಪಿಸಲಾಗಿದೆ. ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳ ಜತೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು. 

ಸ್ವಸಹಾಯ ಗುಂಪಿಗೆ ಸೇರಿದ 12 ಮಹಿಳೆಯರ ತಂಡ ಈ ಕೆಫೆಯನ್ನು ನಡೆಸಲಿದೆ. ಅಕ್ಕ ಕೆಫೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ವಾರವಿಡೀ ಕಾರ್ಯನಿರ್ವಹಿಸಲಿದೆ. ಇಲ್ಲಿ ಆರೋಗ್ಯಕರ, ಸ್ವಾದಿಷ್ಟ ಆಹಾರ ಲಭ್ಯವಿರಲಿದೆ. ಶುಚಿ-ರುಚಿ ಜತೆಗೆ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಆಹಾರ ಪೂರೈಸಲಾಗುವುದು ಎಂದರು.

ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, 'ಸರ್ಕಾರದ ಜನಪರ ಕಾರ್ಯಕ್ರಮವನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. 'ಅಕ್ಕ ಕೆಫೆ' ಒಂದು ಉತ್ತಮ ವೇದಿಕೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಲಿದೆʼ ಎಂದರು.

ಜಿಲ್ಲೆಯಲ್ಲಿ ನಿರುದ್ಯೋಗಿಗಳಿಗೆ ಕೌಶಲ ಆಧಾರಿತ ತರಬೇತಿ ಅವಶ್ಯ ಇದೆ. ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಸಚಿವರಾದ ಮುನಿಯಪ್ಪ ಮನವಿ ಮಾಡಿದರು. ಇದಕ್ಕೆ ಸಚಿವ ಶರಣ ಪ್ರಕಾಶ ಪಾಟೀಲ, ಐಟಿಐ, ಜಿಟಿಟಿಸಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ, ಮುಂದಿನ ದಿನಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಿ.ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಸಿ.ಜಗನ್ನಾಥ, ಕೌಶಲ್ಯಾಭಿವೃದ್ಧಿ ಇಲಾಖೆ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್‌, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕರಾದ ಪಿ.ಶ್ರೀವಿದ್ಯಾ, ಜಿಲ್ಲಾಧಿಕಾರಿ ಎನ್.ಶಿವಶಂಕ‌ರ್, ಜಿ.ಪಂ ಸಿ.ಇ.ಒ ಅನುರಾಧ, ತಹಶೀಲ್ದಾರ್ ಎಚ್.ಬಾಲಕೃಷ್ಣ, ದೇವನಹಳ್ಳಿ ತಾ.ಪಂ ಇಒ ಶ್ರೀನಾಥ್ ಗೌಡ ಸೇರಿದಂತೆ ಜಿಲ್ಲಾ, ತಾಲ್ಲೂಕು ಅಧಿಕಾರಿಗಳು ಸ್ವಸಹಾಯ ಗುಂಪುಗಳ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Similar News