ಚೆನ್ನೈನ ಎನ್ನೋರ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಟ್ಟಡ ಕುಸಿದು 9 ಕಾರ್ಮಿಕರ ಸಾವು
ಎನ್ನೋರ್ ವಿದ್ಯುತ್ ಸ್ಥಾವರದಲ್ಲಿ ನಿರ್ಮಾಣ ಹಂತದ ಕಟ್ಟಡದ ಸಾರುವೆಯೊಂದಿಗೆ ಒಂದು ಭಾಗ ಕುಸಿದು, ಒಂಬತ್ತು ಮಂದಿ ವಲಸೆವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ಕಾಲ್ತುಳಿತ ದುರಂತದ ಬೆನ್ನಲ್ಲೇ ತಿರುವಳ್ಳೂರು ಜಿಲ್ಲೆಯ ಮೀಂಜೂರು ಬಳಿಯ ಎನ್ನೋರ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಭಾರೀ ದುರಂತವೊಂದು ಸಂಭವಿಸಿದೆ.
ನಿರ್ಮಾಣ ಹಂತದ ಕಟ್ಟಡದ ಸಾರುವೆಯೊಂದಿಗೆ ಒಂದು ಭಾಗ ಕುಸಿದು, ಒಂಬತ್ತು ಮಂದಿ ವಲಸೆವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.
ಮಂಗಳವಾರ ಸ್ಥಾವರದ ಬಾಯ್ಲರ್ ವಿಭಾಗದಲ್ಲಿ ಬೃಹತ್ ಕಮಾನು (arch) ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕಮಾನು ನಿರ್ಮಾಣಕ್ಕೆ ನಿರ್ಮಿಸಿದ್ದ ಸಾರುವೆ ಕುಸಿದು ಬಿದ್ದಿವೆ.ಆಗ ಕಟ್ಟಡದ ಒಂದು ಭಾಗ ಕುಸಿದು ಅವಶೇಷಗಳಡಿ ಸಿಲುಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ಐವರು ಕಾರ್ಮಿಕರು ರಾಯಪುರಂನ ಸ್ಟ್ಯಾನ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎನ್ನೋರ್ ವಿದ್ಯುತ್ ಸ್ಥಾವರದ ನಾಲ್ಕನೇ ಹಂತದ ವಿಸ್ತರಣಾ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದ್ದು, ಪ್ರಸ್ತುತ, ಬೃಹತ್ ಪ್ರಮಾಣದ ಯಂತ್ರೋಪಕರಣಗಳ ಸ್ಥಾಪನೆ ಕಾರ್ಯ ನಡೆಯುತ್ತಿದೆ.
ಉತ್ತರ ಭಾರತ ಮೂಲದ ನೂರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರು ಬೃಹತ್ ಕಮಾನು ಕಟ್ಟುವ ವೇಳೆ ಮದ್ಯಭಾಗದ ಸಾರುವೆ ಮುರಿದು, ದುರಂತ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ
ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಹಲವು ಗಂಟೆಗಳ ಶ್ರಮದ ಬಳಿಕ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಕಮಾನು ನಿರ್ಮಾಣದ ವೇಳೆ ಸುರಕ್ಷತಾ ನಿಯಮ ಉಲ್ಲಂಘಿಸಿದ್ದರಿಂದ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ತಮಿಳುನಾಡು ವಿದ್ಯುತ್ ಉತ್ಪಾದನಾ ಹಾಗೂ ವಿತರಣಾ ನಿಗಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪರಿಹಾರ ಘೋಷಣೆ
ಮೃತರು ಅಸ್ಸಾಂ ಮೂಲದ ಕಾರ್ಮಿಕರಾಗಿದ್ದು, ಮೃತದೇಹಗಳನ್ನು ಸಾಗಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಸಿಎಂ ಎಂ.ಕೆ.ಸ್ಟಾಲಿನ್ ಸೂಚಿಸಿದ್ದಾರೆ.
ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ, ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.
ಎನ್ನೋರ್ ಉಷ್ಣ ವಿದ್ಯುತ್ ಸ್ಥಾವರವು 1970ರಲ್ಲಿ ಸ್ಥಾಪಿಸಿದ್ದು, ತಮಿಳುನಾಡು ವಿದ್ಯುತ್ ಉತ್ಪಾದನಾ ಸಂಸ್ಥೆಯ ನಿರ್ವಹಣೆಯಲ್ಲಿದೆ. ಸ್ಥಾವರದ ಮೊದಲ ಯೂನಿಟ್ 1970–1975 ರ ನಡುವೆ ಅರಂಭವಾಗಿತ್ತು. 2017ರಲ್ಲಿ ಕೆಲವು ಹಳೆಯ ಯುನಿಟ್‌ಗಳನ್ನು ಡಿ-ಕಮಿಷನ್ ಮಾಡಲಾಗಿತ್ತು. ನಂತರದ ದಿನಗಳಲ್ಲಿ ದೊಡ್ಡ ಪ್ರಮಾಣದ ವಿದ್ಯುತ್ ಅಗತ್ಯತೆ ಪೂರೈಸಲು ಸೂಪರ್-ಕ್ರಿಟಿಕಲ್ 660 MW ತರಹದ ಯುನಿಟ್‌ಗಳನ್ನು ಆರಂಭಿಸಲಾಯಿತು.