ದಕ್ಷಿಣಕನ್ನಡ | ನಕ್ಸಲ್‌ಪೀಡಿತ ಗ್ರಾಮದಲ್ಲಿ ಶೇ.100 ರಷ್ಟು ಮತದಾನ!

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ಎಂಬ ನಕ್ಸಲ್‌ ಪೀಡಿತ ಗ್ರಾಮದಲ್ಲಿ ಶೇ.100 ರಷ್ಟು ಮತದಾನವಾಗಿದೆ;

Update: 2024-04-27 08:24 GMT

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನದಲ್ಲಿ ಸರಾಸರಿ ಶೇ.69ರಷ್ಟು ಮತದಾನ ಆಗಿದೆ. ಕರಾವಳಿಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ ಶೇ.100 ರಷ್ಟು ಮತದಾನವಾಗಿ ದಾಖಲೆ ನಿರ್ಮಿಸಲಾಗಿದೆ.

ನಕ್ಸಲ್‌ ಪೀಡಿತ ಗ್ರಾಮದಲ್ಲಿ ಶೇ. 100 ಮತದಾನ

ಲೋಕಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೊದಲ ಬಾರಿ ಎಂಬಂತೆ ಶೇ.100 ರಷ್ಟು ಮತದಾನವಾಗುವ ಮೂಲಕ ನಕ್ಸಲ್‌ ಪೀಡಿತ ಗ್ರಾಮವೊಂದು ದಾಖಲೆ ನಿರ್ಮಿಸಿದೆ.

ಜಿಲ್ಲೆಯ ಬೆಳ್ತಂಗಡಿ ತಾಲೂಕಿನ, ಪಶ್ಚಿಮಘಟ್ಟ ತಪ್ಪಲಿನ ಬಾಂಜಾರುಮಲೆ ಎಂಬ ಗ್ರಾಮದಲ್ಲಿ ಶೇ.100 ರಷ್ಟು ಮತದಾನವಾಗಿದೆ. ಗ್ರಾಮದಲ್ಲಿ 60 ಪುರುಷರು, 51 ಮಹಿಳೆಯರು ಸೇರಿ 111 ಮತದಾರರಿದ್ದು, ಮಧ್ಯಾಹ್ನ ಎರಡು ಗಂಟೆ ಹೊತ್ತಿಗಾಗಲೇ ಎಲ್ಲರೂ ಮತದಾನ ಮಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ 99% ಮತದಾನವಾಗಿತ್ತು. ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀಪ್ ಸಮಿತಿ ಅಧ್ಯಕ್ಷ ವೈಜಣ್ಣ ಹಾಗೂ ತಂಡ ಈ ಬಾರಿ ಶೇ.100 ಮತದಾನ ಮಾಡುವಂತೆ ಊರ ಜನರಲ್ಲಿ ಜಾಗೃತಿ ಮೂಡಿಸಿತ್ತು. ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಟ್ಟ ಪ್ರಯತ್ನ ಯಶಸ್ವಿಯಾಗಿದ್ದು, ಶೇ.100 ಮತದಾನವಾಗುವ ಮೂಲಕ ಬಾಂಜಾರುಮಲೆ ಮಾದರಿ ಗ್ರಾಮ ಎನಿಸಿದೆ. ಹೊರ ಊರಿನಲ್ಲಿ ನೆಲೆಸಿದ್ದ ಗ್ರಾಮಸ್ಥರನ್ನು ಸ್ಥಳೀಯ ಯುವಕರು ಹುಡುಕಿ ತಂದು ಶೇ.100 ಮತದಾನ ಆಗುವಂತೆ ನೋಡಿಕೊಂಡಿದ್ದಾರೆ.

ಅನಾರೋಗ್ಯ, ಮತ್ತು ಇನ್ನಿತರ ಸಮಸ್ಯೆಗಳಿಂದಾಗಿ ಗ್ರಾಮದ 4-5 ಮಂದಿ ಹೊರ ಊರುಗಳಿಗೆ ಹೋಗಿದ್ದರಿಂದ ಶೇ.100 ರಷ್ಟು ಮತದಾನವಾಗುವುದು ಕಷ್ಟ ಎಂದು ಆಂದಾಜಿಸಲಾಗಿತ್ತು. ಅದರಲ್ಲೂ, ಚುನಾವಣೆಗೆ ಕೆಲವು ದಿನಗಳ ಮುನ್ನ ಗ್ರಾಮದಿಂದ ಪರವೂರಿಗೆ ತೆರಳಿದ್ದ ದಂಪತಿಯನ್ನು ಊರಿನ ಯುವಕರು ಹುಡುಕಿ ಕರೆತಂದಿದ್ದಾರೆಂದು ವರದಿಯಾಗಿದೆ.

ಮತ ಚಲಾಯಿಸಲು ಬಂದ ಹಿರಿಯ ಮಹಿಳೆ

ಜಿಲ್ಲೆಯ ಕುಗ್ರಾಮವಾಗಿರುವ ಬಾಂಜಾರುಮಲೆಯಲ್ಲಿ ಸೂಕ್ತ ಮೂಲಸೌಕರ್ಯ ಇಲ್ಲವೆಂದು ಗ್ರಾಮಸ್ಥರು ಈ ಹಿಂದೆ ಎರಡು ಬಾರಿ ಮತದಾನ ಬಹಿಷ್ಕರಿಸಿದ್ದರು. ಅದಕ್ಕೂ ಮುನ್ನ, ಗ್ರಾಮಸ್ಥರು ಮತಚಲಾಯಿಸಲು 45 ಕಿಮೀ ಸಂಚರಿಸಬೇಕಾದ ಅನಿವಾರ್ಯತೆ ಇತ್ತು.

ಬಾಂಜಾರುಮಲೆಯ ಗ್ರಾಮಸ್ಥರು ಈ ಬಾರಿಯ ಮತದಾನವನ್ನು ಹಬ್ಬದಂತೆ ಆಚರಿಸಿದ್ದು, ತಳಿರು ತೋರಣಗಳಿಂದ ಅಲಂಕರಿಸಿದ್ದ ಸಮುದಾಯ ಭವನದಲ್ಲಿ ಮತ ಚಲಾಯಿಸಿದ್ದಾರೆ. ಮತದಾನ ಸಲುವಾಗಿ ಬಾಂಜಾರುಮಲೆಯ 40 ಕುಟುಂಬದ 111 ಮತದಾರರು ಒಂದೆಡೆ ಸೇರಿ ಒಟ್ಟಿಗೆ ಉಪಹಾರ ಮಾಡುವ ಮೂಲಕ ಮತದಾನವನ್ನು ಹಬ್ಬದ ರೀತಿ ಆಚರಿಸಿದ್ದಾರೆ.

ಜಿಲ್ಲೆಯಲ್ಲಿ ಶೇ 76.05 ಮತದಾನ!

ಒಟ್ಟಾರೆ, ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇ.76.05 ಮತದಾನವಾಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ರಾಮಯ್ಯ ಹಾಗೂ ಬಿಜೆಪಿಯ ಬ್ರಿಜೇಶ್‌ ಚೌಟ ಅವರ ನಡುವಿನ ಹಣಾಹಣಿಯ ಫಲಿತಾಂಶ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಜಿಲ್ಲೆಯಲ್ಲಿ ಬಿಸಿಲಿನ ಝಳಕ್ಕೆ ಹಾಗೂ ಇನ್ನಿತರ ಕಾರಣಗಳಿಂದ ಮಧ್ಯಾಹ್ನದವರೆಗೂ ಮತದಾನ ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದ್ದರೂ, ಸಂಜೆ ಹೊತ್ತಿಗೆ ಪ್ರಕ್ರಿಯೆ ಬಿರುಸುಗೊಂಡಿದೆ.

ಬೆಳಗ್ಗೆ ಏಳು ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಬೆಳಗ್ಗೆ 9 ಗಂಟೆ ಹೊತ್ತಿಗೆ ಕ್ಷೇತ್ರದಲ್ಲಿ ಶೇ. 14.33, 11 ಗಂಟೆ ವೇಳೆಗೆ ಶೇ. 30.98, ಮಧ್ಯಾಹ್ನ 1 ರ ಹೊತ್ತಿಗೆ ಶೇ 48.1, ಮಧ್ಯಾಹ್ನ 3 ಗಂಟೆಗೆ ಶೇ. 58.76 ಹಾಗೂ ಸಂಜೆ 5 ರ ವೇಳೆಗೆ ಶೇ. 71.83 ಮತದಾನವಾಗಿತ್ತು. ಎಲ್ಲಾ ಲೆಕ್ಕಾಚಾರ ಮುಗಿದು ಒಟ್ಟು ಮತದಾನ ಪ್ರಮಾಣದ ಅಧಿಕೃತ ಅಂಕಿ ಅಂಶ 10 ಗಂಟೆ ಹೊತ್ತಿಗೆ ಬಿಡುಗಡೆಯಾಗಿದ್ದು, ಕ್ಷೇತ್ರದಲ್ಲಿ ಒಟ್ಟು ಶೇ. 76.05 ಮತದಾನವಾಗಿದೆ.

ಮತಯಂತ್ರಗಳನ್ನು ಸುರತ್ಕಲ್‌ ನ ಎನ್‌ಐಟಿಕೆಗೆ ತಲುಪಿಸಲಾಗಿದ್ದು, ಜೂನ್ 4 ರಂದು ಇಲ್ಲಿಯೇ ಮತ ಎಣಿಕೆ ನಡೆಯಲಿದೆ. ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯ ಅತಿಕಡಿಮೆ ಮತದಾನವಾಗಿದೆ.

ಕ್ಷೇತ್ರವಾರು ಮತದಾನ

ಪುತ್ತೂರು – 81.10%

ಸುಳ್ಯ - 83.00%

ಬಂಟ್ವಾಳ - 80.31%

ಬೆಳ್ತಂಗಡಿ - 80.92%

ಮೂಡಬಿದ್ರೆ - 73.17%

ಮಂಗಳೂರು ಉತ್ತರ - 74.83%

ಮಂಗಳೂರು ದಕ್ಷಿಣ - 69.15%

ಮಂಗಳೂರು ನಗರ - 75.62%

ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆಯಲ್ಲಿ 11,255 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಜಿಲ್ಲೆಯ ಒಟ್ಟು 1876 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.

ಕ್ಷೇತ್ರದ 1876 ಮತಗಟ್ಟೆಗಳಲ್ಲಿ 18 ಮತಗಟ್ಟೆಗಳು ನಕ್ಸಲ್ ಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿದ್ದು, 172 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಆರ್‌ಪಿಎಸ್‌ಎಫ್ (ರೈಲ್ವೇ ವಿಶೇಷ ರಕ್ಷಣಾ ಪಡೆ) ಕಮಾಂಡೋಗಳಿಂದ ವಿಶೇಷ ಭದ್ರತೆ ಒದಗಿಸಲಾಗಿತ್ತು. ಈ ಮತಗಟ್ಟೆಗಳಿಗೆ ತಲಾ 4ರಂತೆ ಆರ್‌ಪಿಎಸ್‌ಎಫ್ ಕಮಾಂಡೋಗಳು, ಪೊಲೀಸರು, ಹೋಂಗಾರ್ಡ್ ಗಳಿಂದ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಈ ವ್ಯಾಪ್ತಿಯಲ್ಲಿ ಮತದಾರರು ಯಾವುದೇ ಆತಂಕವಿಲ್ಲದೆ ಸಂಜೆಯವರೆಗೂ ಉತ್ಸಾಹದಿಂದ ಮತದಾನ ಮಾಡಿರುವುದು ಕಂಡು ಬಂದಿದೆ.

ಚುನಾವಣಾ ಕಣ

ದಕ್ಷಿಣ ಕನ್ನಡದಲ್ಲಿ ಈ ಬಾರಿ ಬಿಜೆಪಿ ಹೊಸಮುಖಕ್ಕೆ ಮಣೆ ಹಾಕಿದ್ದು, ಬಂಟ ಸಮುದಾಯದ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಿಂದ ಬಿಲ್ಲವ ಸಮುದಾಯದ ಪದ್ಮರಾಜ್‌ ರಾಮಯ್ಯ ಕಣದಲ್ಲಿದ್ದಾರೆ. ಇವರಲ್ಲದೆ, ಕ್ಷೇತ್ರದಲ್ಲಿ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

18.18 ಲಕ್ಷ ಮತದಾರರು ಇರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ, ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. 8.79 ಲಕ್ಷ ಪುರುಷ ಹಾಗೂ 9.30 ಲಕ್ಷ ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಈ ಬಾರಿ ಒಟ್ಟು 38,386 ಮಂದಿ ಹೊಸ ಮತದಾರನ್ನು ಪಟ್ಟಿಗೆ ಸೇರ್ಪಡಿಸಲಾಗಿದೆ.

ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿರುವ ಈ ಕ್ಷೇತ್ರದಲ್ಲಿ ಕಳೆದ 34 ವರ್ಷಗಳಿಂದ ಬಿಜೆಪಿ ಸಂಸದರೇ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಲ್ಲವ ಮತಗಳು ಕಾಂಗ್ರೆಸ್‌ ಕಡೆಗೆ ವಾಲಿದ್ದರಿಂದ ಈ ಬಾರಿಯ ಫಲಿತಾಂಶವು ಕುತೂಹಲಕ್ಕೆ ಕಾರಣವಾಗಿದೆ.

Tags:    

Similar News