ಬೆಂಗಳೂರಿನಲ್ಲಿ 28% ಕಬಾಬ್ ತಿನ್ನಲು ಯೋಗ್ಯವಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಕಬಾಬ್ ಮಾದರಿಗಳಲ್ಲಿ ಸುಮಾರು 78 ಅಥವಾ 28% ಬಳಕೆಗೆ ಅಸುರಕ್ಷಿತವಾಗಿದೆ.;
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಜುಲೈ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಸಿದ ವಿಶೇಷ ಅಭಿಯಾನದಲ್ಲಿ ಪರೀಕ್ಷಿಸಿದ 275 ಕಬಾಬ್ ಮಾದರಿಗಳಲ್ಲಿ ಸುಮಾರು 78 ಅಥವಾ 28% ಬಳಕೆಗೆ ಅಸುರಕ್ಷಿತವಾಗಿದೆ ಎಂದು ಕಂಡುಬಂದಿದೆ.
ಆಹಾರ ಕಲಬೆರಕೆ ಪ್ರಕರಣಗಳು ರಾಜ್ಯಾದ್ಯಂತ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಇಲಾಖೆ ರಾಜ್ಯದಲ್ಲಿ ಪರೀಕ್ಷಿಸಿದ ಮಾದರಿಗಳಲ್ಲಿ ಅಸುರಕ್ಷಿತ ಕೃತಕ ಬಣ್ಣಗಳು, ಹಳದಿ ಮತ್ತು ಟಾರ್ಟ್ರಾಜಿನ್ ಬಳಸಿರುವುದು ಕಂಡುಬಂದಿದೆ. ಸುಮಾರು 209 ಗೋಬಿ ಮಾದರಿಗಳಲ್ಲಿ 31 ಅಥವಾ 15% ಕೃತಕ ಬಣ್ಣ ಪತ್ತೆಯಾಗಿದ್ದು, ಅಸುರಕ್ಷಿತವೆಂದು ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ತರಕಾರಿ, ಹಣ್ಣುಗಳು ಸುರಕ್ಷಿತ
ತರಕಾರಿಗಳು ಮತ್ತು ಹಣ್ಣುಗಳನ್ನು ಕೂಡ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷಿಸಿದ 266 ಮಾದರಿಗಳಲ್ಲಿ ಸರಿಸುಮಾರು 10% ರಷ್ಟು ಅಸುರಕ್ಷಿತವಾಗಿವೆ. ಈ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಕೀಟನಾಶಕ ಕುರುಹುಗಳು ಮತ್ತು ಶಿಲೀಂಧ್ರಗಳ ಬೆಳವಣಿಗೆ ಕಂಡುಬಂದಿದೆ ಎಂದು ಅವರು ಹೇಳಿದರು. ಉಳಿದಂತೆ ತರಕಾರಿ ಮತ್ತು ಹಣ್ಣುಗಳು ತುಲನಾತ್ಮಕವಾಗಿ ಸುರಕ್ಷಿತವಾಗಿದೆ ಎಂದು ಅವರು ತಿಳಿಸಿದರು.
ಕೋಲಾರದಿಂದ ಬರುವ ಉತ್ಪನ್ನಗಳು ಅಸುರಕ್ಷಿತ ಎಂಬ ಆರೋಪವನ್ನು ತಳ್ಳಿಹಾಕಿದ ದಿನೇಶ್ ಗುಂಡೂರಾವ್, ನಾವು ಪರೀಕ್ಷಿಸಿದ್ದೇವೆ ಮತ್ತು ಅವು ಅಸುರಕ್ಷಿತವಲ್ಲ. ಕೃಷಿಗೆ ಬಳಸುವ ಸಂಸ್ಕರಿಸಿದ ನೀರಿನ ಪರಿಣಾಮದ ಬಗ್ಗೆ ನಾವು ಕೃಷಿ ಇಲಾಖೆಯೊಂದಿಗೆ ಮಾತನಾಡಿ ಅಧ್ಯಯನ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಇನ್ನು ಆಗಸ್ಟ್‌ನಲ್ಲಿ ಸಂಗ್ರಹಿಸಲಾದ ಪನೀರ್ (211), ಖೋವಾ (67), ಮತ್ತು ಕೇಕ್ (246) ಮಾದರಿಗಳ ವರದಿಗಳನ್ನು ನಿರೀಕ್ಷಿಸಲಾಗಿದೆ.
ಪಿಜಿ- ವಸತಿಗೃಹಗಳ ಆಹಾರಗಳ ಪರಿಶೀಲನೆ
ಪಿಜಿಗಳಲ್ಲಿ ನೀಡುವ ಆಹಾರಗಳು ಅಸುರಕ್ಷತೆಯಿಂದ ಕೂಡಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಸುಮಾರು ನಾಲ್ಕು ಪಿಜಿ ವಸತಿಗೃಹಗಳ ಆಹಾರವನ್ನೂ ಪರಿಶೀಲಿಸಲಾಗುತ್ತಿದೆ. ಇಲಾಖೆಯು ಪ್ರತಿ ತಿಂಗಳು ಚಟುವಟಿಕೆಗಳ ವರದಿಯನ್ನು ಪ್ರಕಟಿಸುತ್ತದೆ. ಅದು ಮಾದರಿಗಳು, ಸಂಶೋಧನೆಗಳು ಮತ್ತು ಹಿಂದಿನ ಪ್ರಕರಣಗಳನ್ನು ಒಳಗೊಂಡಿರುತ್ತದೆ. ಪ್ರತಿ ತಿಂಗಳು, ನಾವು ಕೆಲವು ಆಹಾರ ಪದಾರ್ಥಗಳ ಮೇಲೆ ಕೇಂದ್ರೀಕರಿಸಿ ತಪಾಸಣೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.
4.9 ಲಕ್ಷ ರೂ. ದಂಡ
ಜುಲೈ ತಿಂಗಳಲ್ಲಿ 3,467 ಆಹಾರ ಮಾರಾಟಗಾರರನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ 986 ನೈರ್ಮಲ್ಯದ ಕೊರತೆ ಕಂಡುಬಂದಿದ್ದರಿಂದ ಅವರಿಗೆ ನೋಟಿಸ್ ನೀಡಲಾಗಿದೆ. 132 ಮಾರಾಟಗಾರರಿಂದ 4.9 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ. ಆಗಸ್ಟ್ 30 ಮತ್ತು 31 ರಂದು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮೀನು, ಮಾಂಸ ಮತ್ತು ಮೊಟ್ಟೆಗಳ ತಯಾರಿಕೆಯ ವಿಶೇಷ ತಪಾಸಣಾ ಅಭಿಯಾನವನ್ನು ನಡೆಸಲು ಇಲಾಖೆ ಸಜ್ಜಾಗಿದೆ ಎಂದು ಅವರು ತಿಳಿಸಿದರು.
‘ಆಹಾರ ಮಾರಾಟಗಾರರಿಗೆ ಪರವಾನಗಿ ಕಡ್ಡಾಯ’
ಶೇ.32ರಷ್ಟು ಆಹಾರ ಮಾರಾಟಗಾರರು ಪರವಾನಿಗೆ ಹೊಂದಿಲ್ಲ ಎಂದು ತಿಳಿಸಿದ ಸಚಿವರು, ಲೈಸೆನ್ಸ್ ವಿಚಾರದಲ್ಲಿ ಎಲ್ಲರೂ ಕಾನೂನಿನ ವ್ಯಾಪ್ತಿಗೆ ಬರುವಂತೆ ಶೇ.100ರಷ್ಟು ಪಾಲನೆ ಇರುವಂತೆ ನೋಡಿಕೊಳ್ಳುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ಸೂಚನೆ ನೀಡಿದರು.
ಆಹಾರ ಪರೀಕ್ಷಾ ಕಿಟ್‌ಗಳ ಮೂಲಕ ಪರೀಕ್ಷೆ
ರೆಸ್ಟೋರೆಂಟ್ ಮತ್ತು ಇತರ ಆಹಾರ ಮಾರಾಟ ಆವರಣಗಳನ್ನು ಪರಿಶೀಲಿಸಲು ಇಲಾಖೆಯು ಸಾರ್ವಜನಿಕ ಸುಳಿವುಗಳನ್ನು ಅವಲಂಬಿಸಿದೆ. ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಲು ಇಲಾಖೆಯು 3,400 ಆಹಾರ ಪರೀಕ್ಷಾ ಕಿಟ್‌ಗಳನ್ನು ಖರೀದಿಸಿದ್ದು, ಅವುಗಳನ್ನು ಮಾಲ್‌ಗಳು ಮತ್ತು ಬೀದಿಗಳಲ್ಲಿ ಅಳವಡಿಸಲಾಗುವುದು. ಯಾರಿಗಾದರೂ ಕೆಲವು ಆಹಾರದ ಬಗ್ಗೆ ಅನುಮಾನ ಬಂದಾಗ, ಈ ಕಿಟ್‌ಗಳ ಮೂಲಕ ಪರೀಕ್ಷಿಸಬಹುದು. ಇದು ಗ್ರಾಹಕರಿಗೆ ವಿಶ್ವಾಸ ಮತ್ತು ನಮಗೆ ಮಾಹಿತಿ ನೀಡುತ್ತದೆ. ಇದು ಆಹಾರ ಮತ್ತು ಹಾಲಿನ ಗುಣಮಟ್ಟದಲ್ಲಿ ರಾಸಾಯನಿಕ ಅಂಶವನ್ನು ಪರೀಕ್ಷಿಸುತ್ತದೆ ಎಂದು ಸಚಿವರು ತಿಳಿಸಿದರು.