Sunita Williams : ಸುನಿತಾ ವಿಲಿಯಮ್ಸ್ ಅಂತರಿಕ್ಷದಲ್ಲಿ 9 ತಿಂಗಳು ಸಿಲುಕಿಕೊಂಡಿದ್ದರು ಎನ್ನುವುದೇ ಮಿಥ್ಯೆ!
ಬಾಹ್ಯಾಕಾಶ ಅಧ್ಯಯನದ ಆಳ- ಅಗಲ ಗೊತ್ತಿದ್ದವರು ಸುನಿತಾ ಅವರು ಸಿಲುಕಿ ಹಾಕಿಕೊಂಡಿದ್ದರು ಹಾಗೂ 'ಕ್ರ್ಯೂ-9 ಮಿಷನ್' ಅವರನ್ನು ಕಾಪಾಡಿದ ಕಾರ್ಯಾಚರಣೆ ಎಂಬುದನ್ನು ಒಪ್ಪುವುದಿಲ್ಲ. ಅದೊಂದು ಸಂತೋಷದ ಸ್ಥಳ ಹಾಗೂ ಅದೃಷ್ಟವಂತರಿಗೆ ಮಾತ್ರ ಬಾಹ್ಯಾಕಾಶ ನಡಿಗೆ ಸಿಗುತ್ತದೆ!;
ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ ಮರಳಿ ಭೂಮಿ ಸೇರಿದ್ದಾರೆ. 9 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಅವರು ನಾಸಾ ಹಾಗೂ ಸ್ಪೇಸ್ ಎಕ್ಸ್ನ ಜಂಟಿ ಮಿಷನ್ನಲ್ಲಿ ಮರಳಿದ್ದಾರೆ.
ಕ್ರ್ಯೂ 9 ಯೋಜನೆಯ ಡ್ರ್ಯಾಗನ್ ಕ್ಯಾಪ್ಸೂಲ್ ಫ್ಲೋರಿಡಾದ ಕೊಲ್ಲಿಯೊಂದರಲ್ಲಿ ಇಳಿದ ತಕ್ಷಣ ಜಗತ್ತೇ ಸಂಭ್ರಮಪಟ್ಟಿದೆ. ಆದರೆ, ಅವರ ಭೂಮಿಗೆ ಇಳಿಯುವ ಮೊದಲು ಹಲವಾರು ಊಹಾಪೋಹಗಳು, ಕಟ್ಟುಕತೆಗಳು ಹರಿದಾಡಿದ್ದವು. ಸುನಿತಾ ಅಲ್ಲಿಂದ ವಾಪಸ್ ಬರುವುದೇ ಇಲ್ಲ ಎಂಬೆಲ್ಲ ಮಿಥ್ಯೆಗಳನ್ನು ಹರಡಿದ್ದರು.
̤ಸುಳ್ಳುಗಳನ್ನು ಹಾಗೂ ಅರ್ಧ ಸತ್ಯಗಳನ್ನು ಹೇಳುವುದಕ್ಕೆ ಕೆಲವು ಕಾರಣಗಳಿವೆ. 8 ದಿನಗಳ ಅಧ್ಯಯನಕ್ಕೆಂದು ಸುನಿತಾ ಮತ್ತು ತಂಡ 9 ತಿಂಗಳು ಅಲ್ಲಿಯೇ ಅಧ್ಯಯನ ಮುಂದುವರಿಸಿದ್ದರಿಂದ ಅಪೂರ್ಣ ಮಾಹಿತಿ ಜನಜನಿತವಾದವು. ಆದರೆ, ಬಾಹ್ಯಾಕಾಶ ಅಧ್ಯಯನದ ಆಳ- ಅಗಲ ಗೊತ್ತಿದ್ದವರು ಸುನಿತಾ ಅವರು ಸಿಲುಕಿ ಹಾಕಿಕೊಂಡಿದ್ದರು ಅಥವಾ 'ಕ್ರ್ಯೂ-9 ಮಿಷನ್' ಅವರನ್ನು ಕಾಪಾಡಿದ ಕಾರ್ಯಾಚರಣೆ ಎಂಬುದನ್ನು ಒಪ್ಪುವುದಿಲ್ಲ. ಗಗನ ಯಾತ್ರಿಗಳ ಪಾಲಿಗೆ ಬಾಹ್ಯಾಕಾಶ ಸಂಶೋಧನೆಗಳಲ್ಲಿ ಪಾಲ್ಗೊಳ್ಳುವುದು ಅವರ ಪರಮೋಚ್ಛ ಗುರಿ ಎಂಬುದು ಅವರಿಗೆ ಗೊತ್ತಿದೆ.
ಬಾಹ್ಯಾಕಾಶ ಹಾಗೂ ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರು,' ದ ಫೆಡರಲ್ ಕರ್ನಾಟಕ'ದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಸುನಿತಾ ವಿಲಿಯಮ್ಸ್ ಅವರ ಯಾನದ ಕುರಿತು ಚರ್ಚೆಯಾಗಿರುವುದು ನಿಜ. ಆದರೆ, ಬಾಹ್ಯಾಕಾಶ ಅಧ್ಯಯನ ಕ್ಷೇತ್ರದಲ್ಲಿ ಇವೆಲ್ಲವೂ ಸಾಮಾನ್ಯ. ಸುನಿತಾ ಅವರಿಗಿಂತ ಹೆಚ್ಚು ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ಅಧ್ಯಯನ ನಡೆಸಿದವರೂ ಇದ್ದಾರೆ,'' ಎಂದು ಹೇಳಿದ್ದಾರೆ.
''ಸುನಿತಾ ಅವರು 8 ದಿನಗಳ ಅಧ್ಯಯನಕ್ಕೆಂದು ಹೋದವರು 286 ದಿನಗಳ ಕಾಲ ಅಲ್ಲಿ ಉಳಿದಿದ್ದ ಅನಿವಾರ್ಯವಾಗಿದ್ದರೂ, ಅಷ್ಟೊಂದು ದಿನಗಳ ಕಾಲ ಅಲ್ಲಿರುವುದಕ್ಕೆ ಮಾನಸಿಕವಾಗಿ ಸಿದ್ಧರಿದ್ದರು. ಗಗನಯಾತ್ರಿಗಳ ತರಬೇತಿ ಅವಧಿಯಲ್ಲೇ ಇಂಥ ಪರಿಸ್ಥಿತಿಯಲ್ಲಿ ಹೇಗೆ ತಮ್ಮನ್ನು ತಾವು ನಿಭಾಯಿಸಬೇಕು.'' ಎಂಬುದನ್ನು ಕಲಿಸಿಕೊಟ್ಟಿರುತ್ತಾರೆ ಎಂದು ಗಿರೀಶ್ ಅವರು ಹೇಳಿದ್ದಾರೆ.
ಸಣ್ಣ ಅವಧಿಯ ಸಂಶೋಧಕಿಯಾಗಿ ಹೋಗಿದ್ದ ಸುನಿತಾ ಅವರು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಈ ಮೂಲಕ ಅವರು ಮುಂದಿನ ಪೀಳಿಗೆಗೆ ಹಲವಾರು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ ಎಂದು ಗಿರೀಶ್ ಲಿಂಗಣ್ಣ ಅಭಿಪ್ರಾಯಪಟ್ಟಿದ್ದಾರೆ.
ಸುನಿತಾ ಅವರಿಗೆ ನಾನಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಆರೋಗ್ಯ ಸಮಸ್ಯೆಯ ಅಪಾಯ ಸತ್ಯವಾದರೂ ನಾಸಾ ಬಲಿಷ್ಠ ಪುನಶ್ಚೇತನ ವ್ಯವಸ್ಥೆ ಹೊಂದಿದೆ,'' ಎಂಬುದಾಗಿ ಗಿರೀಶ್ ಲಿಂಗಣ್ಣ ಅಭಿಪ್ರಾಯಪಡುತ್ತಾರೆ.
ಸಂತೋಷದ ಸ್ಥಳ ಎಂದೇ ಹೇಳಿದ್ದ ವಿಲಿಯಮ್ಸ್
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಆರು ಬೆಡ್ರೂಮ್ಗಳ ಮನೆಯಷ್ಟು ದೊಡ್ಡದಿದೆ. ಭೂಮಿಯಲ್ಲಿ ಇರುವಂತೆ ಅಲ್ಲದೇ ಹೋದರೂ ಗರಿಷ್ಠ ಸೌಕರ್ಯಗಳನ್ನು ಅಲ್ಲಿ ನೀಡಲಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿರುವ ಬಹುತೇಕ ಮಂದಿಗೆ ಅಂತರಿಕ್ಷ ಯಾನ ಮಾಡುವುದು ಜೀವನದ ಬಹುದೊಡ್ಡ ಕನಸು.
ಸುನಿತಾ ವಿಲಿಯಮ್ಸ್ ಅವರೇ ಬಾಹ್ಯಾಕಾಶ ನಿಲ್ದಾಣವನ್ನು ''ಅತ್ಯಂತ ಸಂತೋಷದ ಸ್ಥಳ" ಎಂದು ಹೇಳಿಕೊಂಡಿದ್ದರು. ಬುಚ್ ವಿಲ್ಮೋರ್ ಕೂಡ ಸಿಕ್ಕಿರುವ ಅವಕಾಶಕ್ಕಾಗಿ 'ಧನ್ಯವಾದ' ಎಂದು ಹೇಳಿಕೆ ನೀಡಿದ್ದರು.
ಬಾಹ್ಯಾಕಾಶ ನಿಲ್ದಾಣದ ಜೀವನ ಹೇಗೆ? ಗಗನಯಾತ್ರಿಗಳ ಮಾತುಗಳನ್ನೇ ಕೇಳಿ..,
ಭೂಮಿಯಿಂದ 400 ಕಿ.ಮೀ ಮೇಲೇ ಇರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಬದುಕುವುದು ಹೇಗೆ? ಸಹ ಗಗನಯಾತ್ರಿಗಳೊಂದಿಗೆ ವ್ಯವಹಾರ ಹೇಗೆ, ವ್ಯಾಯಾಮ ಮಾಡುವುದು ಹೇಗೆ? ಬಟ್ಟೆಗಳನ್ನು ಹೇಗೆ ಒಗೆಯುತ್ತಾರೆ? ಏನನ್ನು ತಿನ್ನುತ್ತಾರೆ ಎಂಬ ಪ್ರಶ್ನೆಗಳಿಗೆ ಗಗನ ಯಾತ್ರಿಗಳೇ ಉತ್ತರ ನೀಡಿದ್ದಾರೆ. 'ಬಿಬಿಸಿ' ಜತೆ ಮಾತನಾಡಿದ ಮೂವರು ಮಾಜಿ ಗಗನ ಯಾತ್ರಿಗಳು ಅಲ್ಲಿನ ಜೀವನ ರಹಸ್ಯ ವಿವರಿಸಿದ್ದಾರೆ.
ಎಲ್ಲರೂ ಬೆಳಗ್ಗೆ ಬೇಗ ಎದ್ದುಬಿಡುತ್ತಾರೆ. 06:30ಕ್ಕೆ ದಿನಚರಿ ಆರಂಭಗೊಳ್ಳುತ್ತದೆ. ಅಂದ ಹಾಗೆ ಅವರು ನಿದ್ದೆ ಮಾಡುವುದು ಅಂತರಿಕ್ಷ ನಿಲ್ದಾಣದಲ್ಲಿರುವ ಹಾರ್ಮನಿ ಎಂಬ ಎಸ್ಟಿಟಿ ಬೂತ್ ಗಾತ್ರದ ನಿದ್ರೆ ಕೋಣೆಯಲ್ಲಿ. ಇದು ಅತಿ ಹೆಚ್ಚು ಸೌಕರ್ಯ ಹೊಂದಿರುವ ನಿದ್ದೆಯ ಕೋಣೆ ಎಂದು ಮಾಜಿ ಗಗನಯಾತ್ರಿ ನಿಕೋಲ್ ಸ್ಟಾಟ್ ಹೇಳಿದ್ದಾರೆ. ಅವರು ನಾಸಾದ ಅಮೆರಿಕಾದ ಗಗನಯಾತ್ರಿಯಾಗಿದ್ದು. 2009 ಮತ್ತು 2011ರಲ್ಲಿ ಎರಡು ಮಿಷನ್‌ಗಳಲ್ಲಿ 104 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ನಿದ್ದೆಯ ಕೋಣೆಗಳಲ್ಲಿ ಲ್ಯಾಪ್‌ಟಾಪ್‌ಗಳಿದ್ದು ಅದರ ಮೂಲಕ ಕುಟುಂಬದೊಂದಿಗೆ ಸಂಪರ್ಕದಲ್ಲಿರಬಹುದು. ಫೋಟೋಗಳು ನೋಡುವ ಅಥವಾ ಪುಸ್ತಕಗಳನ್ನು ನೋಡುವ ವೈಯಕ್ತಿಕ ಚಟುವಟಿಕೆಗಳಿಗೂ ಒಂದು ಸ್ಥಳವಿದೆ.
ಆರು ಪ್ರಯೋಗಾಲಯಗಳು
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ನಿಯೋಜಿತ ಪ್ರಯೋಗಾಲಯಗಳಿವೆ. ಅಲ್ಲಿರುವ ಗಗನಯಾನಿಗಳ ಹೃದಯ, ಮೆದುಳು ಅಥವಾ ರಕ್ತ ಪರಿಚಲನೆ ನಿಯಮಿತವಾಗಿ ಪರೀಕ್ಷೆ ಮಾಡುವುದಕ್ಕೆ ಮಾನಿಟರಿಂಗ್ ವ್ಯವಸ್ಥೆಯೂ ಇದೆ.
ಗಗನ ಯಾತ್ರಿ ಕ್ರಿಸ್ ಹ್ಯಾಡ್ಪೀಲ್ಡ್ ಎಂಬುವರು ಬಿಬಿಸಿ ಜತೆಗಿನ ಚರ್ಚೆಯಲ್ಲಿ, ನಾನು ಕಿಟಕಿಯ ಬಳಿಗೆ ತೇಲಿ ಹೋಗಿ ಏನಾದರೂ ಹಾದುಹೋಗುವುದೇ ಎಂದು ನೋಡುತ್ತಿದ್ದೆ. ಸಂಗೀತ ಕೇಳುತ್ತಿದ್ದೆ. ನನ್ನ ಮಕ್ಕಳಿಗಾಗಿ ಏನಾದರೂ ಬರೆಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. .
ಅದೃಷ್ಟವಂತರಿಗೆ ಮಾತ್ರ ಬಾಹ್ಯಾಕಾಶ ನಡಿಗೆ
ಅದೃಷ್ಟವಂತರಿಗೆ ಮಾತ್ರ ಬಾಹ್ಯಾಕಾಶ ನಡಿಗೆ ಮಾಡಲು ಅವಕಾಶ ಸಿಗುತ್ತದೆ ಎಂದು ಹ್ಯಾಡಿಪೀಲ್ಡ್ ಹೇಳುತ್ತಾರೆ. ಅವರು ಎರಡು ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದು ಒಟ್ಟು 15 ಗಂಟೆಗಳನ್ನು ಕಳೆದಿದ್ದಾರೆ. ''ಆ 15 ಗಂಟೆಗಳು, ನನ್ನ ಜೀವನದ ಇತರ ಯಾವುದೇ ಸಮಯಕ್ಕಿಂತ ಅತ್ಯದ್ಭುತ ," ಎಂದು ಅವರು ಹೇಳಿದ್ದಾರೆ.
"ಭೂಮಿಯ ಮೇಲೆ ಅನೇಕ ವಾಸನೆಗಳನ್ನು ಗ್ರಹಿಸಬಹುದು. ಉದಾಹರಣೆಗೆ ವಾಷಿಂಗ್ ಮೆಷಿನ್‌ನಿಂದ ಬರುವ ಬಟ್ಟೆಗಳ ವಾಸನೆ ಅಥವಾ ತಾಜಾ ಗಾಳಿಯ ಪರಿಮಳ. ಆದರೆ, ಅಂತರಿಕ್ಷದಲ್ಲಿ ಕೇವಲ ಒಂದೇ ವಾಸನೆ ಇರುತ್ತದೆ. ಅದು ಅಲ್ಲಿನ ಲೋಹದ ವಾಸನೆ. ಅದು ನಮಗೆ ಕೆಲವೇ ದಿನಗಳಲ್ಲಿ ಅಭ್ಯಾಸವಾಗುತ್ತದೆ," ಎಂದು 1991ರಲ್ಲಿ ಸೋವಿಯತ್ ಅಂತರಿಕ್ಷ ನಿಲ್ದಾಣ ಮಿರ್‌ನಲ್ಲಿ 8 ದಿನಗಳ ಕಾಲ ಕಳೆದ ಮೊದಲ ಬ್ರಿಟಿಷ್ ಅಂತರಿಕ್ಷಯಾತ್ರಿ ಹೆಲೆನ್ ಶರ್ಮನ್ ವಿವರಿಸುತ್ತಾರೆ.
ದಿನಕ್ಕೆರಡು ಬಾರಿ ವ್ಯಾಯಾಮ
ಬಾಹ್ಯಾಕಾಶ ನಿಲ್ದಾಣದಲ್ಲಿ ದೀರ್ಘಕಾಲದ ವಾಸ್ತವ್ಯದಲ್ಲಿರುವ ಗಗನಯಾತ್ರಿಗಳು ಪ್ರತಿದಿನ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡಬೇಕಾಗುತ್ತದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ನಿರಂತರವಾಗಿ ಜೀವಿಸುವುದರಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುವ ಪರಿಣಾಮ ತಡೆಗಟ್ಟಲು ಮೂರು ವಿಭಿನ್ನ ಯಂತ್ರಗಳಲ್ಲಿ ವ್ಯಾಯಾಮ ಮಾಡಲಾಗುತ್ತದೆ ನಿಕೋಲ್ ಸ್ಟಾಟ್ ಹೇಳುತ್ತಾರೆ. ಎರಡು ಟ್ರೆಡ್‌ಮಿಲ್‌ಗಳು ಮತ್ತು ಸೈಕಲ್ ಎರ್ಗೋಮೀಟರ್ ಅಲ್ಲಿದೆ ಎಂದು ಹೇಳಿದ್ದಾರೆ.
ಮೂರು ತಿಂಗಳಿಗೆ ಒಂದೇ ಪ್ಯಾಂಟ್
ಅಲ್ಲಿಕೆಲಸ ಮಾಡುವ ವೇಳೆ ಬಹಳಷ್ಟು ಬೆವರು ಸುರಿಯುತ್ತದೆ ಎಂದು ಸ್ಟಾಟ್ ಹೇಳುತ್ತಾರೆ. ಆದರೆ, ಬಟ್ಟೆ ಒಗೆಯುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ. ನಮಗೆ ಬಟ್ಟೆ ತೊಳೆಯುವ ವ್ಯವಸ್ಥೆ ಇಲ್ಲ. ಕೇವಲ ನೀರು ಮತ್ತು ಸಾಬೂನು ಮಾತ್ರ ಇದೆ. ಅದು ಸ್ನಾನಕ್ಕೆ ಮಾತ್ರ ಸಿಗುತ್ತದೆ ಎಂದು ಅವರು ವಿವರಿಸುತ್ತಾರೆ.
ಗುರುತ್ವಾಕರ್ಷಣೆಯಿಲ್ಲದ ಕಾರಣ ಬೆವರು ಕೆಳಕ್ಕೆ ಇಳಿಯವುದಿಲ್ಲ. ಹೀಗಾಗಿ ಬೆವರಿನ ಪದರದಿಂದ ಆವೃತ್ತವಾಗಬೇಕಾಗುತ್ತದೆ ಎಂದು ವಿವರಿಸಿದ್ದಾರೆ. ತಲೆಯ ಮೇಲೆ ಬೆವರು ತುಂಬಿದರೂ ಕೊಡುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ಎಲ್ಲಡೆ ಹಾರಿ ಕಿರಿಕಿರಿ ಉಂಟು ಮಾಡುತ್ತದೆ ಎಂದು ಅವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಕೊಳಕಾಗಿರುವ ಬಟ್ಟೆಗಳನ್ನು ಸುಟ್ಟು ಹಾಕುವ ಕಾರ್ಗೋ ವಾಹನಕ್ಕೆ ಎಸೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಬಟ್ಟೆ ತೊಳೆಯುವುದು ಸಮಸ್ಯೆಯಾಗಿರುವ ಕಾರಣ ನಾನು ಮೂರು ತಿಂಗಳ ಕಾಲ ಒಂದೇ ಜೋಡಿ ಪ್ಯಾಂಟ್ ಧರಿಸಿದ್ದೆ," ಎಂದು ಅವರು ಹೇಳಿದ್ದಾರೆ.
ಆಹಾರ ತಿನ್ನುವಾಗಲೂ ಎಚ್ಚರಿಕೆ ಅಗತ್ಯ
ಆಹಾರವನ್ನುಕಾಲಕಾಲಕ್ಕೆ ನಾಸಾ ಪೂರೈಸುತ್ತದೆ. ಅವುಗಳನ್ನು ಅಲ್ಲಿ ಶೀತಲೀಕರಣ ಯಂತ್ರದಲ್ಲಿ ಸ್ಟೋರ್ ಮಾಡಲಾಗುತ್ತದೆ. ಆಯಾ ದೇಶದ ಆಹಾರಗಳ ಪ್ರಕಾರ ಸ್ಟೋರ್ ಮಾಡಿ ಇಟ್ಟುಕೊಳ್ಳಲಾಗುತ್ತದೆ. ಅದಕ್ಕೆ ಅನುಗುಣವಾಗಿ ಗಗನಯಾತ್ರಿಗಳು ತಮಗೆ ಅಗತ್ಯ ಇರುವ ಆಹಾರವನ್ನು ತೆಗೆದು ಬಳಸಬಹುದು.
ಆಹಾರವನ್ನು ತಿನ್ನುವಾಗಲೂ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಆಹಾರದ ಡಬ್ಬ ತೆಗೆಯುವ ವೇಳೆ ಅದು ಚೆಲ್ಲಿದರೆ ಶೂನ್ಯ ಗುರತ್ವಾಕರ್ಷಣೆಯಲ್ಲಿ ಅದು ನೆಲಕ್ಕೆ ಬೀಳದೇ ತೇಲಿಕೊಂಡಿರುತ್ತವೆ. ಇದು ಒಳಗಿನ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತದೆ.
ನಾಸಾದಿಂದ ನೌಕೆಗಳು ಬಂದು ಹೊಸ ಸಿಬ್ಬಂದಿ ಸೇರ್ಪಡೆಯಾಗುತ್ತಾರೆ. ಜತೆಗೆ ಆಹಾರ, ಬಟ್ಟೆಗಳು ಮತ್ತು ಸಲಕರಣೆಗಳನ್ನು ಪೂರೈಸಲಾಗುತ್ತದೆ. . ಆ ವಾಹನಗಳು ಭೂಮಿಯಿಂದ ಅಂತರಿಕ್ಷ ನಿಲ್ದಾಣಕ್ಕೆ ಬರುವುದು ನಮಗೆ ಅದ್ಬುತ ಅನುಭವ ಎಂದು ಹ್ಯಾಡ್ಪೀಲ್ಡ್ ಹೇಳುತ್ತಾರೆ.
ಗಗನಯಾತ್ರಿಗಳ ಕುಟುಂಬ ಸದಸ್ಯರು, ಪ್ರೀತಿಪಾತ್ರರಿಗೆ ಹೆಚ್ಚುವರಿ ಆಹಾರ ಪ್ಯಾಕ್‌ಗಳನ್ನು ಕಳುಹಿಸುತ್ತಾರೆ ಎಂದ ಹ್ಯಾಡ್ಪೀಲ್ಡ್ "ನನ್ನ ಗಂಡ ಮತ್ತು ಮಗ ಚಾಕೊಲೇಟ್‌ನಿಂದ ಮುಚ್ಚಿದ ಜಿಂಜರ್‌ನಂತಹ ಚಿಕ್ಕ ಚಿಕ್ಕ ಟ್ರೀಟ್‌ಗಳನ್ನು ಕಳುಹಿಸಿದ್ದರು ," ಎಂದು ಅವರು ಸ್ಮರಿಸಿಕೊಂಡಿದ್ದಾರೆ. .
ಸಹಜೀವನಕ್ಕೆ ತರಬೇತಿ
ಗಗನ ಯಾತ್ರಿಗಳಿಗೆ ನೀಡುವ ತರಬೇತಿ ಹೆಚ್ಚು ಮೌಲ್ಯಯುತವಾಗಿರುತ್ತದೆ. ಸಹಿಷ್ಣು, ನಿರಾಳ, ಶಾಂತ ಮತ್ತು ತಂಡವಾಗಿ ಕೆಲಸ ಮಾಡಲು ತರಬೇತಿ ಕಡ್ಡಾಯ. ಇದು ಒಳಗಡೆ ಪರಸ್ಪರ ಸಂಘರ್ಷ ಉಂಟು ಮಾಡದಂತೆ ನೋಡಿಕೊಳ್ಳುತ್ತದೆ.
ಅಂತರಿಕ್ಷ ನಿಲ್ದಾಣದಲ್ಲಿ ಹೆಚ್ಚು ಸದ್ದು ಇರುತ್ತದೆ. ಕಾರ್ಬನ್ ಡೈಆಕ್ಸೈಡ್‌ನ ಗುಳ್ಳೆಗಳನ್ನು ಚದುರಿಸುವ ಫ್ಯಾನ್ಗಳು ಸೇರಿದಂತೆ ಹಲವಾರು ಯಂತ್ರಗಳು ಚಾಲನೆಯಲ್ಲಿರುತ್ತದೆ. ಆ ಗದ್ದಲದ ನಡುವೆಯೇ ನಿದ್ದೆ ಮಾಡಬೇಕಾಗುತ್ತದೆ. ನಾವು ಎಂಟು ಗಂಟೆಗಳ ಕಾಲ ನಿದ್ದೆ ಮಾಡಬಹುದು. ಆದರೆ, ಹಲವರು ಕಿಟಕಿಯಲ್ಲಿ ಹೊರಗೆ ನೋಡುತ್ತಾ ಕಾಲ ಕಳೆಯುತ್ತಾರೆ ಎಂದು ಸ್ಪಾಟ್ ವಿವರಿಸಿದ್ದಾರೆ.
ಸುನಿತಾ ಸಿಲುಕಿಕೊಂಡಿದ್ದರು ಎಂದು ಅಂದುಕೊಳ್ಳುವುದು ಯಾಕೆ?
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತರಿಕ್ಷ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಯಾಕೆ ಭಾವಿಸಿದ್ದರು ಎಂದು ಹ್ಯಾಂಡ್ಫೀಲ್ಡ್ ಪ್ರಶ್ನಿಸುತ್ತಾರೆ.
"ಅಲ್ಲಿಗೆ ಹೋಗುವುದೇ ನಮ್ಮ ಬಹು ದೊಡ್ಡ ಕನಸು. ಅದಕ್ಕಾಗಿಯೇ ಸುದೀರ್ಘವಾಗಿ ಕೆಲಸ ಮಾಡಿರುತ್ತೇವೆ. ಬಾಹ್ಯಾಕಾಶದಲ್ಲಿ ದೀರ್ಘಕಾಲದ ವಾಸ್ತವ್ಯ ಮಾಡಲು ತರಬೇತಿ ಪಡೆದುಕೊಂಡಿದ್ದೇವೆ. ಒಬ್ಬ ವೃತ್ತಿಪರ ಗಗನಯಾತ್ರಿಗೆ ನೀಡಬಹುದಾದ ಅತ್ಯುತ್ತಮ ಕೊಡುಗೆಯೆಂದರೆ ಅವರನ್ನು ಹೆಚ್ಚು ಕಾಲ ಅಲ್ಲೇ ಇರಲು ಬಿಡುವುದು.'' ಎಂದು ಹ್ಯಾಂಡ್ಪೀಲ್ಡ್ ಹೇಳುತ್ತಾರೆ.
ಬಾಹ್ಯಾಕಾಶ ನಿಲ್ದಾಣದಿಂದ ಪ್ರತಿಬಾರಿಯೂ ಹೊರಕ್ಕೆ ಬರುವಾಗ ನಮಗೆಲ್ಲರಿಗೂ ಒಂದೇ ಯೋಚನೆ ಬರುತ್ತದೆ, ' ಮತ್ತೆ ಇಲ್ಲಿಗೆ ಬರುವುದು ಯಾವಾಗ ಎಂದು'' ಎಂದು ಅವರು ಮಾತು ಮುಗಿಸುತ್ತಾರೆ.