ಮಳೆ ಹಾನಿ | ಅನಧಿಕೃತ ಮನೆಗಳಿಗೂ 1.25 ಲಕ್ಷ ರೂ. ಪರಿಹಾರ: ಮಧು ಬಂಗಾರಪ್ಪ

Update: 2024-08-03 08:19 GMT
ಶಿಕ್ಷಣ ಸಚಿವ ಮಧು ಬಂಗಾರಪ್ಪ
Click the Play button to listen to article

ಮಳೆ ಹಾನಿ ಪರಿಹಾರದಲ್ಲಿ ಕುಸಿದ ಅನಧಿಕೃತ ಮನೆಗಳಿಗೂ 1.25 ಲಕ್ಷ ರೂ. ಪರಿಹಾರ ಕೊಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. 

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಳೆದ ಬಾರಿ 5 ಲಕ್ಷ ರೂ. ಪರಿಹಾರ ಕೊಡುತ್ತಾರೆ ಎಂದು ಕೆಲವರು ಮನೆ ಕೆಡವಿಕೊಂಡರು. ಆದರೆ ಪ್ರಭಾವ ಇದ್ದವರು 5 ಲಕ್ಷ ರೂ. ಪಡೆದಿದ್ದರು. ಇನ್ನುಳಿದವರು 1 ಲಕ್ಷ ರೂ. ಪಡೆದಿದ್ದರು. ಆದರೆ ಈ ಬಾರಿ ಮನೆ ಬಿದ್ದವರಿಗೆ ಪೂರ್ತಿ ಮನೆ ಕಟ್ಟಿ ಕೊಡುವ ಕೆಲಸ ಮಾಡುತ್ತೇವೆ ಎಂದರು.

ವಾಲ್ಮೀಕಿ ನಿಗಮ ಹಗರಣ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ವಿಧಾನಸಭೆಯೊಳಗೆ ಹಾಗೂ ಹೊರಗೂ ಹೇಳಿದ್ದಾರೆ. ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಮುಡಾ ಹಗರಣ ಆರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಅವರ ಪಕ್ಷದವರೇ. ವಿಜಯೇಂದ್ರ ಬಗ್ಗೆ ಯತ್ನಾಳ್ ಮಾತನಾಡ್ತಿದ್ದಾರೆ. ಅದರ ಬಗ್ಗೆ ಪ್ರತಿಕ್ರಿಯಿಸಲ್ಲ. ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ? ವಿಜಯೇಂದ್ರ ಎಲ್ಲಿದ್ದರು, ಇವರು ಏನು ಕೆಲಸ ಮಾಡ್ತಿದ್ದರು? ವಿಜಯೇಂದ್ರ ಆಸ್ತಿ ಎಷ್ಟು, ಅವರ ಆಸ್ತಿ ಹೇಗೆ ಬಂತು ಹೇಳಬೇಕಲ್ಲ. ವಿಜಯೇಂದ್ರ ಮೇಲೂ ಕೇಸ್ ಇದೆ. ಬಡಾ ಸೈನ್, ಚೋಟಾ ಸೈನ್, ಮನಿ ಲ್ಯಾಂಡರಿಂಗ್ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆ ಶಿವಕುಮಾರ್ ತಪ್ಪು ಮಾಡದಿದ್ದರೂ ಜೈಲಿಗೆ ಹೋಗಿದ್ದರು. ಅವರು ಜೈಲಿಗೆ ಹೋಗಲು ಯಡಿಯೂರಪ್ಪ, ವಿಜಯೇಂದ್ರ ‌ಕಾರಣ. ಡಿಕೆಶಿ ಬೆಳೆಯಬಾರದು, ಅವರನ್ನು ತುಳಿಯಬೇಕು ಎಂದು ಹಾಗೆ ಮಾಡಿದರು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಡಿಕೆಶಿಯನ್ನು ಜೈಲಿಗೆ ಕಳುಹಿಸಿದರು ಎಂದು ಆರೋಪಿಸಿದರು. 

2012 ರಲ್ಲಿ ಮುಡಾ ಹಗರಣ ನಡೆದಿದೆ. 2012 ರಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ಮುಡಾ ಅಧ್ಯಕ್ಷರಾಗಿದ್ದವರು ರಾಜೀವ್. ಅವರು ಅಧ್ಯಕ್ಷರಾಗಿದ್ದರೂ ಮುಡಾ ನಿರ್ವಹಣೆ ಮಾಡ್ತಿದ್ದಿದ್ದು ವಿಜಯೇಂದ್ರ. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಇಡೀ ಸಚಿವ ಸಂಪುಟ ಸಿದ್ದರಾಮಯ್ಯ ಜೊತೆ ನಿಲ್ಲಲಿದೆ. ವಿಜಯೇಂದ್ರ ಕಾರಣದಿಂದಲೇ ಯಡಿಯೂರಪ್ಪ ಪೂರ್ತಿಯಾಗಿ ಅಧಿಕಾರ ಮಾಡಲಾಗಲಿಲ್ಲ. ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕಾದರೆ ಹುಷಾರಾಗಿ ಇರಬೇಕು ಎಂದು ಮಧು ಬಂಗಾರಪ್ಪ ಹೇಳಿದರು.

Tags:    

Similar News