40% ಕಮಿಷನ್ ಹಗರಣ | ಆರೋಪ ಸುಳ್ಳಲ್ಲ: ಸಾಕ್ಷ್ಯ ಸಿಗದೇ ಇರಲು ಕಾರಣ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಅಂಬಿಕಾಪತಿಯವರು ಮಾಡಿರುವ ಆಪಾದನೆ ಮೇಲ್ನೋಟಕ್ಕೆ ಸಾಬೀತಾಗಿಲ್ಲ ಎಂದು ವಿಚಾರಣಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಅಂದ ಮಾತ್ರಕ್ಕೆ 40 ಪರ್ಸೆಂಟ್ ಕಮಿಷನ್ ಆರೋಪ ಸುಳ್ಳು ಎಂದರ್ಥವಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ
ಬಿಜೆಪಿಯ 40% ಕಮಿಷನ್ ಹಗರಣದಲ್ಲಿ ಲೋಕಾಯುಕ್ತ ನೀಡಿರುವುದು ಕ್ಲೀನ್ ಚಿಟ್ ಅಲ್ಲ, ಬಿಬಿಎಂಪಿ ಪೂರ್ವವಿಭಾಗದ ವ್ಯಾಪ್ತಿಯ ಕೇವಲ ಒಂದು ಆಟದ ಮೈದಾನಕ್ಕೆ ಸಂಬಂಧಿಸಿದ ಕಾಮಗಾರಿ ತನಿಖೆಯ ವರದಿ ಅದು. 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ದೂರುದಾರರ ಮರಣದಿಂದ ಸಾಕ್ಷ್ಯಾಧಾರದ ಕೊರತೆ ಎದುರಾಗಿ ಆರೋಪ ಸಾಬೀತು ಮಾಡಲಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2022ಆಗಸ್ಟ್ 30 ರಂದು ದಿವಂಗತ ಆರ್. ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು ಎನ್‌ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಲೋಕೋಪಯೋಗಿ, ಆರೋಗ್ಯ, ವಸತಿ, ಉನ್ನತ ಶಿಕ್ಷಣ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳಲ್ಲಿನ ಕಮಿಷನ್ ಹಾವಳಿ ಹಾಗೂ ಕೋಲಾರ ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವ ಮುನಿರತ್ನ ವಿರುದ್ಧ ಲಂಚದ ಆರೋಪ ಮಾಡಿದ್ದರು. ಅಲ್ಲದೇ ಕರ್ನಾಟಕ ಖಾಸಗಿ ಶಾಲಾ ಮಾಲೀಕರ ಎರಡು ಸಂಘಟನೆಗಳ ಲಂಚದ ಆರೋಪ, ಪಾವಗಡ ಆಸ್ಪತ್ರೆ ನಿರ್ಮಾಣ ಕಾಮಗಾರಿಯಲ್ಲಿ ಲಂಚದ ಅಕ್ರಮದ ಬಗ್ಗೆಯೂ ಪ್ರಸ್ತಾಪಿಸಿದ್ದರು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಕೇವಲ ಆಟದ ಮೈದಾನ ಕಾಮಗಾರಿ ಆರೋಪದ ಕುರಿತಂತೆ ಮಾತ್ರವೇ ತನಿಖೆಗೆ ಆದೇಶಿಸಿತ್ತು. ಗುತ್ತಿಗೆದಾರರು ಮಾಡಿದ್ದ ಇತರ ಗಂಭೀರ ಆರೋಪಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿರಲಿಲ್ಲ. ಇದು ಬಿಜೆಪಿಯವರ ಜಾಣ ಕುರುಡುತನವಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.
40% ಕಮಿಷನ್ ಗೆ ಸಂಬಂಧಿಸಿ ಇನ್ನೂ ಹಲವು ವಿಷಯಗಳ ಬಗ್ಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ ಅಂದಿನ ಬಿಜೆಪಿ ಸರ್ಕಾರ ತನಿಖೆಗೆ ವಹಿಸಲು ಪರಿಗಣಿಸಲಿಲ್ಲ. ಅಂಬಿಕಾಪತಿಯವರು ಮರಣ ಹೊಂದಿರುವ ಕಾರಣ ಲೋಕಾಯುಕ್ತ ವರದಿಯಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅಂಬಿಕಾಪತಿಯವರು ಮಾಡಿರುವ ಆಪಾದನೆ ಮೇಲ್ನೋಟಕ್ಕೆ ಸಾಬೀತಾಗಿಲ್ಲ ಎಂದು ವಿಚಾರಣಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಅಂದ ಮಾತ್ರಕ್ಕೆ 40 ಪರ್ಸೆಂಟ್ ಕಮಿಷನ್ ಆರೋಪ ಸುಳ್ಳು ಎಂದರ್ಥವಲ್ಲ ಎಂದು ಕಿಡಿಕಾರಿದ್ದಾರೆ.
ತನಿಖಾಧಿಕಾರಿಯು ತನಿಖೆಯ ವಿಚಾರವಾಗಿ ಅಂಬಿಕಾಪತಿ ಅವರ ಮನೆಗೆ ತೆರಳಿದಾಗ ಅಂಬಿಕಾಪತಿ ಮರಣ ಹೊಂದಿರುವ ವಿಷಯ ತಿಳಿಯಿತು. ಅವರ ಪುತ್ರನಿಗೆ ತಂದೆ ಮಾಡಿದ್ದ ಆರೋಪದ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ತನಿಖಾಧಿಕಾರಿ ಅಂಬಿಕಾಪತಿಯವರ ಮರಣ ಪ್ರಮಾಣಪತ್ರವನ್ನು ಪಡೆದು ಹಿಂತಿರುಗಿದ್ದರು. ವಿವಿಧ ಇಲಾಖೆಗಳಲ್ಲಿನ 40% ಕಮಿಷನ್ ಆರೋಪದ ಕುರಿತ ಸಮಗ್ರ ತನಿಖೆಗಾಗಿ ಜಸ್ಟಿಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಗಿದ್ದು ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಆಯೋಗವು ನೀಡುವ ವರದಿಯ ಆಧಾರದ ಮೇಲೆ ʼಬಿಜೆಪಿ ಸರ್ಕಾರದ 40% ಕಮಿಷನ್ʼ ಆರೋಪದ ಕುರಿತ ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ PSI ಹಗರಣ, ಗಂಗಾಕಲ್ಯಾಣ ಹಗರಣ, KKRDB ಹಗರಣ, ಕೋವಿಡ್ ಹಗರಣ ಹಾಗೂ ಇನ್ನಿತರ ಹಗರಣಗಳು ನಡೆದಿದ್ದರೂ ಅವುಗಳನ್ನು ಬಿಜೆಪಿ ನಿರಾಕರಿಸುತ್ತಲೇ ಬಂದಿತ್ತು. ಆದರೆ ಈಗ ಅವೆಲ್ಲಾ ಹಗರಣಗಳು ನಡೆದಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
545 ಪಿಎಸ್ಐ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ನಡೆದೇ ಇಲ್ಲವೆಂದು ವಾದಿಸುತ್ತಿದ್ದ ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ. ನಮ್ಮ ಸರ್ಕಾರವು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಆಯೋಗದ ಮಧ್ಯಂತರ ವರದಿಯಲ್ಲಿ ಕೋವಿಡ್ ಅವಧಿಯಲ್ಲಿ ನಡೆದಿದ್ದ ಅಕ್ರಮ ಸಾಬೀತಾಗಿದ್ದು, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ರಾಮುಲು ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಸೆಕ್ಷನ್ 7 ಹಾಗೂ ಸೆಕ್ಷನ್ 11ರ ಅಡಿ ವಿಚಾರಣೆ ನಡೆಸಬಹುದೆಂದು ವರದಿ ಸಲ್ಲಿಸಿದ ಎಂದು ಬಿಜೆಪಿಯ ವಿರುದ್ಧ ಕಿಡಿ ಕಾರಿದರು.
KKRDB ಯಲ್ಲಿಯೂ ಸಹ ಹಗರಣ ನಡೆದೇ ಇಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು, ಆದರೆ ಈಗ ನಿವೃತ್ತ IAS ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆ ಅಕ್ರಮವನ್ನು ನಿರಾಕರಿಸಲಾಗಿತ್ತು. ಆದರೆ ಇಲಾಖಾ ತನಿಖೆಯಲ್ಲಿ ಆರೋಪ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದೂ ಅವರು ಆರೋಪಿಸಿದ್ದಾರೆ.