40% ಕಮಿಷನ್‌ ಹಗರಣ | ಅಗತ್ಯಬಿದ್ದರೆ ಮರು ತನಿಖೆ: ಡಾ ಜಿ ಪರಮೇಶ್ವರ್‌

Update: 2024-11-18 10:01 GMT

ಬಿಜೆಪಿ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪದ ಕುರಿತು ಅಗತ್ಯ ಬಿದ್ದರೆ ಮರು ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಬಿಜೆಪಿ ವಿರುದ್ಧದ 40 ವರ್ಷದ ಕಮಿಷನ್ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಲೋಕಾಯುಕ್ತಕ್ಕೆ ಶಿಫಾರಸು ಮಾಡಿತ್ತು. ಆದರೆ, ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಲೋಕಾಯುಕ್ತ, ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದೆ ಎನ್ನಲಾಗಿತ್ತು.

ಆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಲೋಕಾಯುಕ್ತ ಪೊಲೀಸರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎಂದಿದ್ದಾರೆ ಎಂಬುದನ್ನು ಪರಿಶೀಲಿಸಬೇಕಿದೆ. ಅಗತ್ಯಬಿದ್ದರೆ ಮರು ತನಿಖೆ ನಡೆಸಲು ಕೂಡ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಕಾಮಗಾರಿ ಹಾಗೂ ಯೋಜನೆಗಳ ಜಾರಿಯಲ್ಲಿ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಹಾಗಾಗಿ ಸರ್ಕಾರಿ ಕಾಮಗಾರಿಗಳ ಗುಣಮಟ್ಟ ಕುಸಿದಿದೆ ಮತ್ತು ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಕಮಿಷನ್ ಬೇಡಿಕೆ ಇಡುತ್ತಿರುವುದರಿಂದಾಗಿ ಗುತ್ತಿಗೆದಾರರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದು ಅಂದಿನ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದರು. ಅಲ್ಲದೆ, ಗುತ್ತಿಗೆದಾರರ ಸಂಘ, ಅಂದಿನ ಮುಖ್ಯಮಂತ್ರಿ ಸೇರಿದಂತೆ ಹಿಂದಿನ ಸರ್ಕಾರದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೂರನ್ನೂ ನೀಡಿತ್ತು.

ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ʼ40 ಪರ್ಸೆಂಟ್ ಕಮಿಷನ್ʼ ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ʼಪೇ-ಸಿಎಂ ಅಭಿಯಾನʼವನ್ನೇ ನಡೆಸಿತ್ತು. ಜೊತೆಗೆ ತಾನು ಅಧಿಕಾರಕ್ಕೆ ಬಂದರೆ ಆ ಹಗರಣದ ಕುರಿತು ತನಿಖೆ ನಡೆಸುವುದಾಗಿಯೂ ಕಾಂಗ್ರೆಸ್ ಹೇಳಿತ್ತು.

ಜಮೀರ್ ವಿರುದ್ಧ ಶಿಸ್ತುಕ್ರಮದ ಸೂಚನೆ

ಇದೇ ಸಂದರ್ಭದಲ್ಲಿ ಚನ್ನಪಟ್ಟಣ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅವಮಾನಕರ ಹೇಳಿಕೆ ನೀಡಿ ಪಕ್ಷಕ್ಕೆ ಹಿನ್ನಡೆ ತಂದಿರುವ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸೂಚನೆಯನ್ನೂ ನೀಡಿದ ಡಾ ಜಿ ಪರಮೇಶ್ವರ್, ಸಚಿವ ಜಮೀರ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅಧ್ಯಕ್ಷರು ಪಕ್ಷದ ಶಿಸ್ತು ಪಾಲನಾ ಸಮಿತಿಗೆ ವರದಿ ಕೊಟ್ಟರೆ ಸಮಿತಿ ಅಧ್ಯಕ್ಷ ರಹೀಂ ಖಾನ್ ಅವರು ಕ್ರಮಕೈಗೊಳ್ಳಬಹುದು ಎಂದೂ ಹೇಳಿದ್ದಾರೆ.

ನಾನು ಈ ಹಿಂದೆ ಪಕ್ಷದ ಶಿಸ್ತುಸಮಿತಿ ಸದಸ್ಯನಾಗಿದ್ದೆ. ಆಗ ಪಕ್ಷಕ್ಕೆ ಹಾನಿ ಉಂಟುಮಾಡುವ ಹೇಳಿಕೆ ನೀಡಿದ ನಾಯಕರನ್ನು, ಅವರು ಎಷ್ಟೇ ದೊಡ್ಡವರಾದರೂ ನೋಟಿಸ್ ನೀಡಿ ಕರೆಸುತ್ತಿದ್ದೆವು. ಅಗತ್ಯಬಿದ್ದರೆ ಅಮಾನತು ಕೂಡ ಮಾಡುತ್ತಿದ್ದೆವು ಎಂದೂ ಅವರು ಹೇಳಿದ್ದಾರೆ.

Tags:    

Similar News